ಗುರುವಾರ , ಮೇ 28, 2020
27 °C

ಅನಿರ್ಧಿಷ್ಟ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಮ್ಮನ ಕಿತ್ತೂರು: ಸಮೀಪದ ಎಂ. ಕೆ. ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ (ರಾಣಿ ಶುಗರ್ಸ್‌) ಪ್ರಸಕ್ತ ಸಾಲಿನಲ್ಲಿ ಬೆಳೆಗಾರರು ಪೂರೈಕೆ ಮಾಡಿರುವ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ  ಎರಡು ಸಾವಿರ ರೂಪಾಯಿ ದರ ನಿಗದಿ ಪಡಿಸಬೇಕೆಂದು ಆಗ್ರಹಿಸಿದ ಈ ಭಾಗದ ನೂರಾರು ರೈತರು  ಕಾರ್ಖಾನೆ ಆಡಳಿತ ಮಂಡಳಿ ಕಚೇರಿ ಎದುರು ಸೋಮವಾರ ಅನಿರ್ದಿಷ್ಟ ಧರಣಿ ಪ್ರಾರಂಭಿಸಿದರು.‘ಬೇಡಿಕೆ ಈಡೇರಿಸುವವರೆಗೆ ಪ್ರತಿನಿತ್ಯ ಮುಂಜಾನೆ 11ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಧರಣಿ ನಡೆಸಲಾಗುವುದು’ ಎಂದು ಮುಖಂಡರು ಘೋಷಿಸಿದರು. ಧರಣಿ ನಿರತರ ಮನವೊಲಿಸಲು  ವ್ಯವಸ್ಥಾಪಕ ನಿರ್ದೇಶಕ ಎಂ.ಡಿ. ಮಲ್ಲೂರ ಮಾಡಿದ ಪ್ರಯತ್ನ ವಿಫಲವಾಯಿತು.ಕಾರ್ಖಾನೆ ಬಳಿಯಿರುವ ಬಂಡೆಮ್ಮ ದೇವಿ ದೇವಸ್ಥಾನದಲ್ಲಿ ಮಧ್ಯಾಹ್ನ 12 ಗಂಟೆಗೆ ಸಭೆಯೊಂದನ್ನು ನಡೆಸಿದ ಕಬ್ಬು ಬೆಳೆಗಾರರು, ಪ್ರತಿ ಮೆ. ಟನ್‌ಗೆ ಕಬ್ಬಿಗೆ ನೀಡಬೇಕಿರುವ ಕಳೆದ ಸಾಲಿನ ಬಾಕಿ 400 ರೂಪಾಯಿ, ಪ್ರಸಕ್ತ ಸಾಲಿನಲ್ಲಿ ರೂ. 2000 ನಿಗದಿ ಮಾಡುವುದು ಹಾಗೂ ಪ್ರಥಮ ಕಂತಾಗಿ ರೂ. 1800 ನೀಡಬೇಕು’ ಎಂದು ನಿರ್ಣಯವೊಂದನ್ನು ಸ್ವೀಕರಿಸಿ ನೇರವಾಗಿ ಕಾರ್ಖಾನೆ ಆಡಳಿತ ಮಂಡಳಿ ದ್ವಾರ ಬಾಗಿಲಿಗೆ ಬಂದು ಧರಣಿ ಪ್ರಾರಂಭಿಸಿದರು.ಧರಣಿ ನಿರತ ಬೆಳೆಗಾರರನ್ನುದ್ದೇಶಿಸಿ ಮಾತನಾಡಿದ ಕಾರ್ಖಾನೆ ಮಾಜಿ ನಿರ್ದೇಶಕ ಬಸವರಾಜ ಮೆಳೇದ ಅವರು, ‘ಉತ್ತರ ಕರ್ನಾಟಕದ ಬಹುತೇಕ ಸಕ್ಕರೆ ಕಾರ್ಖಾನೆಗಳು ಎರಡು ಸಾವಿರ ರೂಪಾಯಿ ಬೆಲೆ ನೀಡುವುದಾಗಿ ಭರವಸೆ ನೀಡಿವೆ. ಅದಕ್ಕೆ ತಕ್ಕಂತೆ ರಾಣಿ ಶುಗರ್ಸ್‌ ಕೂಡ ನಡೆದುಕೊಳ್ಳಬೇಕು’ ಎಂದು ಸಲಹೆ ಮಾಡಿದರು.‘ಮಾರುಕಟ್ಟೆಯಲ್ಲಿ ಈಗ ಸಕ್ಕರೆ ದರ ಮೂರು ಸಾವಿರವಿದೆ. ಎರಡು ಸಾವಿರ ರೂಪಾಯಿ ದರ ನೀಡಲು ಏನೂ ತೊಂದರೆ ಆಗುವುದಿಲ್ಲ. ಕಾರಣ ಎರಡು ಸಾವಿರ ರೂಪಾಯಿ ಬೆಲೆ ನಿಗದಿ ಮಾಡಬೇಕು. ಕಳೆದ ಬಾರಿ ಪತ್ರಿಕಾ ಹೇಳಿಕೆ ಮೂಲಕ ಘೋಷಣೆ ಮಾಡಿರುವ ರೂ. 2400 ಮೊತ್ತದಲ್ಲಿ ಬಾಕಿ ಇರುವ ನಾಲ್ಕು ನೂರು ರೂಪಾಯಿ ಕೂಡಲೇ ನೀಡಬೇಕು’ ಎಂದು ಮೆಳೇದ ಒತ್ತಾಯಿಸಿದರು.ಬಾಬಾಗೌಡರು ಎಲ್ಲಿ?

ಚನ್ನಮ್ಮನ ಕಿತ್ತೂರು: ‘
ರೈತ ಹೋರಾಟಗಾರ ಬಾಬಾಗೌಡ ಪಾಟೀಲ ಅವರು ಕಬ್ಬು ಬೆಲೆ ನಿಗದಿಗಾಗಿ ಖಾನಾಪುರ, ನಿಪ್ಪಾಣಿ, ರಾಯಬಾಗ ಕಾರ್ಖಾನೆ ಆವರಣಕ್ಕೆ ರೈತರೊಂದಿಗೆ ತೆರಳಿ ಹೋರಾಟ ಮಾಡಿದ್ದಾರೆ. ಆದರೆ ಇಲ್ಲಿ ಯಾಕೆ ಬರುತ್ತಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಾಬುಗೌಡ ಪಾಟೀಲ ಪ್ರಶ್ನಿಸಿದರು.‘ಎರಡು ದಶಕದ ವರೆಗೆ ಇದೇ ಇನಾಮದಾರ ವಿರುದ್ಧ ರಾಜಕೀಯವಾಗಿ ನಿರಂತರ ಹೋರಾಟ ಮಾಡಿದ ಗೌಡರು ಈಗ ಅವರಿರುವ (ಇನಾಮದಾರ) ಕಾಂಗ್ರೆಸ್ ಪಕ್ಷ ಸೇರಿದ್ದು ದುರಂತವಾಗಿದೆ’ ಎಂದು ವಿಷಾದಿಸಿದರು.ಕಾರ್ಖಾನೆ ಮಾಜಿ ಅಧ್ಯಕ್ಷರಾದ ದೊಡಗೌಡ್ರ ಪಾಟೀಲ, ವಿರಕ್ತಯ್ಯಾ ಸಾಲಿಮಠ, ಚಂದ್ರಗೌಡ ಪಾಟೀಲ ಮಾತನಾಡಿದರು.ಮಂಡಳಿ ಗಮನಕ್ಕೆ: ಧರಣಿ ನಿರತರ ಸ್ಥಳಕ್ಕಾಗಮಿಸಿದ ವ್ಯವಸ್ಥಾಪಕ ನಿರ್ದೇಶಕ ಎಂ. ಡಿ. ಮಲ್ಲೂರ ಅವರು, ‘ಬೆಳೆಗಾರರ ಬೇಡಿಕೆಯನ್ನು ಆಡಳಿತ ಮಂಡಳಿ ಗಮನಕ್ಕೆ ತರುತ್ತೇನೆ.ರೂ. 2000 ಬೆಲೆ ನಿಗದಿ ಮಾಡಬೇಕು ಹಾಗೂ ಪ್ರಥಮ ಕಂತಾಗಿ ರೂ. 1800 ನೀಡಬೇಕೆನ್ನುವ ಸಕ್ಕರೆ ನಿರ್ದೇಶನಾಲಯದ ಸೂಚನೆಯನ್ನು ಆಡಳಿತ ಮಂಡಳಿಯಲ್ಲಿ ಚರ್ಚಿಸಲು ಸಭೆಯ ದಿನಾಂಕ ನಿಗದಿ ಪಡಿಸುವಂತೆ ಕೇಳಲಾಗಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.