ಶುಕ್ರವಾರ, ಮೇ 14, 2021
31 °C

ಅನಾಥಾಶ್ರಮದಲ್ಲಿ ವಿವಾಹದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್: ಕುಷ್ಠರೋಗದಿಂದಾಗಿ ಮನೆಯಿಂದ ದೂರವಾಗಿ ಅನಾಥಾಶ್ರಮದಲ್ಲಿದ್ದ ಇಬ್ಬರು, ಪರಸ್ಪರ ಪ್ರೇಮಿಸಿ ವಿವಾಹವಾದ ಘಟನೆ ಗುರುವಾರ ನಗರದ ರಮಣ ಮಹರ್ಷಿ ಆಶ್ರಮದಲ್ಲಿ ನಡೆಯಿತು.

ಆಶ್ರಮದಲ್ಲಿರುವ ಗದಗ ಮೂಲದ ರಾಮಪ್ಪ (55) ಮತ್ತು ಆಂಧ್ರಪ್ರದೇಶದ ಪಲಮನೇರು ಬಳಿಯ ಗ್ರಾಮದ ಶ್ಯಾಮಲಾ (25) ಗಣ್ಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ವಿವಾಹವಾದರು.ರಮಣ ಮಹರ್ಷಿ ಆಶ್ರಮದಲ್ಲಿ ನಡೆಯುತ್ತಿದ್ದ ಸಾಯಿ ಬಾಬಾ ಮಂದಿರದ ಉದ್ಘಾಟನಾ ಕಾರ್ಯಕ್ರಮದ ಸಮಾರೋಪದ ದಿನದಂದು ಶುಭ ಕಾರ್ಯ ಮಾಡಬೇಕೆಂದು ಆಶ್ರಮದ ಆಡಳಿತ ಮಂಡಳಿ ನಿರ್ಧರಿಸಿತ್ತು.  ಆಶ್ರಮದಲ್ಲಿರುವ ರಾಮಪ್ಪ ಮತ್ತು ಶ್ಯಾಮಲಾ ಪರಸ್ಪರ ಪ್ರೇಮಿಸುತ್ತಿದ್ದುದನ್ನು ಕಂಡ ಆಶ್ರಮದ ಸಿಬ್ಬಂದಿ ಈ ವಿಷಯವನ್ನು ಆಡಳಿತ ಮಂಡಳಿಗೆ ತಿಳಿಸಿದರು. ಇಬ್ಬರನ್ನು ಕರೆಸಿದ ಮಂಡಳಿ ವಿಚಾರಣೆ ನಡೆಸಿದಾಗ ಪ್ರೇಮಾಂಕುರದ ಕಥೆ ತಿಳಿಯಿತು. ನಂತರ ಆಶ್ರಮದ ಖರ್ಚಿನಲ್ಲಿಯೇ ಇಬ್ಬರ ವಿವಾಹ ನಡೆಸಬೇಕೆಂದು ತೀರ್ಮಾನಿಸಲಾಯಿತು.ವರ ರಾಮಪ್ಪ ನಾಲ್ಕು ವರ್ಷಗಳ ಹಿಂದೆ ದೂರದ ಗದಗದಿಂದ ನಗರಕ್ಕೆ ಬಂದು ಕುಷ್ಠರೋಗಿಗಳ ಅನಾಥಾಶ್ರಮಕ್ಕೆ ದಾಖಲಾಗಿದ್ದ. ಆಶ್ರಮದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಎರಡು ವರ್ಷಗಳ ಹಿಂದೆ ಅನಾಥಾಶ್ರಮಕ್ಕೆ ಬಂದ ಶ್ಯಾಮಲಾ ಕೂಡ ಕಡುಬಡತನದ ಹಿನ್ನೆಲೆ ಇರುವವರು. ಆಕೆಯ ಅಕ್ಕ ಸಹ ಕುಷ್ಠ ರೋಗದಿಂದ ಆಶ್ರಮ ಸೇರಿದ್ದರು.`ನನಗೆ ತಂದೆ ತಾಯಿ ಇಲ್ಲಾರಿ. ದೇವರು ಇಬ್ಬರನ್ನೂ ಕೂಡಿಸಿಕೊಟ್ಟಾನ. ಆಶ್ರಮದ ಸಾರ್ ಮುಂದೆ ನಿಂತು ಎಲ್ಲಾ ಮಾಡಿಸಿಕೊಟ್ಟರು. ಮುಂದೆ ದಾರಿ ಆಗ್ಬೇಕು. ಪಿಂಚಣಿ ಕೂಡ ನಿಂತು ಹೋಗಿದೆ. ಏನು ಮಾಡೋದು ಎಂದು ಯೋಚನೆಯಾಗಿದೆ' ಎಂದು ಮದುಮಗ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದ.`ಮದುವೆ ಮಾಡಿಕೊಳ್ತೀಯಾ?' ಎಂದು ಆಕೆಯೇ ಮೊದಲು ಕೇಳಿದಳು. ನಾ ಊಂ ಅಂದೆ. ಆಶ್ರಮದವರು ಮದುವೆ ಖರ್ಚು ಮಾಡಿದ್ದಾರೆ. ನಾನೂ ಸ್ವಲ್ಪ ಸಾಲ ಮಾಡಿದ್ದೇನೆ. ಮನೆ ಇಲ್ಲ. ನೆಂಟರು ಇಲ್ಲ. ಆಶ್ರಮದಲ್ಲೇ ಸಂಸಾರ ಮಾಡಬೇಕು ಎಂದು ರಾಮಪ್ಪ `ಪ್ರಜಾವಾಣಿ'ಗೆ ತಿಳಿಸಿದರು.ಮದುವೆಗೆ ಆಶ್ರಮದ ಅಧ್ಯಕ್ಷ ಚಲಪತಿನಾಯ್ಡು, ಮಂಜುಳಾ ನಾಯ್ಡು ಮೊದಲಾದ ಗಣ್ಯರು ಹಾಜರಿದ್ದು ಶುಭ ಹಾರೈಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.