ಅನಾಗರಿಕ ಸರ್ಕಾರ: ಕುಮಾರಸ್ವಾಮಿ ಟೀಕೆ

7

ಅನಾಗರಿಕ ಸರ್ಕಾರ: ಕುಮಾರಸ್ವಾಮಿ ಟೀಕೆ

Published:
Updated:

ಚಿತ್ರದುರ್ಗ: ಅನಾಗರಿಕ ಬಿಜೆಪಿ ಸರ್ಕಾರದ ರೈತ ವಿರೋಧಿ ನಿಲುವುಗಳಿಂದ ಗ್ರಾಮೀಣ ಜನರು ಸಂಕಷ್ಟಕ್ಕೆ ಒಳಗಾಗಿದ್ದು, ಸರ್ಕಾರ ಸುಳ್ಳು ಘೋಷಣೆ, ಜಾಹೀರಾತುಗಳಿಂದ ಜನರ ದಾರಿ ತಪ್ಪಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗುರುವಾರ ಇಲ್ಲಿ ಕಟುವಾಗಿ ಟೀಕಿಸಿದರು.ಜಿಲ್ಲಾ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ತಮ್ಮದು ಅಪ್ಪ-ಮಕ್ಕಳ ಪಕ್ಷ ಅಲ್ಲ. ಸರ್ವ ಜನಾಂಗದ, ಸರ್ವ ಜಾತಿಗಳ ಪಕ್ಷ ಎಂದು ಪ್ರತಿಪಾದಿಸಿದರು.ಇಂತಹ ಅನಾಗರಿಕ ಸರ್ಕಾರವನ್ನು ರಾಜ್ಯ ಎಂದಿಗೂ ಕಂಡಿರಲಿಲ್ಲ. ಬಜೆಟ್‌ನಲ್ಲಿ ನೀಡಿದ್ದ ಭರವಸೆಗಳನ್ನು ಬಿಜೆಪಿ ಸರ್ಕಾರ ಹುಸಿಗೊಳಿಸಿದೆ. ರಾಜ್ಯದ 99 ಬರಪೀಡಿತ ತಾಲ್ಲೂಕುಗಳಿಗೆ ಕುಡಿಯುವ ನೀರಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಿಲ್ಲ. ಸರ್ಕಾರ ಮಂಡಿಸುವ ರೂ. 85 ಸಾವಿರ ಕೋಟಿ ಬಜೆಟ್ ಮೊತ್ತದಲ್ಲಿ ಶೇ. 1ರಷ್ಟು ಬಿಡುಗಡೆ ಮಾಡಿದ್ದರೂ ರೂ. 850 ಕೋಟಿ ಸಿಗುತ್ತಿತ್ತು ಎಂದು ನುಡಿದರು.ಚಿತ್ರದುರ್ಗ ಜಿಲ್ಲೆಗೆ ನೀರು ಹರಿಸಲು ಬಿಜೆಪಿ ಸರ್ಕಾರಕ್ಕೆ ಇದುವರೆಗೂ ಸಾಧ್ಯವಾಗಿಲ್ಲ. ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೂ. 4,800 ಕೋಟಿ ನೀರಾವರಿ ಯೋಜನೆಗೆ ಸಚಿವ ಸಂಪುಟದ ಅನುಮೋದನೆ ನೀಡಿ  4 ವರ್ಷಗಳಲ್ಲಿ ಮುಗಿಸುವ ಉದ್ದೇಶವಿತ್ತು. ವರ್ಷಕ್ಕೆ ಒಂದು ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದರೂ ಬರಪೀಡಿತ ಜಿಲ್ಲೆಯ ಚಿತ್ರಣ ಬದಲಾಗುತ್ತಿತ್ತು. ಯಡಿಯೂರಪ್ಪ ನೇತೃತ್ವದ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಕಳೆದ ವರ್ಷ ರೂ. 500 ಕೋಟಿ ನೀಡುವುದಾಗಿ ತಿಳಿಸಿತ್ತು. ಆದರೆ, ರೂ. 124 ಕೋಟಿ ಮಾತ್ರ ಒದಗಿಸಲಾಗಿತ್ತು. ಇಲ್ಲಿಯವರೆಗೆ ರೂ. 720 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ. ಈ ರೀತಿಯಾದರೆ ಇನ್ನೂ ಎಷ್ಟು ವರ್ಷ ಕಾಯಬೇಕು ಎಂದು ಬಿಜೆಪಿ ಸರ್ಕಾರ ವಿರುದ್ಧ ಹರಿಹಾಯ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry