ಶುಕ್ರವಾರ, ನವೆಂಬರ್ 15, 2019
22 °C

ಅನಾಥವಾಗಿದೆ ಜೈನ ಕ್ಷೇತ್ರ

Published:
Updated:

ಜೈನಧರ್ಮದ 24ನೇ ತೀರ್ಥಂಕರ ಮಹಾವೀರನ ಜಯಂತಿ ಇಂದು. ಎಲ್ಲೆಡೆ ಮಹಾವೀರನ ಗುಣಗಾನ, ಆತನ ವಿಗ್ರಹಗಳಿಗೆ ಪೂಜೆ, ಪುನಸ್ಕಾರ, ಹೂಮಾಲೆ ಅರ್ಪಣೆ ಇತ್ಯಾದಿ...ಆದರೆ, ಪ್ರಾಚೀನ ಜೈನ ಕ್ಷೇತ್ರಗಳಲ್ಲಿ ಒಂದಾದ ಮಂಡ್ಯ ಸಮೀಪದ ಅರೆತಿಪ್ಪೂರು ಮಾತ್ರ ಅನಾಥ. ಜೈನ ಧರ್ಮದ ಮಹತ್ವ ಸಾರುತ್ತಿರುವ ಈ ಊರು ಈಗ ಪಾಳು ಕ್ಷೇತ್ರ. ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿ ಮುಖ್ಯ ವಾಹಿನಿಗೆ ಬಾರದ ಸ್ಥಿತಿ ಇದರದ್ದು.ಕಾಲಗರ್ಭದಲ್ಲಿ ಹೂತು ಹೋಗುವ ಭಯದ ವಾತಾವರಣ.ಇನ್ನೊಂದು ವಿಷಯ ಗೊತ್ತಾ? ಚಾವುಂಡರಾಯನಿಗೆ ಹಾಸನ ಜಿಲ್ಲೆಯ ಶ್ರವಣ ಬೆಳಗೊಳದ ಜೈನಕ್ಷೇತ್ರ ನಿರ್ಮಾಣಕ್ಕೆ ಸ್ಫೂರ್ತಿಯಾಗಿರುವುದು ಇದೇ ಅರೆತಿಪ್ಪೂರು ಎನ್ನುವ ಮಾತಿದೆ. ಅದಕ್ಕೆ ಸಾಕ್ಷಿಯಾಗಿದೆ ಇವೆರಡು ಜೈನ ಕ್ಷೇತ್ರಗಳ ಪರಿಸರ, ಅಲ್ಲಿಯ ವಾತಾವರಣ.

ತಿಪ್ಪೂರಿನ ದೊಡ್ಡ ಬೆಟ್ಟ (ಸವಣಪ್ಪನ ಬೆಟ್ಟ), ಚಿಕ್ಕಬೆಟ್ಟ (ಕನಕಗಿರಿ) ಇವೆರಡು ಶ್ರವಣಬೆಳಗೊಳದ ವಿಂಧ್ಯಗಿರಿ ಹಾಗೂ ಚಂದ್ರಗಿರಿಗೆ ಹೋಲಿಕೆಯ ಪರಿಸರ ಇಲ್ಲಿದೆ. ಆದರೆ ದುರದೃಷ್ಟವಶಾತ್, ಶ್ರವಣಬೆಳಗೊಳದ ಗೊಮ್ಮಟೇಶ್ವರನಿಗೆ ಸಿಕ್ಕ ಮಹತ್ವ ಇದಕ್ಕಿಲ್ಲ!ಗಂಗರ ಕಾಲದ್ದು

ಗಂಗರ ಕಾಲದಲ್ಲಿ ತಲೆ ಎತ್ತಿದ್ದ ಈ ಸ್ಥಳ ಚೋಳ, ಹೊಯ್ಸಳ, ವಿಜಯನಗರ ಕಾಲದವರೆಗೂ ಪ್ರಮುಖ ಜೈನ ಕ್ಷೇತ್ರ. ಹೊಯ್ಸಳ ದೊರೆ ವಿಷ್ಣುವರ್ಧನ ಚೋಳರಿಂದ ತಲಕಾಡನ್ನು ವಶಪಡಿಸಿಕೊಂಡ ನಂತರ ಆತನ ಬಲಗೈ ಬಂಟನಾದ ಜೈನ ಧರ್ಮದ ದಂಡನಾಯಕ ಗಂಗರಾಜನಿಗೆ ತಿಪ್ಪೂರು ಜೈನ ಕ್ಷೇತ್ರವನ್ನು ದಾನವಾಗಿ ನೀಡಿದ್ದ. ಗಂಗ-ಚೋಳರ ಕಾಲದಲ್ಲಿ `ತಿರುಮಾರು' ಆಗಿದ್ದ ಈ ಕ್ಷೇತ್ರ ಹೊಯ್ಸಳರ ಕಾಲದಲ್ಲಿ `ತಿಪ್ಪೂರು' ಆಯಿತು. ವಿಜಯನಗರ ಕಾಲದಲ್ಲಿ ಇದು `ಬಸ್ತಿ ತಿಪ್ಪೂರು' ಎಂದು ಪ್ರಸಿದ್ಧಿ ಪಡೆಯಿತು ಎನ್ನುತ್ತವೆ ಶಾಸನಗಳು. ಊರ ಮುಂದಿನ ಚಿಕ್ಕಬೆಟ್ಟವೇ ಕನಕಗಿರಿ. ಇಲ್ಲಿ ನಿರ್ಮಾಣವಾಗಿದ್ದ ಬಸದಿ ಈಗ ಸಂಪೂರ್ಣ ನಾಶವಾಗಿದೆ. ಅದರ ಕುರುಹು ರೂಪದಲ್ಲಿ ಇಟ್ಟಿಗೆ ಚೂರುಗಳು, ಪೀಠ, ಶಿಲಾಬೋದಿಗೆಗಳು ಬಿದ್ದಿವೆ. ಭಗ್ನಗೊಂಡಿರುವ ತೀರ್ಥಂಕರರ ಮೂರ್ತಿಗಳು ಚೆಲ್ಲಾಪಿಲ್ಲಿಯಾಗಿವೆ. ಅಲ್ಲಿನ ನೈಸರ್ಗಿಕ ಕೊಳದ ಹೆಬ್ಬಂಡೆ ಪಾರ್ಶ್ವದಲ್ಲಿ ಕೆಲ ತೀರ್ಥಂಕರರ ವಿಗ್ರಹಗಳು ಮಾತ್ರ ಜೀವಂತಿಕೆ ಪಡೆದಿವೆ.ತಿಪ್ಪೂರಿನ ಹೊರವಲಯದ ಎರಡು ಕಿಲೋಮೀಟರ್ ದೂರದಲ್ಲೊಂದು ಬೆಟ್ಟವಿದೆ. ಅದರ ಹೆಸರು `ದೊಡ್ಡ ಬೆಟ್ಟ'. ಇದನ್ನು ಸ್ಥಳೀಯರು ಸವಣಪ್ಪನ ಬೆಟ್ಟ ಎಂದೇ ಕರೆಯುತ್ತಾರೆ. ಕಡಿದಾದ ಈ ಬೆಟ್ಟದ ಮೇಲೇರಲು ಮೆಟ್ಟಿಲುಗಳನ್ನು ನಿರ್ಮಿಸಿಲ್ಲ. ಕಲ್ಲು-ಮುಳ್ಳುಗಳ ಕಾಲುದಾರಿಯಲ್ಲೇ ಸಾಗಬೇಕಾದರೆ ಮಾರ್ಗದರ್ಶಕರ ಸಹಾಯ ಅಗತ್ಯ.ಚಾರಣದ ಅನುಭವ

ಬೆಟ್ಟದ ಮೇಲಿನ ಗೊಮ್ಮಟನ ನೆಲೆಗೆ ಹೋಗಬೇಕಾದರೆ ಚಾರಣ ಮಾಡಿದ ಅನುಭವ. ಅಲ್ಲಿನ ಬೋಳು ಬಂಡೆಯ ಮೇಲೆ ಸುಮಾರು 10 ಅಡಿ ಎತ್ತರದ ಕಪ್ಪುಶಿಲೆಯಿಂದ ಅದ್ಭುತವಾದಂಥ ಗೊಮ್ಮಟನ ಮೂರ್ತಿಯನ್ನು ಕೆತ್ತಲಾಗಿದೆ. ಇದು ಕ್ರಿ.ಶ. 917-18ರದ್ದು. ಗೊಮ್ಮಟನ ಪಾದದ ಎಡ-ಬಲ ಬದಿಯಲ್ಲಿ ಇಬ್ಬರು ಯಕ್ಷಿಯರ ಶಿಲ್ಪಗಳೂ ಇವೆ. ಪಾದದ ಬಳಿಯಿಂದ ತೋಳಿನವರೆಗೆ ಬಳ್ಳಿ ಸುತ್ತುವರೆದಿದೆ.ಒಂದು ಕಾಲದಲ್ಲಿ ಜೈನ ಕ್ಷೇತ್ರವಾಗಿ ವಿಜೃಂಭಿಸಿದ್ದ ಈ ಕ್ಷೇತ್ರವನ್ನು ಇಂದು ಕೇಳುವವರೇ ಇಲ್ಲ. ಈ ಊರಿನಲ್ಲಿ ಈಗ ಜೈನ ಸಮುದಾಯದವರೇ ಇಲ್ಲವಾಗಿದೆ. ಹಿಂದೂ ಧರ್ಮದವರು ವಾಸವಾಗಿರುವ ಈ ಊರಿನಲ್ಲಿ ಗೊಮ್ಮಟನಿಗೆ ಹರಕೆ ಹೊತ್ತು ಈಗಲೂ ಒಳ್ಳೆಣ್ಣೆಯಿಂದ ಆಗಾಗ ಮಜ್ಜನ ಮಾಡುತ್ತಾರೆ.ಹೀಗೆ ಬನ್ನಿ

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಮದ್ದೂರಿನಿಂದ ಬೆಂಗಳೂರು ಕಡೆಗೆ 5 ಕಿಲೋಮೀಟರ್ ದೂರದಲ್ಲಿ ರುದ್ರಾಕ್ಷಿಪುರ ಸಿಗುತ್ತದೆ. ಅಲ್ಲಿಂದ ದಕ್ಷಿಣಾಭಿಮುಖವಾಗಿರುವ ಕವಲು ದಾರಿ ಹಲಗೂರು ಮಾರ್ಗದಲ್ಲಿ ಹೋದರೆ ಸುಮಾರು 20 ಕಿಲೋಮೀಟರ್ ದೂರದಲ್ಲಿ ಕೂಳಗೆರೆಗೇಟ್ ಇದೆ. ಅಲ್ಲಿಂದ ಎಡಗಡೆಯ ಕವಲು ದಾರಿಯಲ್ಲಿ ಒಂದು ಕಿಲೋಮೀಟರ್ ದೂರ ಕ್ರಮಿಸಿದರೆ ಸಿಗುವುದೇ ಅರೆತಿಪ್ಪೂರು.

-ಪ್ರೊ . ಸಿ. ಸಿದ್ದರಾಜು ಆಲಕೆರೆ.

ಪ್ರತಿಕ್ರಿಯಿಸಿ (+)