ಅನುಭವಗಳ ಮೂಟೆಯಿಂದ...

7

ಅನುಭವಗಳ ಮೂಟೆಯಿಂದ...

Published:
Updated:

ವೃತ್ತಿ ಬದುಕಿನಲ್ಲಿ ಕಣ್ಣಾರೆ ಕಂಡ ಘಟನೆ, ಅನುಭವಗಳನ್ನು ಹಾಳೆ ಮೇಲೆ ದಾಖಲಿಸಿ ಅದಕ್ಕೆ ಚಿತ್ರಕಥೆ ರೂಪ ನೀಡಿದ್ದಾರೆ ನಿವೃತ್ತ ಕೆಎಎಸ್ ಅಧಿಕಾರಿ ಈ. ಚೆನ್ನಗಂಗಪ್ಪ. ಸರ್ಕಾರದ ಯೋಜನೆಗಳು, ವ್ಯಕ್ತಿಯೊಬ್ಬರ ಸಾಮಾಜಿಕ ಕೈಂಕರ್ಯ ಮತ್ತು ಆದರ್ಶಮಯ ಬದುಕು, ಮಲೆನಾಡ ಕುಗ್ರಾಮವೊಂದರ ಗಿರಿಜನರ ದಾರುಣ ಜೀವನದ ಚಿತ್ರಣ, ಅದರ ಬೆನ್ನಲ್ಲಿ ಹುಟ್ಟಿಕೊಳ್ಳುವ ನಕ್ಸಲ್ ಚಳವಳಿ ಹೀಗೆ ಹಲವು ಸಂಗತಿಗಳ ಸಂಗಮ ಅವರ ನಿರ್ದೇಶನದ `ಅಪ್ನಾದೇಶ್' ಚಿತ್ರ.`ಕರಿಮಲೆಯ ಕಗ್ಗತ್ತಲು', `ಸೌಂದರ್ಯ', `ಚಿಕ್ಕಮಗಳೂರ ಚಿಕ್ಕಮಲ್ಲಿಗೆ' ಚಿತ್ರಗಳನ್ನು ನಿರ್ದೇಶಿಸಿದ್ದ ಚೆನ್ನಗಂಗಪ್ಪ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಶೀರ್ಷಿಕೆ ಹಿಂದಿ ಚಿತ್ರ ಎಂಬ ಕಲ್ಪನೆ ಮೂಡಿಸಿದರೂ ಇದು ಅಪ್ಪಟ ಕನ್ನಡ ನಾಡಿನ ಚಿತ್ರ. ಹಲವು ವರ್ಷಗಳ ಹಿಂದೆ ಐಎಎಸ್ ಅಧಿಕಾರಿಯೊಬ್ಬರು ಕೆಲವು ಜಿಲ್ಲೆಗಳಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ಜನರ ಪಾಲ್ಗೊಳ್ಳುವಿಕೆ ಮೂಲಕವೇ ಜಾರಿಗೆ ತರುವಂತೆ ರೂಪಿಸಿದ್ದ ಯೋಜನೆ ಹೆಸರು `ಅಪ್ನಾದೇಶ್'. ಈ ಕಾರ್ಯಕ್ರಮವೇ ಚಿತ್ರದ ಮೂಲ ಸ್ಫೂರ್ತಿಯಾಗಿರುವುದರಿಂದ ಅದೇ ಹೆಸರನ್ನು ಬಳಸಿಕೊಳ್ಳಲಾಗಿದೆ ಎಂಬ ವಿವರಣೆ ಚೆನ್ನಗಂಗಪ್ಪ ಅವರದು.ಇತ್ತೀಚೆಗೆ ಗೋವಾದಲ್ಲಿ ನಡೆದ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಅಂಜಲಿ ಪಾಟೀಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗಿರಿಜನ ಜನಾಂಗದಲ್ಲಿ ಹುಟ್ಟಿ ವಿದ್ಯಾವಂತೆಯಾಗುವ ಆಕೆ ನಕ್ಸಲಿಸಂ ಅನ್ನು ವಿರೋಧಿಸಿ ಅವರ ಕೆಂಗಣ್ಣಿಗೆ ಗುರಿಯಾಗುತ್ತಾಳೆ. ಆಕೆ ವಿದ್ಯಾವಂತೆಯಾಗಿರುವುದರಿಂದ ನಕ್ಸಲಿಸಂ ಅನ್ನು ಬೆಂಬಲಿಸುತ್ತಿದ್ದಾಳೆ ಎಂದು ಪೊಲೀಸರೂ ಹಿಂಸಿಸುತ್ತಾರೆ.ಇಂಥ ಸೂಕ್ಷ್ಮ ಕಥನವುಳ್ಳ ಇದು ನಾಯಕಿ ಪ್ರಧಾನ ಚಿತ್ರ. ಕನ್ನಡದ ಪ್ರತಿಭಾವಂತ ನಟಿಯರನ್ನೇ ಬಳಸಿಕೊಳ್ಳುವ ಉದ್ದೇಶವಿತ್ತು. ಆದರೆ ನಾಯಕಿ ಪ್ರಧಾನ ಚಿತ್ರವೆಂದ ಕೂಡಲೇ ಎಲ್ಲರೂ ಹಿಂದೇಟು ಹಾಕಿದರು. ಕಥೆ ಮೆಚ್ಚಿದ ಅಂಜಲಿ ಪಾಟೀಲ್ ಮರುಮಾತಾಡದೆ ಒಪ್ಪಿಕೊಂಡರಂತೆ. ಪುಟ್ಟದೊಂದು ಪ್ರೇಮಕಥೆ ಇದರೊಳಗೆ ಬೆರೆತಿದೆ. ಅಂಜಲಿಗೆ ಜೋಡಿಯಾಗಿ ರಘು ಮುಖರ್ಜಿ ನಟಿಸುತ್ತಿದ್ದಾರೆ.

ಚೆನ್ನಗಂಗಪ್ಪ ನೈಜ ಬದುಕಿನಲ್ಲಿ ತಮಗೆ ಪ್ರೇರಣೆ ನೀಡಿದ ನೀಲಕಂಠಶಾಸ್ತ್ರಿ ಎಂಬ ವ್ಯಕ್ತಿಯನ್ನು ಇಲ್ಲಿ ಪಾತ್ರವಾಗಿಸಿದ್ದಾರೆ. ಗಿರೀಶ ಕಾರ್ನಾಡ್ ಆ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಯಾಗಿದ್ದ ಅಂಜಲಿ ಪಾಟೀಲ್ ಕಾಲೇಜು ದಿನಗಳಲ್ಲಿ ಗಿರೀಶ ಕಾರ್ನಾಡರ ನಾಟಕಗಳನ್ನು ಓದಿ ಪ್ರಭಾವಿತರಾದವರು. ಅವರ ಜೊತೆ ನಟಿಸುವ ಅವಕಾಶ ಸಿಕ್ಕಿದ್ದು ಭಾಗ್ಯ ಎಂಬ ಸಂಭ್ರಮ ಹಂಚಿಕೊಂಡರು.ಈಗಾಗಲೇ ಕುದುರೆಮುಖದಲ್ಲಿ ಸುಮಾರು 12 ದಿನಗಳ ಚಿತ್ರೀಕರಣ ನಡೆಸಲಾಗಿದೆ. ಮೂರು ಹಂತಗಳಲ್ಲಿ ಬೆಳ್ತಂಗಡಿ, ಶಿರಾಡಿ ಘಾಟ್ ಮುಂತಾದೆಡೆ ಅರಣ್ಯ ಪ್ರದೇಶಗಳಲ್ಲಿ ಉಳಿದ ಚಿತ್ರೀಕರಣ ನಡೆಯಲಿದೆ.ಕ್ಯಾಜಿಟನ್ ಡಾಯಸ್ ಎಂಬ ಮಂಗಳೂರು ಮೂಲದ ಸಂಗೀತ ನಿರ್ದೇಶಕ ಈ ಚಿತ್ರದ ಮೂಲಕ ಪರಿಚಯವಾಗುತ್ತಿದ್ದಾರೆ. ಹಂಸಲೇಖ ಅವರ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದ ಶ್ರೀಹರಿ ಧೂಪದ ಮೊದಲ ಬಾರಿಗೆ ಸ್ವತಂತ್ರ ಸಾಹಿತ್ಯ ರಚನೆಗೆ ಇಳಿದಿದ್ದಾರೆ. ಛಾಯಾಗ್ರಾಹಕ ಎ.ಸಿ. ಮಹೇಂದರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry