ಅನುದಾನಕ್ಕೆ ಕನ್ನಡ ಸಂಘಗಳ ಒತ್ತಾಯ

7
ರಾಜ್ಯೋತ್ಸವ, ನಾಡಹಬ್ಬ ಆಚರಣೆ

ಅನುದಾನಕ್ಕೆ ಕನ್ನಡ ಸಂಘಗಳ ಒತ್ತಾಯ

Published:
Updated:

ಬೆಳಗಾವಿ: ಕನ್ನಡ ರಾಜ್ಯೋತ್ಸವ ಆಚರಣೆಗೆ ಹಾಗೂ ನಾಡಹಬ್ಬಕ್ಕೆ ಜಿಲ್ಲೆಯ ಕನ್ನಡಪರ ಸಂಘಟನೆಗಳಿಗೆ ಐದು ಕೋಟಿ ರೂಪಾಯಿ ಅನುದಾನ ನೀಡಬೇಕು ಎಂದು ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳ ನಿಯೋಗ ಬುಧವಾರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಒತ್ತಾಯಿಸಿತು.ಜಿಲ್ಲಾಧಿಕಾರಿ ಎನ್‌.ಜಯರಾಂ ಅವರೊಂದಿಗೆ ಸಭೆ ನಡೆಸಿದ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳ ನಿಯೋಗವು, ಗಣೇಶ ಉತ್ಸವಕ್ಕೆ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದನ್ನು ಸ್ವಾಗತಿಸುತ್ತೇವೆ. ಅದರಂತೆ ಕನ್ನಡ ರಾಜ್ಯೋತ್ಸವ ಹಾಗೂ ನಾಡಹಬ್ಬಕ್ಕೂ ಅನುದಾನ ನೀಡಬೇಕು ಎಂದು ಆಗ್ರಹಿಸಿತು.ರಾಜ್ಯೋತ್ಸವ ಸಂದಭರ್ದಲ್ಲಿ ಒಂದು ವಾರಗಳವರೆಗೆ ನಗರದ ವಿವಿಧ ಕಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬೇಕು. ರಾಜ್ಯೋತ್ಸವಕ್ಕೂ ಮುನ್ನವೇ ನಗರಕ್ಕೆ ಬೆಳಗಾವಿ ಎಂದು ನಾಮಕರಣ ಮಾಡಬೇಕು ಎಂದು ಪ್ರತಿನಿಧಿಗಳು ಒತ್ತಾಯಿಸಿದರು.

ವಿಶ್ವ ಕನ್ನಡ ಸಮ್ಮೇಳನಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ನಗರದಲ್ಲಿ ಕನ್ನಡಪರ ವಾತಾವರಣ ಯಾವ ಪ್ರಮಾಣದಲ್ಲಿ ಬೆಳೆಯಬೇಕಾಗಿತ್ತೋ, ಆ ಪ್ರಮಾಣದಲ್ಲಿ ಬೆಳೆಯಲಿಲ್ಲ. ಈಗ ಮತ್ತೆ ಅಂಥ ತಪ್ಪು ಮಾಡಬಾರದು. ಆದ್ದರಿಂದ ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವ ಸಂಘಟನೆಗಳಿಗೆ ನೆರವು ನೀಡುವಂತೆ ಒತ್ತಾಯಿ­ಸಲಾ­ಯಿತು.‘ರಾಜ್ಯ ಸರ್ಕಾರ ಕನ್ನಡದ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯಲಿ ಎಂಬ ಉದ್ದೇಶದಿಂದ ಗಣೇಶ ಉತ್ಸವಕ್ಕೆ ಅನುದಾನ ನೀಡಿದೆ. ರಾಜ್ಯೋತ್ಸವಕ್ಕೂ ಅನುದಾನ ನೀಡಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ಜಿಲ್ಲಾಧಿಕಾರಿ ಎನ್‌.ಜಯರಾಂ ನಿಯೋಗಕ್ಕೆ ತಿಳಿಸಿದರು.ಕನ್ನಡಪರ ಸಂಘಟನೆಗಳ ಅಶೋಕ ಚಂದರಗಿ, ರಾಘವೇಂದ್ರ ಜೋಶಿ, ಟಿ.ಟಿ.ಮುರಕಟ್ನಾಳ, ಕಲ್ಯಾಣರಾವ್‌ ಮುಚಳಂಬಿ, ಡಾ. ಶ್ರೀನಿವಾಸ ಕುಲಕರ್ಣಿ, ಶ್ರೀನಿವಾಸ ತಾಳೂಕರ, ರಮೇಶ ಸೊಂಟಕ್ಕಿ, ದೀಪಕ ಜಮಖಂಡಿ, ಶಂಕರ ಬಾಗೇವಾಡಿ ಮತ್ತಿತರರು ನಿಯೋಗದಲ್ಲಿದ್ದರು.ಅನುದಾನ ಒದಗಿಸಲು ಪ್ರಯತ್ನ: ಕನ್ನಡ ರಾಜ್ಯೋತ್ಸವ ಆಚರಣೆಗೆ ಹಾಗೂ ನಾಡಹಬ್ಬಕ್ಕೆ ಕನ್ನಡಪರ ಸಂಘಟನೆಗಳಿಗೆ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.

ಕನ್ನಡಪರ ಸಂಘಟನೆಗಳ ಸದಸ್ಯರು ಬುಧವಾರ ತಮ್ಮನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ನಂತರ ಮಾತನಾಡಿದ ಸಚಿವರು, ಕನ್ನಡಪರ ಸಂಘಟನೆಗಳಿಗೆ ಅನುದಾನ ದೊರಕಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ಬೆಳಗಾವಿಯಲ್ಲಿ ಕನ್ನಡಪರ ಸಂಘಟನೆಗಳು ಆಯೋಜಿಸುವ ಕಾರ್ಯಕ್ರಮಗಳಿಗೆ ಸರ್ಕಾರ ಅನುದಾನ ನೀಡುವುದಿಲ್ಲ. ಆದರೆ, ಗಣೇಶ ಉತ್ಸವಕ್ಕೆ ಅನುದಾನ ನೀಡಿದೆ ಎಂದು ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು ಹೇಳಿದರು.ಗಣೇಶ ಉತ್ಸವದಲ್ಲಿ ರಾಜ್ಯ ಹಾಗೂ ಕನ್ನಡ ವಿರೋಧಿ ಚಟುವಟಿಕೆಗೆ ಅವಕಾಶ ನೀಡ­ಬಾರದು. ಸರ್ಕಾರ ನೀಡಿರುವ ಅನುದಾನವನ್ನು ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಾತ್ರ ಬಳಸಬೇಕು. ಗಣೇಶ ಉತ್ಸವದ ಪೆಂಡಾಲ್‌­ಗಳಲ್ಲಿ ಕನ್ನಡ ವಿರೋಧಿ ಚಟುವಟಿಕೆ ಕಂಡು­ಬಂದರೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry