ಬುಧವಾರ, ಏಪ್ರಿಲ್ 21, 2021
33 °C

ಅನಾಥ ಮಗು ಶಿಶು ಕೇಂದ್ರಕ್ಕೆ ಸೇರ್ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುದ್ದೇಬಿಹಾಳ: ತಾಲ್ಲೂಕಿನ ಅಡವಿ ಹುಲಗಬಾಳ ತಾಂಡಾದಲ್ಲಿ ಮಂಗಳವಾರ ರಾತ್ರಿ ಶೌಚಾಲಯದಲ್ಲಿ ದೊರೆತಿದ್ದ ನವಜಾತ ಶಿಶುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತನ್ನ ವಶಕ್ಕೆ ತೆಗೆದುಕೊಂಡಿದ್ದು, ಅದನ್ನು ಶಿಶುಗೃಹಕ್ಕೆ ಸೇರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಿ.ಡಿ.ಪಿ.ಓ. ಮೋಹನಕುಮಾರಿ ತಿಳಿಸಿದರು. ಮಂಗಳವಾರ ರಾತ್ರಿ ಮಗುವನ್ನು ತಾಲ್ಲೂಕಾ ಆರೋಗ್ಯ ಕೇಂದ್ರಕ್ಕೆ ಸೇರಿಸಿ ಅಗತ್ಯ ಚಿಕಿತ್ಸೆ ನೀಡಲಾಗಿತ್ತು.ಬುಧವಾರ ಬೆಳಿಗ್ಗೆ ತಾಲ್ಲೂಕಾ ಆಸ್ಪತ್ರೆಗೆ ಭೇಟಿ ನೀಡಿದ ಅವರು ಮಗುವಿನ ಆರೋಗ್ಯ ವಿಚಾರಿಸಿದರು. ಮಗುವಿನ ವಾರಸುದಾರರು ಯಾರೂ ಸಿಕ್ಕಿಲ್ಲ, ಮಗುವನ್ನು ಸಾಕಲು ತಾಂಡಾದ ನಿವಾಸಿಗಳು ಸೇರಿದಂತೆ ಇನ್ನೂ ಅನೇಕರು ಮುಂದೆ ಬಂದಿದ್ದು, ಮೇಲಾಧಿಕಾರಿಗಳ ಆಜ್ಞೆಯಂತೆ ತಾವು ಮಗುವನ್ನು ವಿಜಾಪೂರದ ಶಿಶು ಕೇಂದ್ರಕ್ಕೆ ಸೇರಿಸಲು ಒಯ್ಯುವುದಾಗಿ ಹೇಳಿದರು.ತಾಂಡಾದಲ್ಲಿ ದೊರೆತಿದ್ದ ಮಗುವನ್ನು ತಾಂಡಾದ ಶಂಕ್ರುಬಾಯಿ ರಾಠೋಡ ಕಾಳಜಿಯಿಂದ ಮುದ್ದೇಬಿಹಾಳದ ತನಕ 108 ವಾಹನದಲ್ಲಿ ತಂದಳಲ್ಲದೇ, ಅದರ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಯಿತು. ಆಸ್ಪತ್ರೆ ವೈದ್ಯಾಧಿಕಾರಿ ಡಾ.ಬಿ.ಕೆ.ಓಂಕಾರ, ನಾಲತವಾಡ ಅಂಗನವಾಡಿ ವಲಯ ಮೇಲ್ವಿಚಾರಕಿ ಶೋಭಾ ಮುದಗಲ್ಲ ಉಪಸ್ಥಿತರಿದ್ದು, ಮಗುವನ್ನು ವಿಜಾಪೂರಕ್ಕೆ ಕಳಿಸಿಕೊಟ್ಟರು.ದೊರೆತಿರುವ ಮಗುವಿನ ಆರೋಗ್ಯ ವಿಚಾರಿಸಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ  ವಾಸುದೇವ ತೋಳಬಂದಿ, ಮಗುವಿಗೆ ಜಿಲ್ಲಾ ಆಸ್ಪತ್ರೆಯಲ್ಲಿರುವ ಶಿಶು ಕೇಂದ್ರದಲ್ಲಿ ಅಗತ್ಯ ಚಿಕಿತ್ಸೆ ಕೊಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.