ಶನಿವಾರ, ಜೂನ್ 19, 2021
26 °C

ಅನುಭವ ಪಾಕದ ವಿಶೇಷ ರಂಗಕೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನುಭವ ಪಾಕದ ವಿಶೇಷ ರಂಗಕೃತಿ

ನಾಟಕ ಬರೆಯುವ ಪ್ರಕ್ರಿಯೆ ನಮ್ಮ ದೇಶಕ್ಕೆ ಪುರಾತನವಾದುದೇ ಆದರೂ ಆ ಕಾಯಕವನ್ನು ಕನ್ನಡದಲ್ಲಿ ಮಾಡಿದ ಜನರಲ್ಲಿ ರಂಗಾನುಭವ ಇದ್ದವರಿಗಿಂತ ಸಾಹಿತ್ಯಕ ಅನುಭವಗಳಿಂದ ನಾಟಕ ಕಟ್ಟಿದವರ ಸಂಖ್ಯೆಯೇ ದೊಡ್ಡದು. ಹೀಗಾಗಿಯೇ ನಮ್ಮಲ್ಲಿ ನಾಟಕ ಕೃತಿಗಳು ಮತ್ತು ರಂಗಕೃತಿಗಳ ನಡುವೆ ವಿಭಿನ್ನ ಪಾತಳಿಗಳು ತೆರೆದುಕೊಂಡಿವೆ.ಇಂತಹ ಸ್ಥಿತಿಯಲ್ಲಿ ರಂಗಾಕೃತಿಯನ್ನು ಕಟ್ಟುವ ದಟ್ಟ ಅನುಭವವುಳ್ಳವರು ನಾಟಕ ರಚಿಸಿದಲ್ಲಿ ಅಂತಹ ಕೃತಿಗಳಿಗೆ ಅಪರೂಪದ ಶಕ್ತಿ ಮತ್ತು ಸಾಂದ್ರತೆ ಒದಗಿ ಬರುತ್ತದೆ. ಇಂತಹ ಅನುಭವದ ಪಾಕದಿಂದ ರಚಿಸಿದ ಕೃತಿ `ಎತ್ತ ಹಾರಿದೆ ಹಂಸ: ಒಂದು ಮೆಲೋಡ್ರಾಮ~.ರಘುನಂದನ್ ಕನ್ನಡದ ಮತ್ತು ರಾಷ್ಟ್ರೀಯ ರಂಗಭೂಮಿಯಲ್ಲಿ ರಂಗಚಿಂತಕ, ನಿರ್ದೇಶಕ, ತಂತ್ರಜ್ಞ ಆಗಿಯೇ ಪರಿಚಿತರು. ಹಲವು ದಶಕಗಳಿಂದ ರಂಗಸಿದ್ಧಾಂತಗಳನ್ನು ಹಾಗೂ ನಟನೆಯನ್ನು ಅನೇಕ ಹೊಸಬರಿಗೆ ತಲುಪಿಸುತ್ತಾ `ರಂಗ~ ಮೇಷ್ಟರಾಗಿ ಅನುಭವ ಪಡೆದವರು.

 

ಇಂತಹ ಅನುಭವಿಯು ನಾಟಕವೊಂದನ್ನು 1987ರಲ್ಲಿ ಬರೆಯಲು ಆರಂಭಿಸಿ, 1993ರಲ್ಲಿ ಅದನ್ನು ರಂಗಕ್ಕೆ ತರುವಂತೆ ಸಿದ್ಧಪಡಿಸಿ, ನಾಟಕದ ಅನೇಕ ಪ್ರದರ್ಶನಗಳಾದ ತರುವಾಯ 2011ರಲ್ಲಿ ಪ್ರಕಟಣೆಗೆ ಸಿದ್ಧಪಡಿಸುತ್ತಾರೆ ಎಂಬುದೇ ನಾಟಕ ರಚನೆ ಮತ್ತು ಪ್ರಕಟಣೆಯಲ್ಲಿ ಇರಬೇಕಾದ ತಾಳ್ಮೆಯನ್ನು ತಿಳಿಸುವಂತಹ ಸಂಗತಿ.`ಎತ್ತ ಹಾರಿದೆ ಹಂಸ~ ನಾಟಕದಲ್ಲಿ ಹತ್ತು ದೃಶ್ಯಗಳಿವೆ. ಪಾತ್ರಗಳ ಸಂಖ್ಯೆಯೂ ದೊಡ್ಡದು. ರಾಮಚಂದ್ರ ಎಂಬ ಪ್ರಧಾನ ಪಾತ್ರದ ಕತೆಯೊಂದಿಗೆ ನೀಲಣ್ಣನ ಕತೆ, ಪಿಪ್ಪಾಲಾನಂದನ ಕತೆ ಹಾಗೂ ಪುನ್ನಾಗರಾಯ ಎಂಬ ಉಪಕತೆಗಳೂ ಕೂಡಿಕೊಂಡಿವೆ.ಹೀಗಾಗಿ ಇದು ಅನೇಕ ಮುಖಗಳ ಮೂಲಕ ಒಂದು ಕಾಲಘಟ್ಟದ ಚರಿತ್ರೆಯನ್ನು, ಆ ಮೂಲಕ ಭ್ರಮನಿರಸನದ ಸ್ಥಿತಿಗೆ ತಲುಪಿರುವ ಸಮಕಾಲೀನರ ಬದುಕನ್ನು ಕುರಿತು ಚರ್ಚಿಸುವ ವಸ್ತುವನ್ನು ಹೊಂದಿರುವ ನಾಟಕ.`ಕಡ್ಲಿಮಟ್ಟಿ ಸ್ಟೇಷನ್ ಮಾಸ್ತರ~ ಎಂಬ ಲಾವಣಿ ಹಾಗೂ ಡಪ್ಪಿನಾಟದ ಸ್ಫೂರ್ತಿಯಿಂದ ಈ ನಾಟಕ ಹುಟ್ಟಿದೆ ಎಂದು ಲೇಖಕರು ತಮ್ಮ ಮುನ್ನುಡಿಯಲ್ಲಿ ತಿಳಿಸಿದ್ದಾರಾದರೂ ಮೂಲ ಕೃತಿಯಿಂದ ಸಂಪೂರ್ಣ ಹೊರತಾಗಿ ಹಾಗೂ ಸ್ವತಂತ್ರವಾಗಿ ನಿಲ್ಲುವ ಕೃತಿಯೊಂದನ್ನು ರಘುನಂದನ್ ಸಿದ್ಧಪಡಿಸಿದ್ದಾರೆ.ಸ್ಥೂಲವಾಗಿ ಈ ನಾಟಕದ ಕಥಾಹಂದರ ಹೀಗಿದೆ. 1930ರ ಆಸುಪಾಸಿನ ಕಾಲಘಟ್ಟದಲ್ಲಿ ರಾಮಚಂದ್ರ ಎಂಬಾತ ಆಗಿನ ಮೈಸೂರು ಸಂಸ್ಥಾನದ ಸರ್ಕಾರಿ ಅಧಿಕಾರಿಯಾಗಿ ಬೆಂಗಳೂರಿನಲ್ಲಿ ವಾಸಿಸುತ್ತಾ ಇದ್ದಾನೆ.ಗೆಳೆಯ ನೀಲಣ್ಣನ ಮದುವೆಗೆ ಹೋದಾಗ ಆತನ ತಂಗಿಯನ್ನು ನೋಡಿ ಇಷ್ಟಪಡುತ್ತಾನೆ. ಅಂತರ್ಜಾತೀಯ ವಿವಾಹಕ್ಕೆ ಹೆದರುವ ಹಳ್ಳಿಗರು ಆ ಕಾಲದಲ್ಲಿ ಬೀಸುತ್ತಿದ್ದ ಮಹಾತ್ಮ ಗಾಂಧೀಜಿಯ ಗಾಳಿಗೆ ಎಂಬಂತೆ ಈ ಮದುವೆಗೆ ಒಪ್ಪುತ್ತಾರೆ. ಸಂಭ್ರಮದ ಮದುವೆ ಆಗುವ ಕಾಲಕ್ಕೆ ರಾಮಚಂದ್ರನನ್ನು ಸ್ವಾತಂತ್ರ್ಯದ ಚಳವಳಿ ಸೆಳೆಯುತ್ತದೆ.ಮಡದಿ, ಮನೆಯನ್ನು ಬಿಟ್ಟು ದೇಶಸೇವೆಗೆ ಎಂದು ಹೋದವನು, ಅಲ್ಲಿಯೇ ಇನ್ನೂ ಅನೇಕ ಹೊಸ ಸಿದ್ಧಾಂತಗಳಿಗೆ ಸೋಲುತ್ತಾನೆ. ಆತನ ಈ `ಅನೇಕ ಆಯ್ಕೆ~ಗಳ ಬದುಕು ಆತನನ್ನು ನಿರ್ವಿಣ್ಣನನ್ನಾಗಿಸಿ ಬಿಡುತ್ತದೆ. ಅಂತಿಮವಾಗಿ ಮಡದಿಯನ್ನು ಮತ್ತೆ ಸೇರಲು ಬರುವ ರಾಮಚಂದ್ರನಿಗೆ ತನ್ನ ಆಯ್ಕೆಗಳೇ ತನ್ನ ಜೀವನದ ಸಮಸ್ಯೆಗಳಾದವು ಎಂಬುದು ತಿಳಿಯುತ್ತದೆ.

 

ಆ ಹೊತ್ತಿಗೆ ಸಾಮಾಜಿಕವಾಗಿಯೂ ಮತ್ತು ವೈಯಕ್ತಿಕವಾಗಿಯೂ ಅನೇಕ ಪಲ್ಲಟಗಳು ಆಗಿ ಹೋಗಿರುತ್ತವೆ. ರಾಮಚಂದ್ರನ ಮಡದಿ ಚಿನ್ನಮ್ಮನಂತೂ ತನ್ನ ಮಗುವನ್ನು ಉಳಿಸಿಕೊಳ್ಳುವ ಸಲುವಾಗಿ ಪುನ್ನಾಗರಾಯನ ತಂತ್ರಕ್ಕೆ ಬಲಿಯಾಗಿ, ಕಡೆಗೆ ಆತ್ಮಹತ್ಯೆಯನ್ನೂ ಮಾಡಿಕೊಂಡಿರುತ್ತಾಳೆ. ರಾಮಚಂದ್ರನು ಇವೆಲ್ಲದರ ನಡುವೆ ಸೋತವನಂತೆ ಮತ್ತೆ ಬದುಕು ಕಟ್ಟಲು ಹೊಸ ಪ್ರಯಾಣ ಆರಂಭಿಸುವಲ್ಲಿ ನಾಟಕವು ಮುಗಿಯುತ್ತದೆ.ಇಲ್ಲಿ ಹೇಳಿರುವಷ್ಟು ಸರಳವಾದ ಕತೆ ಈ ನಾಟಕದಲ್ಲಿ ಇಲ್ಲ. ನಾಟಕವು ನಮ್ಮ ಸಮಾಜವು ಕಟ್ಟಿಕೊಂಡಿರುವ ಅನೇಕ ಹಳವಂಡಗಳನ್ನು ಮತ್ತು ಇದ್ದು ಇಲ್ಲದಂತಾದ ಅನೇಕ ಸಿದ್ಧಾಂತಗಳನ್ನು ಮುಖಾಮುಖಿಯಾಗಿಸಿ ಮನುಷ್ಯನ ಬದುಕನ್ನು ಕುರಿತು ಮಾತಾಡುತ್ತದೆ. ಹಾಗಾಗಿಯೇ ಇದೊಂದು ಬಹುಕಾಲ ನೆನಪಿನಲ್ಲಿ ಉಳಿಯುವಂತಹ ನಾಟಕವಾಗುತ್ತದೆ.ಈ ನಾಟಕದಲ್ಲಿ ರಘುನಂದನ್ ಅವರು ಬಳಸಿರುವ ಭಾಷೆ ವಿಶಿಷ್ಟವಾದುದು. ಇಲ್ಲಿ `ಮಾತು~ ಎಂಬುದು ಕಾವ್ಯದ ಹಾಗೆ ಕೆಲಸ ಮಾಡುತ್ತದೆ. ಅನೇಕ ನುಡಿಗಟ್ಟುಗಳನ್ನು ಬಳಸಲಾಗಿದೆ. ಪ್ರತಿ ಪಾತ್ರದ ಮಾತಿಗೂ ಪ್ರತ್ಯೇಕ ಲಯವನ್ನು ಸೃಷ್ಟಿಸಲಾಗಿದೆ.

 

ನಾಟಕದುದ್ದಕ್ಕೂ ಬರುವ ಹಿರಿಯ ಕಿರಿಯರ ಮಾತುಗಳು ಕನ್ನಡ ಜನಪದದ ಮುಂದುವರಿಕೆಯಂತೆ ಇದ್ದರೆ, ನೀಲಣ್ಣ, ಲಚ್ಚ, ಚಿನ್ನಮ್ಮ, ಚಿಗರೇಗೌಡ, ಮಾದೇವಿ ಮುಂತಾದವರ ಮಾತುಗಳಿಗೆ ಮದ್ದೂರು-ಮಂಡ್ಯ ನಡುವಿನ ಕನ್ನಡವನ್ನು ಬಳಸಲಾಗಿದೆ.ರಾಮಚಂದ್ರ ಮತ್ತು ಆತನ ತಾಯಿಯ ಮಾತುಗಳಿಗಾಗಿ ನಲ್ವತ್ತರ ದಶಕದ್ದು ಎನಿಸುವ ವಿಶಿಷ್ಟ ಕನ್ನಡವನ್ನು ಬಳಸಲಾಗಿದೆ. ಲೇಖಕರ ಮಾತಿನಲ್ಲಿಯೇ ಹೇಳುವುದಾದರೆ ಮುಕ್ತ ಪದ್ಯ ಲಯದಲ್ಲಿ ಕಟ್ಟಿದ ಮಾತುಗಳಿವು. ಹೀಗೆ ಪ್ರತಿ ಪಾತ್ರದ ಹಿನ್ನೆಲೆಯನ್ನು ಆ ಪಾತ್ರದ ಮಾತುಗಳಿಗೆ ಎಂದು ಬಳಸಿದ ಉದಾಹರಣೆಗಳು ಬಹು ಕಡಿಮೆ. ಆ ನಿಟ್ಟಿನಲ್ಲಿ ರಘುನಂದನ್ ಅವರದ್ದು ಸಾರ್ಥಕ ಪ್ರಯತ್ನ.ನಾಟಕದ ಕಟ್ಟಡವು ಸಹ ಪೊಯೆಟಿಕ್ ರಿಯಲಿಸಂ ಮತ್ತು ನಾನ್ ನ್ಯಾಚುರಲಿಸಂನಿಂದ ಆಗಿರುವಂತಹದು. ಇಂತಹ ಪ್ರಯತ್ನ ಕನ್ನಡ ನಾಟಕಗಳಲ್ಲಿ ತುಂಬಾ ಕಡಿಮೆ.ಏಕಕಾಲಕ್ಕೆ ಜನಪದೀಯ ಗುಣವುಳ್ಳ ಹಿರಿಯ-ಕಿರಿಯ ಎಂಬ ಸೂತ್ರಧಾರ ಸಾರಥಿಯ ಹಾಗಿರುವ ಪಾತ್ರಗಳನ್ನು ವಾಸ್ತವದ ನೆಲಗಟ್ಟಿನಲ್ಲಿ ನಿರ್ಮಿತವಾದ, ಆದರೆ ದೃಶ್ಯದಲ್ಲಿ ಕೇವಲ ವಾಸ್ತವವಾದದ ಪ್ರತಿಮೆಗಳಂತೆ ಕಾಣದ ಪಾತ್ರಗಳ ಜೊತೆಗೆ ಸಮಾನಂತರವಾಗಿ ಇರಿಸಿರುವುದೇ ಈ ನಾಟಕದ ಕಟ್ಟಡದಲ್ಲಿನ ವಿಶೇಷ. (ಈ ನಾಟಕವನ್ನು ಲೇಖಕರ ನಿರ್ದೇಶನದಲ್ಲಿಯೇ ಕಂಡವನಾಗಿ ನಾನು ಇದನ್ನು ದೃಶ್ಯವಾಗಿಯೂ ಅನುಭವಿಸಿದ್ದೇನೆ).ಉದಾಹರಣೆಗೆ ಈ ನಾಟಕದ ಆರಂಭಿಕ ದೃಶ್ಯದಲ್ಲಿ ಬರುವ ಹಿರಿಯ ಕಿರಿಯರ ಮಾತನ್ನು ನೋಡಿ:

ಕಿರಿಯ: ... ಈ ಆಟದ ಸೂತ್ರಧಾರರು ನಾವು./ ಇವರು, ಹಿರೀಸೂತ್ರದ ಹಿಲಾಲು ಹಿಡಿದು ಹಾದಿ ತೋರಿಸೋ/ ಹಿರೀಕರು. ಹಿಮ್ಮೇಳದ ಮುಂಚೂಣಿಯವರು. ನಾನು,/ ಇವರ ಹಿಂದೆ, ಜಗನ್ನಾಟಕದ ರೀತಿನೀತಿ ಕಲಿತಿರೋ/ ಕಿರಿಯ, ಹಿಮ್ಮೇಳದ ಹಿಂಬದಿಯವನು...ಈ ಹಿರಿಯ ಕಿರಿಯರ ಮಾತಿನ ನಡುವೆಯೇ ಬರುವ ಮತ್ತೊಂದು ಮಾತು ಗಮನಿಸಿ:

ಹಿರಿಯ: ...ಸುಖ ಅನ್ನೋದು ಬೀದಿ ನೆರಳಾದರೆ,/ ದುಃಖ ಅನ್ನೋದು ದೊಡ್ಡ ಬಿಸಿಲನ್ನೋ ಸತ್ಯ ತಿಳಿದಿಲ್ಲ ನಿನಗೆ. ಕಿರುನಗೆ ಕೆಳಗಿನ ಕರುಳ ತರಿತ,/ ನಲಿವಿನ ಬೆನ್ನ ಮೇಲೆ ಕೂಸುಮರಿ ನಿಟ್ಟುಸಿರು/ ನಿನ್ನನ್ನ ತಟ್ಟಿಲ್ಲವಲ್ಲ! ತೊಳೆದಿಟ್ಟು ರಂಗವಲ್ಲಿ/ ತೋರಣ ಕಟ್ಟಿದ ಮದುಮನೆಯಂಗಳ ದಾಟಿ/ ಭವಿಷ್ಯದ ಅರೆಗತ್ತಲೆಯ ಕೋಣೆ ಹೇಗಿರುತ್ತೆ/ ನೋಡೋ ಒಳಗಣ್ಣು ನಿನಗಿಲ್ಲ.ಹೀಗೆ ಅನೇಕ ಹೊಸ ನುಡಿಗಟ್ಟನ್ನು ಕಟ್ಟುತ್ತಲೇ, ಅನೇಕ ಗಾದೆಗಳನ್ನು ಬಳಸುತ್ತಾ ಕನ್ನಡವನ್ನು ನಟರ ನಾಲಿಗೆಯ ಮೇಲೆ ಆಡಿಸುವ ಪ್ರಯತ್ನ ಮಾಡಿದ್ದಾರೆ ರಘುನಂದನ್.ಇಂತಹ ಅನೇಕ ನಾಟಕಗಳು ಬರುತ್ತಿರಬೇಕು. ಆಗ ನಮ್ಮ ನಟರ ಸಮೂಹಕ್ಕೆ ನಾಟಕದ ಅಭಿನಯ ಸವಾಲು ಮತ್ತು ಸುಖ ಎರಡೂ ಆಗಲು ಸಾಧ್ಯ. ರಘುನಂದನ್ ಅವರಂತಹ ರಂಗತಜ್ಞರು ಇಂತಹ ಅನೇಕ ನಾಟಕಗಳನ್ನು ನಿರಂತರವಾಗಿ ನೀಡುವಂತಾಗಲಿ ಎಂಬುದಷ್ಟೇ ನಮ್ಮಂತಹ ರಂಗಕರ್ಮಿಗಳ ಅಪೇಕ್ಷೆ.    ಎತ್ತ ಹಾರಿದೆ ಹಂಸ...

ಲೇ: ರಘುನಂದನ

ಪು: 112; ಬೆ: ರೂ. 70

ಪ್ರ: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ - 577417                       

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.