ಶುಕ್ರವಾರ, ಮೇ 27, 2022
23 °C

ಅನುದಾನ ಅರ್ಹರಿಗೆ ತಲುಪಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊರಬ: ಸರ್ಕಾರ ಬಿಡುಗಡೆ ಮಾಡುವ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ, ಆರ್ಥಿಕ ಅಭಿವೃದ್ಧಿ ಹೊಂದುವಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಎಚ್. ಹಾಲಪ್ಪ ತಿಳಿಸಿದರು.ಶನಿವಾರ ತಾಲ್ಲೂಕಿನ ಹೊಳೆಕೊಪ್ಪ ಗ್ರಾಮದ ಧನಾಂಜನೇಯ ಸಭಾ ಭವನದಲ್ಲಿ ಜಲಾಯನ ಅಭಿವೃದ್ಧಿ ಇಲಾಖೆ ಸೊರಬ, ಸ್ಕೋಡ್‌ವೇಸ್ ಸಂಸ್ಥೆ ಶಿರಸಿ ಹಾಗೂ ಮಾನಸ ಗ್ರಾಮೀಣಾಭಿವೃದ್ಧಿ ಸಂಸ್ಥೆ ಶಿವಮೊಗ್ಗದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಸಹಾಯ ಗುಂಪುಗಳಿಗೆ ಆವರ್ತ ನಿಧಿ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಎನ್‌ಜಿಒಗಳಲ್ಲಿ ಒಂದಾದ ಸ್ಕೊಡ್‌ವೇಸ್ ಸಂಸ್ಥೆಯ ಮೂಲಕ ಜನರ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಆವರ್ತ ನಿಧಿಯು ನಬಾರ್ಡ್‌ನಿಂದ ಸಾಲ ಪಡೆದ ಸಂಪೂರ್ಣ ಸರ್ಕಾರದ ಹಣ ಆಗಿದ್ದು, 5 ವರ್ಷಗಳ ಯೋಜನೆ ಇದಾಗಿದೆ.

 

ಮೊದಲ 5 ವರ್ಷಕ್ಕೆ ರೂ. 8.74 ಲಕ್ಷ ಬಿಡುಗಡೆ ಮಾಡಿದ್ದು, ರೂ. 3.60 ಕೋಟಿ 79 ಸ್ವಸಹಾಯ ಸಂಘಗಳ 1,385 ಜನರಿಗೆ ಆವರ್ತ ನಿಧಿಯ ಚೆಕ್ ವಿತರಿಸಲಾಗುತ್ತದೆ. ಮುಂದಿನ 5 ವರ್ಷಗಳಿಗೆ ರೂ. 16.62 ಕೋಟಿಯನ್ನು ಮೂಡಿ, ಅಗಸನಹಳ್ಳಿ, ಕಾತುವಳ್ಳಿ, ಕುಪ್ಪಗಡ್ಡೆ, ಗೆಂಡ್ಲ ಹಾಗೂ ಸಾಗರ ತಾಲ್ಲೂಕು ತಾಳಗುಪ್ಪ ಹೋಬಳಿಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು. ಜಿಲ್ಲಾ ಸುಜಲಾ ಸಹಾಯಕ ನಿರ್ದೇಶಕ ಬೀರಪ್ಪ ಮಾತನಾಡಿ, ಈ ಯೋಜನೆ ಪ್ರಧಾನಮಂತ್ರಿಗಳ ವಿಶೇಷ ಪ್ಯಾಕೇಜ್ ಅಡಿಯಲ್ಲಿ ರೈತರ ಸಂಕಷ್ಟ ಪರಿಹಾರ ಮಾಡಲು ರಾಜ್ಯದ 6 ಜಿಲ್ಲೇಗಳಲ್ಲಿ ನಬಾರ್ಡ್ ಆರ್ಥಿಕ ನೆರವಿನೊಂದಿಗೆ ಸಹಭಾಗಿತ್ವದ ಆಧಾರದ ಮೇಲೆ ಅನುಷ್ಠಾನಗೊಂಡಿದೆ. ಶಿವಮೊಗ್ಗ ಜಿಲ್ಲೆಯ ಹತ್ತು ಜಲಾನಯನಗಳಲ್ಲಿ ಒಂದಾದ ಸೊರಬ ತಾಲ್ಲೂಕಿನ ಕೋಳಿಸಾಲು ಉಪ ಜಲಾನಯನ ರೂ. 2.47 ಕೋಟಿ ಯೋಜನೆ ಆಗಿದೆ.

 

5 ವರ್ಷ ಅವಧಿಯಲ್ಲಿ ಹುನವಳ್ಳಿ, ತಳಬೈಲು, ಕರ್ಜಿಕೊಪ್ಪ, ಪುರ, ಕಣ್ಣೂರು, ಕಾನೂರು, ಕಾನಹಳ್ಳಿ, ಪತ್ರೆಸಾಲು, ಹೊಡಬಟ್ಟೆ ಮೊದಲಾದ ಕಡೆಯ ಕಿರು ಜಲಾನಯನ ಪ್ರದೇಶಗಳಲ್ಲಿ 2,060 ಹೆಕ್ಟೇರ್ ಪ್ರದೇಶದಲ್ಲಿ ಸುಜಲಾ ಮಾದರಿಯಲ್ಲಿ ಜಲಾನಯನವನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.ವಿವಿಧ ಸ್ವಸಹಾಯ ಸಂಘಗಳಿಗೆ ಆವರ್ತನಿಧಿಯ ಚೆಕ್ ವಿತರಿಸಲಾಯಿತು. ಉಳವಿ ಗ್ರಾ.ಪಂ. ಅಧ್ಯಕ್ಷೆ ಪ್ರಮೀಳಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯೆ ಕೋಮಲಾ ನಿರಂಜನ, ತಾ.ಪಂ. ಸದಸ್ಯರಾದ ಬರಗಿ ನಿಂಗಪ್ಪ, ರಾಜೇಶ್ವರಿ ರಾಜಪ್ಪ, ಎಪಿಎಂಸಿ ಅಧ್ಯಕ್ಷ ಗಜಾನನರಾವ್ ಉಳವಿ, ಜಲಾನಯನ ಅಧಿಕಾರಿ ಶ್ರೀಪತಿ, ಅಬ್ದುಲ್ ಖಾದರ್, ಗಣಪತಿ ನಾಯ್ಕ, ಪ್ರಭಾಕರ ಮಂಗಳೂರು ಮತ್ತಿತರರು ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.