ಅನಿವಾಸಿ ಭಾರತೀಯರ ಕಲಾಪ್ರೀತಿ

7

ಅನಿವಾಸಿ ಭಾರತೀಯರ ಕಲಾಪ್ರೀತಿ

Published:
Updated:

ಭಾರತದಲ್ಲಿರುವಷ್ಟು ಕಲಾಪ್ರಕಾರಗಳು ಇನ್ನೆಲ್ಲೂ ಇಲ್ಲ. ಕಲಾವಿದರೂ ಅಷ್ಟೇ. ಆದರೆ ಅನಿವಾಸಿ ಭಾರತೀಯರಾಗಿ ಇಲ್ಲಿಯ ಸಂಸ್ಕೃತಿ, ಕಲೆಗಳನ್ನು ಕರಗತ ಮಾಡಿಕೊಂಡವರೂ ಸಾಕಷ್ಟಿದ್ದಾರೆ. ಇಲ್ಲಿನ ಆಚಾರ-ವಿಚಾರಗಳ ಬಗ್ಗೆ ಅವರಿಗಿರುವ ಪ್ರೀತಿ ಸಾಬೀತಾಗಿದ್ದು ಇತ್ತೀಚೆಗೆ ಸೇವಾಸದನದಲ್ಲಿ ನಡೆದ ಎನ್‌ಆರ್‌ಐ ನೃತ್ಯೋತ್ಸವದಲ್ಲಿ.ಕಳೆದ ಐದು ವರ್ಷದಿಂದ ಈ ನೃತ್ಯೋತ್ಸವ ನಡೆಯುತ್ತಿದೆ. ಆಯೋಜಕರಲ್ಲೊಬ್ಬರಾದ ಸಂಗೀತ ಸಂಭ್ರಮದ ಟ್ರಸ್ಟಿ ಪಿ. ರಮಾ ಕಳೆದ ಹತ್ತು ವರ್ಷದಿಂದ ವಿದೇಶದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಹಾಡಲು ತೆರಳುತ್ತಿದ್ದಾರೆ. ಅಲ್ಲಿ ನೆಲೆಸಿರುವವರಲ್ಲಿ ಭಾರತೀಯ ಕಲೆಗಳ ಬಗ್ಗೆ ಇದ್ದ ಪ್ರೀತಿ ಗೌರವಾದರಗಳನ್ನು ಕಂಡು ಖುಷಿಗೊಂಡರಂತೆ.‘ಅನೇಕ ಭಾರತೀಯರು ವಿದೇಶದಲ್ಲಿ ಇದ್ದಾರೆ. ಅಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಧಾನ್ಯ ನೀಡುತ್ತಾರೆ. ಮಕ್ಕಳೂ ಅಷ್ಟೇ. ಶ್ರದ್ಧೆ ಪ್ರೀತಿಯಿಂದ ಕಲಿಯುತ್ತಾರೆ. ಭಾರತದಷ್ಟು ಸುಲಭವಾಗಿ ಶಿಕ್ಷಕರೂ ಅಲ್ಲಿ ದೊರೆಯುವುದಿಲ್ಲ. ಆದರೂ ಅವರು ನಿಷ್ಠೆಯಿಂದ ಕಲಿಯುತ್ತಾರೆ. ಇಲ್ಲಿಯ ವಿದ್ಯಾರ್ಥಿಗಳಿಗೆ ವಿದೇಶದಲ್ಲಿರುವ ಭಾರತೀಯರ ಪ್ರತಿಭೆಯನ್ನು ತೋರಿಸಿದರೆ ಮತ್ತಷ್ಟು ಆಸಕ್ತಿಯಿಂದ ಕಲಿಯಬಹುದು ಎಂಬ ಆಶಯದೊಂದಿಗೆ ಉತ್ಸವ ಪ್ರಾರಂಭಿಸಿದ್ದೇವೆ’ ಎನ್ನುತ್ತಾರೆ.ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ ಶ್ರಿಯಾ ಶ್ರೀನಿವಾಸನ್‌ ಈಗ ಅಮೆರಿಕದಲ್ಲಿ ನೆಲೆಸಿದ್ದಾರೆ. ಹುಟ್ಟಿದ್ದು ಬೆಳೆದಿದ್ದು ಅಲ್ಲೇ. ಈಗ ಬಯೋಮೆಡಿಕಲ್‌ ವಿಷಯದಲ್ಲಿ ಎಂಜಿನಿಯರಿಂಗ್‌ ಮಾಡುತ್ತಿದ್ದಾರೆ.ಐದನೇ ವರ್ಷದಿಂದಲೇ ಅಮ್ಮ  ಸುಜಾತಾ ಅವರಿಂದ ಭರತನಾಟ್ಯ ಕಲಿಯಲು ಪ್ರಾರಂಭಿಸಿದರು. ಜೊತೆಗೆ ಮಾಧುರಿ ಆರ್‌. ಸುಂದರ್‌ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಅಭ್ಯಸಿಸಿದರು. ಪಾಶ್ಚಾತ್ಯ ವಯಲಿನ್‌ ಹಾಗೂ ಪಿಯಾನೊ ಕೂಡ ಇವರಿಗೆ ಸಿದ್ಧಿಸಿದೆ. ‘ಹಿಂದು ಯುವಾ’ದ ಉಪಾಧ್ಯಕ್ಷರಾಗಿಯೂ ಕೆಲಸ ನಿರ್ವಹಿಸುತ್ತಿರುವ ಇವರು ಧಾರ್ಮಿಕ ಮಾರ್ಗದಲ್ಲಿ ಜೀವನ ನಡೆಸುವುದು ಹೇಗೆ ಎಂಬ ಬಗೆಗೂ ಮಾಹಿತಿ ಪ್ರಚಾರ ಮಾಡುತ್ತಾರೆ.ಭರತನಾಟ್ಯದಲ್ಲಿ ರಂಗಪ್ರವೇಶವನ್ನು (2008) ಮುಗಿಸಿದ್ದಾರೆ. ಅಮೆರಿಕದಲ್ಲಿ ಅನೇಕ ಕಡೆ ಭರತನಾಟ್ಯ ಹಾಗೂ ಸಂಗೀತ ಕಾರ್ಯಕ್ರಮ ನೀಡುವ ಮೂಲಕ ಭಾರತೀಯ ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವುದು ಇವರ ಇಷ್ಟದ ಕೆಲಸ. ‘ಅಮೆರಿಕದ ಪ್ರೇಕ್ಷಕರಿಗೆ ಕಲೆಯ ಬಗ್ಗೆ ಅಪಾರವಾದ ಅಭಿಮಾನವಿದೆ. ಪ್ರಪಂಚದ ಬೇರೆ ಬೇರೆ ಕಡೆಯ ಜನ ಇಲ್ಲಿರುವುದರಿಂದ ವಿಭಿನ್ನ ಕಲೆಗಳ ಬಗ್ಗೆ ಕಲಿತುಕೊಳ್ಳುವುದು ಸುಲಭವಾಗಿದೆ. ಬದಲಾಗುತ್ತಿರುವ ಟ್ರೆಂಡ್‌, ಹೊಸ ಯೋಜನೆಗಳಿಗೆ ಅವರು ಸದಾ ಸಹಕರಿಸುತ್ತಾರೆ’ ಎನ್ನುತ್ತಾರೆ ಶ್ರಿಯಾ.‘ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ ಎರಡಕ್ಕೂ ಹುಟ್ಟೂರು ಭಾರತ. ಇಲ್ಲಿಯವರಿಗೆ ಕಲಿಯಲು ಹಾಗೂ ಕಲಾವಿದನಾಗಿ ಗುರುತಿಸಿಕೊಳ್ಳಲು ಹೆಚ್ಚಿನ ಅವಕಾಶವಿದೆ. ಆದರೆ ಅಮೆರಿಕದಲ್ಲಿ ಶಿಕ್ಷಕರ ಹಾಗೂ ಅವಕಾಶಗಳ ಕೊರತೆ ಇದೆ. ಭರತನಾಟ್ಯವನ್ನು ಮನೆಯಲ್ಲೇ ಕಲಿತೆ. ಆದರೆ ಕಳೆದ 13 ವರ್ಷದಿಂದ ಜ್ಞಾನಂ ಸುಬ್ರಹ್ಮಣ್ಯಂ ಅವರ ಬಳಿ ಸಂಗೀತ ಕಲಿಯಲು ಎರಡೂವರೆ ಗಂಟೆ ಪ್ರಯಾಣಿಸಬೇಕು. ಮಾಧುರಿ ಆರ್‌. ಸುಂದರ್‌ ಅವರ ಬಳಿ ಕಲಿಯಲು ಮೂರುವರೆ ಗಂಟೆ ಪ್ರಯಾಣ ಮಾಡುತ್ತಿದ್ದೇನೆ’ ಎನ್ನುತ್ತಾರೆ ಅವರು.ಸಂಗೀತ, ನೃತ್ಯ ಹಾಗೂ ಶೈಕ್ಷಣಿಕವಾಗಿ ಉತ್ತಮತೆ ಸಾಧಿಸಲು ಸಮಯವನ್ನು ನಾಜೂಕಾಗಿ ನಿರ್ವಹಿಸುತ್ತಿದ್ದಾರಂತೆ. ಹಾಗೆಯೇ ಅಮೆರಿಕದಾದ್ಯಂತ ಭಾರತೀಯ ಸಂಸ್ಕೃತಿ ಬಿಂಬಿಸುವ ಅನೇಕ ಕಾರ್ಯಕ್ರಮಗಳು ನಡೆಯುತ್ತವೆ. ಅದರಿಂದಾಗಿಯೇ ಪ್ರತಿಭೆ ಅನಾವರಣಕ್ಕೆ ಕಾರಣವಾಗುತ್ತಿದೆಯಂತೆ. ಸೈಕ್ಲಿಂಗ್‌ ಬಗ್ಗೆ ಆಸಕ್ತಿ ಇರುವ ಇವರಿಗೆ ಎನ್‌ಆರ್‌ಐ ಉತ್ಸವಗಳಿಂದ ವಿದೇಶದಲ್ಲಿರುವ ಭಾರತೀಯ ಪ್ರತಿಭೆಗಳಿಗೆ ಅವಕಾಶ ಸಿಗುತ್ತದೆ ಎಂಬ ತುಂಬು ಖುಷಿ.ಅಮೆರಿಕದಲ್ಲಿ ನೆಲೆಸಿರುವ ಇನ್ನೊಬ್ಬ ಪ್ರತಿಭೆ ರೋಹಿತಾ ಕೈಮಲ್‌ ಕೂಡ ತಮ್ಮ ನೃತ್ಯ ಪಯಣದ ಬಗ್ಗೆ ಹಂಚಿಕೊಂಡಿದ್ದಾರೆ. ಹುಟ್ಟಿದ್ದು ಕೇರಳ. ಬೆಳೆದಿದ್ದು ಅಮೆರಿಕ. ಕಂಪ್ಯೂಟರ್‌ ಸೈನ್ಸ್‌ನಲ್ಲಿ ಪದವಿ ವ್ಯಾಸಂಗ. ಚಿಕ್ಕವಳಿದ್ದಾಗಿನಿಂದ ನಾಟ್ಯ ಪ್ರೀತಿ ಬೆಳೆಸಿಕೊಂಡಿದ್ದ ರೋಹಿತಾ ನೃತ್ಯ ಕಾರ್ಯಕ್ರಮ ಎಲ್ಲೇ ನಡೆದರೂ ವೀಕ್ಷಕರ ಸಾಲಲ್ಲಿ ಇರುತ್ತಿದ್ದರು. ಬೇರೆ ಬೇರೆ ಕಲಾವಿದರು ಅಭಿನಯಿಸಿದ್ದನ್ನು ನೆನಪಿಟ್ಟುಕೊಂಡು ತಾವೂ ಹಾಗೆ ಮಾಡಲು ಪ್ರಯತ್ನಿಸುತ್ತಿದ್ದರು. ಹೀಗಾಗಿ ಏಳನೇ ವರ್ಷಕ್ಕೆ ಸುಜಾತಾ ವಾಮದೇವನ್‌ ಅವರಿಂದ ಭರತನಾಟ್ಯ ಕಲಿಯಲು ಆರಂಭಿಸಿದರು.‘ವಿದೇಶಗಳಿಗಿಂತ ಭಾರತದಲ್ಲಿ ಅದರಲ್ಲೂ ಬೆಂಗಳೂರು ಹಾಗೂ ಚೆನ್ನೈನಲ್ಲಿ ಸಂಸ್ಕೃತಿ ದೃಢವಾಗಿ ಬೇರೂರಿದೆ. ಅಮೆರಿಕದಲ್ಲಿ ಕಲೆಯ ಬಗ್ಗೆ ಇತ್ತೀಚೆಗೆ ಅಭಿಮಾನ ಬೆಳೆಯುತ್ತಿದೆ ಹಾಗೂ ಅನೇಕ ಸಂಘಟನೆಗಳು ಕಾರ್ಯಕ್ರಮ ಆಯೋಜಿಸುತ್ತಿರುವುದರಿಂದ ಅವಕಾಶಗಳು ಹೆಚ್ಚಿತ್ತಿವೆ. ಅದೂ ಅಲ್ಲದೆ ಅನಿವಾಸಿ ಭಾರತೀಯರು ಮಕ್ಕಳಿಗೆ ಭಾರತೀಯ ಸಂಸ್ಕೃತಿ, ಸಂಪ್ರದಾಯ ತಿಳಿಸುವ ಕಲಾಪ್ರಕಾರಗಳನ್ನು ಕಲಿಯಲು ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದಾರೆ’ ಎಂದು ಅಭಿಪ್ರಾಯ ಹಂಚಿಕೊಳ್ಳುತ್ತಾರೆ ರೋಹಿತಾ.

ಅಲ್ಲಿಯ ಚಿಕ್ಕ ಮಕ್ಕಳೂ ಕಲೆಯಲ್ಲಿ ಖಚಿತತೆ ಪಡೆಯಲು ಪ್ರಯತ್ನಿಸುತ್ತಾರೆ. ಹೀಗಾಗಿ ಅಲ್ಲಿ ಭಾರತೀಯ ಸಂಸ್ಕೃತಿಯ ಪ್ರಾಮುಖ್ಯತೆಯನ್ನು ಹರಡುವುದು ಇವರ ಮುಖ್ಯ ಉದ್ದೇಶಗಳಲ್ಲೊಂದಂತೆ. ಎನ್‌ಆರ್‌ಐ ನೃತ್ಯೋತ್ಸವಗಳು ವಿದೇಶದಲ್ಲಿ ನೆಲೆಸಿರುವ ಭಾರತೀಯ ಪ್ರತಿಭೆಗಳಿಗೆ ಉತ್ತಮ ಅವಕಾಶ ಎನ್ನುವ ಇವರು ಬೆಂಗಳೂರಿನ ಕಲಾಸಮೃದ್ಧಿ ಕಂಡು ಪುಳಕಿರಾಗಿದ್ದಾರಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry