ಸೋಮವಾರ, ಮೇ 10, 2021
25 °C

ಅನುಕರಣೆಯಿಂದ ಅಭಿವೃದ್ಧಿ ಅಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಅನುಕರಣೆಯಿಂದ ಅಭಿವೃದ್ಧಿ ಅಸಾಧ್ಯ ಎಂದು ಅನಿವಾಸಿ ಭಾರತೀಯ ಸಮಿತಿ- ಕರ್ನಾಟಕದ ಉಪಾಧ್ಯಕ್ಷ ಗಣೇಶ್ ಕಾರ್ಣಿಕ್ ಅಭಿಪ್ರಾಯಪಟ್ಟರು.ಸ್ವದೇಶಿ ವಿಜ್ಞಾನ ಆಂದೋಲನ-ಕರ್ನಾಟಕದ ಸಹಯೋಗದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಗಾಂಧಿ ಸಭಾಂಗಣದಲ್ಲಿ ಗುರುವಾರ ನಡೆದ `7ನೇ ಕನ್ನಡ ವಿಜ್ಞಾನ ಸಮ್ಮೇಳನ ಮತ್ತು ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ 150ನೇ ಜಯಂತ್ಯುತ್ಸವ~ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ವಿಶ್ವವಿದ್ಯಾಲಯಗಳು ಹೊಸ ಚಿಂತನೆಗಳಿಗೆ ವೇದಿಕೆಯಾಗಬೇಕು. ಮೂಲ ಸಂಶೋಧನೆಗಳು (ಸ್ವೋಪಜ್ಞತೆ) ಬರಬೇಕು ಎಂದ ಅವರು, ಶಿಕ್ಷಣವು ನೌಕರಿಗೆ, ಹೊಟ್ಟೆಪಾಡಿಗೆ ಸೀಮಿತವಾಗದೇ ಹೊಸ ಜ್ಞಾನ ಶಿಸ್ತಿಗೆ ಕಾರಣವಾಗಬೇಕು ಎಂದು ಆಶಿಸಿದರು.ಜಗತ್ತಿನ ಜೀವರಾಶಿಯಲ್ಲಿ ಶೇ1ಕ್ಕೂ ಕಡಿಮೆ ಇರುವ ಮಾನವನು ಪ್ರಕೃತಿಯ ನಾಶಕ್ಕೆ ಶೇ 99.99ರಷ್ಟು ಕೊಡುಗೆ ನೀಡುತ್ತಿದ್ದಾನೆ. ಇದಕ್ಕೆ ಆತನ  `ಸ್ವಾರ್ಥ ಮತ್ತು ಅಹಂ~ ಕಾರಣ ಎಂದು ವಿವರಿಸಿದರು.`ವಚನ~ಗಳು ಮಾತಿಗೆ ಸೀಮಿತವಾಗದೇ ಬದುಕಿನಲ್ಲಿ ಅನುಷ್ಠಾನಗೊಳ್ಳಬೇಕು. ಗಂಗಾಜಲದ ಪಾವಿತ್ರ್ಯ-ಪರಿಶುದ್ಧತೆಯನ್ನು ಪೂಜೆಗಿಂತಲೂ ಅನುಷ್ಠಾನದಲ್ಲಿ ಕಾಪಾಡುವುದು ಮುಖ್ಯ ಎಂದರು. ಪ್ರಕೃತಿ ಜೊತೆ ಸಾಗುವ ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕೇ ಹೊರತು ಪ್ರಕೃತಿ ವಿರೋಧಿ ವಿಕೃತಿಯನ್ನು ಅಲ್ಲ ಎಂದು ಸಲಹೆ ನೀಡಿದರು. ಶಿಕ್ಷಣದಲ್ಲಿ ವಿಜ್ಞಾನ: ವಿಜ್ಞಾನ-ತಂತ್ರಜ್ಞಾನದಲ್ಲಿ ಮುಂದುವರಿದಾಗ ಮಾತ್ರ ದೇಶವು ಅಭಿವೃದ್ಧಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರಾಥಮಿಕ ಶಿಕ್ಷಣದಲ್ಲೇ ವಿಜ್ಞಾನ ಬೀಜವನ್ನು ಬಿತ್ತಬೇಕು. ವಿಜ್ಞಾನ ಅಧ್ಯಯನಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ಸಮ್ಮೇಳನ ಉದ್ಘಾಟಿಸಿದ ಬೆಂಗಳೂರಿನ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳ (ಎನ್‌ಎಎಲ್) ಮುಖ್ಯಸ್ಥ  ಡಾ.ಎ.ಆರ್.ಉಪಾಧ್ಯ  ಹೇಳಿದರು.ಮೊಬೈಲ್, ಟಿವಿ, ಓವನ್‌ಗಳಿಂದ ಹಿಡಿದು ಜೀವನದ ಪ್ರತಿ ಕ್ಷಣವು ತಂತ್ರಜ್ಞಾನದ ನಿಯಂತ್ರಣಕ್ಕೆ ಒಳಪಡುತ್ತಿದೆ. ಆದರೆ ನಮ್ಮ ದೇಶದ ಜನಸಂಖ್ಯೆಗೆ ಹೋಲಿಸಿದಲ್ಲಿ ವಿಜ್ಞಾನಿಗಳ ಅನುಪಾತವು ಕಡಿಮೆ ಇದೆ. ಅಭಿವೃದ್ಧಿಗಾಗಿ ವಿಜ್ಞಾನಿಗಳ ಸಂಖ್ಯೆಯೂ ಹೆಚ್ಚಾಗ    ಬೇಕಾಗಿದೆ ಎಂದರು.ಮಂತ್ರಾಲಯದ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಕುಲಪತಿ ಡಾ.ವಿ.ಆರ್.ಪಂಚಮುಖಿ ಅವರಿಗೆ ಡಾ.ಎಂ.ವಿಶ್ವೇಶ್ವರಯ್ಯ ವಿಜ್ಞಾನ ಪುರಸ್ಕಾರ ಪ್ರದಾನ ಮಾಡಲಾಯಿತು. ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ  ಪ್ರೊ.ಈ.ಟಿ.ಪುಟ್ಟಯ್ಯ  ಅಧ್ಯಕ್ಷತೆ ವಹಿಸಿದ್ದರು.  ಕುಲಸಚಿವ (ಮೌಲ್ಯಮಾಪನ) ಡಾ.ಡಿ.ಬಿ.ನಾಯಕ 7ನೇ ಕನ್ನಡ ವಿಜ್ಞಾನ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಹಾಗೂ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ 8ನೇ ಕನ್ನಡ ವಿಜ್ಞಾನ ಸಮ್ಮೇಳನ ಕೈಪಿಡಿ ಬಿಡುಗಡೆ ಮಾಡಿದರು.ಸ್ವದೇಶಿ ವಿಜ್ಞಾನ ಆಂದೋಲನ ಕರ್ನಾಟಕದ ಅಧ್ಯಕ್ಷ ಡಾ. ಎಂ.ಎಸ್.ಜೋಗದ,  ಪೋಷಕ ಪ್ರೊ.ಕೆ.ಐ.ವಾಸು, ಗುಲ್ಬರ್ಗ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ರಾಘವೇಂದ್ರ ಕುಲಕರ್ಣಿ, ಮಹಾರುದ್ರ ಹೂಗಾರ, ಆರ್.ವಿ.ಮಾಲಿಪಾಟೀಲ, ಗುಲ್ಬರ್ಗ ವಿಶ್ವವಿದ್ಯಾಲಯದ ಪಿ.ಎಂ.ಇ.ಬಿ. ನಿರ್ದೇಶಕ ಡಾ. ಎ. ದಯಾನಂದ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.