ಅನಾರೋಗ್ಯದ ನೆಪ ಹೇಳಿದರೂ ತಪ್ಪದ ಬಂಧನ

7

ಅನಾರೋಗ್ಯದ ನೆಪ ಹೇಳಿದರೂ ತಪ್ಪದ ಬಂಧನ

Published:
Updated:
ಅನಾರೋಗ್ಯದ ನೆಪ ಹೇಳಿದರೂ ತಪ್ಪದ ಬಂಧನ

ನಾಗಮಂಗಲ:  ಕರ್ತವ್ಯ ಲೋಪ, ಜಮೀನು, ಗೋಮಾಳ ಕೆರೆ ಒತ್ತುವರಿ ಮುಂತಾದ ಕೆಲಸಗಳಿಗೆ ಸರ್ಕಾರದ ಮೂಲ ದಾಖಲೆಗಳನ್ನು ತಿದ್ದಿದ ಆರೋಫದ ಮೇರೆಗೆ  ತಾಲ್ಲೂಕಿನ 5 ಮಂದಿ ಭೂ ಮಾಪಕರನ್ನು ಬಂಧಿಸಿರುವ ಪ್ರಕರಣ ಪಟ್ಟಣದಲ್ಲಿ ಜರುಗಿದೆ.ಭೂಮಿ ಕೇಂದ್ರದ ನೌಕರ ಬಿ.ಆರ್.ಜಗದೀಶ್, ಭೂಮಾಪಕ ರಾದ ಬಿಂಡಿಗನವಿಲೆ ಹೋಬಳಿಯ ರಾಮಚಂದ್ರ, ಹೊಣಕೆರೆ ಹೋಬಳಿಯ ಶಂಕರ್, ಕಸಬಾ ಹೋಬಳಿಯ ಸುಬ್ರಹ್ಮಣ್ಯಚಾರ್, ದೇವಲಾಪುರ ಹೋಬಳಿಯ ಮಲ್ಲೇಗೌಡ ಬಂಧಿತರು. ಕಂದಾಯ ಇಲಾಖೆ ಭೂ ಮಾಪಕ ಶ್ರೀನಿವಾಸಮೂರ್ತಿ ತಲೆ  ಮರೆಸಿಕೊಂಡಿದ್ದು, ಆತನ ಶೋಧಕ್ಕೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.ಪಾಂಡವಪುರ ಉಪ ವಿಭಾಗಾಧಿಕಾರಿ ಹಾಗೂ ಪ್ರಕರಣದ ತನಿಖಾಧಿಕಾರಿ ಜಿ.ಪ್ರಭು ನೀಡಿರುವ ದೂರಿನ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಮೋಸವೆಸಗಿದ್ದಾರೆ ಮತ್ತು ತನಿಖೆ ವೇಳೆ ಅಧಿಕಾರಿಗಳಿಗೆ ಸಹಕರಿಸದೇ ತಪ್ಪಿಸಿಕೊಂಡಿದ್ದು, ಸರ್ಕಾರದ ಮೂಲ ದಾಖಲೆಗಳನ್ನು ಮನೆಯಲ್ಲಿಟ್ಟುಕೊಂಡಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ.ಸರ್ವೇ ಹಗರಣ

2007 ರ ನಂತರ ಯಾವುದೇ ಜಮೀನನ್ನು ಬಗರ್ ಹುಕುಂ ಯೋಜನೆಯಡಿಯಲ್ಲಿ ಖಾತೆ ಮಾಡಿ ಸಾಗುವಳಿ ಚೀಟಿಯನ್ನು ನೀಡಬಾರದೆಂಬ ಸರ್ಕಾರಿ ಆದೇಶವನ್ನೆ ಧಿಕ್ಕರಿಸಿ ನಕಲಿ ದಾಖಲೆ ಸೃಷ್ಟಿಸುವಲ್ಲಿ ನೌಕರರು ಯಶಸ್ವಿಯಾಗಿದ್ದಾರೆ. 2006 ರಿಂದ ಪ್ರಾರಂಭವಾದ ದಾಖಲೆಗಳನ್ನು ಉಪ ವಿಭಾಗಾಧಿಕಾರಿ ಪ್ರಭು ಕೈಗೆತ್ತಿಕೊಂಡಾಗ ಬೆಳಕಿಗೆ ಬಂದಿರುವುದು ಒಂದು ಪ್ರಕರಣ. ಈ ಪ್ರಕರಣದಲ್ಲಿ 2006 ರಲ್ಲಿ ಆಯ್ಕೆಯಾದ ಸುಮಾರು 70 ಮಂದಿ ಹಿಡುವಳಿದಾರರಿಗೆ 2007 ರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಖಾತೆ ಮಾಡಿಕೊಡಲಾಗಿದೆ. ವಿಚಿತ್ರವೆಂದರೆ ಸರ್ಕಾರದ ಜಾಗಗಳು ಹಾಗೂ ಕೆರೆ ಕಟ್ಟೆಗಳನ್ನು ಖಾತೆ ಮಾಡಿಕೊಡ ಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಜಮೀನಿನ ದರ 2 ಲಕ್ಷ ರೂ ಗಳಿಗೆ ಮೀರಿದರೆ 79 ಎ/ಬಿ ಯೋಜನೆಯಡಿಯಲ್ಲಿ ಖಾತೆ ಮಾಡಬೇಕಾದರೆ ಉಪವಿಭಾಗಾಧಿಕಾರಿಯವರ ಆದೇಶ ಪಡೆಯಬೇಕು. ಆದರೆ ಆಗಿನ ದಂಡಾಧಿಕಾರಿ ರಂಗಸ್ವಾಮಿ ಹಾಗೂ ಈ ಹಿಂದೆ ಇದ್ದ ತಹಶೀಲ್ದಾರ್ ಎಂ.ಎಸ್. ನಿರಂಜನ ಬಾಬು ಅಧಿಕಾರಾವಧಿಯಲ್ಲಿ ಉಪ ವಿಭಾಗಾಧಿಕಾರಿಗಳ ಗಮನಕ್ಕೆ ಬಾರದೇ ಜಮೀನಿನ ಖಾತೆಗಳು ನಡೆದಿದೆ.ಹೀಗೆ ಸರ್ಕಾರಕ್ಕೆ ಮೋಸ ಮಾಡಿ ಹಣವುಳ್ಳವರಿಗೆ ಖಾತೆ ಮಾಡಿಕೊಟ್ಟಿರುವ ಜಾಗಗಳ ಮೊತ್ತ 1 ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ.ತಾಲ್ಲೂಕಿನ ಎ.ಶ್ರೀರಾಮನಹಳ್ಳಿ, ದೊಡ್ಡಉಪ್ಪಳ, ನಲ್ಕುಂದಿ, ಹಟ್ನ, ಎ.ನಾಗತಿಹಳ್ಳಿ, ದೇವಲಾಪರದ ಎಚ್.ಎನ್.ಕಾವಲ್ ಮತ್ತಿತರೆಡೆಗಳಲ್ಲಿ ಸರ್ಕಾರಿ ಜಾಗ, ಗೋಮಾಳ, ಸರಕಾರಿ ಕಟ್ಟೆ, ಗುಂಡುತೋಪು, ಅರಣ್ಯ ಜಾಗ, ಸ್ಮಶಾನ ಜಾಗ ಮತ್ತು ಸರ್ಕಾರಿ ಹಳ್ಳಗಳ ಒತ್ತುವರಿ ಸೇರಿದಂತೆ ಇತರೆ ಜಾಗಗಳನ್ನು ತಾಲ್ಲೂಕಿನ ಭೂ ಮಾಪಕರು ಹಣ ಪಡೆದು ಪ್ರಭಾವಿ ವ್ಯಕ್ತಿಗಳಿಗೆ ಮಂಜೂರು ಮಾಡುವ ಮೂಲಕ ಲೋಪವೆಸಗಿದ್ದಾರೆ ಎಂದು ವ್ಯಾಪಕ ದೂರುಗಳು ಸಾರ್ವಜನಿಕರಿಂದ ಕೇಳಿ ಬಂದಿದ್ದವು. ಅಲ್ಲದೇ ಜಿಲ್ಲಾಧಿಕಾರಿಗಳ ಕಚೇರಿಗೂ ದೂರುಗಳು ರವಾನೆಯಾಗಿದ್ದ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಪಾಂಡವಪುರ ಉಪ ವಿಭಾಗಾಧಿಕಾರಿ ಜಿ.ಪ್ರಭು ಅವರನ್ನು ನೇಮಕ ಮಾಡಿ ತನಿಖೆ ನಡೆಸುವಂತೆ ಸೂಚಿಸಿದ್ದರು.ಕಳೆದೆರಡು ದಿನಗಳಿಂದ ಜಿ.ಪ್ರಭು ತಾಲ್ಲೂಕು ಕಚೇರಿಯಲ್ಲಿ ತನಿಖೆ ನಡೆಸುತ್ತಿದ್ದು ತಾಲ್ಲೂಕಿನ ಎಲ್ಲ ಭೂ ಮಾಪಕರ ಮನೆಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಕಚೇರಿಯಲ್ಲಿರಬೇಕಾದ ಮಹತ್ವದ ದಾಖಲೆಗಳನ್ನು ಭೂಮಾಪಕರು ತಮ್ಮ ಮನೆಗಳಲ್ಲಿ ಅಕ್ರಮವಾಗಿಟ್ಟುಕೊಂಡಿದ್ದನ್ನು ವಶಪಡಿಸಿಕೊಂಡರು.ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿದ್ದಂತೆ ತನಿಖೆಗೆ ಸಹಕರಿಸದೇ ಮೀನಾಮೇಷ ಎಣಿಸಿದ್ದಲ್ಲದೇ ತನಿಖಾ ಧಿಕಾರಿ ಪ್ರಭು ಮೇಲೆ ಮಾನಸಿಕ ಹಿಂಸೆ ಮತ್ತು ಜಾತಿ ನಿಂದನೆ ಆರೋಪ ಮಾಡಿ ನೌಕರರಾದ ಬಿ.ಆರ್.ಜಗದೀಶ್ ಮತ್ತು ಶ್ರೀನಿವಾಸಮೂರ್ತಿ ನಾಗಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದರಾದರು ಪೊಲೀಸರು ದೂರಿನಲ್ಲಿ ಸತ್ಯಾಂಶವಿಲ್ಲ ಎಂದು ಕೈ ಬಿಟ್ಟಿದ್ದಾರೆ.ಇದರ ಬೆನ್ನಲ್ಲೆ ಜಿ.ಪ್ರಭು ಭೂ ಮಾಪಕರ ವಿರುದ್ಧ ಕಂದಾಯ ಕಾಯ್ದೆಯಡಿ ಹಾಗೂ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಮೋಸ ಎಸಗಿದ್ದಾರೆಂದು ಇವರ ವಿರುದ್ಧ ಪೊಲೀಸರಿಗೆ ದೂರು ನೀಡಿದರು.ಈ ಮಧ್ಯೆ ನೌಕರರು ಅನಾರೋಗ್ಯದ ನೆಪವೊಡ್ಡಿ ನಾಗಮಂಗಲದ ಸರ್ಕಾರಿ ಆಸ್ಪತ್ರೆಗೆ ದಾಖಲಾದರಾದರೂ ತಪಾಸಣೆ ನಡೆಸಿದ ವೈದ್ಯರು ಆರೋಪಿಗಳಿಗೆ ಯಾವುದೇ ಸಮಸ್ಯೆಯಿಲ್ಲವೆಂದು ದೃಢೀಕರಿಸಿದ ಮೇಲೆ ಪೊಲೀಸರು ಹಿರಿಯ ಶ್ರೇಣಿ ನ್ಯಾಯಾಧೀಶ ಮನ್ಸೂರ್ ಅಹಮ್ಮದ್ ಜಮಾನ್ ಮುಂದೆ ಹಾಜರು ಪಡಿಸಿದರು. ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಜಮೀನಿನ ಅಕ್ರಮ ಖಾತೆ: ತನಿಖೆ ಶುರು

ಎ.ಶ್ರೀರಾಮನಹಳ್ಳಿ ಗ್ರಾಮದ ಬಡವರಿಗೆ ಸೇರಿದ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟ ಪ್ರಕರಣದ ತನಿಖೆ ಭರದಿಂದ ನಡೆದಿದೆ. ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳು ಖುದ್ದಾಗಿ ಈ ಪ್ರಕರಣದ ತನಿಖೆಯನ್ನು ಆರಂಭಿಸಿದ್ದು, ಕೆಲವೇ ದಿನಗಳಲ್ಲಿ ಪ್ರಕರಣದಲ್ಲಿ ಶಾಮೀಲಾಗಿರುವ ನೌಕರರ ವಿರುದ್ಧ ಕ್ರಮ ಜರುಗಿಸಲಾಗುವುದಾಗಿ ತಿಳಿಸಿದ್ದಾರೆ.ಡಿಸಿಗೆ ವರದಿ


ಕ್ರಿಮಿನಲ್ ಆರೋಪ ಹೊತ್ತ ನೌಕರರ ವಿರುದ್ಧ ಕಾನೂನು ಕ್ರಮದಂತೆ ಕೆಲಸದಿಂದ ಅಮಾನತು ಪ್ರಕ್ರಿಯೆಯೂ ಕೂಡ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. 2005 ರಿಂದ 2011 ರವರೆಗೆ ನಡೆದ ಅನೇಕ ಜಮೀನಿನ ಖಾತೆ ಪ್ರಕರಣಗಳನ್ನು ಕೂಡ ತನಿಖೆ ನಡೆಸಲು ನಿರ್ಧರಿಸಲಾಗಿದೆ. ಮುಂದಿನ ಮೂರ‌್ನಾಲ್ಕು ದಿನಗಳಲ್ಲಿ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು.ಈ ಪ್ರಕರಣದಲ್ಲಿ ಈ ಹಿಂದಿನ ತಹಶೀಲ್ದಾರ್ ಎಂ.ಎಸ್.ಎನ್.ಬಾಬು ಸೇರಿದಂತೆ ಅನೇಕರ ವಿರುದ್ಧ ದೂರುಗಳಿವೆ. ಎಲ್ಲ ದೂರುಗಳನ್ನು ಪರಿಶೀಲಿಸಿ ಸೂಕ್ತ ದಾಖಲೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ತನಿಖಾ ತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.ಸಾರ್ವಜನಿಕರ ಆಕ್ರೋಶ

ಸರ್ಕಾರ ಹಾಗೂ ಸಾರ್ವಜನಿಕರಿಗೆ ಮೋಸ ಮಾಡಿ ಅಕ್ರಮವಾಗಿ ಬಡವರ ಸರ್ಕಾರದ ಜಮೀನನನ್ನು ಹಣವಂತರಿಗೆ ಖಾತೆ ಮಾಡಿಕೊಟ್ಟಿರುವ ಆರೋಪ ಹೊತ್ತ ನೌಕರರನ್ನು ಕೆಲಸದಿಂದ ವಜಾ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಅವರನ್ನು ಅಮಾನತ್ತಿನಲ್ಲಿಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಇಲಾಖೆಗೆ ವಾಪಸ್ಸಾಗುವ ಅವರುಗಳು ದಾಖಲೆಗಳನ್ನು ನಾಶಗೊಳಿಸುವ ಎಲ್ಲ ಸಾಧ್ಯತೆಗಳಿವೆ ಎಂದು ಆಕ್ರೋಶ ವ್ಯಕ್ತಪಡಿಸಿ ಆರೋಪಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.ಮುಂದುವರೆದ ತನಿಖೆ

ತಹಶೀಲ್ದಾರ್ ಚಂದ್ರ ಅವರನ್ನು ದೂರವಾಣಿಯ ಮುಖಾಂತರ ಸಂಪರ್ಕಿಸಿದಾಗ ಮಾತನಾಡಿದ ಅವರು, 2005 ರಿಂದ 2011 ರ ವರೆಗಿನ ಎಲ್ಲ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದು, 4 ದಿನಗಳ ಅವಧಿಯೊಳಗೆ ಅಕ್ರಮ ನಡೆಸಿರುವ ಒಟ್ಟು ಪ್ರಕರಣಗಳನ್ನು ಬಯಲು ಮಾಡಲಾಗುವುದಾಗಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry