ಗುರುವಾರ , ಮೇ 19, 2022
25 °C

ಅನಿವಾರ್ಯವಾದ ವಿಲೀನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್ ಜೊತೆಗೆ ಪ್ರಜಾರಾಜ್ಯಂ ವಿಲೀನವು ಪ್ರಸ್ತುತ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಸ್ಥಿರತೆ ಎದುರಿಸುತ್ತಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಕಿರಣ್ ರೆಡ್ಡಿ ನೇತೃತ್ವದ ಸರ್ಕಾರಕ್ಕೆ ಈಗ ಹುಲ್ಲುಕಡ್ಡಿಯ ಆಸರೆ ಸಿಕ್ಕಂತಾಗಿದೆ.

 

ವೈ.ಎಸ್. ರಾಜಶೇಖರ ರೆಡ್ಡಿ ಅವರ ಪುತ್ರ ಜಗನ್‌ಮೋಹನ ರೆಡ್ಡಿ, ಕಾಂಗ್ರೆಸ್‌ನಿಂದ ಸಿಡಿದು ಹೋದ ಬಳಿಕ ಆಂಧ್ರ ಪ್ರದೇಶದ ಕಾಂಗ್ರೆಸ್ ಸರ್ಕಾರ ಸಂಖ್ಯಾಬಲ ಕುಸಿಯುವ ಆತಂಕ ಎದುರಿಸುತ್ತಲೇ ಇದೆ. ವಿಧಾನಸಭೆಯ ಒಟ್ಟು 294 ಸದಸ್ಯ ಬಲದಲ್ಲಿ ಕಾಂಗ್ರೆಸ್ 157 ಸ್ಥಾನಗಳನ್ನು ಹೊಂದಿತ್ತು. ಆದರೆ ಜಗನ್ ಜೊತೆ ಈಗಾಗಲೇ 16 ಶಾಸಕರು ಇದ್ದು, ರಾಜಕೀಯ ಪರಿಸ್ಥಿತಿಯನ್ನು ಗಮನಿಸಿ ಅಡ್ಡಗೋಡೆಯ ಮೇಲೆ ಕುಳಿತ ಹಲವರಿದ್ದಾರೆ.

 

ಇವರು ಗಾಳಿ ಬಂದ ಕಡೆ ತೂರಿಕೊಳ್ಳುವ ಜಾಣರು. ಈ ಮಧ್ಯೆ ತೆಲಂಗಾಣ ಪ್ರತ್ಯೇಕ ಹೋರಾಟ ಮತ್ತು ಈ ಕುರಿತಾಗಿ ಶ್ರೀಕೃಷ್ಣ ಆಯೋಗ ನೀಡಿದ ವರದಿಯಿಂದ ರಾಜ್ಯ ಸರ್ಕಾರ ಅಭದ್ರ ಸ್ಥಿತಿಯಲ್ಲಿರುವುದರಿಂದ ಆಂಧ್ರದ ರಾಜಕೀಯ ವ್ಯವಸ್ಥೆಯೇ ದಿಕ್ಕು ತಪ್ಪುತ್ತಿರುವುದು ನಿರೀಕ್ಷಿತ ಬೆಳವಣಿಗೆ.

 

ಜಗನ್ ರೆಡ್ಡಿ ಬೆಂಬಲಿಗರು ಅಧಿಕೃತವಾಗಿ ಪಕ್ಷದಿಂದ ಹೊರ ಬಂದಾಗ ಉಂಟಾಗುವ ಬಿಕ್ಕಟ್ಟಿನಿಂದ ಪಾರಾಗಲು ಕಾಂಗ್ರೆಸ್ 18 ಶಾಸಕರ ಬೆಂಬಲ ಹೊಂದಿರುವ ಪ್ರಜಾರಾಜ್ಯಂ ಪಕ್ಷವನ್ನೇ ವಿಲೀನ ಮಾಡಿಕೊಂಡು ಸರ್ಕಾರವನ್ನು ಉಳಿಸಿಕೊಳ್ಳುವ ಕಾರ್ಯತಂತ್ರ ರೂಪಿಸಿಕೊಂಡಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಚಿರಂಜೀವಿ ನಡುವಿನ ಮಾತುಕತೆಯ ನಂತರ ಯಾವುದೇ ‘ಷರತ್ತಿಲ್ಲದ’ ವಿಲೀನ ಆಂಧ್ರದ ರಾಜಕೀಯದಲ್ಲಿ ಯಾವ ರೀತಿಯ ಬದಲಾವಣೆಗೆ ದಿಕ್ಸೂಚಿಯಾಗಲಿದೆ ಎನ್ನುವುದನ್ನು ಹೇಳಲು ಈಗ ಕಾಲ ಪಕ್ವವಾಗಿಲ್ಲ.ಈ ರಾಜಕೀಯ ಬೆಳವಣಿಗೆ ದಿಢೀರನೆ ಆಗಿರುವಂತಹದ್ದೇನಲ್ಲ. ಕೆಲವು ತಿಂಗಳಿಂದ ಕಾಂಗ್ರೆಸ್ ಮತ್ತು ಪ್ರಜಾರಾಜ್ಯಂ ಪಕ್ಷದ ಸಖ್ಯ ಬೆಳೆಸುವ ತೆರೆಮರೆಯ ರಾಜಕೀಯ ಕಸರತ್ತು ನಡೆದೇ ಇತ್ತು. ಅದೀಗ ಫಲಕಾರಿಯಾಗಿದೆಯಷ್ಟೆ. ಈ ಬೆಳವಣಿಗೆಯಿಂದ ಕಾಂಗ್ರೆಸ್ ಮತ್ತು ಕಳೆದ ಚುನಾವಣೆಯಲ್ಲಿ ನಿರೀಕ್ಷಿತ ಗೆಲುವು ಸಾಧಿಸುವಲ್ಲಿ ವಿಫಲವಾಗಿದ್ದ ಪ್ರಜಾರಾಜ್ಯಂಗೂ ಈ ಪರಸ್ಪರ ಅವಲಂಬನೆ ಅನಿವಾರ್ಯವಾಗಿತ್ತು.

 

ಈ ವಿಲೀನವನ್ನು ರಾಯಲಸೀಮೆಯ ಇಬ್ಬರು ಪ್ರಜಾರಾಜ್ಯಂ ಶಾಸಕರು ವಿರೋಧಿಸಿದ್ದಾರೆ. ಇಂತಹ ಬೆಳವಣಿಗೆಯಿಂದ ಸ್ಥಳೀಯ ಮಟ್ಟದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರಿಗೆ ಮುಜುಗರ ಆಗುವುದು ಸಹಜ. ಇದರಿಂದ ಎರಡೂ ಕಡೆಗೂ ಲಾಭ ಮತ್ತು ನಷ್ಟ ಆಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಆದರೆ ಪ್ರಾದೇಶಿಕ ಆಶಯಗಳನ್ನಿಟ್ಟುಕೊಂಡು ಪಕ್ಷ ಕಟ್ಟಿದ ಚಿರಂಜೀವಿ ಅವರ ರಾಜಕೀಯ ಭವಿಷ್ಯ ಮತ್ತೆ ಏನಾಗುವುದು ಎಂಬುದನ್ನು ಕಾದುನೋಡಬೇಕಷ್ಟೇ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.