ಅನುಭವಿಗಳಿಗೆ ಶೇ 60 ಹುದ್ದೆ ಮೀಸಲಿಗೆ ಆಗ್ರಹ

7
ಅತಿಥಿ ಉಪನ್ಯಾಸಕರ ನೇಮಕಾತಿ

ಅನುಭವಿಗಳಿಗೆ ಶೇ 60 ಹುದ್ದೆ ಮೀಸಲಿಗೆ ಆಗ್ರಹ

Published:
Updated:

ಗುಲ್ಬರ್ಗ: ರಾಜ್ಯ ಸರ್ಕಾರ ಪದವಿ ಕಾಲೇಜುಗಳಲ್ಲಿ ನೇಮಕ ಮಾಡಿಕೊಳ್ಳುತ್ತಿರುವ ಉಪನ್ಯಾಸಕರ ಹುದ್ದೆಗಳಲ್ಲಿ ಶೇ 60 ರಷ್ಟು ಹುದ್ದೆಗಳನ್ನು ಅನುಭವಿ ಉಪನ್ಯಾಸಕರಿಗೆ ಮೀಸಲಿಡಬೇಕು. ಅಲ್ಲದೇ, ‘ಅತಿಥಿ’ ಪದ ಬಳಕೆ ಕೈಬಿಟ್ಟು ನೇಮಕಾತಿಯನ್ನು ಕಾಯಂಗೊಳಿಸಬೇಕು ಎಂದು ಹೈದರಾಬಾದ್–ಕರ್ನಾಟಕ ಸರ್ಕಾರಿ ಪದವಿ ಮಹಾವಿದ್ಯಾಲಯಗಳ ಅತಿಥಿ ಉಪನ್ಯಾಸಕರ ಒಕ್ಕೂಟದ ಜಿಲ್ಲಾ ಘಟಕ ಒತ್ತಾಯಿಸಿದೆ.

‘ನೇಮಕಾತಿ ಸಂದರ್ಭದಲ್ಲಿ ಶೇ 60ರಷ್ಟು ಹುದ್ದೆಗಳನ್ನು ವಯೋಮಿತಿ ಮೀರಿರುವ ಹಾಗೂ ಅನುಭವಿ ಅತಿಥಿ ಉಪನ್ಯಾಸಕರಿಗೆ ಮೀಸಲಿಡಬೇಕು. ಮೊರಾರ್ಜಿ ದೇಸಾಯಿ ವಸತಿ ಶಾಲೆ ಶಿಕ್ಷಕರಿಗೆ ನೀಡಿರುವ ಹಾಗೆ ಉಪನ್ಯಾಸಕರಿಗೂ ಶೇ 40ರಷ್ಟು ಕೃಪಾಂಕ ನೀಡಬೇಕು. ವಿಶ್ವವಿದ್ಯಾನಿಲಯಗಳ ನಿಯಮಾವಳಿಯಂತೆ ಪದವಿ ಕಾಲೇಜು­ಗಳಲ್ಲಿರುವ ವಯೋಮಿತಿಯನ್ನು ರದ್ದುಗೊಳಿಸಬೇಕು. ಸೇವಾ ಭದ್ರತೆ ಜತೆಗೆ ವರ್ಷದ 12 ತಿಂಗಳೂ ಸಂಬಳ ನೀಡಬೇಕು’ ಎಂದು ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಜಗಪ್ಪ ತಳವಾರ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಪಿಎಚ್‌.ಡಿ, ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌.ಇ.ಟಿ) ಹಾಗೂ ರಾಜ್ಯ ಅರ್ಹತಾ ಪರೀಕ್ಷೆಯಲ್ಲಿ (ಎಸ್‌.ಇ.ಟಿ) ತೇರ್ಗಡೆಯಾದ ಉಪನ್ಯಾಸಕರಿಗೆ ತಿಂಗಳಿಗೆ ರೂ. 10 ಸಾವಿರ ಹಾಗೂ ಎಂ.ಫಿಲ್ ಪದವಿ ಪಡೆದವರಿಗೆ ತಿಂಗಳಿಗೆ ರೂ. 8 ಸಾವಿರ ಗೌರವ ಧನ ನೀಡಲಾಗುತ್ತಿದೆ. ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ ಅತಿಥಿ ಉಪನ್ಯಾಸಕರಿಗೆ ಪ್ರತಿ ತಿಂಗಳು ರೂ. 25 ಸಾವಿರ ಸಂಬಳವನ್ನು ಬ್ಯಾಂಕ್ ಖಾತೆ ಮೂಲಕ ನೀಡಲಾಗುತ್ತಿದೆ. ಆದ್ದರಿಂದ, ನಮ್ಮ ರಾಜ್ಯದಲ್ಲೂ ಇಂತಹ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಎಲ್ಲ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸಬೇಕು’ ಎಂದು ಮನವಿ ಮಾಡಿದರು.

ಪ್ರತಿಭಟನೆ:‘ರಾಜ್ಯದ 362 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಳೆದ ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲ ಉಪನ್ಯಾಸಕರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ಸೆ. 25 ರಂದು ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು.

ಇದಕ್ಕೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಬೆಂಬಲ ನೀಡಲಿದೆ’ ಎಂದು ಹೇಳಿದರು. ಒಕ್ಕೂಟದ ಜಿಲ್ಲಾ ಘಟಕದ ಉಪಾಧ್ಯಕ್ಷ ಸುಭಾಷಚಂದ್ರ ದೊಡ್ಡಮನಿ, ಪ್ರಧಾನ ಕಾರ್ಯದರ್ಶಿ ಅಣವೀರಪ್ಪ ಬೋಳೆವಾಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry