ಶುಕ್ರವಾರ, ನವೆಂಬರ್ 22, 2019
19 °C
ಮಧುಗಿರಿ ವಿಧಾನಸಭೆ ಕ್ಷೇತ್ರ

ಅನಿತಾ `ಕೋಟೆ' ರಕ್ಷಣೆ ಯಾರ ಹೊಣೆ

Published:
Updated:

ತುಮಕೂರು: ಮೀಸಲು ಕ್ಷೇತ್ರವಾಗಿದ್ದ ಮಧುಗಿರಿ 2008ರ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆ ಕಂಡಿತು. ಸಾಮಾನ್ಯ ಕ್ಷೇತ್ರವಾದ ನಂತರದ ಐದು ವರ್ಷದಲ್ಲಿ ಎರಡು ಚುನಾವಣೆಯನ್ನು ಮಧುಗಿರಿ ತಾಲ್ಲೂಕಿನ ಜನತೆ ಕಾಣಬೇಕಾಯಿತು.ಐದು ಚುನಾವಣೆಯಲ್ಲಿ ಮೂರು ಬಾರಿ ಕ್ಷೇತ್ರ ಪ್ರತಿನಿಧಿಸಿದ್ದ ಡಾ.ಜಿ.ಪರಮೇಶ್ವರ್ ಕ್ಷೇತ್ರ ಬದಲಿಸಿದ ನಂತರ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಹಿಡಿತದಲ್ಲಿದ್ದ ಕ್ಷೇತ್ರವನ್ನು ಜೆಡಿಎಸ್ ತನ್ನ ಬಟ್ಟಿಗೆ ಹಾಕಿಕೊಂಡಿತ್ತು. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ಸಿ.ಚೆನ್ನಿಗಪ್ಪ ಪುತ್ರ ಡಿ.ಸಿ.ಗೌರಿಶಂಕರ್ ಆಯ್ಕೆ ಆಗುವ ಮೂಲಕ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.ಆಪರೇಷನ್ ಕಮಲಕ್ಕೆ ಸಿಲುಕಿದ ಗೌರಿಶಂಕರ್, ಶಾಸಕರಾಗಿ ಆಯ್ಕೆಯಾದ ಕೆಲವೇ ತಿಂಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರ್ಪಡೆಯಾದರು. ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ ಜೆಎಡಿಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ತಮ್ಮ ಸೊಸೆ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿ ಜಯ ಸಾಧಿಸುವ ಮೂಲಕ ಪಕ್ಷ ತೊರೆದವರಿಗೆ ತಕ್ಕ ಪಾಠ ಕಲಿಸಿದರು.ಉಪಚುನಾವಣೆಯಲ್ಲಿ ಗೌರಿಶಂಕರ್ ಮತ್ತೆ ಸ್ಪರ್ಧಿಸಲಿಲ್ಲ. ಗೌರಿಶಂಕರ್ ಬದಲಿಗೆ ಅವರ ತಂದೆ ಚೆನ್ನಿಗಪ್ಪ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡರು. ಕನಿಷ್ಠ ಎರಡನೇ ಸ್ಥಾನವನ್ನೂ ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ.1989ರಿಂದ 2008ರ ವರೆಗಿನ ಐದು ಚುನಾವಣೆಯಲ್ಲಿ (ಉಪಚುನಾವಣೆ ಹೊರತುಪಡಿಸಿ) ಮೂರು ಬಾರಿ ಕಾಂಗ್ರೆಸ್ ಹಾಗೂ ಎರಡು ಸಲ ಜೆಡಿಎಸ್ ಅಭ್ಯರ್ಥಿಗಳು ಕ್ಷೇತ್ರ ಪ್ರತಿನಿಧಿಸಿದ್ದಾರೆ. ಕ್ಷೇತ್ರದಲ್ಲಿ ಈ ಎರಡು ಪಕ್ಷಗಳ ಅಭ್ಯರ್ಥಿಗಳ ನಡುವೆಯೇ ಪೈಪೋಟಿ ಕಂಡುಬಂದಿದೆ.1989ರಲ್ಲಿ ಡಾ.ಜಿ.ಪರಮೇಶ್ವರ್ ಜಯಗಳಿಸಿದರೆ, 1994ರಲ್ಲಿ ಜನತಾ ದಳದ ಗಂಹನುಮಯ್ಯ ವಿರುದ್ಧ ಸೋಲು ಕಂಡರು. 1999 ಹಾಗೂ 2004ರಲ್ಲಿ ಮತ್ತೆ ಎರಡು ಬಾರಿ ಶಾಸಕರಾಗಿದ್ದರು. 2008ರಲ್ಲಿ ಜೆಡಿಎಸ್‌ನ ಗೌರಿಶಂಕರ್ ಆಯ್ಕೆಯಾದರು. 2008 ಡಿಸೆಂಬರ್ 25ರಂದು ನಡೆದ ಉಪ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಜಯಗಳಿಸಿದರು.ಮತಗಳ ಅಂತರ: 1989 ಹಾಗೂ 2004ರಲ್ಲಿ ಡಾ.ಜಿ.ಪರಮೇಶ್ವರ್ 17 ಸಾವಿರ ಮತಗಳ ಅಂತರದಲ್ಲಿ ಜಯಗಳಿಸಿದರೆ, 1994ರಲ್ಲಿ ಜನತಾ ದಳದ ಗಂಗಹನುಮಯ್ಯ ವಿರುದ್ಧ 3172 ಮತಗಳ ಅಂತರದಿಂದ ಸೋಲು ಕಂಡಿದ್ದರು.1999ರ ಚುನಾವಣೆಯಲ್ಲಿ ಪರಮೇಶ್ವರ್ 71895 ಮತಗಳನ್ನು ಪಡೆದು, 55802 ಮತಗಳ ಭಾರೀ ಅಂತರದಿಂದ ಜಯಗಳಿಸಿದ್ದರು. ನಂತರದ ಚುನಾವಣೆಯಲ್ಲಿ ಗೆಲುವಿನ ಅಂತರ ಕಡಿಮೆಯಾಯಿತು. 2008ರಲ್ಲಿ ಗೌರಿಶಂಕರ್ ಕೇವಲ 563 ಮತಗಳ ಅಂತರದಿಂದ ಆಯ್ಕೆ ಆಗಿದ್ದರು.ಜೆಡಿಎಸ್ ತಾಕಲಾಟ

ಚುನಾವಣೆ ಕಾವು ಏರುತ್ತಿದ್ದರೂ ಯಾವ ಪಕ್ಷವೂ ತಮ್ಮ ಅಧಿಕೃತ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ. ಕಾಂಗ್ರೆಸ್‌ನಿಂದ ಕೆ.ಎನ್.ರಾಜಣ್ಣ ಸ್ಪರ್ಧೆ ಬಹುತೇಕ ಖಚಿತವಾಗಿದ್ದು, ಪ್ರಚಾರ ಆರಂಭಿಸಿದ್ದಾರೆ. ಜೆಡಿಎಸ್‌ನಿಂದ ಅಭ್ಯರ್ಥಿ ಯಾರು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಗೌಡರ ಕುಟುಂಬದಿಂದ ಯಾರು ಸ್ಪರ್ಧಿಸುತ್ತಿಲ್ಲ. ಅನಿತಾ ಕುಮಾರಸ್ವಾಮಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಹಾಗಾಗಿ ಈ ಬಾರಿ ಹೊಸಬರು ಸ್ಪರ್ಧೆಗೆ ಟೊಂಕಕಟ್ಟಿ ನಿಂತಿದ್ದಾರೆ.ಐಎಎಸ್ ಅಧಿಕಾರಿ ವೀರಭದ್ರಯ್ಯ ಅವರನ್ನು ಕರೆತರುವ ಪ್ರಯತ್ನ ಪಕ್ಷದಲ್ಲಿ ನಡೆದಿದೆ. ಆದರೆ ಕೆಲಸಕ್ಕೆ ರಾಜೀನಾಮೆ ನೀಡಿದ್ದರೂ ಅಂಗೀಕಾರವಾಗಿಲ್ಲ.

ರಾಜೀನಾಮೆ ಅಂಗೀಕಾರವಾದರೆ ವೀರಭದ್ರಯ್ಯ ಸ್ಪರ್ಧೆ ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ. ಅದು ಸಾಧ್ಯವಾಗದಿದ್ದರೆ ವೀರಭದ್ರಯ್ಯ ಪುತ್ರ ಅಥವಾ ಪತ್ನಿಯನ್ನು ಕಣಕ್ಕಿಳಿಸುವ ಪ್ರಯತ್ನ ನಡೆದಿದೆ. ಜೆಡಿಎಸ್‌ನಿಂದ ಯಾರು ಸ್ಪರ್ಧಿಸುತ್ತಾರೆ ಎಂಬ ಕುತೂಹಲ ಕ್ಷೇತ್ರದ ಜನತೆಯನ್ನು ಕಾಡುತ್ತಿದೆ. ಬಿಜೆಪಿ, ಕೆಜೆಪಿ, ಬಿಎಸ್‌ಪಿಯಿಂದಲೂ ಅಭ್ಯರ್ಥಿಗಳು ಯಾರೆಂಬುದು ಇನ್ನೂ ಖಚಿತವಾಗಿಲ್ಲ.ಮತ್ತೊಮ್ಮೆ ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಡುವಿನ ಸಮರದ ಕಣವಾಗಿ ಕ್ಷೇತ್ರ ರೂಪುಗೊಳ್ಳಲಿದೆ. ಜೆಡಿಎಸ್ ಕ್ಷೇತ್ರ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದರೆ, ಜೆಡಿಎಸ್ ಹಿಡಿತ ತಪ್ಪಿಸಲು ಕಾಂಗ್ರೆಸ್ ಕಸರತ್ತು ನಡೆಸಿದೆ.ಪ್ರತಿಕ್ರಿಯಿಸಿ (+)