ಭಾನುವಾರ, ಏಪ್ರಿಲ್ 11, 2021
22 °C

ಅನಿಷ್ಟ ಪದ್ಧತಿ ನಿವಾರಣೆಗೆ ಯತ್ನಿಸಿ:ಚಿಮೂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಮಡೆಸ್ನಾನ ಮತ್ತು ಬೆತ್ತಲೆಸೇವೆಯಂತಹ ಪದ್ಧತಿಗಳನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು~ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅಭಿಪ್ರಾಯಪಟ್ಟರು.ಪ್ರೊ.ಬಿ.ನಾರಾಯಣಮ್ಮ ಪ್ರತಿಷ್ಠಾನವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ಮಡೆಸ್ನಾನ, ಬೆತ್ತಲೆಸೇವೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು~ ಕುರಿತ ಚಿಂತನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಮಡೆಸ್ನಾನ ಪದ್ಧತಿಯನ್ನು ತಡೆಯುವ ದಿಸೆಯಲ್ಲಿ ಹೈಕೋರ್ಟ್ ಈಚೆಗೆ ನೀಡಿರುವ ತೀರ್ಪು ಮಹತ್ವವುಳ್ಳದಾಗಿದೆ. ಜನರ ನಂಬಿಕೆ ಹಾಗೂ ಅಸಮಾನತೆಯನ್ನು ತೊಡಗಿ ಹಾಕುವಲ್ಲಿ ಇಂತಹ ತೀರ್ಪುಗಳು ಪ್ರಮುಖ ಪಾತ್ರ ವಹಿಸುತ್ತವೆ~ ಎಂದರು. `ಮಡೆಸ್ನಾನದಂತಹ ಪದ್ಧತಿಯ ಆಚರಣೆಗೆ ಯಾವುದೋ ಒಂದು ಪ್ರಮುಖ ಜಾತಿ ಮಾತ್ರ ಕಾರಣವಾಗಿರುವುದಿಲ್ಲ. ಇಂತಹ ಸೂಕ್ಷ್ಮ ವಿಚಾರದಲ್ಲಿ ಒಂದೇ ಜಾತಿಯನ್ನು ಗುರಿಯಾಗಿಟ್ಟುಕೊಂಡು ಆರೋಪಿಸುವುದು ಸರಿಯಲ್ಲ~ ಎಂದು ಆಕ್ಷೇಪ ವ್ಯಕ್ತಪಡಿಸಿದರು.`ಬೆತ್ತಲೆಸೇವೆಯಂತಹ ಪದ್ಧತಿಗಳನ್ನು ಸಂಪೂರ್ಣ ಹತ್ತಿಕ್ಕಲು ಸಾಧ್ಯವಾಗದೇ ಇರುವುದಕ್ಕೆ ನಾಗರಿಕ ಸಮಾಜ ತಲೆಗ್ಗಿಸಬೇಕು. ವೇಶ್ಯೆ ವೃತ್ತಿಯಲ್ಲಿದ್ದ ಸೂಳೆ ಸಂಕವ್ವ `ನಿರ್ಲಜ್ಜೇಶ್ವರ~ ಹೆಸರಿನಲ್ಲಿ ಬರೆದಿರುವ ವಚನಗಳು ಶೋಷಿತ ಹೆಣ್ಣುಮಕ್ಕಳ ಜೀವನವನ್ನು ತೆರೆದಿಡುತ್ತದೆ~ ಎಂದು ಹೇಳಿದರು. ಸುಮಂಗಲಿ ಸೇವಾಶ್ರಮ ಅಧ್ಯಕ್ಷೆ ಎಸ್.ಜಿ.ಸುಶೀಲಮ್ಮ, `ಆಧುನಿಕ ಜೀವನದಲ್ಲಿ ಹೆಣ್ಣಿನ ವಿರುದ್ಧ ನಡೆಯುತ್ತಿರುವ ಶೋಷಣೆ ಹತ್ತಿಕ್ಕುವಲ್ಲಿ ಹೊಸ ಮಾರ್ಗಗಳನ್ನು ಮಹಿಳೆಯರು ಕಂಡುಕೊಳ್ಳಬೇಕು~ ಎಂದು ಕರೆ ನೀಡಿದರು.ಗಾಂಧಿ ಪ್ರತಿಷ್ಠಾನದ ಅಧ್ಯಕ್ಷ ಡಾ.ವೂಡೆ ಪಿ.ಕೃಷ್ಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಎಂ.ನರಸಿಂಹಲು, ರಂಗಭೂಮಿ ಕಲಾವಿದ ಚಂದ್ರಮೌಳಿ, ನಟ ಶಿವರಾಂ, ಪ್ರತಿಷ್ಠಾನದ ಅಧ್ಯಕ್ಷೆ ಪ್ರೊ.ಬಿ.ನಾರಾಯಣಮ್ಮ ಇತರರು ಉಪಸ್ಥಿತರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.