ಸೋಮವಾರ, ಆಗಸ್ಟ್ 19, 2019
24 °C

ಅನುಪಮ ನಿರುಪಮಾ

Published:
Updated:

ಲೇಖಕಿಯಾಗಿ, ಪ್ರಕಾಶಕಿಯಾಗಿ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೃತಿಗಳನ್ನು ನೀಡಿದ ಹಿರಿಮೆ ನಿರುಪಮಾ (ಸೆ. 9, 1933 - ಜುಲೈ 11, 2013) ಅವರದು. ಸೃಜನಶೀಲ ಸಾಹಿತ್ಯದ ಜೊತೆಗೆ ಸೃಜನೇತರ ಬರವಣಿಗೆಯಲ್ಲೂ ತೊಡಗಿಕೊಂಡಿದ್ದುದು ಅವರ ವಿಶೇಷ. ಜೀವಿತದ ಕೊನೆಯ ವರ್ಷಗಳಲ್ಲಿ ಅವರ ಪಾಲಿಗೆ ಜೀವದ್ರವದ ರೂಪದಲ್ಲಿ ಬರವಣಿಗೆ ಒದಗಿಬಂದುದು, ಸಾಹಿತ್ಯದ ಶಕ್ತಿ ಹಾಗೂ ಅದರ ಬಗೆಗಿನ ನಿರುಪಮಾ ಅವರ ಪ್ರೀತಿ ಎರಡಕ್ಕೂ ಉದಾಹರಣೆಯಂತಿದೆ.ಸದ್ದಿಲ್ಲದ ಸಾಧನೆ ಎನ್ನುವುದು ಡಾ. ನಿರುಪಮಾ ಅವರ ಸಾಹಿತ್ಯ ಕೃಷಿಗೆ ಅಕ್ಷರಶಃ ಹೊಂದುವ ವಿಶೇಷಣ. ಕೆಲವು ವರ್ಷಗಳಿಂದ ಧ್ವನಿ ಪೆಟ್ಟಿಗೆ ಕೆಟ್ಟುಹೋಗಿ ಮೌನವಾಗಿ ಇರುವುದು ನಿರುಪಮಾ ಅವರಿಗೆ ಅನಿವಾರ್ಯವಾಗಿದ್ದರೂ, ತಮ್ಮ ಕೃತಿಗಳ ಮೂಲಕವೇ ಅವರು ತಮ್ಮ ಅನಿಸಿಕೆ-ಚಿಂತನೆಗಳನ್ನು ವ್ಯಕ್ತಪಡಿಸುತ್ತಿದ್ದರು. ಮುದ್ರಣ ಕಷ್ಟಕರವಾಗಿದ್ದ ದಿನಗಳಲ್ಲಿ ತಾವು ಬರೆದುದಲ್ಲದೆ, ಪುಸ್ತಕ ಪ್ರಕಾಶನದಲ್ಲೂ ತೊಡಗಿಕೊಂಡಿದ್ದು ಅವರ ಸಾಧನೆ. `ಆರತಿ ಪ್ರಕಾಶನ' ಆರಂಭಿಸಿ, ಸುಮಾರು 220 ಪುಸ್ತಕಗಳನ್ನು ಪ್ರಕಟಿಸಿದರು.ಕನ್ನಡದ ಜೊತೆಗೆ ಇತರ ಆರು ಭಾಷೆಗಳು ನಿರುಪಮಾ ಅವರಿಗೆ ಸಲೀಸಾಗಿದ್ದವು. ಕನ್ನಡ, ತೆಲುಗು, ಹಿಂದಿ, ಸಂಸ್ಕೃತ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಮಾತಿಗೆ ಮತ್ತು ಲೇಖನಿಗೆ ಬಳಸುವಷ್ಟು ಅವರಿಗೆ ಪರಿಶ್ರಮವಿತ್ತು. ಕನ್ನಡದಲ್ಲಿ ಬರೆದಿರುವುಷ್ಟೇ ಕಥೆ, ಕಾದಂಬರಿ, ಲೇಖನಗಳನ್ನು ಅವರು ತೆಲುಗಿನಲ್ಲೂ ಬರೆದಿದ್ದಾರೆ. ಅವರ ಧ್ವನಿ ಪೆಟ್ಟಿಗೆ ಕೆಟ್ಟು ಮಾತು ನಿಂತು ಹೋದಾಗ; ಹರ್ಪಿಸ್ ಅವರನ್ನು ಕಾಡಿಸಿ ನೋವು ಆಕ್ರಮಿಸಿದಾಗ, ಮೂತ್ರಪಿಂಡದ ಸಮಸ್ಯೆಗೆ ಸಿಕ್ಕಿದಾಗ, ಈ ಎಲ್ಲವೂ ಸೇರಿ ದೇಹವನ್ನು ದುರ್ಬಲಗೊಳಿಸುತ್ತಿದ್ದರೂ ಅವರು ಧೃತಿಗೆಟ್ಟವರಲ್ಲ. 2005ರಲ್ಲಿ ಧ್ವನಿ ಪೆಟ್ಟಿಗೆಗೆ ರೇಡಿಯೇಶನ್ ಮಾಡಿಸಿಕೊಂಡ ನಂತರವೂ ವೇದಿಕೆಯ ಮೇಲೆ ನಿಂತು ಭಾಷಣ ಮಾಡಿದ್ದರು, ಹಾಡು ಹಾಡಿದ್ದರು, ಶ್ಲೋಕಗಳನ್ನು ಹೇಳಿದ್ದರು. ಒಂದೆರಡು ವರ್ಷದಲ್ಲಿ ಆ ಅರೆ-ದನಿಯೂ ಸಂಪೂರ್ಣ ನಶಿಸಿದರೂ, ಅದರ ಯೋಚನೆಯನ್ನೇ ಬಿಟ್ಟು, ತಮ್ಮ ದೇಹದ ಇನ್ನಿತರ ಆರೋಗ್ಯವಂತ ಅಂಗಗಳನ್ನು ಬಳಸಿ, ದಿನಕ್ಕೆ ನಾಲ್ಕೈದು ಗಂಟೆಗಳ ಕಾಲ ಬರವಣಿಗೆ ನಡೆಸಿದರು.ಮಹಾಭಾರತದ ಬಗ್ಗೆ ಅಧ್ಯಯನ ನಡೆಸಿ, `ಶ್ರಿ ಮಹಾಭಾರತ' ಎಂದು ಕಾದಂಬರಿಯ ರೂಪದಲ್ಲಿ ಮೂರು ಬೃಹತ್ ಸಂಪುಟಗಳನ್ನು ರಚಿಸಿದರು. `ಸಾಹಿತ್ಯದ ಸೊಬಗು' ಲೇಖನಗಳ ಸಂಕಲನ, `ಕಾವ್ಯದಲ್ಲಿ ರಾಷ್ಟ್ರೀಯತೆ' ಚಿಂತನೆ- ಇವೆಲ್ಲವೂ ಅವರು ಅನಾರೋಗ್ಯದ ನಡುವೆಯೇ ಬರೆದ ಮಹತ್ವದ ಕೃತಿಗಳು. ತನ್ನ ತಲೆಮಾರಿನ ಲೇಖಕಿಯರು ಸಾಮಾಜಿಕ ವಸ್ತುಗಳ ಸುತ್ತ ಕಥೆ, ಕಾದಂಬರಿಯಂತಹ ಕಾಲ್ಪನಿಕ ಪ್ರಕಾರಗಳಲ್ಲಿ ಹೆಚ್ಚು ಬರೆಯುತ್ತಿದ್ದಾಗ ನಿರುಪಮಾ ಅವರು ಇತರ ಪ್ರಕಾರಗಳಲ್ಲಿಯೂ ಕೃತಿಗಳನ್ನು ಚರಿತ್ರೆಯ ಆಧಾರಗಳನ್ನಿಟ್ಟುಕೊಂಡು ಬರೆದರು. ಮೈಸೂರು ಅರಮನೆಯಲ್ಲಿ ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಧರ್ಮಾಧಿಕಾರಿಗಳಾಗಿದ್ದ `ಪುರಾಣ ರತ್ನ' ಬಿರುದಾಂಕಿತ ಹೊಳವನಹಳ್ಳಿ ಶೇಷಾಚಾರ್ಯರು ಇವರ ದೊಡ್ಡ ತಾತ. ಮದ್ರಾಸಿನ ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಗಳಾಗಿದ್ದ, ವಿದ್ವಾಂಸ ಹೊಳವನಹಳ್ಳಿ ಕೃಷ್ಣಾಚಾರ್ಯರು ಇವರ ತಂದೆ. ತಾಯಿಯ ಹೆಸರು ಸೀತಮ್ಮ. ಹುಟ್ಟಿದ್ದು ತುಮಕೂರು ಜಿಲ್ಲೆಯ ಹೊಳವನಹಳ್ಳಿಯಲ್ಲಿ, 1933ರ ಸೆಪ್ಟೆಂಬರ್ 30ರಂದು.ಅಕೌಂಟೆಂಟ್ ಜನರಲ್‌ರವರ ಕಚೇರಿಯಲ್ಲಿ ಅಧಿಕಾರಿಯಾಗಿದ್ದ ಟಿ.ಕೆ. ರಾಮಚಂದ್ರರಾಯರು ನಿರುಪಮಾ ಅವರ ಪತಿ. ಆರಂಭದಲ್ಲಿ ತೆಲುಗಿನಲ್ಲಿ ಬರೆಯುತ್ತಿದ್ದ ನಿರುಪಮಾ ತಮ್ಮ ಬರವಣಿಗೆಯನ್ನು ಕನ್ನಡಕ್ಕೂ ವಿಸ್ತರಿಸಿಕೊಂಡದ್ದು ರಾಮಚಂದ್ರರಾಯರ ಸಂಗಾತಿಯಾಗಿ ಬೆಂಗಳೂರಿಗೆ ಬಂದು ಕನ್ನಡ ಕಲಿತ ಮೇಲೆಯೇ. ಕನ್ನಡ ಶಾಲೆಗೆ ಹೋಗುತ್ತಿದ್ದ ಹಿರಿಯ ಮಗನಿಗೆ ಕನ್ನಡ ಕಲಿಸುತ್ತಲೇ ತಾವೂ ಕಲಿತರು. ಆರಂಭದಲ್ಲಿ, ತೆಲುಗಿನಿಂದ ಕನ್ನಡಕ್ಕೆ ಮಾಡಿದ ಕೆಲವು ಅನುವಾದಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡವು. ನಂತರದಲ್ಲಿ ಕನ್ನಡ ಭಾಷೆಯಲ್ಲೇ ಸ್ವಂತ ಕೃತಿ ರಚನೆ ಪ್ರಾರಂಭಿಸಿದರು.ವಿವಿಧ ಭಾಷೆಗಳ ಸಾಹಿತ್ಯಕ, ಚಾರಿತ್ರಿಕ, ವೈಚಾರಿಕ ಹಾಗೂ ಹತ್ತು ಹಲವಾರು ರೀತಿಯ ಅಧ್ಯಯನಗಳಲ್ಲಿ ತೊಡಗಿಸಿಕೊಂಡರು ನಿರುಪಮಾ. `ಪರಿತ್ಯಕ್ತಾ' ಮತ್ತು `ಸುಡಿಗುಂಡಂ' ಇವರು ತೆಲುಗಿನಲ್ಲಿ ಬರೆದ ಆರಂಭದ ಎರಡು ಕೃತಿಗಳು. 1963ರಲ್ಲಿ ಬರೆದ `ರಣಹದ್ದು' ಮತ್ತು `ಅಧಿಕಾರಿಗಳ ಅವಾಂತರ' ನಾಟಕಗಳು ಮೊದಲ ಎರಡು ಕನ್ನಡದ ಕೃತಿಗಳು. ಕನ್ನಡದ ನವೋದಯ ಕಾಲದಲ್ಲಿ, ಕನ್ನಡ ಸಾಹಿತ್ಯಕ್ಕೆ ತಮ್ಮ ಕಾಣಿಕೆಗಳನ್ನು ಕೊಡತೊಡಗಿದ ನಿರುಪಮಾ ಅವರ ಬರವಣಿಗೆ, 1978ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮುಕ್ತ ಶಿಕ್ಷಣದ ಮೂಲಕ ಮೊದಲ ತಂಡದ ವಿದ್ಯಾರ್ಥಿನಿಯಾಗಿ ಎಂ.ಎ. ಮಾಡಿದ ಮೇಲೆ ಇನ್ನಷ್ಟು ಸುಧಾರಿಸಿತು. ನವ್ಯ ಹಾಗೂ ಆ ನಂತರದ ಸ್ತ್ರೀವಾದ- ಎರಡರ ಪ್ರಭಾವವೂ ಅವರ ಮೇಲಾಯಿತು.ಇವರು ಬರೆದ `ಭಾರತೀಯ ನಾರಿ ನಡೆದು ಬಂದ ದಾರಿ' ಲೇಖನ ಸಂಕಲನ ವೇದಕಾಲದಿಂದ 1975ರ ಅವಧಿಯವರೆಗಿನ, ಹದಿನೆಂಟು ಭಾಷೆಗಳ ಲೇಖಕಿಯರ ಸಾಧನೆಗಳನ್ನು ಪರಿಚಯಿಸಿದೆ. ಈ ಕೆಲಸ ಭಾರತದಲ್ಲೇ ಮೊಟ್ಟ ಮೊದಲನೆಯದೆಂದು ಹೇಳಲಾಗಿದೆ.ಅಂತರರಾಷ್ಟ್ರೀಯ ಮಹಿಳಾ ವರ್ಷದಲ್ಲಿ ಭಾರತದಲ್ಲಿರುವ ಎಲ್ಲ ಲೇಖಕಿಯರಿಂದ ಕಥೆ, ಕವನ, ಲೇಖನಗಳನ್ನು ಸಂಗ್ರಹಿಸಿ, `ಆರತಿ' ಎಂಬ ಮಹಿಳಾ ವಿಶೇಷಾಂಕ ಹೊರತಂದರು. ಮಹಿಳೆಯರ ಮೊದಲನೇ ಪುಸ್ತಕವನ್ನು ಪ್ರಕಾಶಿಸುವ ನಿರ್ಧಾರ ಕೈಗೊಂಡು `ಆರತಿ ಪ್ರಕಾಶನ' ಆರಂಭಿಸಿದರು. ಲೇಖಕಿಯರು ಒಡಗೂಡಿ ವಿಚಾರ ವಿನಿಮಯ ಮಾಡಬೇಕೆಂಬ ಉದ್ದೇಶದಿಂದ 1966ರಲ್ಲಿ `ವಿಚಾರ ವಿನಿಮಯ ಸಂಸ್ಥೆ' ಆರಂಭಿಸಿದರು.ಭಾರತೀಯ ಮಹಿಳೆಯಷ್ಟು ಶೋಷಣೆಗೊಳಗಾದ ಸ್ತ್ರೀ ಬೇರೆ ಯಾವ ದೇಶದಲ್ಲೂ ಇಲ್ಲ ಎಂಬ ವಾಸ್ತವವನ್ನು ವಿವರಿಸುತ್ತ, ಭಾರತದಲ್ಲಿ ಜಾರಿಯಲ್ಲಿರುವ ಮಹಿಳಾ ಸಂಬಂಧಿ ಕಾನೂನುಗಳು ಮತ್ತು ಮಸೂದೆಗಳನ್ನು ಹಿನ್ನೆಲೆಯೊಂದಿಗೆ ಪರಿಚಯಿಸುವ `ಕಾನೂನಿನ ಕಕ್ಷೆಯಲ್ಲಿ ರಕ್ಷೆ' ನಿರುಪಮಾ ಅವರ ಮತ್ತೊಂದು ಮಹತ್ವದ ಕೃತಿ. `ಮಹಿಳೆ ಮತ್ತು ಮಿತವ್ಯಯ', `ಮಹಿಳೆ ಮತ್ತು ಮುಂಗಡ ಪತ್ರ', `ವಿಶ್ವದ ಮಹಿಳೆ ಅಂದು ಇಂದು', `ಮಹಾಭಾರತದಲ್ಲಿ ಮಹಿಳಾ ಪಾತ್ರಗಳು', `ಕರ್ನಾಟಕ ಕವಯತ್ರಿಯರು', `ಕೈಫಿಯತ್ತು ಮತ್ತು ಮೂವತ್ತಾರು ರಾಷ್ಟ್ರಗಳಲ್ಲಿ ಮಹಿಳೆಯ ವಿಮೋಚನಾ ಚಳವಳಿಗಳು', `ಭಾರತದ ಹದಿನೆಂಟು ಭಾಷೆಗಳಲ್ಲಿ ಮಹಿಳೆಯರ ಕೊಡುಗೆ'- ಇವು ಅವರ ಮಹಿಳಾ ಕಾಳಜಿಯ ಕೆಲವು ಕೃತಿಗಳು. ಮುಂತಾಗಿ ಮಹಿಳೆಗೆ ಸಂಬಂಧಿಸಿದ ಹಲವು ಪುಸ್ತಕಗಳನ್ನು ಪ್ರಕಟಿಸಿದರು.ನಿರುಪಮಾ ಅವರು `ಮಕ್ಕಳ ಸಾಹಿತ್ಯ ಪರಿಷತ್ತು' ಸ್ಥಾಪಿಸಿ, ಅದರ ಅಧ್ಯಕ್ಷೆಯಾಗಿ `ಚಂದಕ್ಕಿ ಮಾಮ', `ಬಾತು-ಬಂಗಾರದ ಮೊಟ್ಟೆ', `ಪಟ್ಟಣದ ಇಲಿ' ಮುಂತಾದ ಮೂವತ್ತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸಿದ ಅಗ್ಗಳಿಕೆ ಅವರದು.

ಮಹಿಳೆಯರಿಗೆ ಸಂಬಂಧಿಸಿದ ಸಾಹಿತ್ಯ ಕೃತಿಗಳು (12), ನಾಟಕ (4), ಪ್ರಬಂಧ (4), ಬೆಂಗಾಲಿ, ತೆಲುಗು, ಇಂಗ್ಲಿಷ್, ಹಿಂದಿ ಮುಂತಾದ ಭಾಷೆಗಳಿಂದ ಅನುವಾದಿಸಿರುವ ಕೃತಿಗಳು (11), ಕಥಾ ಸಂಕಲನ (5), ನಾಟಕ (4) ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಸುಮಾರು 115 ಪುಸ್ತಕಗಳನ್ನು ಅವರು ರಚಿಸಿದ್ದಾರೆ. ಬೆಂಗಾಲಿಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕಿ ಮಹಾಶ್ವೇತಾದೇವಿ ಅವರ `ಹಜಾರ್ ಚೌರಾಸಿ ಮಾ', `ಅಗ್ನಿಗರ್ಭ', ಮತ್ತು `ಶ್ರಿ ಶ್ರೀ ಗಣೇಶ ಮಹಿಮಾ' ಅವರು ಕನ್ನಡಕ್ಕೆ ತಂದ ಪ್ರಮುಖ ಅನುವಾದಗಳು.ಅಂತರರಾಷ್ಟ್ರೀಯ ಮಟ್ಟದ ಹೆಸರಾಂತ ವಿದ್ವಾಂಸರ ಮತ್ತು ಚರಿತ್ರಕಾರರ ಪರಿಚಯದ ಲಾಭ ಇವರಿಗೆ ದೊರಕಿತ್ತು. `ಭುವನ ವಿಜಯ', `ಶಿಲಾರವ', `ವೈಶಾಲಿಯ ನಗರ ವಧು' ಮುಂತಾದ ಕಾದಂಬರಿಗಳು; ಕೃಷ್ಣದೇವರಾಯನ `ಆಮುಕ್ತಮೌಲ್ಯದ', `ಭಗವದಜ್ಜುಕಮ್' ಅನುವಾದಿತ ಪ್ರಹಸನ, ಕರ್ನಲ್ ಮೆಕೆಂಜಿ ಸಂಗ್ರಹಿಸಿದ ಕೈಫಿಯತ್ತುಗಳ ಅನುವಾದಗಳು; ಲಿಯೋನಾರ್ಡೊ ಡ ವಿಂಚಿ, ಗೌತಮ ಬುದ್ಧ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕಿರು ಪುಸ್ತಕಗಳು- ಈ ಎಲ್ಲ ಕೃತಿಗಳಲ್ಲಿ ನಿರುಪಮಾ ಅವರ ವಿಶಾಲ ಲೋಕದೃಷ್ಟಿಯನ್ನು ಕಾಣಬಹುದು. `ತಿಂಮನ ಪ್ರೇಮಾಯಣ' ಕೃತಿಯ ಪ್ರಸಂಗಗಳು ನಿರುಪಮಾ ಅವರ ವಿಶಿಷ್ಟ ಹಾಸ್ಯ ಪ್ರಜ್ಞೆಯನ್ನು ಸೂಚಿಸುವಂತಿದೆ.ಐವತ್ತರ ವಯಸ್ಸಿನ ಗಡಿ ದಾಟಿದ ನಂತರ ಶಾಂತಿನಿಕೇತನದ ಕುಲಪತಿಗಳಾಗಿದ್ದ ಡಾ. ರೋಮಾ ಚೌಧರಿಯವರ ಮಾರ್ಗದರ್ಶನದಲ್ಲಿ `ಇಂಡಿಯನ್ ವುಮೆನ್ ಥ್ರೂ ಏಜಸ್' ಎನ್ನುವ ಮಹಾ ಪ್ರಬಂಧವನ್ನು ಬರೆದು, ಕೋಲ್ಕತ್ತಾ ವಿಶ್ವವಿದ್ಯಾಲಯದ ಮೂಲಕ ಡಾಕ್ಟರೇಟ್ ಪಡೆದುದು ನಿರುಪಮಾ ಅವರ ನಿರಂತರ ಕುತೂಹಲ ಮತ್ತು ಕಲಿಕೆಗೆ ಉದಾಹರಣೆಯಂತಿತ್ತು. ಸಂಗೀತ ಕ್ಷೇತ್ರದಲ್ಲೂ ಅವರಿಗೆ ಆಸಕ್ತಿಯಿತ್ತು.ಭಾರತ ಲೇಖಕಿಯರ ಸಂಘ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಸಮ್ಮಾನಗಳು ನಿರುಪಮಾ ಅವರಿಗೆ ಸಂದಿವೆ. ದೆಹಲಿಯ `ಭಾರತೀಯ ಪ್ರಕಾಶಕರ ಒಕ್ಕೂಟ' 1999ರಲ್ಲಿ `ದಕ್ಷಿಣ ಭಾರತದ ಅತ್ಯುತ್ತಮ ಪ್ರಕಾಶಕಿ' ಎಂದು ಗೌರವಿಸಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಬಹುಮಾನ, ಧಾರವಾಡ ಮಕ್ಕಳ ಮನೆ ಪ್ರಶಸ್ತಿ, ಯುನಿಸೆಫ್ ಮಕ್ಕಳ ಸಾಹಿತ್ಯ ಪ್ರಶಸ್ತಿ, ಎನ್.ಎಂ.ಕೆ.ಆರ್.ವಿ. ಕಾಲೇಜಿನ ಶಾಶ್ವತಿಯ `ಸದೋದಿತಾ' ಪ್ರಶಸ್ತಿ, ಮಿಥಿಕ್ ಸೊಸೈಟಿಯ `ವಿದುಷಿ ಪ್ರಶಸ್ತಿ', ಕರ್ನಾಟಕ ಲೇಖಕಿಯರ ಸಂಘದ `ಅನುಪಮಾ ಪಶಸ್ತಿ' ಸೇರಿದಂತೆ ಅನೇಕ ಗೌರವಗಳು ನಿರುಪಮಾ ಅವರ ಬಹುಮುಖ ಪ್ರತಿಭೆಗೆ ಸಂದಿವೆ.ನಿರುಪಮಾ ಅವರ ನಿಧನದೊಂದಿಗೆ (ಜುಲೈ 7, 2013) ಕನ್ನಡ ಸಾಂಸ್ಕೃತಿಕ ಲೋಕದ ಹಿರಿಯ ಜೀವವೊಂದು ತೆರೆಮರೆಗೆ ಸರಿದಂತಾಗಿದೆ. ಆದರೆ ಅವರ ಬದುಕು ಹಾಗೂ ಬರಹ ಹೊಸ ತಲೆಮಾರಿನ ಬರಹಗಾರರಿಗೆ ಸ್ಫೂರ್ತಿಯ ರೂಪದಲ್ಲಿ ಬಹುಕಾಲ ಉಳಿಯುವಂತಹದ್ದು. 

Post Comments (+)