ಬುಧವಾರ, ಜೂನ್ 16, 2021
28 °C

ಅನುದಾನ ಸದ್ಬಳಕೆ: ನಗರಸಭೆಯ ಹೆಗ್ಗಳಿಕೆ

ಪ್ರಜಾವಾಣಿ ವಾರ್ತೆ/ ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಮಡಿಕೇರಿ: ಮುಖ್ಯಮಂತ್ರಿ ಅವರ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ನಿಧಿಯಡಿ ಕಳೆದ ವರ್ಷ ಮಡಿಕೇರಿ ನಗರಸಭೆಗೆ ಮಂಜೂರಾಗಿದ್ದ 30 ಕೋಟಿ ರೂಪಾಯಿ ಅನುದಾನದಲ್ಲಿ ಶೇ 88ರಷ್ಟು ಹಣವನ್ನು ಬಳಕೆ ಮಾಡಿಕೊಳ್ಳ ಲಾಗಿದೆ ಎಂದು ನಗರಸಭೆ ಆಯುಕ್ತ ಎನ್.ಎಂ. ಶಶಿಕುಮಾರ್ ತಿಳಿಸಿದರು.ತಮ್ಮನ್ನು ಭೇಟಿ ಮಾಡಿದ `ಪ್ರಜಾವಾಣಿ~ ಪ್ರತಿನಿಧಿ ಜೊತೆ ಮಾತನಾಡಿದ ಅವರು, ಮುಖ್ಯವಾಗಿ ಈ ಹಣವನ್ನು  ನಗರವಾಸಿ ಗಳಿಗೆ ಮೂಲಸೌಕರ್ಯಗಳನ್ನು ಒದಗಿಸಲು ಬಳಸಿಕೊಳ್ಳಲಾಗಿದೆ ಎಂದರು.ಮಡಿಕೇರಿ ನಗರದಲ್ಲಿ ಭಾರಿ ಮಳೆ ಸುರಿಯುವ ಕಾರಣ ಇಲ್ಲಿನ ಬಹಳಷ್ಟು ರಸ್ತೆಗಳು ಹಾಳಾಗಿದ್ದವು. ಇವುಗಳನ್ನು ದುರಸ್ತಿ ಪಡಿಸಲಾಗಿದೆ. ಪ್ರಮುಖವಾಗಿ ಚೌಕಿಯಿಂದ ರಾಣಿಪೇಟ್ ಜಂಕ್ಷನ್‌ವರೆಗಿನ ಕಾಲೇಜು ರಸ್ತೆಯನ್ನು ಕಾಂಕ್ರೀಟ್ ಮಾಡಲಾಗಿದೆ.ನಗರದ ವಿವಿಧೆಡೆ ಹಾಳಾಗಿದ್ದ ಒಳರಸ್ತೆಗಳಿಗೆ ಟಾರ್ ಹಾಕಲಾಗಿದೆ. ಹಲವು ಭಾಗಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸ ಲಾಗಿದೆ. ಇದರ ಜೊತೆಗೆ ಚರಂಡಿಗಳನ್ನು ಸಹ ನಿರ್ಮಿಸಲಾಗಿದೆ.ಗಾಳಿ ವಿದ್ಯುತ್ ಯೋಜನೆ: ನಗರಸಭೆಯ ಕಚೇರಿಗೆ ಬೇಕಾಗುವ ವಿದ್ಯುತ್ ಅನ್ನು ಗಾಳಿ ವಿದ್ಯುತ್ ಯೋಜನೆಯಿಂದ ಪಡೆಯಲು ರೂ 50 ಲಕ್ಷ ಮೊತ್ತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ನಗರಸಭೆಗೆ ಲಕ್ಷಾಂತರ ರೂಪಾಯಿಯ ವಿದ್ಯುತ್ ಬಿಲ್ ಉಳಿತಾಯವಾಗಲಿದೆ.ಮಾರುಕಟ್ಟೆ: ಈಗಿರುವ ಮಾರುಕಟ್ಟೆಯನ್ನು 3 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣಗೊಳಿಸುವ ಕೆಲಸಕ್ಕೂ ಚಾಲನೆ ನೀಡಲಾಗಿದೆ. ಇದು ನಗರವಾಸಿಗಳ ಬಹುದಿನಗಳ ಬೇಡಿಕೆ ಯಾಗಿತ್ತು. ಅತ್ಯಂತ ಹಳೆಯದಾಗಿದ್ದ ಈ ಮಾರುಕಟ್ಟೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹಾನಿಗೊಳಗಾಗಿತ್ತು.ಕುಡಿಯುವ ನೀರು: ಪಕ್ಕದಲ್ಲಿ ಕಾವೇರಿ ನದಿ ಹರಿಯುತ್ತಿದ್ದರೂ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ. ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಹಲವೆಡೆ ನಗರ ಪ್ರದೇಶಗಳಲ್ಲಿ ಬಾವಿಗಳನ್ನು ನಿರ್ಮಿಸಲಾಗಿದೆ.ಮಳೆ ನೀರು ಸಂಗ್ರಹಿಸಿಟ್ಟುಕೊಳ್ಳಲು ಹಾಗೂ ಅಂತರ್ಜಲವನ್ನು ಕಾಪಾಡುವ ನಿಟ್ಟಿನಲ್ಲಿ ತೆರೆದ ಬಾವಿಗಳನ್ನು ಸಹ ನಿರ್ಮಿಸಲಾಗಿದೆ.ಮಹತ್ವಾಕಾಂಕ್ಷೆಯ ಯೋಜನೆಯಾದ ಕುಂಡಾ ಮೇಸ್ತ್ರಿ ಯೋಜನೆ ಕೂಡ ಕೈಗೆತ್ತಿಕೊಳ್ಳಲಾಗಿದೆ. ಸದ್ಯಕ್ಕೆ ಪ್ರತಿದಿನ ನಗರಕ್ಕೆ ಪೂರೈಕೆ ಮಾಡಲು 45 ಲಕ್ಷ ಲೀಟರ್ ನೀರು ಬೇಕಾಗುತ್ತದೆ. ಕುಂಡಾ ಮೇಸ್ತ್ರಿ ಯೋಜನೆ ಅನುಷ್ಠಾನಗೊಂಡರೆ ನಗರಕ್ಕೆ 90 ಲಕ್ಷ ಲೀಟರ್ ನೀರು ಪೂರೈಸಬಹುದಾಗಿದೆ. ಮುಂದಿನ 50 ವರ್ಷಗಳ ವರೆಗೆ ಗುರಿ ಇಟ್ಟುಕೊಂಡು ಇಷ್ಟು ದೊಡ್ಡ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಹೇಳಿದರು.ಈ ನಿಧಿಯಡಿ 134 ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಇವುಗಳಲ್ಲಿ ಇದುವರೆಗೆ 97 ಕಾಮಗಾರಿಗಳು ಪೂರ್ಣಗೊಂಡಿದ್ದು, 34 ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಇನ್ನುಳಿದ ಕಾಮಗಾರಿ ಗಳು ಟೆಂಡರ್ ಕರೆಯುವ ಪ್ರಕ್ರಿಯೆಯಲ್ಲಿವೆ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.