ಶನಿವಾರ, ಮೇ 15, 2021
26 °C
ಪಶ್ಚಿಮ ಘಟ್ಟದ ನದಿ ಕಣಿವೆಯಲ್ಲಿ ಕಿರು ಅಣೆಕಟ್ಟೆ

ಅನುಮತಿ ರದ್ದತಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಉತ್ತರ ಕನ್ನಡ ಜಿಲ್ಲೆ ಸೇರಿದಂತೆ  ಪಶ್ಚಿಮಘಟ್ಟದ ನದಿ ಕಣಿವೆಗಳಲ್ಲಿ ಕಿರು ಅಣೆಕಟ್ಟು ನಿರ್ಮಿಸಲು ಖಾಸಗಿ ಕಂಪೆನಿಗಳು ಇಂಧನ ಇಲಾಖೆಯಿಂದ (ಕ್ರೆಡಿಲ್) ಆರಂಭಿಕ ಅನುಮತಿ ಪಡೆದಿವೆ. ಈ ಪ್ರಸ್ತಾವಗಳಿಗೆ ಅರಣ್ಯ ಇಲಾಖೆ ಅನುಮತಿ ದೊರತಿಲ್ಲ.ಹೀಗಾಗಿ ಪ್ರಸ್ತಾಪಿತ ಯೋಜನೆಗಳ ಆರಂಭಿಕ ಅನುಮತಿ ರದ್ದುಗೊಳಿಸಬೇಕು ಪರಿಸರ ಕಾರ್ಯಕರ್ತರ ಸಮಾವೇಶ ಸರ್ಕಾರವನ್ನು ಆಗ್ರಹಿಸಿದೆ.ಗುರುವಾರ ತಾಲ್ಲೂಕಿನ ಭೈರುಂಬೆಯಲ್ಲಿ ಪರಿಸರ ಉತ್ಸವದ ನಂತರ ನಡೆದ ಸಮಾವೇಶದಲ್ಲಿ ಅನೇಕ ನಿರ್ಣಯ ಸ್ವೀಕರಿಸಲಾಗಿದೆ. ಜಿಲ್ಲೆಯ ಬೆಟ್ಟ ಅಭಿವೃದ್ಧಿಗೆ ವಿಶೇಷ ಯೋಜನೆ ಜಾರಿ ಮಾಡಬೇಕು ಹಾಗೂ ಬೆಟ್ಟ ನಿಯಮ ತಿದ್ದುಪಡಿ ಮಾಡಿ ರೈತರಿಗೆ ಹೆಚ್ಚಿನ ಸವಲತ್ತು ನೀಡಬೇಕು. ಅರಣ್ಯ ಇಲಾಖೆ ಕರಾವಳಿ ಹಸಿರು ಕವಚ ಯೋಜನೆ, ದೇವರ ಕಾಡು ಸಂರಕ್ಷಣೆ ಯೋಜನೆ, ಗ್ರಾಮ ಅರಣ್ಯ ಸಮಿತಿ ಪುನಶ್ಚೇತನ ಯೋಜನೆಗಳನ್ನು ಜಾರಿ ಮಾಡಬೇಕು.ನಗರ ತ್ಯಾಜ್ಯ ಬಳಸಿ ಬಯೋಗ್ಯಾಸ್ ಉತ್ಪಾದಿಸಲು ನಗರ ಸ್ಥಳೀಯ ಸಂಸ್ಥೆಗಳು ವಿಶೇಷ ಯೋಜನೆ ರೂಪಿಸಬೇಕು. ಅರಣ್ಯ ಇಲಾಖೆ ಅರಣ್ಯ ಜನಸಂಪರ್ಕ ಸಭೆಗಳನ್ನು ವಲಯ ಮಟ್ಟದಲ್ಲಿ ನಡೆಸಬೇಕು. ಕೈಗಾ ಸುತ್ತಲಿನ ಹಳ್ಳಿಗಳಲ್ಲಿ ನಡೆಸಿರುವ ಆರೋಗ್ಯ ಸಮೀಕ್ಷಾ ವರದಿಯನ್ನು ಸರ್ಕಾರ ಪ್ರಕಟಿಸಬೇಕು. ಭಟ್ಕಳದ ಎಂಡೋಸಲ್ಫಾನ್ ಪೀಡಿತರ ಹಳ್ಳಿಗಳಲ್ಲಿ ನಡೆಸಿದ್ದ ಆರೋಗ್ಯ ಸಮೀಕ್ಷಾ ವರದಿಯನ್ನು ಆರೋಗ್ಯ ಇಲಾಖೆ ಪ್ರಕಟಿಸಬೇಕು. ತದಡಿಯಲ್ಲಿ ಸೌರ ವಿದ್ಯುತ್ ಸ್ಥಾವರ ಸ್ಥಾಪನೆಗೆ ಸರ್ಕಾರ ಚಾಲನೆ ನೀಡಬೇಕು. ಬೇಡ್ತಿ   ಅಘನಾಶಿನಿ ಹಾಗೂ ಶಾಲ್ಮಲಾ ಕಣಿವೆ ಸಂರಕ್ಷಿತ ಪ್ರದೇಶಗಳ ನಿರ್ವಹಣೆಯಲ್ಲಿ ಸ್ಥಾನಿಕ ಜನ ಪಾಲ್ಗೊಳ್ಳಲು ಅಗತ್ಯ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ರೂಪಿಸಬೇಕು.ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಕಾರವಾರ ಸಾಗರ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ವಿ.ಎನ್. ನಾಯಕ, ಹೊನ್ನಾವರ ಸ್ನೇಹಕುಂಜದ ಅಧ್ಯಕ್ಷ ಎಮ್. ಆರ್. ಹೆಗಡೆ, ಪ್ರೊ.ವಾಸುದೇವ, ವನವಾಸಿ ಮುಖಂಡ ಶಾಂತಾರಾಮ ಸಿದ್ದಿ, ವನ್ಯಜೀವಿ ತಜ್ಞ ಬಾಲಚಂದ್ರ ಸಾಯಿಮನೆ, ಈಶಣ್ಣ ನೀರ್ನಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.ಪರಿಸರ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದ ಹಿರಿಯ ವಿಜ್ಞಾನ ಬರಹಗಾರ ನಾಗೇಶ ಹೆಗಡೆ, ಪರಿಸರ ಚಳವಳಿ, ಕಿರು ಅಣೆಕಟ್ಟು ವಿರುದ್ಧ ಚಳವಳಿ ಇನ್ನಷ್ಟು ನಡೆಯಬೇಕು ಎಂದರು. ಶಾರದಾಂಬಾ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ, ನಾರಾಯಣ ಗಡೀಕೈ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.