ಅನಿವಾರ್ಯವಾದ ಏರಿಕೆ

7

ಅನಿವಾರ್ಯವಾದ ಏರಿಕೆ

Published:
Updated:

ಆಹಾರ ಧಾನ್ಯ ಮತ್ತು ಇತರೆ ದಿನ ಬಳಕೆಯ ಅವಶ್ಯ ವಸ್ತುಗಳ ಬೆಲೆಗಳು ಇತ್ತೀಚಿನ ದಿನಗಳಲ್ಲಿ ಒಂದಾದ ಮೇಲೊಂದು ಏರುತ್ತಲೇ ಇವೆ. ಈಗ ಹಾಲಿನ ಸರದಿ. ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಹಾಲು ಮತ್ತು ಮೊಸರಿನ ಬೆಲೆಯಲ್ಲಿ ಲೀಟರ್ ಒಂದಕ್ಕೆ ಎರಡು ರೂಪಾಯಿ ಹೆಚ್ಚಳ ಮಾಡಿದೆ. ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನರಿಗೆ ಸಹಜವಾಗಿಯೇ ಹಾಲು ಮತ್ತು ಮೊಸರಿನ ದರದ ಹೆಚ್ಚಳವು ಗಾಯದ ಮೇಲೆ ಬರೆ ಹಾಕಿದಂತಾಗಿದೆ.ಕೈಗಾರಿಕೆಗಳು ಉತ್ಪಾದಿಸುವ ಮಿನರಲ್ ವಾಟರ್, ತಂಪು ಪಾನೀಯಗಳ ಬೆಲೆಗಳನ್ನು ಗಣನೆಗೆ ತೆಗೆದುಕೊಂಡರೆ ಹಾಲಿನ ಬೆಲೆ ಏರಿಕೆಯನ್ನು ತಪ್ಪು ಎಂದು ಹೇಳುವುದು ಕಷ್ಟ. ನೆರೆಹೊರೆಯ ರಾಜ್ಯಗಳ ಹಾಲಿನ ದರಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿನ ಹಾಲಿನ ಬೆಲೆ ಕಡಿಮೆ ಇರುವ ಸಂಗತಿಯನ್ನು ತಳ್ಳಿಹಾಕುವಂತಿಲ್ಲ. ‘ಹಾಲು ಉತ್ಪಾದಕರ ಬೇಡಿಕೆಯ ಹಿನ್ನೆಲೆಯಲ್ಲಿ ಅವರಿಗೆ ಪ್ರೋತ್ಸಾಹ ಮತ್ತು ಹಾಲು ಉತ್ಪನ್ನಗಳ ಗುಣಮಟ್ಟವನ್ನು ಕಾಪಾಡುವ ಉದ್ದೇಶದಿಂದ ಬೆಲೆ ಹೆಚ್ಚಿಸಲಾಗಿದೆ. ಹೆಚ್ಚಿಸಿರುವ ಈ ಎರಡು ರೂಪಾಯಿಯನ್ನು ಪೂರ್ಣವಾಗಿ ರೈತರಿಗೆ ನೀಡಲಾಗುವುದು’ ಎಂದು ಮಹಾಮಂಡಳ ಹೇಳಿದೆ. ಇದು ಸ್ವಾಗತಾರ್ಹ. ಆ ದೃಷ್ಟಿಯಿಂದ ಗ್ರಾಹಕರು ಈ ಏರಿಕೆಯನ್ನು ಸಹಿಸಿಕೊಳ್ಳುವುದು ಅನಿವಾರ್ಯ.ಕೆಎಂಎಫ್, ಪ್ರತಿ ಬಾರಿ ಹಾಲಿನ ದರವನ್ನು ಹೆಚ್ಚಿಸಿದಾಗಲೆಲ್ಲ ರೈತರ ಹೆಸರನ್ನು ಉಲ್ಲೇಖಿಸುತ್ತಾ ಬಂದಿದೆ. ಆದರೆ ಹೆಚ್ಚಿಸಿದಷ್ಟು ಪ್ರಮಾಣದ ಹಣ ರೈತರಿಗೆ ತಲುಪುತ್ತದೆ ಎನ್ನುವುದು ಅನುಮಾನ. ಲಾಭದಾಯಕವಲ್ಲದ ಬೇಸಾಯವನ್ನೇ ನಂಬಿರುವ ರೈತರು ಜೀವನೋಪಾಯಕ್ಕಾಗಿ ಪಶುಪಾಲನೆಯನ್ನು ಉಪಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಅವರ ಸ್ಥಿತಿ ಹೇಗಿದೆ ಎಂದರೆ ರೈತರು, ತಮ್ಮ ಮಕ್ಕಳಿಗೂ ಒಂದು ಲೋಟ ಹಾಲು ನೀಡದೆ ಎಲ್ಲ ಹಾಲನ್ನು ಮಾರಾಟ ಮಾಡಿ ಬದುಕು ಸಾಗಿಸುತ್ತಾರೆ. ಆ ದೃಷ್ಟಿಯಿಂದ ಗ್ರಾಹಕರಿಂದ ಪಡೆದ ಹಣವನ್ನು ನೇರವಾಗಿ ರೈತರಿಗೆ ತಲುಪಿಸುವ ಹೊಣೆಯನ್ನು ಮಹಾಮಂಡಳ ಪ್ರಾಮಾಣಿಕವಾಗಿ ನಿರ್ವಹಿಸಬೇಕು.ಏಕೆಂದರೆ ಹಾಲು ಉತ್ಪನ್ನಕ್ಕೇ ಸಾಕಿರುವ ಹಸುಗಳ ಪಾಲನೆಗೆ ಬೇಕಾದ ಮೇವು, ಹಿಂಡಿ ಮತ್ತು ಅವುಗಳ ಆರೋಗ್ಯ ರಕ್ಷಣೆಯ ನಿರ್ವಹಣೆ ರೈತರಿಗೆ ಭಾರ ಆಗಿರುವುದನ್ನು ತಳ್ಳಿಹಾಕಲಾಗದು. ದುರದೃಷ್ಟಕರ ಸಂಗತಿ ಎಂದರೆ ಅನೇಕ ಸಲ, ಹಾಲಿನ ಬೆಲೆ ಏರಿಕೆಯ ಹೆಚ್ಚಿನ ಭಾಗ ಆಡಳಿತ ಸಿಬ್ಬಂದಿ ಮತ್ತು ನಿರ್ವಹಣಾ ವೆಚ್ಚಕ್ಕೆ ಸರಿದೂಗಿಸುವ ಪ್ರವೃತ್ತಿ ಕಂಡು ಬರುತ್ತಿದೆ. ಇದನ್ನು ನಿಯಂತ್ರಿಸಬೇಕು. ಆಡಳಿತ ನಿರ್ವಹಣೆಗೆ ತಗಲುವ ಮತ್ತು ಅನವಶ್ಯಕ ದುಂದು ವೆಚ್ಚವನ್ನು ಕಡಿಮೆ ಮಾಡಿ ಹಾಲು ಉತ್ಪಾದಕರ ಜೊತೆಗೆ ಗ್ರಾಹಕರ ಹಿತವನ್ನು ಕಾಪಾಡುವತ್ತ ಮಹಾಮಂಡಳದ ಆಡಳಿತ ವರ್ಗ ಹೆಚ್ಚು ಮುತುವರ್ಜಿವಹಿಸಬೇಕು. ಹಾಲು ಮಹಾಮಂಡಳ ಮತ್ತು ಹಾಲು ಒಕ್ಕೂಟಗಳ ಆಡಳಿತದಲ್ಲಿ ದಕ್ಷತೆ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ತರುವ ಮೂಲಕ ಬೆಲೆ ಏರಿಕೆಯನ್ನು ನಿಯಂತ್ರಣದಲ್ಲಿಡಲು ಗಮನ ನೀಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry