ಶನಿವಾರ, ಅಕ್ಟೋಬರ್ 19, 2019
28 °C

ಅನಿಲ ದುರಂತ ಪರಿಹಾರ: 134 ಕೋಟಿ ಬಿಡುಗಡೆಗೆ ಶಿಫಾರಸು

Published:
Updated:

ನವದೆಹಲಿ (ಪಿಟಿಐ): ಭೋಪಾಲ ಅನಿಲ ದುರಂತದಿಂದಾಗಿ ಕ್ಯಾನ್ಸರ್ ಮತ್ತು ಕಿಡ್ನಿ ವ್ಯಾಧಿಯಿಂದ ಬಳಲುತ್ತಿರುವ 12,000 ಜನರಿಗೆ ಪರಿಹಾರವಾಗಿ 134 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಸಚಿವರ ತಂಡ ಸರ್ಕಾರಕ್ಕೆ ಶಿಫಾರಸು ಮಾಡಲು ಶುಕ್ರವಾರ ನಿರ್ಧರಿಸಿದೆ.ಈ ದುರಂತದಿಂದ ಕ್ಯಾನ್ಸರ್ ಹಾಗೂ ಕಿಡ್ನಿ ಸಂಬಂಧಿ ಸಮಸ್ಯೆ ಎದುರಿಸುತ್ತಿರುವ 12,000 ಮಂದಿಗೆ 134 ಕೋಟಿ ರೂಪಾಯಿ ಪರಿಹಾರ ನೀಡಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಚಿವರ ತಂಡದ ಸದಸ್ಯರೂ ಆಗಿರುವ ಮಧ್ಯಪ್ರದೇಶ ಸಚಿವ ಬಾಬುಲಾರ್ ಗೌರ್ ಸಭೆಯ ಬಳಿಕ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಗೃಹ ಸಚಿವ ಪಿ.ಚಿದಂಬರಂ ನೇತೃತ್ವದ ಸಚಿವ ತಂಡದಲ್ಲಿ  ಗೃಹ ಸಚಿವ ಗುಲಾಂ ನಬಿ ಆಜಾದ್, ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರನ್ನು ಒಳಗೊಂಡಂತೆ ಕೇಂದ್ರ ಹಲವು ಸಚಿವರು ಇದ್ದಾರೆ.ಸಚಿವರ ತಂಡದ ನಿರ್ಧಾರವು ಸಂತೋಷ ತಂದಿದೆಯೇ ಎನ್ನುವ ಪ್ರಶ್ನೆಗೆ, ` ನಿರ್ಧಾರವು ಅಷ್ಟೇನು ಸಮಾಧಾನ ತಂದಿಲ್ಲ.  ದುರಂತದಲ್ಲಿ ಸಂತ್ರಸ್ತರಾದ 10,046 ಮಂದಿಗೆ ಪ್ರತಿಯೊಬ್ಬರಿಗೂ ತಲಾ 10 ಲಕ್ಷ ರೂಪಾಯಿ ನೀಡುವ ಪ್ರಸ್ತಾವವನ್ನು ತಂಡವು ತಿರಸ್ಕರಿಸಿದೆ ಎಂದು ಆಕ್ಷೇಪಿಸಿದರು.

Post Comments (+)