ಅನುಚಿತ ಕ್ರಮ

7

ಅನುಚಿತ ಕ್ರಮ

Published:
Updated:

ಭ್ರಷ್ಟಾಚಾರ ತನಿಖೆಯ ಸಂಸ್ಥೆಗಳಿಗೆ ನೇಮಕ ಮಾಡುವಾಗ ನ್ಯಾಯಾಂಗ ಮುಖ್ಯಸ್ಥರ ಅಭಿಪ್ರಾಯ ಪಡೆಯಬೇಕು ಎಂಬುದರ ಉದ್ದೇಶವೇ ಅಭ್ಯರ್ಥಿಯ ಅರ್ಹತೆಯನ್ನು ದೃಢಪಡಿಸಿಕೊಳ್ಳುವುದು.ಲೋಕಾಯುಕ್ತ ಸಂಸ್ಥೆಯ ಮುಖ್ಯಸ್ಥರ ಇಲ್ಲವೇ ಉಪಲೋಕಾಯುಕ್ತರ ನೇಮಕ ಪ್ರಕ್ರಿಯೆಯಲ್ಲಿ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಅಭಿಪ್ರಾಯವನ್ನು ಸರ್ಕಾರ ಪಡೆದುಕೊಳ್ಳುವುದರ ಉದ್ದೇಶ ಈ ಹುದ್ದೆಗಳಿಗೆ ನ್ಯಾಯಾಂಗದ ವ್ಯಕ್ತಿಯಾಗಿ ಅರ್ಹರಾಗಿರುವವರನ್ನು ಮಾತ್ರವೇ ನೇಮಕ ಮಾಡಿಕೊಳ್ಳಬೇಕು ಎಂಬುದು.ಭ್ರಷ್ಟಾಚಾರ ತನಿಖೆಯ ಈ ಹುದ್ದೆಗಳು ಆಳುವ ಸರ್ಕಾರದ ಆಯ್ಕೆಯಾಗಬಾರದೆಂಬ ಕಾರಣಕ್ಕೆ ವಿಧಾನಮಂಡಲದ ಎರಡೂ ಸದನಗಳ ಅಧ್ಯಕ್ಷರು ಮತ್ತು ಪ್ರತಿಪಕ್ಷ ನಾಯಕರ ಅಭಿಪ್ರಾಯವನ್ನು ಆಯ್ಕೆ ಪ್ರಕ್ರಿಯೆಯಲ್ಲಿ ಕಡ್ಡಾಯಗೊಳಿಸಲಾಗಿದೆ.

 

ಪ್ರತಿಪಕ್ಷ ನಾಯಕರ ಅಭಿಪ್ರಾಯವನ್ನು ನಿರ್ಲಕ್ಷಿಸಿದ ಕಾರಣಕ್ಕೆ ಕೇಂದ್ರ ಜಾಗೃತ ಆಯೋಗದ ಆಯುಕ್ತರ (ಸಿವಿಸಿ) ನೇಮಕದಲ್ಲಿ ಪ್ರಧಾನಿ ಕಾರ್ಯಾಲಯ ಸುಪ್ರೀಂ ಕೋರ್ಟ್‌ನಿಂದ ಮುಖಭಂಗ ಎದುರಿಸಬೇಕಾಯಿತು; ಅಷ್ಟೇ ಅಲ್ಲದೆ, ಸಿವಿಸಿ ನೇಮಕವೇ ರದ್ದಾಯಿತು.

 

ಇಂಥ ಹುದ್ದೆಗಳ ಆಯ್ಕೆಗೆ ಕಾಯ್ದೆಯಲ್ಲಿ ರೂಪಿಸಿದ ನಿಯಮಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸಿದ ಸಂದರ್ಭಗಳಲ್ಲಿ ಸರ್ಕಾರಗಳಿಗೆ ಹಿನ್ನಡೆ ಆಗಿರುವುದಕ್ಕೆ ಗುಜರಾತ್ ಲೋಕಾಯುಕ್ತರ ನೇಮಕ ಪ್ರಕರಣ ಇನ್ನೊಂದು ನಿದರ್ಶನ.ಇಂಥ ಘಟನೆಗಳು ಪಾಠವಾಗುವುದಿಲ್ಲ ಎನ್ನುವುದಕ್ಕೆ ಕರ್ನಾಟಕ ಸರ್ಕಾರ ತರಾತುರಿಯಲ್ಲಿ ಮಾಡಿದ ಎರಡನೇ ಉಪಲೋಕಾಯುಕ್ತರ ನೇಮಕ ಉಂಟುಮಾಡಿರುವ ವಿವಾದ ಸಾಕ್ಷಿಯಾಗಿದೆ. ಇದರಲ್ಲಿಯೂ ಸರ್ಕಾರ ಉಪಲೋಕಾಯುಕ್ತರ ನೇಮಕ ನಿಯಮಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಅರ್ಥೈಸಿಕೊಂಡು ಉಚಿತವಲ್ಲದ ರೀತಿಯಲ್ಲಿ ವರ್ತಿಸಿದ ಆರೋಪ ಎದುರಿಸುವಂತಾಗಿದೆ.ರಾಜ್ಯ ಸರ್ಕಾರ ಮಾಡಿದ ಎರಡನೇ ಉಪಲೋಕಾಯುಕ್ತರ ನೇಮಕಕ್ಕೆ ತಮ್ಮ ಸಹಮತ ಇರಲಿಲ್ಲ ಎಂದು ಹೈಕೋರ್ಟ್ ಮುಖ್ಯನ್ಯಾಯಾಧೀಶರು ಸರ್ಕಾರಕ್ಕೆ ಪತ್ರ ಬರೆಯುವಂಥ ಸ್ಥಿತಿ ನಿರ್ಮಾಣವಾಗಿರುವುದಕ್ಕೆ ಸರ್ಕಾರದ ಅವಸರವೇ ಕಾರಣ.

ಸಮಾಲೋಚನೆ ನಡೆಸಿದವರಲ್ಲಿ ಬಹುಮತದ ಅಭಿಪ್ರಾಯದಂತೆ ನ್ಯಾ.ಚಂದ್ರಶೇಖರಯ್ಯ ಅವರ ಆಯ್ಕೆ ಅಂತಿಮವಾಗಿದೆ ಎಂಬ ಸರ್ಕಾರದ ಸಮರ್ಥನೆ ಮುಖ್ಯ ನ್ಯಾಯಾಧೀಶರ ಅಭಿಪ್ರಾಯದ ಮಹತ್ವವನ್ನು ಅಲ್ಲಗಳೆಯುತ್ತದೆ.ಮುಖ್ಯ ನ್ಯಾಯಾಧೀಶರ ಅಭಿಪ್ರಾಯವನ್ನು ಗೌರವಿಸದಿದ್ದರೆ ಅವರ ಅಭಿಪ್ರಾಯವನ್ನು ಕೇಳುವ ಔಚಿತ್ಯವಾದರೂ ಏಕೆ? ರಾಜ್ಯ ಸರ್ಕಾರ ತನಗೆ ಬೇಕಾದಂತೆ ಕಾಯ್ದೆ ಅಂಶಗಳನ್ನು ವ್ಯಾಖ್ಯಾನಿಸುತ್ತಿದೆ ಎಂಬುದು ಈ ಪ್ರಕರಣದಿಂದ ಸ್ಪಷ್ಟವಾಗಿದೆ.ಲೋಕಾಯುಕ್ತರ ನೇಮಕ ಪ್ರಶ್ನೆ ನೆನೆಗುದಿಯಲ್ಲಿದ್ದಾಗ ಎರಡನೇ ಉಪಲೋಕಾಯುಕ್ತರ ನೇಮಕಕ್ಕೆ ಸರ್ಕಾರ ತೋರಿದ ಅವಸರಕ್ಕೆ ರಾಜ್ಯಪಾಲರೂ ಅಷ್ಟೇ ತುರ್ತಿನಿಂದ ಸ್ಪಂದಿಸಿರುವುದು ಸಂಶಯಕ್ಕೆ ಎಡೆ ಕೊಟ್ಟಿದೆ.ಅಧಿಕಾರದಲ್ಲಿ ಇದ್ದವರ ಸುತ್ತ ಭ್ರಷ್ಟಾಚಾರ ಪ್ರಕರಣಗಳು ಹಬ್ಬಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವಂಥ ಕ್ರಮಗಳನ್ನೇ ಕೈಗೊಳ್ಳುತ್ತಿರುವ ರಾಜ್ಯ ಸರ್ಕಾರ, ಉಪ ಲೋಕಾಯುಕ್ತರ ನೇಮಕದಲ್ಲಿ ನಿಯಮಪಾಲನೆಯಲ್ಲಿ ಎಡವಿರುವುದು ಸ್ಪಷ್ಟ.ಮುಖ್ಯ ನ್ಯಾಯಾಧೀಶರು ಸೂಚಿಸದ ಅಭ್ಯರ್ಥಿಯನ್ನು ಉಪಲೋಕಾಯುಕ್ತ ಹುದ್ದೆಗೆ ನೇಮಕ ಮಾಡಿರುವ ಸರ್ಕಾರ, ಅದರಿಂದ ಉದ್ಭವಿಸಿದ ಪರಿಸ್ಥಿತಿಯನ್ನು ನಿಭಾಯಿಸುವ ಜವಾಬ್ದಾರಿಯನ್ನು ಅನಗತ್ಯವಾಗಿ ಎಳೆದುಕೊಂಡಿದೆ.ಭ್ರಷ್ಟಾಚಾರ ಪ್ರಕರಣಗಳ ತನಿಖೆಯ ಉಸ್ತುವಾರಿ ನಡೆಸಬೇಕಾದ ಉಪಲೋಕಾಯುಕ್ತರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಟ ನಡೆಸುವಂಥ ಸನ್ನಿವೇಶ ಸೃಷ್ಟಿಸಿದ ಸರ್ಕಾರದ ನಡವಳಿಕೆ ಖಂಡನೀಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry