ಅನುತ್ತೀರ್ಣ: ಆತ್ಮಹತ್ಯೆಗೆ ಯತ್ನ

7

ಅನುತ್ತೀರ್ಣ: ಆತ್ಮಹತ್ಯೆಗೆ ಯತ್ನ

Published:
Updated:

ಬೆಂಗಳೂರು: ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಕಾರಣಕ್ಕೆ ಮನನೊಂದ ವಿದ್ಯಾರ್ಥಿನಿ ನಿದ್ರೆ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜು ವಿದ್ಯಾರ್ಥಿನಿಲಯದಲ್ಲಿ ಶನಿವಾರ ನಡೆದಿದೆ.

ಅಸ್ವಸ್ಥಗೊಂಡಿರುವ ವಿದ್ಯಾರ್ಥಿನಿ ಲತಾಶ್ರೀ (19) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮೂಲತಃ ವಿಜಾಪುರದ ಲತಾಶ್ರೀ, ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎ ತರಗತಿಯಲ್ಲಿ ಓದುತ್ತಿದ್ದಾರೆ. ಕಾಲೇಜಿನ ಪಕ್ಕದಲ್ಲೇ ಇರುವ ವಿದ್ಯಾರ್ಥಿನಿಲಯದಲ್ಲಿ ನೆಲೆಸಿದ್ದ ಅವರು, ಮೊದಲ ಸೆಮಿಸ್ಟರ್ ಪರೀಕ್ಷೆಯ ಅರ್ಥಶಾಸ್ತ್ರ ವಿಷಯದಲ್ಲಿ ಅನುತ್ತೀರ್ಣರಾಗಿದ್ದರು.

ಇದರಿಂದ ಬೇಸರಗೊಂಡಿದ್ದ ಅವರು ಬೆಳಿಗ್ಗೆ 11 ಗಂಟೆ ಸುಮಾರಿಗೆ ನಿದ್ರೆ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡಿದ್ದ ಅವರನ್ನು ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿನಿಲಯದ ಸಿಬ್ಬಂದಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಹೈಗ್ರೌಂಡ್ಸ್ ಠಾಣೆಯಲ್ಲಿ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಾಗಿದೆ.ಮೂವರ ಬಂಧನ

ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ ನಕಲಿ ಶರ್ಟ್ ಮತ್ತು ಪ್ಯಾಂಟ್‌ಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದ ಸಿದ್ಧ ಉಡುಪು ಕಾರ್ಖಾನೆಯ ಮೇಲೆ ದಾಳಿ ನಡೆಸಿದ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಮೂರು ಮಂದಿಯನ್ನು ಬಂಧಿಸಿದ್ದಾರೆ.ಜಯನಗರದ ವಿಮಲ್‌ಚಂದ್      (46), ಶ್ರೀನಗರದ ಗುರುಪ್ರಸಾದ್    (22) ಮತ್ತು ಬಿಹಾರ ಮೂಲದ  ರಾಕೇಶ್‌ಸಿಂಗ್ (38) ಬಂಧಿತರು. ಆರೋಪಿಗಳಿಂದ ಸುಮಾರು 67 ಲಕ್ಷ ರೂಪಾಯಿ ಮೌಲ್ಯದ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಚಂದ್ರಾಲೇಔಟ್ ಸಮೀಪದ ಅಜಿತ್‌ಸೇಠ್ ಕೈಗಾರಿಕಾ ಪ್ರದೇಶದಲ್ಲಿ ಸಿದ್ಧ ಉಡುಪು ಕಾರ್ಖಾನೆ ನಡೆಸುತ್ತಿದ್ದ ಆರೋಪಿಗಳು, ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ ನಕಲಿ ಶರ್ಟ್ ಮತ್ತು ಪ್ಯಾಂಟ್ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಅವರನ್ನು ಬಂಧಿಸಲಾಯಿತು. ಆರೋಪಿಗಳ ವಿರುದ್ಧ ಚಂದ್ರಾಲೇಔಟ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry