ಶನಿವಾರ, ಏಪ್ರಿಲ್ 10, 2021
32 °C

ಅನುದಾನ ವಿನಿಯೋಗ- ತನಿಖೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ:  ಜಿಲ್ಲೆಯಲ್ಲಿ 2008-09 ರಿಂದ 2010-11ರ ಅವಧಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅಸಮರ್ಪಕ ಹಾಗೂ ಸಂಶಯಕ್ಕೆಡೆ ಮಾಡುವ ಕಾಮಗಾರಿ, ನಕಲಿ ಎನ್‌ಎಂಆರ್‌ಗಳಿಗೂ ಹಣ ಪಾವತಿ. ಅನಧಿಕೃತ ವ್ಯಕ್ತಿಗಳ ಬ್ಯಾಂಕ್ ಖಾತೆಗಳಿಗೆ ಲಕ್ಷಾಂತರ ರೂಪಾಯಿ ಜಮಾ ಮಾಡಲಾಗಿದೆ. ಯೋಜನೆ ಅನುಷ್ಠಾನದಲ್ಲಿ ಜಿಲ್ಲಾ ಪಂಚಾಯಿತಿಯಿಂದ ಸರಿಯಾದ ನಿಯಂತ್ರಣ ಇಲ್ಲ. ಹೀಗಾಗಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಸಮಗ್ರ ತನಿಖೆ ಅಗತ್ಯ.- ಇವು ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನ ಸಂದರ್ಭದಲ್ಲಿ ಕಂಡು ಬಂದಿರುವ ಲೋಪಗಳು, ಹಣ ದುರ್ಬಳಕೆ ಹಾಗೂ ಪಂಚಾಯತ್‌ರಾಜ್ ಸಂಸ್ಥೆಗಳ ನಿರ್ಲಕ್ಷ್ಯದ ಬಗ್ಗೆ ಕೇಂದ್ರದ ಕಂಟ್ರೋಲರ್ ಆ್ಯಂಡ್ ಆಡಿಟರ್ ಜನರಲ್ (ಸಿಎಜಿ) ನೀಡಿರುವ ವರದಿಯ ಪ್ರಮುಖ ಅಂಶಗಳು.2011ರ ಮಾರ್ಚ್‌ಗೆ ಅಂತ್ಯಗೊಂಡ ಅವಧಿಯಲ್ಲಿ ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ವರದಿ, ಸಮಗ್ರ ತನಿಖೆಯಿಂದ ಸತ್ಯಾಂಶ ಹೊರ ಬೀಳಲಿದೆ ಎಂದು ಅಭಿಪ್ರಾಯಪಟ್ಟಿದೆ.`ಪ್ರಜಾವಾಣಿ~ಗೆ ಈ ವರದಿ ಲಭ್ಯವಾಗಿದ್ದು, ಯೋಜನೆಯನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಗಳ ಹಂತದ ಜನಪ್ರತಿನಿಧಿಗಳು, ಅಧಿಕಾರಿಗಳು ತೋರಿರುವ ನಿರ್ಲಕ್ಷ್ಯತನ ಬಗ್ಗೆ ವರದಿಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.ದುರ್ಬಳಕೆ: ಯೋಜನೆ ಕುರಿತು ಜನರಿಗೆ ಮಾಹಿತಿ ನೀಡುವ ಸಲುವಾಗಿ 2009-10 ಹಾಗೂ 2011ನೇ ಸಾಲಿನಲ್ಲಿ ಜಿಲ್ಲೆಯ 4 ತಾಲ್ಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು 2.19 ಕೋಟಿ ರೂಪಾಯಿ ವೆಚ್ಚದಲ್ಲಿ ಕಬ್ಬಿಣದ ಬೋರ್ಡ್‌ಗಳು ಹಾಗೂ ಬಹುವರ್ಣ ಭಿತ್ತಿಚಿತ್ರಗಳನ್ನು ಖರೀದಿ ಮಾಡಿದ್ದಾರೆ. ಆದರೆ, ಈ ಸಾಮಗ್ರಿಗಳ ಖರೀದಿಗೆ ಯಾವುದೇ ಕ್ರಿಯಾ ಯೋಜನೆ ಇಲ್ಲ. ಟೆಂಡರ್ ಸಹ ಕರೆದಿಲ್ಲ ಎಂದು ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.ಕುಷ್ಟಗಿ ತಾಲ್ಲೂಕಿನ ದೋಟಿಹಾಳ ಹಾಗೂ ಹಿರೇಬನ್ನಿಗೋಳ ಗ್ರಾಮ ಪಂಚಾಯಿತಿಗಳ ಕಾರ್ಯ ವೈಖರಿಯನ್ನು ವರದಿಯಲ್ಲಿ ವಿಶೇಷವಾಗಿ ಪ್ರಸ್ತಾಪಿಸಲಾಗಿದೆ. ತಾಲ್ಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಮೇಲ್ವಿಚಾರಣೆ ಕೊರತೆ.

ಈ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ವೈಫಲ್ಯದಿಂದಾಗಿ ಅನಧಿಕೃತ ವ್ಯಕ್ತಿಗಳ ಬ್ಯಾಂಕ್ ಖಾತೆಗಳಿಗೆ 57.53 ಲಕ್ಷ ರೂಪಾಯಿ ಪಾವತಿಯಾಗಿದೆ. ನಕಲಿ ಎನ್‌ಎಂಆರ್‌ಗಳಿಗೆ 1.44 ಕೋಟಿ ರೂಪಾಯಿಗಳನ್ನು ಪಾವತಿಸಲಾಗಿದೆ ಎಂದೂ ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.ಕೆಲಸ ಕೂಲಿಕಾರರು ಸಲ್ಲಿಸಿರುವ ಅರ್ಜಿಗಳ ನಿರ್ವಹಣೆ ಇಲ್ಲ. ಕೆಲವು ಅರ್ಜಿಗಳು ಅಪೂರ್ಣ.

 ಹೀಗಾಗಿ ಎನ್‌ಎಂಆರ್‌ಗಳಲ್ಲಿನ ವಿವರಗಳ ಆಧಾರದ ಮೇಲೆ ಕೂಲಿಕಾರರನ್ನು ಗುರುತಿಸುವುದು ಸಾಧ್ಯವಿಲ್ಲ.ಎನ್‌ಎಂಆರ್‌ಗಳಲ್ಲಿ ಫಲಾನುಭವಿಗಳ ಸಹಿ ಅಥವಾ ಹೆಬ್ಬೆರಳಿನ ಗುರುತು ಇಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಲಾಗಿದೆ.ಒಟ್ಟಾರೆಯಾಗಿ, ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನ ಸಂಶಯಕ್ಕೆಡೆ                   ಮಾಡುತ್ತದೆ.ಹೀಗಾಗಿ ಯೋಜನೆಯಡಿ ಹಣ ಪಾವತಿ, ಕೈಗೊಂಡಿರುವ ಕಾಮಗಾರಿಗಳು ಹಾಗೂ ಅವುಗಳ ಗುಣಮಟ್ಟದ ಬಗ್ಗೆ ಸಮಗ್ರ ತನಿಖೆಯಾಗುವುದು ಅಗತ್ಯ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.`ಗಂಭೀರ ಲೋಪಗಳು- ಅಭಿವೃದ್ಧಿ ಕುಂಠಿತ~

ಕೊಪ್ಪಳ: ವರದಿಯಲ್ಲಿ ಪಟ್ಟಿ ಮಾಡಿರುವ ಗಂಭೀರ ಲೋಪಗಳು ಹೀಗಿವೆ.

* ಜಿಲ್ಲಾ ಪಂಚಾಯಿತಿಗೆ 2006-07ರಿಂದ 2010-11ರ ವರೆಗೆ 2,106.77 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ, 1,332.52 ಕೋಟಿ ರೂಪಾಯಿಗಳನ್ನು ಮಾತ್ರ ವೆಚ್ಚ ಮಾಡಲಾಗಿದೆ. ವರ್ಷದಿಂದ ವರ್ಷಕ್ಕೆ ಅನುದಾನದ ಮೊತ್ತದಲ್ಲಿ ಹೆಚ್ಚಳ ಇದ್ದರೂ ವೆಚ್ಚ ಮಾತ್ರ ವರ್ಷದಿಂದ ವರ್ಷಕ್ಕೆ ಕಡಿಮೆಯಾಗಿದೆ. ಹೀಗಾಗಿ ಜಿಲ್ಲೆಯು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಲಾಭ ಪಡೆಯಲು ವಿಫಲವಾಗಿದೆ.* ಜಿಲ್ಲಾ ಅಭಿವೃದ್ಧಿ ಯೋಜನೆಯನ್ನು (ಡಿಪಿಪಿ) ಸಿದ್ಧಪಡಿಸುವ ಜವಾಬ್ದಾರಿಯನ್ನು 2011ರ ಅಕ್ಟೋಬರ್‌ನಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ನೀಡಲಾಗಿದೆ. ಇದು ಕರ್ನಾಟಕ ಪಂಚಾಯತ್‌ರಾಜ್ ಕಾಯ್ದೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ.* 2007-08ನೇ ವರ್ಷದಿಂದ 11ನೇ ಪಂಚ ವಾರ್ಷಿಕ ಯೋಜನೆ ಆರಂಭವಾಗಿದೆ. ಆದರೆ, 5 ವರ್ಷಗಳ ತಡವಾಗಿ 2012ರ ಜನವರಿಯಲ್ಲಿ ಸಮಗ್ರ ಜಿಲ್ಲಾ ಅಭಿವೃದ್ಧಿ ಯೋಜನೆಯನ್ನು ತಯಾರಿಸಲಾಗಿದೆ.* 2008-09 ಹಾಗೂ 2009-10ನೇ ಸಾಲಿಗೆ ಕೊಪ್ಪಳದಲ್ಲಿರುವ ಪ್ರಧಾನ ಅಂಚೆ ಕಚೇರಿಗೆ 1.58 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಇದು ಅನುದಾನ ಬಿಡುಗಡೆ ಮೇಲೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಗಾ ವಹಿಸದೇ ಇರುವುದನ್ನು ತೋರುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.