ಸೋಮವಾರ, ಏಪ್ರಿಲ್ 19, 2021
33 °C

ಅನುಮತಿ ಪಡೆಯದೆ ಕಾಮಗಾರಿ: ನೈಸ್ಗೆ ನೋಟಿಸ್

ಪ್ರಜಾವಾಣಿ ವಾರ್ತೆ/ ಪಿ.ಎಂ. ರಘುನಂದನ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು- ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ಯೋಜನೆಯ ಮೂಲ ಒಪ್ಪಂದದಲ್ಲಿ ಹೇಳಿದ್ದಕ್ಕಿಂತ ಬೇರೆ ಉದ್ದೇಶಕ್ಕೆ ಭೂಮಿಯನ್ನು ಬಳಕೆ ಮಾಡಿಕೊಂಡ ಕಾರಣ, ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (ನೈಸ್) ಸಂಸ್ಥೆ ವಿರುದ್ಧ ಬೆಂಗಳೂರು - ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರದೇಶ ಯೋಜನಾ ಪ್ರಾಧಿಕಾರ (ಬಿಎಂಐಸಿಎಪಿಎ) ನೋಟಿಸ್ ಜಾರಿ ಮಾಡಿದೆ.ಅನುಮತಿ ಪಡೆಯದೆ ವಾಣಿಜ್ಯ ಸಂಕೀರ್ಣಗಳು, ವಾಸದ ಮನೆಗಳು ಮತ್ತು ನಿವೇಶನಗಳನ್ನು ನಿರ್ಮಿಸಿದ ಆರೋಪದ ಮೇಲೆ ನೈಸ್ ಸಂಸ್ಥೆ ಹಾಗೂ ನಂದಿ ಎಕನಾಮಿಕ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್ (ನೆಸೆಲ್) ಸಂಸ್ಥೆಗೆ ಬಿಎಂಐಸಿಎಪಿಎ ಇತ್ತೀಚೆಗೆ ನೋಟಿಸ್ ನೀಡಿದೆ. `ಮೂಲ ಒಪ್ಪಂದದಲ್ಲಿ ಇರುವುದಕ್ಕಿಂತ ಹೆಚ್ಚಿನ ಕಾಮಗಾರಿಗಳಿಗೆ ನೆಸೆಲ್ ಅನುಮತಿ ಕೋರುತ್ತಿದೆ ಎಂಬುದು ಗಮನಕ್ಕೆ ಬಂದಿದೆ~ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ನೇತೃತ್ವದಲ್ಲಿ ಸೆಪ್ಟೆಂಬರ್ 12ರಂದು ನಡೆದ ಬಿಎಂಐಸಿಎಪಿಎ ಸಭೆ ಉಲ್ಲೇಖಿಸಿದೆ.ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಕೆಲವೆಡೆ, ಬಿಎಂಐಸಿಗೆ ರಸ್ತೆ ನಿರ್ಮಿಸಿ ಶುಲ್ಕ ಸಂಗ್ರಹಿಸಲು ಅನುಮತಿ ನೀಡಿದೆ. 30 ವರ್ಷಗಳ ನಂತರ ರಸ್ತೆಯನ್ನು ಸರ್ಕಾರಕ್ಕೆ ಹಸ್ತಾಂತರ ಮಾಡಬೇಕಿದೆ.ಅನುಮತಿ ಪಡೆಯದೆ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳಬಾರದು ಎಂಬ ಸೂಚನೆ ಇದ್ದರೂ, ನೈಸ್ ಕಂಪೆನಿ ಅದನ್ನು ಧಿಕ್ಕರಿಸಿದೆ. ಈ ಹಿನ್ನೆಲೆಯಲ್ಲಿ ಕೆಐಎಡಿಬಿ, ಲೋಕೋಪಯೋಗಿ ಹಾಗೂ ಕಂದಾಯ ಇಲಾಖೆಯ ಸಹಾಯ ಪಡೆದು ಕಂಪೆನಿಯ ವಿರುದ್ಧ ಕ್ರಮ ಜರುಗಿಸಬಹುದು ಎಂದು ಸಭೆಯಲ್ಲಿ ಚರ್ಚಿಸಲಾಗಿದೆ.ಈ ಸಂಗತಿಗಳನ್ನು ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ನೇತೃತ್ವದ ಉನ್ನತಾಧಿಕಾರ ಸಮಿತಿಯ ಮುಂದಿಡಬೇಕು, ಯೋಜನೆಯ ಅನುಷ್ಠಾನ ಕುರಿತು ಸಮಿತಿ ಪರಿಶೀಲನೆ ನಡೆಸುವವರೆಗೆ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳಲು ಕಂಪೆನಿಗೆ ಅವಕಾಶ ನೀಡಬಾರದು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.ಯಶವಂತಪುರ ಹೋಬಳಿಯ ಕೊಡಿಗೇಹಳ್ಳಿ ಮತ್ತು ತಿರುಮಲಾಪುರ, ಕೆಂಗೇರಿ ಹೋಬಳಿಯ ವರಾಹಸಂದ್ರ ಮತ್ತು ಕೊಮ್ಮಘಟ್ಟ, ಉತ್ತರಹಳ್ಳಿ ಹೋಬಳಿಯ ಹೊಸಕೆರೆಹಳ್ಳಿಯಲ್ಲಿ ಭೂಪರಿವರ್ತನೆಗೆ ಕಂಪೆನಿ ಅನುಮತಿ ಕೋರಿದೆ. ಕಂಪೆನಿ ಇದುವರೆಗೆ ಅಂದಾಜು 100 ಎಕರೆ ಭೂಮಿಯ ಪರಿವರ್ತನೆಗೆ ಅನುಮತಿ ಕೋರಿದೆ. ಒಂದೆರಡು ಪ್ರದೇಶಗಳನ್ನು ಹೊರತುಪಡಿಸಿ, ಬಿಎಂಐಸಿಎಪಿಎ ಬೇರೆ ಕಡೆ  ವಸತಿ ನಿವೇಶನಗಳ ಅಭಿವೃದ್ಧಿಗೆ ಭೂಪರಿವರ್ತನೆ ಮಾಡಲು ಅನುಮತಿ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.ಕೆಲವೆಡೆ, ರಸ್ತೆ ನಿರ್ಮಾಣಕ್ಕೆ ಸ್ವಾಧೀನ ಮಾಡಿಕೊಂಡ ಭೂಮಿಯನ್ನು ಇತರೆ ಉದ್ದೇಶಕ್ಕೆ ಬಳಸಲೂ ಅವಕಾಶ ಇದೆ. ಆದರೆ, ವಾಣಿಜ್ಯ ಉದ್ದೇಶಕ್ಕೆ ಬಳಸಲು ಅವಕಾಶ ಇದೆಯೇ ಎಂಬುದು ಸ್ಪಷ್ಟವಾಗಿಲ್ಲ.ಬಿಎಂಐಸಿಎಪಿಎ ಈ ಸಂಬಂಧ ಕೋರಿದ್ದ ಸ್ಪಷ್ಟನೆಗೆ ಲೋಕೋಪಯೋಗಿ ಇಲಾಖೆ ಹಾಗೂ ಕೆಐಎಡಿಬಿ ಪ್ರತಿಕ್ರಿಯೆ ನೀಡಿಲ್ಲ. ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಲು ಬಿಎಂಐಸಿಎಪಿಎ ಸದಸ್ಯ ಕಾರ್ಯದರ್ಶಿ ಎಚ್.ಬಿ. ಹೊನ್ನೂರ್ ನಿರಾಕರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.