ಸೋಮವಾರ, ಅಕ್ಟೋಬರ್ 14, 2019
24 °C

ಅನಾವರಣಗೊಂಡ ಜನಪದ ನೃತ್ಯ ಸಂಪತ್ತು

Published:
Updated:
ಅನಾವರಣಗೊಂಡ ಜನಪದ ನೃತ್ಯ ಸಂಪತ್ತು

ಮಂಗಳೂರು:  ಕಿವಿಗಡಚಿಕ್ಕುವ ಚಪ್ಪಾಳೆ ನಡುವೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಡೊಳ್ಳು ಕುಣಿತ ತಂಡ ಶನಿವಾರ ಅಮೋಘ ಪ್ರದರ್ಶನ ನೀಡಿತು. ಆದರೆ 17ನೇ ರಾಷ್ಟ್ರೀಯ ಯುವಜನೋತ್ಸವದಲ್ಲಿ ಕರ್ನಾಟಕದ ಈ ತಂಡದ ಜತೆ ಇತರ ರಾಜ್ಯಗಳ ತಂಡಗಳೂ ಕಿಕ್ಕಿರಿದ ಪ್ರೇಕ್ಷಕರಿಂದ ಅಷ್ಟೇ ಗೌರವ ಪಡೆದವು. ಜಾನಪದ ಸ್ಪರ್ಧೆ ವಿಭಾಗದಲ್ಲಿ ಪೈಪೋಟಿ ಬಹಳ ತೀವ್ರವಾಗಿದೆ.

ದೇಶದ ಜಾನಪದ ನೃತ್ಯ ಸಂಪತ್ತಿನ ಸಿರಿವಂತಿಕೆ ವೀಕ್ಷಿಸಲು ನಗರದ ಟಿ.ಎಂ.ಎ.ಪೈ ಸಮಾವೇಶ ಸಭಾಂಗಣದಲ್ಲಿ ಸಭಿಕರು ಕಿಕ್ಕಿರಿದು ನೆರೆದಿದ್ದರು. ಒಳಗೆ ಕಾಲಿಡಲೂ ಜಾಗವಿರಲಿಲ್ಲ. ಕುಳಿತುಕೊಂಡಷ್ಟೇ ಪ್ರಮಾಣದಲ್ಲಿ ನಿಂತವರೂ ಇದ್ದು ಪ್ರವೇಶದ್ವಾರದಲ್ಲಿ ನೂಕುನುಗ್ಗಲು ಕಾಣಿಸಿತು. ಜಾನಪದ ನೃತ್ಯ ಸ್ಪರ್ಧೆ ಇಡೀ ಯುವಜನೋತ್ಸವ ಆಕರ್ಷಣೆಯ ಕೇಂದ್ರವಾಗಿತ್ತು. ಹಲವು ಮಂದಿ ಒಳಗೆ ಬರಲಾಗದೆ ನಿರಾಶರಾದರು.

ಶುಕ್ರವಾರ ಮಧ್ಯಾಹ್ನ 12 ರಾಜ್ಯಗಳ ತಂಡಗಳು ಪ್ರದರ್ಶನ ನೀಡಿದವು. ಬೆಳಿಗ್ಗೆ ನಾಲ್ಕು, ಮಧ್ಯಾಹ್ನ ಎಂಟು. ಮಧ್ಯಾಹ್ನ ಮೂರನೆಯದಾಗಿ ಕರ್ನಾಟಕದ ಡೊಳ್ಳುಕುಣಿತದ ತಂಡವನ್ನು ಸ್ಪರ್ಧೆಗೆ ಆಹ್ವಾನಿಸಿದಾಗ ಸಭಿಕರು ರೋಮಾಂಚನಗೊಂಡರು. ಅವರ ನಿರೀಕ್ಷೆಯೂ ಹುಸಿಯಾಗಲಿಲ್ಲ. ಪಿರಮಿಡ್‌ಗಳನ್ನು ರಚಿಸಿ 15 ಕೆ.ಜಿ. ತೂಕದ ಡೊಳ್ಳಿನ ಮೇಲೆ ಸ್ಪರ್ಧಿಗಳಲ್ಲಿ ಒಬ್ಬ ಏರಿ ನಿಂತಾಗ ಜನ ಜೋರಾಗಿ ಹರ್ಷೊದ್ಘಾರದೊಡನೆ ಬೆಂಬಲಿಸಿದರು.

ತಂಡದಲ್ಲಿ- ಬಸವರಾಜ ಮಠದ್, ಎಸ್.ರಮೇಶ್, ಬಸವರಾಜಪ್ಪ, ರಾಜಪ್ಪ, ಕುಮಾರ್, ಮಂಜುನಾಥ್, ರವಿ, ಸುರೇಶ್, ಪ್ರಶಾಂತ್, ಹನುಮಂತ, ಭರಣಪ್ಪ, ಬಸವರಾಜಪ್ಪ, ಎಸ್.ಮಂಜುನಾಥ್, ಹುಚ್ಚರಾಯಪ್ಪ, ಪಿ.ನಾಗರಾಜ್, ಬಿ.ಹುಚ್ಚರಾಯಪ್ಪ, ಪಿ.ಎಸ್.ಮಂಜುನಾಥ್, ಮಹೇಶ್ವರಪ್ಪ, ಚಂದ್ರಪ್ಪ, ಬೀರೇಶ್ ಈ 20 ಮಂದಿ ಇದ್ದರು.

`ಪ್ರದರ್ಶನ ನಾವು ನಿರೀಕ್ಷಿಸಿದಂತೆ ಬಂದಿದೆ~ ಎಂದು ಬಸವರಾಜ ಮಠದ್ ಕಾರ್ಯಕ್ರಮದ ನಂತರ ತೃಪ್ತಿ ವ್ಯಕ್ತಪಡಿಸಿದರು.

ಐದು ತಂಡಗಳ ಪ್ರದರ್ಶನದ ಆಶಯ ಒಂದೇ ಇತ್ತು- ದುಷ್ಟ ಶಕ್ತಿಗಳ ವಿರುದ್ಧ ಶಿಷ್ಟ ಶಕ್ತಿಯ ಗೆಲುವು. ಜಾರ್ಖಂಡ್‌ನ ಚಾಹು ನೃತ್ಯ ಇದರಲ್ಲಿ ಒಂದು. ಪಾತ್ರಗಳು ಬಂಗಾಳಿ ದೇವ ದೇವತೆಯರ ಅಲಂಕಾರವನ್ನು ಹೋಲುತ್ತಿತ್ತು. ಜತೆಗೆ ರಾಕ್ಷಸ, ದೇವತೆ ಪಾತ್ರಧಾರಿಗಳ ಆಕ್ರೊಬ್ಯಾಟಿಕ್ (ತಿರುಗಿ ಪಲ್ಟಿ ಹೊಡೆಯುವುದು) ವಿಶೇಷ ಮೆಚ್ಚುಗೆ ಪಡೆಯಿತು. ಪುದುಚೇರಿಯ ನೃತ್ಯ ತಂಡದ (ಅಸುರ ಸಂಹಾರಂ) ಆಶಯವೂ ಇದೇ ಆಗಿತ್ತು.

ಗೋವಾದ `ಮುಸಲ್~ ನೃತ್ಯ ಅಲ್ಲಿನ ಸಾಂಸ್ಕೃತಿಕ ಸಿರಿವಂತಿಕೆ ತೋರಿಸಿದರೆ, ಮಣಿಪುರದ `ಲಾಯ್ ಹರೋಬ~ದಲ್ಲಿ ವೇಷಭೂಷಣ ಮತ್ತು ಜನಪದ ವಾದ್ಯ (ಪೇನ್) ಗಮನ ಸೆಳೆಯಿತು. ದೆಹಲಿ ತಂಡದವರು ಆಯ್ಕೆ ಮಾಡಿದ್ದು, ಒಡಿಶಾ ಮೂಲದ `ರಾನ್‌ಪಾ~ ನೃತ್ಯವನ್ನು. ಕಳೆದ ವರ್ಷ ದೆಹಲಿ ತಂಡ, ಉದಯಪುರದಲ್ಲಿ ಕರ್ನಾಟಕದ `ಡೊಳ್ಳು ಕುಣಿತ~ ಪ್ರದರ್ಶಿಸಿತ್ತು ಎಂದು ಕೊರಿಯೊಗ್ರಾಫರ್ ತರುಣ್ ದತ್ತ ತಿಳಿಸಿದರು. 

ಮಿಳುನಾಡಿನ ತಂಡ ಆಟ್ಟಂ ಪ್ರದರ್ಶಿಸಿತು. ಇದರಲ್ಲಿ ಕೊಂಬು, ಕಾವಡಿ, ಕೀಲು ಕುದುರೆ, ಸಣ್ಣ ಚರ್ಮ ವಾದ್ಯಗಳ ಬಳಕೆಯಿತ್ತು. ಒಡಿಶಾದ ಸಿಂಗಾರಿ ನೃತ್ಯ, ಮಧ್ಯಪ್ರದೇಶದ ನೃತ್ಯ ತಂಡ (ಕೃಷ್ಣ ಮತ್ತು ಯಾದವರ ನೃತ್ಯ), ಚತ್ತೀಸಗಢ ತಂಡದಿಂದ ಪರಬ್ ಪೂಜಾ, ಅಸ್ಸಾಂ ತಂಡದಿಂದ ವಸಂತ ಋತು ಕಾಲದ ಬಿಹು ನೃತ್ಯ ಗಮನ ಸೆಳೆದವು.

Post Comments (+)