ಗುರುವಾರ , ನವೆಂಬರ್ 21, 2019
22 °C

ಅನುಪಾತ ಆಧರಿಸಿದ ಚುನಾವಣಾ ವ್ಯವಸ್ಥೆ ಜಾರಿಯಾಗಲಿ

Published:
Updated:

ಸ್ವಾತಂತ್ರ್ಯ ಗಳಿಸಿದ ಅರವತ್ತೈದು ವರ್ಷಗಳ ಅವಧಿಯಲ್ಲಿ ನಮ್ಮ ರಾಷ್ಟ್ರದ ರಾಜಕಾರಣದಲ್ಲಿ ಅನೇಕ ಸ್ಥಿತ್ಯಂತರಗಳು ಜರುಗಿವೆ. ಇತ್ತೀಚಿನ ದಶಕಗಳಲ್ಲಿ, ಏಕಪಕ್ಷ ಪ್ರಾಬಲ್ಯದ ರಾಜಕಾರಣ ಕೊನೆಗೊಂಡು, ಬಹುಪಕ್ಷೀಯ ಮೈತ್ರಿ ರಾಜಕಾರಣದ ಪರ್ವ ಶುರುವಾಗಿದೆ. ಒಂದು ರಾಷ್ಟ್ರದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾವಣೆಗಳು ವಹಿಸುವ ಪಾತ್ರ ಅತ್ಯಂತ ಮಹತ್ವಪೂರ್ಣವಾದದ್ದು. ಚುನಾವಣಾ ರಂಗದಲ್ಲೂ ಈ ಆರೂವರೆ ದಶಕಗಳ ಅವಧಿಯಲ್ಲಿ ಅನೇಕ ಬದಲಾವಣೆಗಳು ಸಂಭವಿಸಿವೆ. ಯಾವುದೇ ಬದಲಾವಣೆ ಒಂದು ವ್ಯವಸ್ಥೆಯ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿರಬೇಕು. ಚುನಾವಣಾ ಕ್ಷೇತ್ರದ ಅನೇಕ ಬೆಳವಣಿಗೆಗಳು ಒಂದರ್ಥದಲ್ಲಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿವೆ ಎಂದರೆ ಅತಿಶಯೋಕ್ತಿಯಾಗುವುದಿಲ್ಲ.



ಪ್ರಸ್ತುತ ನಮ್ಮ ರಾಜಕಾರಣದಲ್ಲಿ ಹಣದ ದೌಲತ್ತು, ಜಾತೀಯತೆ, ಧರ್ಮಾಂಧತೆ, ಅತಿ ಪ್ರಾದೇಶಿಕತೆ, ಗುಂಪುಗಾರಿಕೆ, ಸ್ವಜನ ಪಕ್ಷಪಾತ, ಮಹಿಳೆಯರ ಕಡಿಮೆ ಪ್ರಾತಿನಿಧ್ಯ, ಅಪರಾಧೀಕರಣ, ಕೋಮುವಾದ, ಮೌಲ್ಯ,ಸಿದ್ಧಾಂತರಹಿತ ರಾಜಕೀಯ ಇತ್ಯಾದಿ ನಕಾರಾತ್ಮಕ ಅಂಶಗಳು ತಾಂಡವವಾಡುತ್ತಿವೆ. ಇವೆಲ್ಲವೂ ಚುನಾವಣಾ ರಂಗದಲ್ಲೂ ಪ್ರತಿಫಲನಗೊಳ್ಳುತ್ತಿವೆ. ಎಲ್ಲ ರಂಗಗಳಲ್ಲೂ ಸುಧಾರಣೆಗಳನ್ನು ಬಯಸುವ ಮತ್ತು ಆಗ್ರಹಿಸುವ ರಾಜಕಾರಣಿಗಳು ಹೆಚ್ಚಿನ ಸಂದರ್ಭಗಳಲ್ಲಿ ಸ್ವಕ್ಷೇತ್ರದ ಬಗೆಗೆ ಜಾಣ ಮೌನ ವಹಿಸುತ್ತಾರೆ.



ಚುನಾವಣಾ ಕ್ಷೇತ್ರದ ಸುಧಾರಣೆಗಳ ಬಗೆಗೆ ವಿ.ಎಂ. ತಾರ್ಕುಂಡೆ ಸಮಿತಿ (1974-75), ದಿನೇಶ್ ಗೋಸ್ವಾಮಿ ಸಮಿತಿ (1990), ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್ ಸಮಿತಿ (1994), ಇಂದ್ರಜಿತ್ ಗುಪ್ತ ಸಮಿತಿ (1998), ಕಾನೂನು ಆಯೋಗದ ಸಮಿತಿ (1998), ನ್ಯಾಯಮೂರ್ತಿ ಕುಲ್‌ದೀಪ್‌ಸಿಂಗ್ ಸಮಿತಿ (2002) ಇತ್ಯಾದಿ ಸಮಿತಿಗಳು ವರದಿಗಳನ್ನು ನೀಡಿವೆ; ಅನೇಕ ಶಿಫಾರಸ್ಸುಗಳನ್ನು ಮಾಡಿವೆ. ಆದರೆ ದುರಂತದ ಸಂಗತಿಯೆಂದರೆ, ಈ ಸಮಿತಿಗಳ ವರದಿಗಳು ದೂಳು ತಿನ್ನುತ್ತಿವೆ!



ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಅನುಸರಿಸುತ್ತ ಬಂದಿರುವುದು ಚುನಾವಣೆಯಲ್ಲಿ ಅತಿಹೆಚ್ಚು ಮತ ಪಡೆದವನಿಗೆ ಸ್ಥಾನ ನೀಡುವ ಪದ್ಧತಿ ಇದನ್ನುFirst Past the Post(ಎಫ್‌ಪಿಟಿಪಿ) ಎಂದು ಕರೆಯಲಾಗುತ್ತದೆ. ಅಂದರೆ, ಚುನಾವಣೆಯಲ್ಲಿ ವಿಜಯಶಾಲಿಯಾದ ಅಭ್ಯರ್ಥಿಗೆ ಸಂಖ್ಯಾತ್ಮಕವಾಗಿ ಹೆಚ್ಚು ಮತಗಳು ಬಂದಿರುತ್ತವೆ. ಆದರೆ ಅವರಿಗೆ ಒಟ್ಟು ಮತದಾರರ ಬಹುಮತ ದೊರಕದಿರಲೂಬಹುದು. ಪರಾಭವಗೊಂಡ ಅಭ್ಯರ್ಥಿಗಳು ಗಳಿಸಿದ ಮತಗಳು ಗೆದ್ದ ಅಭ್ಯರ್ಥಿಗಿಂತಲೂ ಜಾಸ್ತಿಯೇ ಇರಬಹುದು. ಅನೇಕ ಚುನಾವಣಾ ಕ್ಷೇತ್ರಗಳಲ್ಲಿ ಈ ಪರಿಸ್ಥಿತಿಯಿರುವುದು ನಿಜ. ಇದು ಈ ಪದ್ಧತಿಯ ಒಂದು ದೊಡ್ಡ ಮತ್ತು ಗಮನಾರ್ಹ ನ್ಯೂನತೆಯೇ ಸರಿ. ಈ ಪದ್ಧತಿ, ಬ್ರಿಟನ್‌ನ ಮಾದರಿಯಿಂದ ಎರವಲು ಪಡೆದದ್ದು ಸಂವಿಧಾನ ಪೂರ್ವದ ಸಮಯದಲ್ಲಿ. ಸಂವಿಧಾನ ಸಭೆ ( ಕಾನ್‌ಸ್ಟಿಟ್ಯುಯೆಂಟ್ ಅಸೆಂಬ್ಲಿ) ಯಲ್ಲಿ ಜರುಗಿದ ಕಾರ್ಯಕಲಾಪಗಳಲ್ಲಿ ಎಫ್‌ಪಿಟಿಪಿ ಮತ್ತು ಅನುಪಾತ ಆಧಾರಿತ ಚುನಾವಣಾ ವ್ಯವಸ್ಥೆ (ಪ್ರಪೋರ್ಷನಲ್ ರೆಪ್ರೆಸೆಂಟೇಷನ್- ಪಿಆರ್) ಕುರಿತು ವ್ಯಾಪಕ ಚರ್ಚೆ, ವಾದವಿವಾದಗಳು ಜರುಗಿದವು. ಆದರೆ ಆಗ ನಮ್ಮ ರಾಷ್ಟ್ರದಲ್ಲಿ ಸಾಕ್ಷರತೆಯ ಪ್ರಮಾಣ ತುಂಬ ಕಡಿಮೆಯಿದ್ದುದರಿಂದ (ಸುಮಾರು ಶೇ 15), ಜನರು ಎಫ್‌ಪಿಟಿಪಿ ಪದ್ಧತಿಯನ್ನು ಸುಲಭವಾಗಿ ಗ್ರಹಿಸುತ್ತಾರೆ ಎಂಬ ನಿಲುವಿಗೆ ಪುಷ್ಟಿ ದೊರೆತು, ಈ ಪದ್ಧತಿ ಜಾರಿಯಾಯಿತು.



ಪ್ರಸ್ತುತ ಭಾರತದಲ್ಲಿ ಶಾಸನಸಭೆ ಮತ್ತು ಲೋಕಸಭೆಗಳಿಗೆ ಈ ಎಫ್‌ಪಿಟಿಪಿ ಮಾದರಿಯಲ್ಲೇ ಚುನಾವಣೆಗಳು ಜರಗುತ್ತಿವೆ. ನಮ್ಮಲ್ಲಿ ಪ್ರಜಾಪ್ರಭುತ್ವ ಭದ್ರವಾಗಿ ನೆಲೆಯೂರುವುದರಲ್ಲಿ ಈ ಮಾದರಿ ವಹಿಸಿದ ಐತಿಹಾಸಿಕ ಪಾತ್ರವನ್ನು ತಳ್ಳಿಹಾಕುವಂತಿಲ್ಲ. ಆದರೆ ವರ್ಷಗಳು ಉರುಳಿದಂತೆ, ಈ ಪದ್ಧತಿಯಲ್ಲಿ ಅನೇಕ ಬಗೆಯ ವಿರೋಧಾಭಾಸಗಳು ನುಸುಳಿವೆ. ಇವು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿಧ್ವಂಸಕಾತ್ಮಕವಾಗಿ ಕಾಡುತ್ತಿವೆ. ಕಡಿಮೆ ಮತಗಳನ್ನು ಪಡೆದರೂ, ಅತಿಹೆಚ್ಚು ಸ್ಥಾನಗಳನ್ನು ಗಳಿಸಿದ್ದಕ್ಕಾಗಿ, ಪಕ್ಷಗಳು ಅಧಿಕಾರದ ಗದ್ದುಗೆಯನ್ನೇರಿದ ನಿದರ್ಶನಗಳಿವೆ. ಈ ಪ್ರಕ್ರಿಯೆ ಕೇಂದ್ರದಲ್ಲಿ ಹಾಗೂ ರಾಜ್ಯಗಳಲ್ಲೂ ಜರುಗಿವೆ. ಅಂದರೆ, ಈ ಮಾದರಿಯಲ್ಲಿ, ಜನಾದೇಶದ ವಿರುದ್ಧ ಅಲ್ಪಸಂಖ್ಯಾತ ಸರ್ಕಾರ ಅಸ್ತಿತ್ವಕ್ಕೆ ಬಂದು ಅಧಿಕಾರವನ್ನು ಚಲಾಯಿಸುತ್ತದೆ. ಹೀಗಾಗಿ, ಬಹುಸಂಖ್ಯಾತ ಜನರ ಪ್ರಾತಿನಿಧ್ಯಕ್ಕೆ ಪ್ರಾಶಸ್ತ್ಯ ಸಿಗುತ್ತಿಲ್ಲ. ಇದರಡಿ, ದುಡಿಯುವ ವರ್ಗ, ಮಹಿಳೆಯರು, ದಲಿತರು,  ಆದಿವಾಸಿಗಳು, ಧಾರ್ಮಿಕ, ಜನಾಂಗೀಯ ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ ಯಥಾರ್ಥ ಪ್ರಾತಿನಿಧ್ಯವೂ ದೊರಕುತ್ತಿಲ್ಲ; ಅಧಿಕಾರದಲ್ಲಿ ಸೂಕ್ತ ಪಾಲು ಸಿಗುತ್ತಿಲ್ಲ.



ಈಗ ಭಾರತದಲ್ಲಿ ಸಾಕ್ಷರತೆಯ ಪ್ರಮಾಣ ಸುಮಾರು ಶೇ 65ರಷ್ಟಿದೆ. ಆದುದರಿಂದ, ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವುದಕ್ಕೆ ಇದು ಸಕಾಲ. ಎಫ್‌ಪಿಟಿಪಿ ಮತ್ತು ಅನುಪಾತ ಆಧಾರಿತ ಪ್ರತಿನಿಧಿತ್ವದ (ಪಿಆರ್) ಸಂಯೋಜಿತ ಪದ್ಧತಿಯನ್ನು ಜಾರಿ ಮಾಡಿದರೆ, ಅದು ಆರೋಗ್ಯಕರವಾದ ಪ್ರಜಾಪ್ರಭುತ್ವದ ಪರಂಪರೆಗೆ ನಾಂದಿ ಹಾಡಬಹುದೆಂದು ಕೆಲವು ಚುನಾವಣಾ ಸುಧಾರಣಾವಾದಿಗಳ ನಿಲುವು. ಈ ಪಿಆರ್ ಪದ್ಧತಿಯಲ್ಲಿ ಸುಮಾರು 20 ಭಿನ್ನ ಮಾದರಿಗಳಿವೆ. ಚಲಾವಣೆಯಾದ ಮತಗಳ ಶೇಕಡಾವಾರು ಆಧಾರದ ಮೇಲೆ ಒಂದು ಪಕ್ಷಕ್ಕೆ ಸ್ಥಾನಗಳು ಲಭಿಸುವುದು ಈ ಪದ್ಧತಿಯ ವೈಶಿಷ್ಟ್ಯ. ಇದರಿಂದಾಗಿ, ಪಡೆದ ಮತಗಳು ಮತ್ತು ಶೇಕಡಾವಾರು ಗಳಿಸಿದ ಸ್ಥಾನಗಳ ನಡುವೆ ವ್ಯತ್ಯಾಸವಿರುವುದಿಲ್ಲ.



ಹಾಗಾಗಿ, ಅತಿಹೆಚ್ಚು ಮತದಾರರು ಬೆಂಬಲಿಸುವ ಪಕ್ಷಗಳು ಮಾತ್ರ ಅಧಿಕಾರದ ಚುಕ್ಕಾಣಿ ಹಿಡಿಯುತ್ತವೆ. ಇದರಡಿ ಶೇ 50ಕ್ಕಿಂತ ಹೆಚ್ಚಿಗೆ ಮತದಾರರ ಬೆಂಬಲವೇ ಬಹುಮತವಾಗುತ್ತದೆ. ಉಳಿದ ಮತಗಳು ಇತರ ಅಭ್ಯರ್ಥಿಗಳಿಗೆ ದೊರಕಿ, ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಎಲ್ಲ ಮತದಾರರಿಗೂ ಪ್ರಾತಿನಿಧ್ಯ ಸಿಗುವ ಅವಕಾಶದ ಸೃಷ್ಟಿ ಈ ಪದ್ಧತಿಯ ಹೈಲೈಟ್.



ಈ ಪಿಆರ್ ಪದ್ಧತಿಯಲ್ಲಿ ರಾಜಕೀಯ ಪಕ್ಷಗಳು ಆಂತರಿಕ ಪ್ರಜಾಪ್ರಭುತ್ವವನ್ನು ಪಾಲಿಸಲೇಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ. ಅವು ಚುನಾವಣೆಯ ಮುನ್ನವೇ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ, ಅದನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುತ್ತವೆ. ನಂತರ, ಚುನಾವಣಾ ಆಯೋಗ ಅಭ್ಯರ್ಥಿಗಳು ಅನುಪಾತದ ಆಧಾರದಲ್ಲಿ ಪಡೆದಿರುವ ಮತಗಳ ಸಂಖ್ಯೆಯನ್ನು ಪರಿಗಣಿಸಿ, ವಿಜಯಶಾಲಿಗಳನ್ನು ಘೋಷಿಸುತ್ತದೆ. ಮೇಲೆ ಪ್ರಸ್ತಾಪಿಸಿರುವ ಪಟ್ಟಿಯಲ್ಲಿ, ರಾಜಕೀಯ ಪಕ್ಷಗಳು ಸ್ಪರ್ಧಿಯ ಹೆಸರು ಹಾಗೂ ಆತ/ಆಕೆ ಸ್ಪರ್ಧಿಸುವ ಚುನಾವಣಾ ಕ್ಷೇತ್ರದ ಮಾಹಿತಿಯನ್ನು ನೀಡುತ್ತವೆ. ಹೀಗಾಗಿ, ಆಯಾಯ ಕ್ಷೇತ್ರದ ಮತದಾರರು ತಾವು ಬಯಸಿದ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸುವ ಅವಕಾಶವಿರುತ್ತದೆ. ಅಲ್ಲದೆ ಒಂದು ರಾಜಕೀಯ ಪಕ್ಷ ತನ್ನ ಅಭ್ಯರ್ಥಿಗಳನ್ನು ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅವಕಾಶವನ್ನು ಕಲ್ಪಿಸಿ ತನ್ನ ಶೇಕಡಾವಾರು ಮತಗಳನ್ನು ವೃದ್ಧಿಸಿಕೊಳ್ಳಬಹುದು. ಈ ಪದ್ಧತಿಯಲ್ಲಿ, ಪಕ್ಷವು ತನ್ನ ಸಿದ್ಧಾಂತವನ್ನು ಮತ್ತು ಅಭ್ಯರ್ಥಿಯ ಜನಾನುರಾಗವನ್ನು ಮತದಾರರಿಗೆ ಸೂಕ್ತವಾಗಿ ತಿಳಿಸಬಹುದು.



ಈಗಾಗಲೇ, ಈ ಪದ್ಧತಿ ವಿಶ್ವದ 89 ಪ್ರಜಾಪ್ರಭುತ್ವವಾದಿ ದೇಶಗಳಲ್ಲಿ ಜಾರಿಯಲ್ಲಿದೆ. ಇಂತಹ ಅನೇಕ ದೇಶಗಳಲ್ಲಿ ಎಲ್ಲ ಚುನಾವಣೆಯ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಈ ಕಾರಣದಿಂದ, ಭ್ರಷ್ಟಾಚಾರ, ಹಿಂಸೆ, ಅಪರಾಧೀಕರಣ, ಹಣ ಮತ್ತು ತೋಳ್ಬಲ, ಜಾತಿವಾದ ಮತ್ತು ಕೋಮುವಾದ ಕಡಿಮೆಯಾಗುತ್ತದೆ. ಯಾವ ಕ್ಷೇತ್ರದಲ್ಲಿ, ಪ್ರದೇಶದಲ್ಲಿ ಸಣ್ಣ ಸಣ್ಣ ಸಮುದಾಯಗಳು ಅತಿ ಹೆಚ್ಚು ಮತಗಳನ್ನು ಪಡೆದು ಗೆಲ್ಲಲು ಅವಕಾಶವಿರುವುದಿಲ್ಲವೋ, ಅಲ್ಲಿ ಅವುಗಳಿಗೆ ಸಮ್ಮಿಶ್ರ ಪ್ರತಿನಿಧಿತ್ವ ಪಡೆಯುವ ಅವಕಾಶವಿರುತ್ತದೆ. ಹಾಗೆಯೇ, ಚಿಕ್ಕ ಪಕ್ಷಗಳು ಪ್ರತಿನಿಧಿತ್ವ ಇರದ ಸಮುದಾಯಗಳಲ್ಲಿ ಹೊಂದಾಣಿಕೆ ಮಾಡಿಕೊಂಡು ಶೇಕಡಾವಾರು ಹೆಚ್ಚಿನ ಮತಗಳನ್ನು ಗಳಿಸಿ ಅಧಿಕಾರಕ್ಕೆ ಬರಬಹುದು.



ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಹಾಗೂ ಇಲ್ಲಿರುವ ಬಹುಸಂಸ್ಕೃತಿಯ, ಬಹುಸಮುದಾಯಗಳ, ಬಹುಜನಾಂಗೀಯ ಮತ್ತು ಬಹುಭಾಷೀಯ ಸಮ್ಮಿಶ್ರ ರಾಜಕೀಯಕ್ಕೆ ಅನುಪಾತ ಆಧಾರಿತ ಚುನಾವಣಾ ಪದ್ಧತಿ ಹೆಚ್ಚು ಸಮರ್ಪಕ ಮತ್ತು ಅನುಕೂಲಕರ. ಅನೇಕ ವರ್ಷಗಳಿಂದ ಎಡಪಕ್ಷಗಳು ಈ ಪದ್ಧತಿ ಜಾರಿಯಾಗಬೇಕೆಂದು ಸಾರುತ್ತ ಬಂದಿವೆ. ಇತ್ತೀಚಿನ ದಿನಗಳಲ್ಲಿ ಇನ್ನು ಕೆಲವು ಸಣ್ಣ ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ಆಸ್ಥೆ ವಹಿಸುತ್ತಿವೆ. ಚುನಾವಣಾ ಆಯೋಗವೂ ಈ ಪದ್ಧತಿಯ ಅನುಷ್ಠಾನಕ್ಕಾಗಿ ಹೋರಾಡುತ್ತಿರುವ ಸಂಘ-ಸಂಸ್ಥೆಗಳು ಮತ್ತು ಸಂಘಟನೆಗಳ ಜೊತೆ ಸಮಾಲೋಚನೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ, ಈ ಬೆಳವಣಿಗೆಗಳು ಆಶಾದಾಯಕ. ಇವೆಲ್ಲದರ ಫಲವಾಗಿ, ಒಂದು ಸೂಕ್ತ ಅನುಪಾತ ಆಧಾರಿತ ಚುನಾವಣಾ ವ್ಯವಸ್ಥೆ ಜಾರಿಯಾದರೆ, ನಮ್ಮಲ್ಲಿರುವ ಪ್ರಜಾಪ್ರಭುತ್ವನಿಜವಾದ ಅರ್ಥದಲ್ಲಿ ಗಟ್ಟಿಗೊಳ್ಳಬಹುದು.

ಪ್ರತಿಕ್ರಿಯಿಸಿ (+)