ಅನುದಾನರಹಿತ ಶಾಲಾ-ಕಾಲೇಜುಗಳ ಆಡಳಿತ, ಶಿಕ್ಷಕರು, ನೌಕರರ ಅನಿರ್ದಿಷ್ಟಾವಧಿ ಧರಣಿ

7

ಅನುದಾನರಹಿತ ಶಾಲಾ-ಕಾಲೇಜುಗಳ ಆಡಳಿತ, ಶಿಕ್ಷಕರು, ನೌಕರರ ಅನಿರ್ದಿಷ್ಟಾವಧಿ ಧರಣಿ

Published:
Updated:

ಬೆಂಗಳೂರು: ಅನುದಾನರಹಿತ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಿಗೆ ವೇತನಾನುದಾನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ರಾಜ್ಯ ಅನುದಾನರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ನೌಕರರ ಒಕ್ಕೂಟದ ಸದಸ್ಯರು ನಗರದಲ್ಲಿ ಬುಧವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ನಗರದ ಚಿಕ್ಕಲಾಲ್‌ಬಾಗ್‌ನಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದ ಒಕ್ಕೂಟದ ಸದಸ್ಯರು ವೇತನಾನುದಾನ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಪತ್ರ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. `ಆರ್ಥಿಕ ಮಿತವ್ಯಯ ನೆಪದಲ್ಲಿ ಸರ್ಕಾರ ಅನುದಾನರಹಿತ ಶಾಲಾ ಕಾಲೇಜುಗಳಿಗೆ 2009ರ ಸೆಪ್ಟೆಂಬರ್‌ನಿಂದ ವೇತನಾನುದಾನ ನೀಡುತ್ತಿಲ್ಲ. ಇದರಿಂದ ಈ ಶಾಲಾ ಕಾಲೇಜುಗಳ ಬೋಧಕ ಸಿಬ್ಬಂದಿ ಮತ್ತು ಇತರೆ ನೌಕರರಿಗೆ ವೇತನ ಸಿಗದೆ ತೊಂದರೆಯಾಗಿದೆ~ ಎಂದು ಒಕ್ಕೂಟದ ಅಧ್ಯಕ್ಷ ಜಾಲಮಂಗಲ ನಾಗರಾಜ್ ಹೇಳಿದರು.ರಾಜ್ಯದಲ್ಲಿ ಒಟ್ಟು 132 ಅನುದಾನರಹಿತ ಪ್ರಾಥಮಿಕ ಶಾಲೆಗಳು, 216 ಪ್ರೌಢ ಶಾಲೆಗಳು ಮತ್ತು 103 ಪದವಿ ಪೂರ್ವ ಕಾಲೇಜುಗಳಿವೆ. ಈ ಶಾಲಾ ಕಾಲೇಜುಗಳಲ್ಲಿ ಸುಮಾರು ಮೂರು ಸಾವಿರ ಬೋಧಕ ಸಿಬ್ಬಂದಿ ಇದ್ದಾರೆ. ಅನುದಾನರಹಿತ ಶಾಲಾ ಕಾಲೇಜುಗಳಿಗೆ ವೇತನಾನುದಾನ ನೀಡಲು ನಿರ್ಧರಿಸಿ ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರ ಈ ಹಿಂದೆ ಆದೇಶ ಹೊರಡಿಸಿತ್ತು. ಆದರೆ ಈವರೆಗೂ ಆ ಆದೇಶ ಜಾರಿಯಾಗಿಲ್ಲ ಎಂದು ಅವರು ತಿಳಿಸಿದರು.ಒಂದೆಡೆ ಸರ್ಕಾರದಿಂದಲೂ ವೇತನ ಸಿಗುತ್ತಿಲ್ಲ. ಮತ್ತೊಂದೆಡೆ ಶಾಲಾ ಕಾಲೇಜುಗಳ ಆಡಳಿತ ಮಂಡಳಿಯೂ ವೇತನ ನೀಡುತ್ತಿಲ್ಲ. ಇದರಿಂದ ಜೀವನ ನಿರ್ವಹಣೆಗೆ ತೊಂದರೆಯಾಗಿದೆ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.ವೇತನಾನುದಾನ ಬಿಡುಗಡೆಗೆ ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅ.16ರಿಂದ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಸ್.ಎಲ್. ಜಾದವ್, ಸಂಘಟನಾ ಕಾರ್ಯದರ್ಶಿ ಎಂ.ಸಿ.ಗೋವಿಂದರಾಜು ಹಾಗೂ ಇನ್ನಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry