ಭಾನುವಾರ, ಫೆಬ್ರವರಿ 28, 2021
23 °C

ಅನುಕಂಪದ ಅಲೆ: ಕೊಚ್ಚಿ ಹೋಗಿದ್ದ ಹೆಗಡೆ

ಬಸವರಾಜ್‌ ಸಂಪಳ್ಳಿ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನುಕಂಪದ ಅಲೆ: ಕೊಚ್ಚಿ ಹೋಗಿದ್ದ ಹೆಗಡೆ

ಬಾಗಲಕೋಟೆ: ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿಗುಂಟ ವಿಸ್ತರಿಸಿ­ಕೊಂಡಿರುವ ಬಾಗಲಕೋಟೆ ಲೋಕ­ಸಭಾ ಕ್ಷೇತ್ರಕ್ಕೆ ರಾಜಕೀಯ ಆಶ್ರಯ ಕೋರಿ ಬಂದ ರಾಜ್ಯದ ಘಟಾನುಘಟಿ ರಾಜಕಾರಣಿಗಳಿಗೆ ಜಾತಿಯ ‘ಅಂತರ್ಗಾಮಿ ಅಲೆ’ಗಳು ಕೈಹಿಡಿದಿ­ರುವ ಇತಿಹಾಸವೂ ಇದೆ.

ಹಾಗೆಯೇ, ದಿಢೀರ್‌ ಎದ್ದ ಅನುಕಂಪದ ಅಲೆಯಲ್ಲಿ ಹಲವರು ಕೊಚ್ಚಿಹೋದ ನೆನಪುಗಳು ಅಚ್ಚಳಿಯದೇ ಉಳಿದಿವೆ.

ಆಲಮಟ್ಟಿ ಜಲಾಶಯದಿಂದ ಮುಳುಗಡೆ­ಯಾಗಲಿದ್ದ ಬಾಗಲ­ಕೋಟೆ­ಯನ್ನು ‘ಚಂಡೀಗಡ’ ಮಾದರಿಯಲ್ಲಿ ಅತ್ಯಾಧುನಿಕ ನಗರವನ್ನಾಗಿಸುವ ಬೃಹತ್‌ ಯೋಜನೆಗೆ ಮುಖ್ಯಮಂತ್ರಿ­ಯಾಗಿ­ದ್ದಾಗ ಚಾಲನೆ ನೀಡುವ ಮೂಲಕ ಕೃಷ್ಣೆಯ ನಾಡಲ್ಲಿ ದಿ. ರಾಮಕೃಷ್ಣ ಹೆಗಡೆ ಮನೆ­ಮಾತಾಗಿದ್ದರು.ಅಲ್ಲದೇ ಉತ್ತರ ಕರ್ನಾಟಕದಲ್ಲಿ ಹೆಗಡೆಯವರ ಬಗ್ಗೆ ಜನರಲ್ಲಿ ವಿಶೇಷ ಪ್ರೀತಿ ಇತ್ತು. ಅದನ್ನು ಮತವಾಗಿ ಪರಿವರ್ತಿಸಿ­ಕೊಂಡು ಲೋಕಸಭೆ ಪ್ರವೇಶಿ­ಸಲು ಅವರು ಈ ಕ್ಷೇತ್ರದಿಂದ 1991ರಲ್ಲಿ ಜನತಾದಳದಿಂದ ಕಣಕ್ಕಿಳಿದಿ­ದ್ದರು.ಈ ಸಂದರ್ಭದಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಜನತಾದಳ ಅತ್ಯಂತ ಬಲಿಷ್ಠ­ವಾಗಿತ್ತು. ನಾಲ್ಕು ವಿಧಾನಸಭಾ ಕ್ಷೇತ್ರ­ಗಳಲ್ಲಿ ಆ ಪಕ್ಷದ ಶಾಸಕರಿದ್ದರು. ಅಲ್ಲದೇ, ಇಬ್ಬರು ವಿಧಾನಪರಿಷತ್‌ ಸದಸ್ಯ­ರಿದ್ದರು. ಜತೆಗೆ ಜಿಲ್ಲಾ ಪಂಚಾ­ಯ್ತಿಯೂ ಆ ಪಕ್ಷದ ಕೈಯಲ್ಲಿಯೇ ಇತ್ತು. ಇದೆಲ್ಲವೂ ತಮ್ಮ ಗೆಲುವಿಗೆ ನೆರವಾಗಬಹುದೆಂದು ಲೆಕ್ಕ ಹಾಕಿಯೇ ‘ಚತುರ ರಾಜಕಾರಣಿ’ ಹೆಗಡೆ ಇಲ್ಲಿಂದ ಕಣಕ್ಕಿಳಿದಿದ್ದರು.ಹೆಗಡೆಯವರ ವ್ಯಕ್ತಿತ್ವ, ಜನಪ್ರಿಯತೆ ಮುಂದೆ ಎದುರಾಳಿ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳು ಗೌಣವಾಗಿದ್ದರು. ಚುನಾವಣೆ ಪೂರ್ವದಲ್ಲೇ ಹೆಗಡೆ ಜಯ ಖಚಿತ ಎನಿಸಿದ್ದರೂ ಗೆಲುವಿನ ಅಂತರ ತಿಳಿಯುವುದಕ್ಕಾಗಿ ಮಾತ್ರ ಸಾಂಕೇತಿಕ­ವಾಗಿ ಚುನಾವಣೆ ನಡೆಯಲಿದೆ ಎಂಬ ರಾಜಕೀಯ ವಿಶ್ಲೇಷಣೆಯೂ ನಡೆದಿತ್ತು.ಆಗ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ­ವರು ಜಮಖಂಡಿ ತಾಲ್ಲೂಕಿನ ಕೃಷ್ಣಾ ತೀರದ ರೈತರನ್ನು ಸಂಘಟಿಸಿ, ರೈತ­ರಿಂದಲೇ ₨ 1 ಕೋಟಿ ಸಂಗ್ರಹಿಸಿ ಚಿಕ್ಕ­ಪಡಸಲಗಿ ಬಳಿ ಕೃಷ್ಣಾ ನದಿಗೆ ಬ್ಯಾರೇಜ್‌ ನಿರ್ಮಿಸಿ ಪ್ರಖ್ಯಾತರಾಗಿದ್ದ ಸಿದ್ದು ನ್ಯಾಮಗೌಡ. ಅವರಿಗೆ ಇದು ಪ್ರಥಮ ಚುನಾವಣೆ.ಅದಾಗಲೇ ದೇಶದ ಹಲವು ರಾಜ್ಯ­ಗಳಲ್ಲಿ ಮೊದಲ ಹಂತದ ಮತದಾನವೂ ಮುಗಿದಿತ್ತು. ಕರ್ನಾಟಕ ಸೇರಿ ಕೆಲ ರಾಜ್ಯಗಳಲ್ಲಿ ಮತದಾನಕ್ಕೆ ಎರಡು ವಾರ ಮಾತ್ರ ಉಳಿದಿತ್ತು. ಈ ಸಂದರ್ಭ­ದಲ್ಲಿ ಎಲ್‌ಟಿಟಿಇ ‘ಮಾನವ ಬಾಂಬ್‌’ಗೆ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಬಲಿಯಾದರು. ಬಾಗಲಕೋಟೆ ಸೇರಿ­­ದಂತೆ ಎಲ್ಲೆಲ್ಲೂ ಕಾಂಗ್ರೆಸ್‌ ಪರ ಅನುಕಂಪದ ಅಲೆ ಎದ್ದಿತು. ಅಂದು ರಾಜ್ಯದ ಮುಖ್ಯಮಂತ್ರಿ­ಯಾಗಿದ್ದವರು ಎಸ್‌.ಬಂಗಾರಪ್ಪ. ಈ ಹಿಂದೆ ತಮಗೆ ಮುಖ್ಯಮಂತ್ರಿಯಾಗುವ ಅವಕಾಶವನ್ನು ತಪ್ಪಿಸಿದ್ದೇ ರಾಮಕೃಷ್ಣ ಹೆಗಡೆ ಎಂಬುದು ಬಂಗಾರಪ್ಪನವರ ಮನಸ್ಸಿನಲ್ಲಿತ್ತು. ಆ ಸೇಡು ತೀರಿಸಿ­ಕೊಳ್ಳಲು ಇದೊಂದು ಉತ್ತಮ ಅವ­ಕಾಶ ಎಂದರಿತ ಅವರು, ಹೆಗಡೆ ವಿರುದ್ಧ ರಣತಂತ್ರ ರೂಪಿಸಿದರು. ರಾಜೀವ್‌­ಗಾಂಧಿ ಭಾವಚಿತ್ರ­ದೊಂದಿಗೆ ಬಾಗಲ­ಕೋಟೆ ಕ್ಷೇತ್ರದ ಹಳ್ಳಿ ಹಳ್ಳಿಗಳನ್ನೂ ಬಿಡದೇ ಸುತ್ತಾಡಿ, ಕಾಂಗ್ರೆಸ್‌ ಅಭ್ಯರ್ಥಿ ಪರ ಐದಾರು ದಿನಗಳ ಕಾಲ ಅಬ್ಬರದ ಪ್ರಚಾರ ನಡೆಸಿದರು.ಬಂಗಾರಪ್ಪ ತಂತ್ರಗಾರಿಕೆ ಎದುರು ಹೆಗಡೆ ಲೆಕ್ಕಾಚಾರ ತಲೆಕೆಳಗಾಯಿತು. ರಾಜಕೀಯವಾಗಿ ಹೆಗಡೆ ಜತೆ ಯಾವ ವಿಧದಲ್ಲೂ ಸಮರ್ಥ ಎದುರಾಳಿ­ಯಾಗಿರದ ‘ಚಿಕ್ಕಪಡಸಲಗಿ ಬ್ಯಾರೇಜ್‌ ಹಿರೋ’ ಸಿದ್ದು ನ್ಯಾಮಗೌಡ 21,204 ಮತಗಳ ಅಂತರದಿಂದ ಗೆದ್ದರು. ಮೊದಲ ಬಾರಿಗೆ ಲೋಕಸಭೆ ಪ್ರವೇಶಿ­ಸಿದ ಅವರಿಗೆ ಕಲ್ಲಿದ್ದಲು ಖಾತೆ ರಾಜ್ಯ ಸಚಿವರಾಗುವ ಅವಕಾಶವೂ ಲಭಿಸಿತು.1980ರಲ್ಲಿ ಇಂದಿರಾ ಕಾಂಗ್ರೆಸ್‌­ನಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಜನತಾ ಪಕ್ಷದ ಟಿ.ಎಂ. ಹುಂಡೇಕರ ವಿರುದ್ಧ 1,53,973 ಭಾರಿ ಮತಗಳ ಅಂತರ­ದಲ್ಲಿ ಜಯಗಳಿಸಿ ಪೆಟ್ರೋಲಿಯಂ ಸಚಿವರಾಗಿದ್ದರು. ‘ಪಕ್ಷಾಂತರಿ’ ಎಂಬ ಕಾರಣಕ್ಕೆ ವೀರೇಂದ್ರ ಪಾಟೀಲರಿಗೆ ಕ್ಷೇತ್ರದ ಎಲ್ಲೆಡೆ ಅಂದು ತೀವ್ರ ವಿರೋಧ ವ್ಯಕ್ತವಾಗಿತ್ತು. ಸೋಲುವ ಭೀತಿಯೂ ದಟ್ಟವಾಗಿತ್ತು. ಆದರೆ ಜಾತಿ (ಲಿಂಗಾಯತ) ಲೆಕ್ಕಾಚಾರ ಗುಪ್ತಗಾಮಿನಿಯಾಗಿ ಕೆಲಸ ಮಾಡಿದ್ದ­­ರಿಂದ ಅವರು ಅಭೂತಪೂರ್ವ ಜಯ ಸಾಧಿಸುವಂತಾಯಿತು.1962ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹೊಸದುರ್ಗ ಕ್ಷೇತ್ರ­ದಲ್ಲಿ ಸೋಲುಂಡಿದ್ದ ಮಾಜಿ ಮುಖ್ಯ­ಮಂತ್ರಿ ಎಸ್‌.ನಿಜಲಿಂಗಪ್ಪ, ಜಾತಿ ಲೆಕ್ಕಾ­ಚಾರದ ಮೇಲೆ ವಿಶ್ವಾಸವಿಟ್ಟು ಅಂದು ಬಾಗಲಕೋಟೆ ವಿಧಾನಸಭೆ ಕ್ಷೇತ್ರದಿಂದ ಆಯ್ಕೆ­ಯಾಗಿದ್ದ ಬಿ.ಟಿ.ಮುರನಾಳ ಅವರಿಂದ ರಾಜೀನಾಮೆ ಕೊಡಿಸಿ, ಉಪ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದು ಪುನಃ ಮುಖ್ಯಮಂತ್ರಿ­ಯಾದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.  ಆಗಿನಿಂದಲೂ ಜಾತಿ ಲೆಕ್ಕಾಚಾರ ಬಾಗಲಕೋಟೆ ಕ್ಷೇತ್ರದಲ್ಲಿ ಆಳವಾಗಿ ಬೇರೂರಿರು­ವುದನ್ನೂ ಗುರುತಿಸಬಹುದಾಗಿದೆ.ಕಾಂಗ್ರೆಸ್‌ನ ರಾಮಣ್ಣ ಬಿದರಿ ಕ್ಷೇತ್ರದ ಮೊದಲೆರಡು ಅವಧಿಗೆ ಸಂಸದ­ರಾಗಿದ್ದರು. 1962, 1967, 1971 ಮತ್ತು 1977ರಲ್ಲಿ ಸತತ ನಾಲ್ಕು ಬಾರಿ ಆಯ್ಕೆಯಾಗುವ ಮೂಲಕ ಬೀಳಗಿ ತಾಲ್ಲೂಕಿನ ಸುನಗ ಗ್ರಾಮದ ಹಿರಿಯ ಗಾಂಧಿವಾದಿ ಎಸ್‌.ಬಿ. ಪಾಟೀಲ ನಿರ್ಮಿಸಿರುವ ದಾಖಲೆ­ಯನ್ನು ಇದುವರೆಗೂ  ಮುರಿಯಲು ಯಾರಿಗೂ ಸಾಧ್ಯವಾಗಿಲ್ಲ.1996ರಲ್ಲಿ ನಡೆದ ಚುನಾವಣೆ­ಯಲ್ಲಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ.ದೇವೇಗೌಡರ ಸಂಪುಟದಲ್ಲಿ ಅರಣ್ಯ ಸಚಿವರಾಗಿದ್ದ ಎಚ್‌.ವೈ.ಮೇಟಿ ಗೆಲ್ಲುವ ಮೂಲಕ ಕ್ಷೇತ್ರದ ಮೊದಲ ಕಾಂಗ್ರೆಸ್ಸೇತರ ಸಂಸದ ಎನಿಸಿಕೊಂಡರು. 1998ರಲ್ಲಿ ನಡೆದ ಚುನಾವಣೆಯಲ್ಲಿ ಅಜಯಕುಮಾರ ಸರನಾಯಕ ‘ಲೋಕ­ಶಕ್ತಿ’ಯಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಕೇವಲ 13 ತಿಂಗಳ ಬಳಿಕ 1999ರಲ್ಲಿ ನಡೆದ ಚುನಾವಣೆಯಲ್ಲಿ ಸರನಾಯಕ ಅವರು ಕಾಂಗ್ರೆಸ್‌ನ ಆರ್‌.ಎಸ್‌.­ಪಾಟೀಲರ ಎದುರು ಸೋಲು ಕಂಡರು.2004 ಮತ್ತು 2009ರಲ್ಲಿ ನಡೆದ ಎರಡೂ ಚುನಾವಣೆಯಲ್ಲಿ ಮೂಲತಃ ಜನತಾ ಪರಿವಾರದವರಾದ  ಬಿಜೆಪಿಯ ಪಿ.ಸಿ.ಗದ್ದಿಗೌಡರ ಆಯ್ಕೆಯಾಗಿದ್ದರು. 1952 ರಿಂದ 2009ರ ವರೆಗೆ ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ನಡೆದಿರುವ ಒಟ್ಟು 15 ಚುನಾವಣೆ­ಯಲ್ಲಿ ಕಾಂಗ್ರೆಸ್‌ 10 ಬಾರಿ ಗೆಲುವು ಸಾಧಿಸಿದ್ದರೆ, ಬಿಜೆಪಿ 2, ಜನತಾದಳ ಮತ್ತು ಲೋಕಶಕ್ತಿ ತಲಾ ಒಮ್ಮೆ ಜಯ ಗಳಿಸಿವೆ.ಆರಂಭದಿಂದ ‘ವಿಜಾಪುರ ದಕ್ಷಿಣ ಕ್ಷೇತ್ರ’ ಎಂದು ಗುರುತಿಸಿಕೊಂಡಿದ್ದ ಈ ಕ್ಷೇತ್ರ 1980ರ ಬಳಿಕ ಸ್ವತಂತ್ರ ಕ್ಷೇತ್ರ­ವಾಗಿ ರೂಪುಗೊಂಡಿತು. 

ಗದಗ ಜಿಲ್ಲೆಯ ರೋಣ ವಿಧಾನ­ಸಭಾ ಕ್ಷೇತ್ರವನ್ನು ಒಳಗೊಂಡಿದ್ದ ಬಾಗಲ­ಕೋಟೆ ಕ್ಷೇತ್ರಕ್ಕೆ 2008ರ ಕ್ಷೇತ್ರ ಪುನರ್ವಿಂ­ಗಡಣೆ ಬಳಿಕ ರೋಣ ಬದಲು ನರಗುಂದ ವಿಧಾನ­ಸಭಾ ಕ್ಷೇತ್ರ ಸೇರ್ಪಡೆ­ಗೊಂಡಿತು.ಹಾಲಿ ಸಂಸದ ಗದ್ದಿಗೌಡರ ಅವರನ್ನೇ ಪುನಃ ಬಿಜೆಪಿ ಕಣಕ್ಕಿಳಿಸಿದೆ. ಹಿಂದೊಮ್ಮೆ ಜನತಾ ಪರಿವಾರದಲ್ಲಿ ಗದ್ದಿಗೌಡರ ಜತೆಗಿದ್ದ ಅಜಯಕುಮಾರ ಸರನಾಯಕ ಕಾಂಗ್ರೆಸ್‌ ಅಭ್ಯರ್ಥಿ­ಯಾಗಿ ಅಖಾಡಕ್ಕೆ ಇಳಿದಿದ್ದಾರೆ. ‘ಸರ್ವ ಜನಶಕ್ತಿ ಪಕ್ಷ’ದ ಅಧ್ಯಕ್ಷ ಶಂಕರ ಬಿದರಿ ಕಣದಲ್ಲಿರುವ ಇನ್ನೊಬ್ಬ ಪ್ರಮುಖ ಅಭ್ಯರ್ಥಿ.ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಎಂ.ಪಿ.­ನಾಡ­ಗೌಡ ‘ತವರು’ ಕ್ಷೇತ್ರ ಬಾಗಲ­­ಕೋಟೆಯಿಂದಲೇ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ­ದ್ದಾರೆ. ದಿಗ್ಗಜರ ಪೈಪೋಟಿಗೆ ವೇದಿಕೆ ಸಿದ್ಧವಾ­ಗಿದ್ದು, ಕುತೂಹಲ ಮೂಡಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.