ಶನಿವಾರ, ಮೇ 15, 2021
24 °C

ಅನುದಾನವಿಲ್ಲದೆ ಸೊರಗಿದೆ ಡಾ.ರಾಜ್ ಅಧ್ಯಯನ ಪೀಠ!

ಪ್ರಜಾವಾಣಿ ವಾರ್ತೆ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಬಳ್ಳಾರಿ: ವರನಟ, ದಿ. ಡಾ.ರಾಜಕುಮಾರ್ ಅವರು ಕನ್ನಡ ರಂಗಭೂಮಿ, ಚಿತ್ರರಂಗ, ನಾಡು, ನುಡಿಗೆ ಸಲ್ಲಿಸಿದ ಅನನ್ಯ ಸೇವೆಯ ಕುರಿತು ಅಧ್ಯಯನ ನಡೆಸಲು ನೆರವಾಗಲೆಂದೇ ಆರು ವರ್ಷಗಳ ಹಿಂದೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸ್ಥಾಪಿತವಾಗಿರುವ `ರಾಜ್ ಅಧ್ಯಯನ ಪೀಠ~ ಸರ್ಕಾರದ ನಿರ್ಲಕ್ಷ್ಯ ಹಾಗೂ ಪ್ರೋತ್ಸಾಹದ ಕೊರತೆಯಿಂದ ಅನಾಥವಾಗಿದೆ.ರಾಜ್ ನಿಧನರಾದ ವೇಳೆ ಅವರ ಸಾಧನೆ ಕುರಿತು ಅಧ್ಯಯನ ನಡೆಸಲೆಂದೇ ಸ್ಥಾಪಿಸಿದ ಈ ಅಧ್ಯಯನ ಪೀಠಕ್ಕೆ ಆರಂಭದಲ್ಲಿ ಸರ್ಕಾರ 15 ಲಕ್ಷ ರೂಪಾಯಿ ಅನುದಾನ ನೀಡಿದ್ದು, ಆ ಮೊತ್ತವನ್ನು ಬ್ಯಾಂಕ್‌ನಲ್ಲಿ ಠೇವಣಿಯಾಗಿ ಇರಿಸಿ, ಬರುವ ಬಡ್ಡಿಯಲ್ಲೇ ಅಧ್ಯಯನಕ್ಕೆ ಬಳಸುವಂತೆ ತಿಳಿಸಲಾಗಿತ್ತು.ಆದರೆ ಅಧ್ಯಯನಕ್ಕೆ ಈ ಮೊತ್ತ ಸಾಲದು; ಇನ್ನಷ್ಟು ಹಣವನ್ನು ಮೀಸಲಿರಿಸಿದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೂ ಸಾಕಷ್ಟು ನೆರವಾಗಿ, ಪೀಠದಿಂದಲೂ ರಾಜ್ ಕುರಿತ ಅಧ್ಯಯನಕ್ಕೆ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸಚಿವರು, ಸರ್ಕಾರದ  ಪ್ರಮುಖರು ಹೆಚ್ಚು ಅನುದಾನ ಬಿಡುಗಡೆ ಮಾಡಿ ಅಧ್ಯಯನ ಪೀಠ ಮತ್ತಷ್ಟು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಲು ನೆರವು ನೀಡಲಾಗುವುದು ಎಂಬ ಭರವಸೆಯನ್ನು ನೀಡಿದ್ದರು. ಈ ಭರವಸೆ ಇನ್ನೂ ಭರವಸೆಯಾಗಿಯೇ  ಉಳಿದಿದೆ.ಕಟ್ಟಡವಿಲ್ಲ: ಸದ್ಯ ಪೀಠಕ್ಕೆ ವಿವಿಯ ಇತಿಹಾಸ ವಿಭಾಗದ ಪ್ರಾಧ್ಯಾಪಕ ಸಿ.ಆರ್. ಗೋವಿಂದರಾಜ್ ಸಂಚಾಲಕರಾಗಿದ್ದು, ವಿವಿ ಗ್ರಂಥಾಲಯದಲ್ಲೇ ಒಂದು ಕೊಠಡಿ ಪಡೆದು ಅಲ್ಲೇ ರಾಜ್ ಕುರಿತು ಲಭ್ಯವಿರುವ ಗ್ರಂಥಗಳು, ಅವರ ಸಾಧನೆ, ಚಲನಚಿತ್ರಗಳ ನಟನೆ ಮತ್ತಿತರ ಮಾಹಿತಿ ಒಳಗೊಂಡ ಪುಸ್ತಕಗಳು, ಅವರು ಹಾಡಿರುವ ಹಾಡುಗಳ ಕ್ಯಾಸೆಟ್‌ಗಳು, ಚಿತ್ರಗಳ ಸಿ.ಡಿಗಳು, ಅಪರೂಪದ ಭಾವಚಿತ್ರಗಳನ್ನು `ವಸ್ತು ಸಂಗ್ರಹಾಲಯ~ ಮಾದರಿಯಲ್ಲಿ ಶೇಖರಿಸಿ ಇಡಲಾಗಿದೆ.`ದಂತಕಥೆಯಾಗಿ ಹೊರಹೊಮ್ಮಿರುವ ಮಹಾನ್ ಸಾಧಕ ರಾಜ್ ಕುರಿತು ಆಸಕ್ತರು ಅಧ್ಯಯನ ನಡೆಸಲು ಅಗತ್ಯ ಕಟ್ಟಡವೂ ಇಲ್ಲದ್ದರಿಂದ ಸರ್ಕಾರದ ಉದ್ದೇಶ ಈಡೇರದೆ ಉಳಿದಿದೆ `ಎಂದು ಪೀಠದ ಸಂಚಾಲಕ ಗೋವಿಂದರಾಜ್ `ಪ್ರಜಾವಾಣಿ~ಗೆ ತಿಳಿಸಿದರು.ಸದ್ಯ ರಾಜ್ ಅಭಿನಯಿಸಿರುವ ಚಲನಚಿತ್ರಗಳು, ಅವರೊಂದಿಗೆ ನಟಿಸಿದ ನಟ-ನಟಿಯರು, ನಿರ್ಮಾಪಕರು, ನಿರ್ದೇಶಕರು, ಚಿತ್ರ ಸಾಹಿತಿಗಳು, ತಂತ್ರಜ್ಞರ ವಿವರಗಳಲ್ಲದೆ, ಅವರ ಚಿತ್ರಗಳು ಆಯಾ ಕಾಲಘಟ್ಟದಲ್ಲಿ ಸಾಮಾಜಿಕವಾಗಿ ಉಂಟುಮಾಡಿದ ಪರಿಣಾಮ ಕುರಿತ ಚಿತ್ರ ಸೂಚಿಯನ್ನು ಪೀಠ ಸಿದ್ಧಪಡಿಸುತ್ತಿದೆ. ಕೆಲವೇ ದಿನಗಳಲ್ಲಿ ವಿವಿಯಿಂದಲೇ ಪ್ರಕಟಗೊಳ್ಳಲಿದೆ. ಅಲ್ಲದೆ, ರಾಜ್ಯ, ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ಚಿತ್ರಗಳ ಪ್ರದರ್ಶನ, ಅವುಗಳ ಬಗ್ಗೆ ಚರ್ಚೆ ನಡೆಸುವ `ಸಂಕಥನ~ ಕಾರ್ಯಕ್ರಮವನ್ನೂ ಪೀಠದಿಂದಲೇ ನಿರಂತರ ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು.ಚಾರಿತ್ರಿಕ ಪಾತ್ರಗಳಲ್ಲಿ ರಾಜ್ ಅಭಿನಯ ಕುರಿತು ಸ್ವತಃ ಗೋವಿಂದರಾಜ್ ಅವರೇ ಸಂಶೋಧನಾ ಪ್ರಬಂಧ ಮಂಡಿಸಿದ್ದು, `ಗೋಕಾಕ್ ಚಳವಳಿಯಲ್ಲಿ ರಾಜ್ ಪಾತ್ರ~ ಹಾಗೂ `ರಾಜಕುಮಾರ್ ಅವರ ಕನ್ನಡದ ಅನನ್ಯತೆ~ ಕುರಿತು ಇನ್ನಿಬ್ಬರು ವಿದ್ಯಾರ್ಥಿಗಳು ಪೀಠದ ಸಹಕಾರದೊಂದಿಗೆ ವಿವಿಯ ಇತಿಹಾಸ ವಿಭಾಗದಲ್ಲೇ ಸಂಶೋಧನೆ ನಡೆಸುತ್ತಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.