`ಅನುಭವ ಮಂಟಪ' ನಿರ್ಮಾಣ ಎಂದು?

7

`ಅನುಭವ ಮಂಟಪ' ನಿರ್ಮಾಣ ಎಂದು?

Published:
Updated:

ಬಸವಕಲ್ಯಾಣ: ಇಲ್ಲಿ ಕಳೆದ ಐದಾರು ವರ್ಷಗಳಲ್ಲಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಕೆಲ ಸ್ಮಾರಕಗಳ ಜೀರ್ಣೋದ್ಧಾರ ನಡೆದಿದೆ. ಆದರೆ ಜಗತ್ತಿನ ಪ್ರಥಮ ಸಂಸತ್ತು ಎಂಬ ಹೆಗ್ಗಳಿಕೆಯ ಅನುಭವ ಮಂಟಪದ ಪುನರ್ ನಿರ್ಮಾಣದ ಕಾಮಗಾರಿ ಮಾತ್ರ ಆರಂಭ ಆಗಿಲ್ಲ.ಕಳೆದ ಏಪ್ರಿಲ್‌ನಲ್ಲಿ ಮುಖ್ಯಮಂತ್ರಿ ಸದಾನಂದಗೌಡರ ನೇತೃತ್ವದಲ್ಲಿ ಇಲ್ಲಿ ನಡೆದ ಮಂಡಳಿಯ ಸಭೆಯಲ್ಲಿ ಮಂಟಪ ನಿರ್ಮಾಣದ ನಿರ್ಣಯ ಕೈಗೊಳ್ಳಲಾಗಿತ್ತು. ಅಲ್ಲಮಪ್ರಭುದೇವರ ಗದ್ದುಗೆ ಮಠದ ಎದುರಿನಲ್ಲಿನ ಜಾಗವನ್ನು ಇದಕ್ಕಾಗಿ ಒದಗಿಸಬೇಕು. ಕಟ್ಟಡಕ್ಕೆ 15ರಿಂದ 25 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಬೇಡಿಕೆ ಸಲ್ಲಿಸಿದ್ದರೂ ಏನೂ ಪ್ರಯೋಜನ ಆಗಿಲ್ಲ.ಮುಖ್ಯವೆಂದರೆ, ಅನುಭವ ಮಂಟಪ ಮತ್ತು ಮಹಾಮನೆಯ ಕಾರಣವೇ ಬಸವಣ್ಣನವರಿಗೆ ಕೀರ್ತಿ ಬಂತು. ಆದರೆ ಅವು ಹೇಗಿದ್ದವು ಎಂಬುದು ಇಲ್ಲಿವರೆಗೂ ಯಾರಿಗೂ ಪತ್ತೆಹಚ್ಚಲಾಗಿಲ್ಲ. ಅವುಗಳ ಅವಶೇಷಗಳು ಸಹ ಇಲ್ಲಿ ಉಳಿದಿಲ್ಲ. ಕೆಲವರು ನಗರದ ಮಧ್ಯಭಾಗದಲ್ಲಿನ ಖಾಸಗಿ ಬಂಗ್ಲೆಯೊಂದರ ಸಮೀಪದ ಕಲ್ಲಿನ ಕಂಬಗಳ ಕಟ್ಟಡವೇ ಅನುಭವ ಮಂಟಪವಾಗಿದೆ ಎನ್ನುತ್ತಾರೆ.ಬೆಲ್ದಾಳ ಸಿದ್ಧರಾಮ ಶರಣರು ಬೆಟಬಾಲ್ಕುಂದಾ ಗುಡ್ಡದ ಮೇಲೆ ಮಂಟಪದ ಕೆಲ ಗುರುತುಗಳು ಸಿಕ್ಕಿದ್ದು ಈ ಬಗ್ಗೆ ಹೆಚ್ಚಿನ ಸಂಶೋಧನೆ ಕೈಗೊಳ್ಳಬೇಕಾಗಿದೆ ಎಂದು ಮಂಡಳಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಮಂಡಳಿಯ ಸದಸ್ಯೆಯಾದ ಉಪನ್ಯಾಸಕಿ ನೀಲಾಂಬಿಕಾ ಶೇರಿಕಾರ ಅವರು ತ್ರಿಪುರಾಂತ ಕೆರೆ ದಂಡೆಯಲ್ಲಿ ದೊಡ್ಡ ಕಲ್ಲಿನ ಕಟ್ಟಡ ಇತ್ತೆಂದು ಹಿರಿಯರು ಹೇಳುತ್ತಾರೆ. ಅದೇ ಅನುಭವ ಮಂಟಪ ಆಗಿದ್ದಿರಬಹುದು ಎಂದು ಹೇಳುತ್ತಾರೆ.ಆದರೆ, ಇನ್ನು ಕೆಲವರು ಮರಿದೇವರ ಗುಡ್ಡದಲ್ಲಿ ಈಗ ಇರುವ ಅನುಭವ ಮಂಟಪದ ಜಾಗದಲ್ಲಿಯೇ ಅಂದಿನ ಮಂಟಪ ಇತ್ತೆಂದು ವಾದ ಮಂಡಿಸುತ್ತಾರೆ. ಆದ್ದರಿಂದಲೇ ಇಲ್ಲಿ ಸಭಾ ಭವನದಂತಹ ಕಟ್ಟಡ ನಿರ್ಮಿಸಿ ಅದಕ್ಕೆ ಅನುಭವ ಮಂಟಪ ಎಂದು ಕರೆಯಲಾಗಿದೆ ಎನ್ನುತ್ತಾರೆ.ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ ಅವರು ಇದಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ನಂತರ ಕಟ್ಟಡದ ಕಾಮಗಾರಿ ಅರ್ಧಕ್ಕೆ ನಿಂತಿದ್ದರಿಂದ ಭಾಲ್ಕಿ ಚೆನ್ನಬಸವ ಪಟ್ಟದ್ದೇವರು ಸತತವಾಗಿ ಪ್ರಯತ್ನಿಸಿ ಅದನ್ನು ಪೂರ್ಣಗೊಳಿಸಿದರು. ಇತ್ತೀಚಿಗೆ ಅನುಭವ ಮಂಟಪ ಟ್ರಸ್ಟ್ ರಚಿಸಲಾಗಿದ್ದು ಈ ಟ್ರಸ್ಟ್‌ನವರೇ ಇಲ್ಲಿನ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ.ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ರಚಿಸುವುದಕ್ಕೆ ಮೊದಲು ಈ ಮಂಟಪದ ಪರಿಸರದಲ್ಲಿ ಇನ್ನಷ್ಟು ಅಭಿವೃದ್ಧಿಕೈಗೊಳ್ಳಲು ಟ್ರಸ್ಟ್‌ದಿಂದ ಯೋಜನೆಯೊಂದನ್ನು ರೂಪಿಸಲಾಗಿತ್ತು. ಈ ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರದ ಮಾಜಿ ಸಚಿವ ಬೂಟಾಸಿಂಗ್ ಅವರ ನೇತೃತ್ವದಲ್ಲಿ ಸರ್ಕಾರಕ್ಕೆ ಸಲ್ಲಿಸಲು ಮುಖಂಡರಾಗಿದ್ದ ಬಸವರಾಜ ತಂಬಾಕೆ, ಈಶ್ವರ ಖಂಡ್ರೆ, ಬಸವರಾಜ ಬುಳ್ಳಾ ಮತ್ತಿತರರು ಹಲವಾರು ಸಲ ಸಭೆ ನಡೆಸಿ ಚರ್ಚಿಸಿದ್ದರು. ಆದರೆ ಮುಂದೆ ಯಾವುದೋ ಕಾರಣದಿಂದ ಈ ಸಂಬಂಧ ಚಟುವಟಿಕೆಗಳು ಸ್ಥಗಿತಗೊಂಡವು. ಮಂಡಳಿ ರಚನೆಯಾದಾಗ ಪ್ರಥಮವಾಗಿ ಮಂಟಪ ನಿರ್ಮಿಸುವ ಕಾರ್ಯ ಕೈಗೆತ್ತಿಕೊಳ್ಳಬಹುದು ಎನ್ನಲಾಗುತಿತ್ತು. ಆದರೆ ಮಂಡಳಿ ವಿಶೇಷಾಧಿಕಾರಿಯಾಗಿದ್ದ ಡಾ.ಎಸ್.ಎಂ.ಜಾಮದಾರ ಅವರು ಈ ಬಗ್ಗೆ ತಜ್ಞರ ಸಮಿತಿಯ ಸಲಹೆ ಪಡೆದುಕೊಂಡೇ ಕೆಲಸ ಆರಂಭಿಸಲು ತೀರ್ಮಾನಿಸಿದ್ದರಿಂದ ಈ ಕೆಲಸಕ್ಕೆ ವಿಳಂಬ ಆಗುವಂತಾಯಿತು.ಜಾಮದಾರ ಅವರು ಸೇವೆಯಿಂದ ನಿವೃತ್ತಿ ಪಡೆದುಕೊಳ್ಳುವ ಮುನ್ನವೇ ಮಂಟಪ ನಿರ್ಮಾಣದ ಸ್ಥಳ ನಿಗದಿಪಡಿಸಿದರಾದರೂ ಕೆಲಸ ಇನ್ನುವರೆಗೆ ಕೈಗೊಳ್ಳಲಾಗಿಲ್ಲ. ಏನಿದ್ದರೂ, ಇಲ್ಲಿ ಇದುವರೆಗೆ ಶರಣರಿಗೆ ಸಂಬಂಧಿಸಿದ ಎಷ್ಟೇ ಕೆಲಸಗಳು ನಡೆದರೂ ಅನುಭವ ಮಂಟಪ ನಿರ್ಮಿಸದಿದ್ದರೆ ಎಲ್ಲವೂ ಅಪೂರ್ಣವಾದಂತೆಯೇ ಎಂಬುದು ಜನರ ಅಭಿಪ್ರಾಯವಾಗಿದೆ. ಆದ್ದರಿಂದ ಸಂಬಂಧಿತರು ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕಾದದ್ದು ಅತ್ಯಗತ್ಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry