ಅನುಭವ ಪಾಠವಾಗಲಿ

7

ಅನುಭವ ಪಾಠವಾಗಲಿ

Published:
Updated:

ರಾಜ್ಯದ ಹಳ್ಳಿಗಾಡಿನ ಜನರಿಗೆ ಸ್ನಾನಗೃಹದ ಜತೆಗೆ ಶೌಚಾಲಯ ನಿರ್ಮಿಸಿಕೊಡುವ ರಾಜ್ಯ ಸರ್ಕಾರದ ಚಿಂತನೆ ಸ್ವಾಗತಾರ್ಹ. ಶೌಚಾಲಯದ ಜತೆ ಸ್ನಾನಗೃಹ ಸೇರಿಸಿರುವುದನ್ನು ಹೊರತುಪಡಿಸಿದರೆ ಈ ಚಿಂತನೆ ಹೊಸದೇನಲ್ಲ. ಬಹಳ ಹಿಂದೆಯೇ ರಾಜ್ಯ ಸರ್ಕಾರಗಳು ಇಂತಹ ಕಾರ್ಯಕ್ರಮ ರೂಪಿಸಿ ಜಾರಿಗೆ ತರುವ ಪ್ರಯತ್ನ ಮಾಡಿವೆ. ಕೆಲವೇ ಜಿಲ್ಲೆಗಳಲ್ಲಿ ಅದು ಯಶಸ್ವಿಯೂ ಆಗಿದೆ. ಉಳಿದೆಡೆ ಹೆಚ್ಚಿನ ಪ್ರಯೋಜನ ಆಗಿಲ್ಲ. ಬದಲಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೋಟ್ಯಂತರ ರೂಪಾಯಿ ಹಣ ಅಪವ್ಯಯವಾಗಿದೆ.

ದಶಕದ ಹಿಂದೆಯೇ ಸಮಗ್ರ ನೈರ್ಮಲ್ಯ ಯೋಜನೆ, ನಿರ್ಮಲ ಕರ್ನಾಟಕ ಇತ್ಯಾದಿ ಯೋಜನೆಗಳನ್ನು ಸರ್ಕಾರಗಳು ಜಾರಿಗೆ ತಂದಿವೆ. ದುರದೃಷ್ಟದ ಸಂಗತಿ ಎಂದರೆ ರಾಜ್ಯದ ಬಹುಪಾಲು ಜಿಲ್ಲೆಗಳಲ್ಲಿ ಈ ಎರಡೂ ಯೋಜನೆಗಳು ವಿಫಲವಾಗಿವೆ. ಮನೆಯ ಬಳಿಯೇ ಶೌಚಾಲಯ ನಿರ್ಮಿಸಿಕೊಳ್ಳುವುದಕ್ಕೆ ಹಳ್ಳಿಗಾಡಿನ ಕೆಲವು ಜಾತಿ, ವರ್ಗಗಳ ಜನರು ಮಾನಸಿಕವಾಗಿ ಇನ್ನೂ ಸಿದ್ಧರಿಲ್ಲ.ಸರ್ಕಾರ ಮತ್ತು ಜನಪ್ರತಿನಿಧಿಗಳ ಒತ್ತಾಯಕ್ಕೆ ಮಣಿದು ಶೌಚಾಲಯ ನಿರ್ಮಿಸಿಕೊಂಡರೂ ಅದನ್ನು ಬಳಸುತ್ತಿಲ್ಲ. ಅವು ಉಗ್ರಾಣಗಳಾಗಿ ಪರಿವರ್ತನೆ ಆಗಿವೆ. ಬರಪೀಡಿತ ಬಯಲುಸೀಮೆ, ಉತ್ತರ ಕರ್ನಾಟಕ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ನೀರಿನ ಅಭಾವವಿದೆ. ಅದರಿಂದಾಗಿ, ಶೌಚಾಲಯ ಇದ್ದರೂ ಅದನ್ನು ಬಳಸುತ್ತಿಲ್ಲ. ಅಷ್ಟೇ ಅಲ್ಲ, ನಿರ್ಮಲ ಕರ್ನಾಟಕ ಯೋಜನೆಯಲ್ಲಿ ಹಲವು ಅಕ್ರಮಗಳು ನಡೆದಿವೆ ಎಂಬುದು ಗುಟ್ಟೇನಲ್ಲ. ಶೌಚಾಲಯಕ್ಕೆ ಬೇಕಾದ ಸಲಕರಣೆಗಳನ್ನು ಹೊರ ರಾಜ್ಯಗಳ ಗುತ್ತಿಗೆದಾರರಿಂದ ಹೆಚ್ಚು ಹಣ ತೆತ್ತು ಖರೀದಿಸಿದ ಮತ್ತು ಸರ್ಕಾರದ ದಾಖಲೆಗಳಲ್ಲಷ್ಟೇ ಶೌಚಾಲಯ ನಿರ್ಮಿಸಿ ಹಣ ದೋಚಿದ ಅಸಂಖ್ಯ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಕುರಿತು ತನಿಖೆ ಆಗಿದ್ದರೂ ತಪ್ಪಿತಸ್ಥರಿಗೆ ಶಿಕ್ಷೆ ಆಗಿಲ್ಲ. ಅದೇನೇ ಇರಲಿ, ಸರ್ಕಾರ ರಾಜ್ಯದ ಗ್ರಾಮೀಣ ಜನರಿಗೆ ಆಕರ್ಷಕವಾದ ಹೊಸ ಯೋಜನೆ ರೂಪಿಸುವ ಹುಮ್ಮಸ್ಸಿನಲ್ಲಿ ಹಿಂದಿನ ಕಹಿ ಅನುಭವವನ್ನು ಮರೆಯಬಾರದು.ಕರ್ನಾಟಕದ ಅನೇಕ ಜಿಲ್ಲೆಗಳ ಕಡು ಬಡಜನರಿಗೆ ಸ್ವಂತ ಮನೆಗಳಿಲ್ಲ. ಜೋಪಡಿಗಳಲ್ಲಿ ವಾಸ ಮಾಡುವ ಜನರಿಗೆ ಪ್ರತ್ಯೇಕವಾದ ಸ್ನಾನದ ಮನೆ ಮತ್ತು ಶೌಚಾಲಯ ಕಟ್ಟಿಕೊಳ್ಳಲು ಬೇಕಾದ ಜಾಗ ಇಲ್ಲ. ಎರಡೂ ಇದ್ದರೆ ಸಾಕಷ್ಟು ನೀರಿಲ್ಲ. ಕೆಲವು ಜಿಲ್ಲೆಗಳಲ್ಲಿ ವರ್ಷದ ಆರು ತಿಂಗಳು ನೀರಿನ ಕೊರತೆ ಇದ್ದದ್ದೇ. ನೀರಿನ ಕೊರತೆ ಇರುವ ಹಳ್ಳಿಗಳಲ್ಲಿ ಶೌಚಾಲಯ ನಿರ್ಮಾಣದಿಂದ ಹೆಚ್ಚಿನ ಪ್ರಯೋಜನ ಆಗಲಾರದು.

 

ಸರ್ಕಾರ ಈ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಹಳ್ಳಿಗಳಿಗೆ ನೀರು ಒದಗಿಸುವ ಕಾರ್ಯಕ್ರಮವನ್ನು ಆದ್ಯತೆ ಮೇರೆಗೆ ಮೊದಲು ರೂಪಿಸಬೇಕು. ನೀರು ಸಿಗುವ ಹಳ್ಳಿಗಳಲ್ಲಿ ಶೌಚಾಲಯ ನಿರ್ಮಿಸಲು ಅಡ್ಡಿ ಇಲ್ಲ. ಹೊಸ ಯೋಜನೆಯನ್ನು ಜಾರಿಗೆ ತರುವ ಮೊದಲು ಹಳೆಯ ಅನುಭವಗಳಿಂದ ಪಾಠ ಕಲಿಯಬೇಕು. ಈಗಾಗಲೇ ನಿರ್ಮಿಸಿರುವ ಶೌಚಾಲಯಗಳು ಎಷ್ಟರಮಟ್ಟಿಗೆ ಬಳಕೆ ಆಗಿವೆ ಎಂಬುದರ ಕುರಿತು ಮಾಹಿತಿ ತರಿಸಿಕೊಂಡು ಪರಿಶೀಲಿಸಬೇಕು. ಫಲಾನುಭವಿಗಳನ್ನು ಗುರುತಿಸುವ ಮತ್ತು ಅನುಷ್ಠಾನಗೊಳಿಸುವ ಹಂತದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry