ಶನಿವಾರ, ಜನವರಿ 18, 2020
19 °C

ಅನುದಾನರಹಿತ ಕಾಲೇಜು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಖಾಸಗಿ ಅನುದಾನರಹಿತ ಕಾಲೇಜುಗಳು ಸಹ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಒಳಪಡುತ್ತವೆ ಎಂದು ಕರ್ನಾಟಕ ಮಾಹಿತಿ ಆಯೋಗ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸ್ಪಷ್ಟಪಡಿಸಿದೆ.ಅನುದಾನ ರಹಿತ ಖಾಸಗಿ ಕಾಲೇಜುಗಳು ಸರ್ಕಾರದ ನಿರ್ದೇಶನ ಮತ್ತು ಅನುಮೋದನೆಯನ್ನು ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದರಿಂದ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಂಯೋಜನೆ ಪಡೆದಿರುವುದರಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳುವ ಮಾಹಿತಿಯನ್ನು ಖಾಸಗಿ ಕಾಲೇಜುಗಳು ನೀಡಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೂಚಿಸಿದೆ.ಮಾಹಿತಿ ಆಯೋಗ ಸಹ ಇದೇ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇನ್ನು ಮುಂದೆ ನಿಗದಿತ ಕಾಲಾವಧಿಯಲ್ಲಿ ಮಾಹಿತಿ ನೀಡದಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.ಪ್ರೊ.ಎನ್.ಎಸ್.ನಾಡಿಗರ್ ಎನ್ನುವವರು ಕೋರಿದ್ದ ಮಾಹಿತಿ ನೀಡಲು ನಗರದ ಆರ್.ವಿ.ಎಂಜಿನಿಯರಿಂಗ್ ಕಾಲೇಜಿನವರು ನಿರಾಕರಿಸಿದ್ದರಿಂದ ಅವರು ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ರಾಜ್ಯ ಮಾಹಿತಿ ಆಯೋಗದ ಮೊರೆ ಹೋಗಿದ್ದರು.ಈ ಸಂಬಂಧ ತಾಂತ್ರಿಕ ಶಿಕ್ಷಣ ಇಲಾಖೆ ಕೇಳಿದ್ದ ವಿವರಣೆಗೆ ಸ್ಪಷ್ಟನೆ ನೀಡಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಮಾಹಿತಿ ಹಕ್ಕು ಕಾಯ್ದೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಅನ್ವಯವಾಗುತ್ತದೆ ಎಂದು ತಿಳಿಸಿದೆ. ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತ ಎ.ಕೆ.ಎಂ.ನಾಯಕ್ ಸಹ ಇದೇ ರೀತಿಯ ಆದೇಶ ಹೊರಡಿಸಿದ್ದಾರೆ.

ಪ್ರತಿಕ್ರಿಯಿಸಿ (+)