ಅನುಭವದ ಕೃಷಿ ಕಲಿಕೆ

7

ಅನುಭವದ ಕೃಷಿ ಕಲಿಕೆ

Published:
Updated:
ಅನುಭವದ ಕೃಷಿ ಕಲಿಕೆ

ಇಲ್ಲಿ ಕೃಷಿಯಷ್ಟೇ ಮೈದಾಳಿಲ್ಲ. ಕೂಲಿ ಕಾರ್ಮಿಕ ಮಾಲೀಕನಾದ ಸಾಹಸವಿದೆ. ಬರದ ನಾಡು ಎಂದೇ ಹಣೆಪಟ್ಟಿ ಹೊತ್ತಿರುವ ವಿಜಯಪುರ ಜಿಲ್ಲೆಯ ಉತ್ನಾಳ ಗ್ರಾಮದ ರೈತ ನಿಂಗಪ್ಪ ನಂದಬಸಪ್ಪ ಬಾಗೇವಾಡಿ ಅವರ ಕೃಷಿ ‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು’ ಎಂಬುದನ್ನು ಸಾಬೀತುಪಡಿಸಿದೆ.ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆಯಾಶ್ರಿತ ನೂರು ಎಕರೆ ಭೂಮಿ ಹೊಂದಿದವರು ‘ಸಾಲಗಾರ ಕೃಷಿಕ’ ಎಂಬ ಮಾತು ಜನಜನಿತ. ಇದರಿಂದ ಕೃಷಿಯಲ್ಲಿ ನಿರಾಸಕ್ತಿ ಹೊಂದಿದವರ ಸಂಖ್ಯೆಯೂ ಹೆಚ್ಚು. ಇವರಿಗೆಲ್ಲ ಸೆಡ್ಡು ಹೊಡೆದಂತೆ ನಿಂಗಪ್ಪ ತಮ್ಮ 2.10 ಎಕರೆ ಭೂಮಿಯಲ್ಲಿ ಯಶಸ್ವಿ ಕೃಷಿ ನಡೆಸಿದ್ದಾರೆ. ಜತೆಗೆ ಪ್ರಯೋಗ ಕೈಗೊಂಡು ಯಶಸ್ವಿಯೂ ಆಗಿದ್ದಾರೆ. ತಮ್ಮ ಒಂದು ಎಕರೆ ಭೂಮಿಯಲ್ಲಿ ಜವಾರಿ 350 ಬಾಳೆ ನಾಟಿ ಮಾಡಿದ್ದಾರೆ. ನಡುವಿನ ಜಾಗದಲ್ಲಿ ಏನಾದರೂ ಬೆಳೆ ಬೆಳೆಯಬೇಕು ಎಂಬ ಆಲೋಚನೆ ಮೊಳೆತಿದ್ದೇ ತಡ, ನೇರವಾಗಿ ಬ್ಯಾಡಗಿ ಬಸ್ ಹಿಡಿದು ಅಲ್ಲಿಗೆ ಹೋಗಿ ಸ್ಥಳೀಯ ರೈತರಿಂದ ಮೆಣಸಿನಕಾಯಿ ಖರೀದಿಸಿದರು.ಮೆಣಸಿನಕಾಯಿಯಿಂದ ಬೀಜ ಬೇರ್ಪಡಿಸಿ ಭೂಮಿಗೆ ಬಿತ್ತಿ ಸಸಿ ಬೆಳೆದರು. ಈ ಸಸಿಗಳನ್ನು ಬಾಳೆಯೊಳಗೆ ನಾಟಿ ಮಾಡಿ ಹನಿ ನೀರಾವರಿ ಮೂಲಕ ಬಂಪರ್ ಫಸಲು ಬೆಳೆದಿದ್ದಾರೆ. ಒಂದೊಂದು ಗಿಡವೂ ಬರೋಬ್ಬರಿ ಐದು ಅಡಿ ಎತ್ತರ ದಾಟಿದೆ. ಬ್ಯಾಡಗಿ ಮೆಣಸಿನಕಾಯಿಯ ಭಾರಕ್ಕೆ ಧರೆಗುರುಳಿದೆ. ಪ್ರತಿ ಗಿಡವೂ ಹೂವು, ಹೀಚು, ಕಾಯಿ, ಹಣ್ಣುಗಳ ಸಂಗಮ. ಈ ಮಿಶ್ರ ಬೆಳೆ ಇದೀಗ ಕಿಸೆಗೆ ಲಕ್ಷ ಲಕ್ಷ ಹಣ ತಂದುಕೊಟ್ಟಿದೆ.ಇದು ಒಂದು ಎಕರೆ ಭೂಮಿಯ ಕೃಷಿ ಕಥನವಾದರೆ, ಉಳಿದ 1.10 ಎಕರೆ ಭೂಮಿಯಲ್ಲಿ ತರಹೇವಾರಿ ಫಸಲು ಬೆಳೆದಿದ್ದಾರೆ. 600 ಗುಲಾಬಿ ಗಿಡ ಬೆಳೆದಿದ್ದು, ಕಸಿ ಮಾಡುವ ಆಲೋಚನೆ ಇವರದ್ದು. ಇದೇ ಜಾಗದೊಳಗೆ ಈರುಳ್ಳಿ ಬೀಜ, ಸೌತೆ, ಟೊಮೆಟೊ ಫಸಲು ತೆಗೆದಿದ್ದಾರೆ ನಿಂಗಪ್ಪ ಬಾಗೇವಾಡಿ. ಇದರ ಜತೆಗೆ ಖಾಲಿ ಜಾಗದಲ್ಲಿ ಸದಾ ಸೊಪ್ಪಿನ ಮಡಿ ಸಿದ್ಧ.

ಕೂಲಿ ಮಾಲೀಕನಾದ...

ಬದುಕಿನ ಬವಣೆ ವಿಧಿಯಿಲ್ಲದೆ ಕೂಲಿಗೆ ದೂಡಿತು. ಬೇರೆಯವರ ಹೊಲದಲ್ಲಿ ಪತ್ನಿ ಜತೆ ತಿಂಗಳಿಗೆ ₨ 3.5 ಸಾವಿರಕ್ಕೆ ದುಡಿದರು. ಎಷ್ಟೇ ಬೆವರು ಬಸಿದರೂ ಸಿಗುತ್ತಿದ್ದುದು ಅಲ್ಪ ಕೂಲಿ ಮಾತ್ರ. ಅಣ್ಣ–ತಮ್ಮಂದಿರು ಭಾಗವಾದಾಗ ಪಾಲಿಗೆ ಬಂದ ಎರಡೂಕಾಲು ಎಕರೆಯೇ ಇವರಿಗೆ ಆಸರೆಯಾಯಿತು. ಮಕ್ಕಳ ಶೈಕ್ಷಣಿಕ ವೆಚ್ಚಕ್ಕೂ ಕೂಲಿ ಸಾಲುತ್ತಿರಲಿಲ್ಲ. ಆಗಲೇ ಇವರು ದೃಢ ನಿರ್ಧಾರ ತೆಗೆದುಕೊಂಡರು.ಕೂಲಿಯಲ್ಲೇ ಮಾಲೀಕನಾಗುವ ಆಸೆ ಚಿಗುರೊಡೆದದ್ದು ಅದೇ ಗಳಿಗೆ. ಇದಕ್ಕೆ ಸಾಥ್‌ ನೀಡಿದರು ಅವರ ಪತ್ನಿ. ಅಲ್ಲಿಂದ ಆರಂಭವಾಯಿತು ಹಣ ಉಳಿಸುವ ಕಾಯಕ. ಅದು ಆರು ವರ್ಷಗಳಲ್ಲಿ ಫಲ ನೀಡಿದ್ದು ಜಮೀನಿನಲ್ಲಿ ಕೊಳವೆಬಾವಿ ಕೊರೆಸುವ ಮೂಲಕ, ಅದರಲ್ಲಿ ಚೆನ್ನಾಗಿ ನೀರು ಬಂದಾಗ ಸಾರ್ಥಕ್ಯ ಕಂಡರು. ‘ಭವಿಷ್ಯದ ಆಲೋಚನೆಯಿಂದ ಕೂಲಿ ಮಾಡುತ್ತಲೇ ಒಂದೊಂದು ಕೆಲಸ ಆರಂಭಿಸಿದೆ. ಮೂರು ವರ್ಷ ಎರಡೂ ಕಡೆ ದುಡಿದೆ. ಹಗಲೆಲ್ಲ ಮಾಲೀಕರ ಹೊಲದಲ್ಲಿ ದುಡಿದರೆ, ರಾತ್ರಿ ನಮ್ಮ ಹೊಲದಲ್ಲಿ ದುಡಿದೆ. ಸೂರ್ಯಕಾಂತಿ, ತೊಗರಿ, ಶೇಂಗಾ ಕೈಹಿಡಿದವು. ಲಕ್ಷಕ್ಕೂ ಅಧಿಕ ವರಮಾನ ನೀಡಿದವು’ ಎಂದು ಸ್ಮರಿಸಿಕೊಳ್ಳುತ್ತಾರೆ.‘ಬದುಕಿದರೆ ನಮ್ಮ ಭೂಮಿಯಲ್ಲೇ ಬದುಕಬೇಕು ಎಂದು ನಿಶ್ಚಯಿಸಿ ಊರಿಗೆ ಮರಳಿ ಜಮೀನಿನಲ್ಲೇ ಗುಡಿಸಲು ಕಟ್ಟಿಕೊಂಡು ಜೀವನ ಆರಂಭಿಸಿದೆವು.  ಮಕ್ಕಳ ಮದುವೆ, ವಿದ್ಯಾಭ್ಯಾಸಕ್ಕಾಗಿ ಹಣ ಹೊಂದಿಸಲು ಶಕ್ಯನಾದೆ. ದುರದೃಷ್ಟವಶಾತ್‌ ಮಗಳಿಗೆ ಬ್ರೈನ್‌ ಟ್ಯೂಮರ್‌ ಆಯಿತು. ಆದರೆ ಭೂತಾಯಿಯ ಕೃಪೆಯಿಂದ ಆಕೆಯ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸಲೂ ಸಾಧ್ಯವಾಯಿತು’ ಎಂದು ನೆನಪಿಸಿಕೊಳ್ಳುತ್ತಾರೆ ಅವರು.ಎರಡು ಎಕರೆ ಭೂಮಿಯಲ್ಲಿ ಪ್ರತಿ ವರ್ಷ ₨ 4 ಲಕ್ಷರಷ್ಟು ಆದಾಯ ಪಡೆಯುತ್ತಾರೆ. ಖರ್ಚಿಗೆ ₨ 1 ಲಕ್ಷ ವೆಚ್ಚವಾದರೂ ₨ 3 ಲಕ್ಷ ಲಾಭ ಕಟ್ಟಿಟ್ಟ ಬುತ್ತಿ.  ಎರೆಹುಳು ಗೊಬ್ಬರ, ಕೊಟ್ಟಿಗೆ ಗೊಬ್ಬರ, ಹಿಂಡಿ ಬಳಕೆಯೇ ಹೆಚ್ಚು.ಹೊಲದ ಸುತ್ತಲೂ ನೈಸರ್ಗಿಕ ಬೇಲಿ ಬೆಳೆಸಿದ್ದಾರೆ. ಮನೆಗೆ ಬೇಕಾದಷ್ಟು ಕಾಯಿಪಲ್ಲೆಯನ್ನೂ ಬೆಳೆಯುತ್ತಾರೆ. ಎಂದೂ ಭೂಮಿಯನ್ನು ಪಾಳು ಬಿಟ್ಟಿಲ್ಲ. ನಿರಂತರವಾಗಿ ಒಂದಲ್ಲ ಒಂದು ಬೆಳೆ ಇದ್ದೇ ಇರುತ್ತದೆ. ಇವರ ಈ ಕೃಷಿ ಸಾಧನೆ ಕಂಡು ಸುತ್ತಲಿನ ಅನೇಕ ರೈತರು ಇವರ ಮಾರ್ಗದರ್ಶನ ತೆಗೆದುಕೊಂಡಿದ್ದಾರೆ.‘ವಿದ್ಯೆ ಗೊತ್ತಿಲ್ಲದಿದ್ದರೂ ಕೃಷಿ ಕುರಿತು ಎಲ್ಲರಿಗೂ ನನಗೆ ತಿಳಿದಿದ್ದನ್ನು ಹೇಳುವೆ. ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ನಿಂಗಪ್ಪ. ಇವರ ಸಂಪರ್ಕಕ್ಕೆ–9008458654.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry