ಶುಕ್ರವಾರ, ನವೆಂಬರ್ 22, 2019
22 °C
ಪೆಟ್ರೋಲಿಯಂ ಸಚಿವ ವೀರಪ್ಪ ಮೊಯಿಲಿ ಆರೋಪ

ಅನಿಲ ಇದ್ದರೂ ಬಳಸದ ರಾಜ್ಯ ಸರ್ಕಾರ

Published:
Updated:

ಬೆಂಗಳೂರು: ಧಾಬೋಲ್‌ನಿಂದ ಕೊಳವೆ ಮಾರ್ಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಎಲ್‌ಎನ್‌ಜಿ (ದ್ರವೀಕೃತ ನೈಸರ್ಗಿಕ ಅನಿಲ) ಪೂರೈಸುತ್ತಿದ್ದರೂ ಅದನ್ನು ಬೆಂಗಳೂರು ನಗರದ ಮನೆಗಳಿಗೆ ಮತ್ತು ಬಸ್‌ಗಳಿಗೆ ಪೂರೈಸಲು ರಾಜ್ಯದ ಬಿಜೆಪಿ ಸರ್ಕಾರ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಎಂ. ವೀರಪ್ಪ ಮೊಯಿಲಿ ಆರೋಪಿಸಿದರು.ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಧಾಬೋಲ್-ಬೆಂಗಳೂರು ಅನಿಲ ಕೊಳವೆ ಮಾರ್ಗದಲ್ಲಿ ಎಲ್‌ಎನ್‌ಜಿ ಪೂರೈಕೆ ಆರಂಭವಾಗಿದೆ. ದೊಡ್ಡ ಪ್ರಮಾಣದಲ್ಲಿ ದೊರೆಯುತ್ತಿರುವ ಈ ಅನಿಲವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ' ಎಂದು ದೂರಿದರು.ಬಿಡದಿ ಅನಿಲ ವಿದ್ಯುತ್ ಸ್ಥಾವರವನ್ನು ನಿಗದಿತ ಕಾಲಮಿತಿಯಲ್ಲಿ ಅಸ್ತಿತ್ವಕ್ಕೆ ತರುವ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಿಲ್ಲ. ಸದ್ಯ ಲಭ್ಯವಿರುವ ಅನಿಲವನ್ನು ಯಲಹಂಕದ ಡೀಸೆಲ್ ಆಧಾರಿತ ವಿದ್ಯುತ್ ಸ್ಥಾವರಕ್ಕೆ ಪೂರೈಕೆ ಮಾಡಿದ್ದರೆ, ರಾಜ್ಯ ಸರ್ಕಾರಕ್ಕೆ ವಾರ್ಷಿಕ 800 ಕೋಟಿ ರೂಪಾಯಿ ಉಳಿತಾಯ ಆಗುತ್ತಿತ್ತು. ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಈ ಸಂಬಂಧ ನೀಡಿದ ಸಲಹೆಯನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಿದೆ ಎಂದು ಮೊಯಿಲಿ ಅಸಮಾಧಾನ ವ್ಯಕ್ತಪಡಿಸಿದರು.ಭಾರತೀಯ ಅನಿಲ ಪ್ರಾಧಿಕಾರ (ಗೇಲ್) ನಿರ್ಮಿಸಿರುವ ಕೊಳವೆ ಮಾರ್ಗದಲ್ಲಿ ಅನಿಲ ಪೂರೈಕೆ ಆರಂಭವಾಗಿ ಒಂದು ತಿಂಗಳಾಗಿದೆ. ಅದನ್ನು ಅಡಿಗೆ ಅನಿಲಕ್ಕೆ (ಎಲ್‌ಪಿಜಿ) ಬದಲಾಗಿ ನೇರವಾಗಿ ಮನೆಗಳು ಹಾಗೂ ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳ ಬಸ್‌ಗಳಿಗೆ ಪೂರೈಸಲು ಸ್ಥಳೀಯ ಕೊಳವೆ ಜಾಲ ನಿರ್ಮಿಸಬೇಕಿದೆ. ಅಂತಹ ಜಾಲ ನಿರ್ಮಾಣಕ್ಕೆ 100 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಪೆಟ್ರೋಲಿಯಂ ಸಚಿವಾಲಯ ಆಶ್ವಾಸನೆ ನೀಡಿದರೂ, ರಾಜ್ಯ ಸರ್ಕಾರ ಬಳಸಿಕೊಳ್ಳಲು ಮುಂದಾಗಲಿಲ್ಲ ಎಂದು ಆಪಾದಿಸಿದರು.ಧಾಬೋಲ್-ಬೆಂಗಳೂರು ಅನಿಲ ಕೊಳವೆ ಮಾರ್ಗವನ್ನು ಚಿತ್ರದುರ್ಗದಿಂದ ಮಂಗಳೂರಿನವರೆಗೆ ವಿಸ್ತರಿಸುವ ಪ್ರಸ್ತಾವಕ್ಕೆ ಗೇಲ್ ಇತ್ತೀಚೆಗೆ ಅನುಮೋದನೆ ನೀಡಿದೆ. ಈ ಯೋಜನೆಯಿಂದ ಮಂಗಳೂರಿನ ಜನರು ಸುಲಭವಾಗಿ ಅಡಿಗೆ ಅನಿಲ ಪಡೆಯಬಹುದು ಎಂದರು.ಅನುದಾನ ಬಳಕೆಯಲ್ಲೂ ವಿಫಲ: ಎನ್‌ಡಿಎ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದ ಆರು ವರ್ಷಗಳಲ್ಲಿ ರಾಜ್ಯಕ್ಕೆ 30 ಸಾವಿರ ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ಆದರೆ ಯುಪಿಎ ಸರ್ಕಾರ ಆರು ವರ್ಷಗಳ ಅವಧಿಯಲ್ಲಿ 1.17 ಲಕ್ಷ ಕೋಟಿ ರೂಪಾಯಿ ಕೊಟ್ಟಿದೆ. ಆದರೆ, ಅದನ್ನು ಸಮರ್ಪಕವಾಗಿ ಬಳಕೆ ಮಾಡುವಲ್ಲಿ ಬಿಜೆಪಿ ಸರ್ಕಾರ ಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.`ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಮೋಸ ಮಾಡಿದೆ ಎಂದು ಸುಳ್ಳು ಪ್ರಚಾರ ಮಾಡಿ ಜನರ ದಿಕ್ಕು ತಪ್ಪಿಸಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಪ್ರಯತ್ನಿಸುತ್ತಿದ್ದಾರೆ. ರಾಜ್ಯದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಯಾರು, ಯಾವ ಸಂದರ್ಭದಲ್ಲಿ ಮೋಸ ಮಾಡಿದ್ದಾರೆ ಎಂಬ ಎಲ್ಲ ವಿವರಗಳು ನನಗೆ ಗೊತ್ತು. ಚುನಾವಣೆ ಪ್ರಚಾರದ ವೇಳೆ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ' ಎಂದು ಗುಡುಗಿದರು.

ಪ್ರತಿಕ್ರಿಯಿಸಿ (+)