ಶುಕ್ರವಾರ, ಜೂನ್ 25, 2021
25 °C

ಅನುರಾಗದ ಅಲೆಗಳು

ಸಾಕ್ಷಿ Updated:

ಅಕ್ಷರ ಗಾತ್ರ : | |

ಅನುರಾಗದ ಅಲೆಗಳು

`ಅನುರಾಗ~ ಹೆಸರಿನ ಬ್ಲಾಗ್ ಬರೆಯುವ ರಶ್ಮಿ ಕಾಸರಗೋಡಿನವರು. ಇರೋದು ಬೆಂಗಳೂರಿನಲ್ಲಿ, ಉದ್ಯೋಗ ನಿಮ್ಮಿತ್ತಂ. ಭಾಷಣ, ಅಡುಗೆ, ಸ್ವಪ್ನಲೋಕ ವಿಹಾರಗಳಲ್ಲಿ ಅವರಿಗೆ ಆಸಕ್ತಿಯಂತೆ. ತಮ್ಮ ಕನಸು-ಭಾವನೆಗಳನ್ನು ಅಕ್ಷರ ರೂಪಕ್ಕೆ ಇಳಿಸುವುದು ಬಲು ಪ್ರೀತಿಯ ಕೆಲಸವಂತೆ.



ರಶ್ಮಿ ಕಥೆ, ಕವಿತೆಗಳನ್ನೂ ಬರೆಯಬಲ್ಲರು. ಅವರhttp://anuraaga.blogspot.in ವಿಳಾಸದ ಬ್ಲಾಗಿನ ಬರಹಗಳಲ್ಲಿ ಎದ್ದುಕಾಣುವ ಗುಣ ಭಾವುಕತೆ. `ಅಪ್ಪ~ ನೀನು ನಕ್ಕರೆ ತುಂಬಾ ಸ್ಮಾರ್ಟ್ ಆಗಿ ಕಾಣುತ್ತೀ ಎನ್ನುವುದು ನನಗಷ್ಟೇ ಗೊತ್ತು~ ಎಂದು ಅಪ್ಪನಿಗೆ ಪತ್ರ ಬರೆಯುವ ಇವರು, `ಬೆಂಗಳೂರಿನಲ್ಲಿ ಸ್ಲಟ್‌ವಾಕ್ ಅವಶ್ಯಕತೆಯಿದೆಯಾ~ ಎಂದು ತಮ್ಮದೇ ವಾದ ಮಂಡಿಸಬಲ್ಲರು. ಪ್ರೀತಿ, ಸಿನಿಮಾ, ಫೇಸ್‌ಬುಕ್‌ಗಳನ್ನು ಒಟ್ಟಾಗಿ ವಿಶ್ಲೇಷಿಸಬಲ್ಲರು.

 

`ಪ್ರೀತಿಯ ಬಗ್ಗೆ ಇಷ್ಟೊಂದು ಸಿನಿಮಾಗಳನ್ನು ನೋಡಿದರೂ ನಿಜವಾದ ಪ್ರೀತಿ ಏನೆಂಬುದು ಇಂದಿನ ಯುವ ಜನರಿಗೆ ಅರ್ಥವಾಗದ ಮಾತು~ ಎಂದು ಮಾರ್ಮಿಕವಾಗಿ ಹೇಳಬಲ್ಲರು. ಐಶ್ವರ್ಯಾ ರೈಳ ಪ್ರಸವದ ಬಗ್ಗೆ ತಲೆಬೇನೆ ತಂದುಕೊಳ್ಳುವ ಮಾಧ್ಯಮಗಳು, ಮಣಿಪುರದ ಶರ್ಮಿಳಾ ಎನ್ನುವ ಹೆಣ್ಣುಮಗಳ ಮ್ಯಾರಥಾನ್ ಉಪವಾಸದ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸುವುದನ್ನು ಸೂಚ್ಯವಾಗಿಯೇ ಟೀಕಿಸಬಲ್ಲರು.



ರಶ್ಮಿ ಅವರ ಬ್ಲಾಗಿನ ಲಿಂಕು-http://anuraaga.blogspot.in

`ನಮ್ಮೂರ ಗೋರ್ಮೆಂಟ್ ಬಾವಿ~ ರಶ್ಮಿ ಅವರ ಬರಹಗಳ ಮಾದರಿಗೆ ಒಂದು ಒಳ್ಳೆಯ ಉದಾಹರಣೆ. ಬಾವಿಯಿಂದ ಮೊಗೆದ ಒಂದು ಬೊಗಸೆ ನೀರು ಇಲ್ಲಿದೆ:

“ಊರಿಗೊಬ್ಬಳೇ ಪದ್ಮಾವತಿ” ಎಂಬಂತೆ ನಮ್ಮೂರಲ್ಲೂ ಒಂದು ಸರ್ಕಾರಿ ಬಾವಿ ಇದೆ.



ಸರ್ಕಾರಿ ಬಾವಿ ಎಂದು ಯಾರು ಹೇಳಲ್ಲ... ಎಲ್ಲರೂ ಅದನ್ನು ಗೋರ್ಮೆಂಟು ಬಾವಿ ಎಂದೇ ಹೇಳೋದು. ನಮ್ಮೂರಿನ ಜನರ ದಾಹ ತೀರಿಸುವ ಏಕೈಕ ಜಲನಿಧಿ ಇದು.



ಊರ ಮಧ್ಯೆ ಸಿಮೆಂಟು ಕಟ್ಟೆಯ ಈ ಬಾವಿಯ ಪಕ್ಕವೇ ಸಿಮೆಂಟಿನ ಒಂದು ಸಣ್ಣ ಟ್ಯಾಂಕ್ ಕೂಡ ಇದೆ. ನೀರು ಸೇದೋಕೆ ಬಂದೋರು ಯಾರಾದ್ರೂ ಆ ಟ್ಯಾಂಕ್‌ಗೆ ಒಂದು ಕೊಡ ನೀರು ಹಾಕಿ ಬಿಟ್ಟರೆ ಅಲ್ಲಿರುವ ಪ್ರಾಣಿ ಪಕ್ಷಿಗಳ ದಾಹವೂ ಇಂಗುತ್ತದೆ.



ಗೋರ್ಮೆಂಟು ಬಾವಿ ಅಂದರೆ ಇನ್ನು ಹೇಳಬೇಕೆ? ಸ್ವಂತ ಮನೆ ಕಟ್ಟಿ ಬಾವಿ ತೋಡುವವರೆಗೂ, ಮನೆಯ ಬಾವಿಯಲ್ಲಿ ನೀರು ಬತ್ತಿದಾಗಲೂ ನೆನಪಾಗುವುದೇ ಈ ಬಾವಿ. ಈವಾಗ ಮನೆಗೊಂದು ಬೋರ್‌ವೆಲ್ ಜತೆಗೆ ಪಂಚಾಯತ್ ವತಿಯಿಂದ ಮನೆ ಮನೆಗೆ ನೀರು ಸೌಕರ್ಯವಿರುವುದರಿಂದ  ಬಾಡಿಗೆ ಮನೆಯಲ್ಲಿ ವಾಸವಿರುವವರೇ ಈ ಬಾವಿಯ ಗಿರಾಕಿಗಳು.



ಬೆಳಗ್ಗೆ ಬೆಳಕು ಮೂಡುತ್ತಲೇ ನೀರೆಯರು ಬಾವಿಯತ್ತ ಧಾವಿಸುತ್ತಾರೆ. `ಚಾ ಆಯ್ತೊ? ತಿಂಡಿ ಏನು?~ ಎಂಬ ಒನ್ ಲೈನ್ ಪ್ರಶ್ನೆಗೆ ಒಂದೇ ಪದದಲ್ಲಿ ಉತ್ತರಿಸಿ ನೀರು ಸೇದಿ ಗಡಿಬಿಡಿಯಲ್ಲಿ ನೀರು ಕೊಂಡೊಯ್ಯುವುದು ಬೆಳಗ್ಗಿನ ವಿಶೇಷ. ಮಧ್ಯಾಹ್ನದ ವೇಳೆಗೆ ಬಾವಿಕಟ್ಟೆಯ ಸುತ್ತಲೂ ತಟ ಪಟ ಅಂತಾ ಬಟ್ಟೆ ಒಗೆಯುವವರೇ ಜಾಸ್ತಿ.

 

ಅಲ್ಲೇ ಬಟ್ಟೆ ಒಗೆದು ಪಕ್ಕದಲ್ಲಿರುವ ಮರಗಳ ಕೊಂಬೆಗಳಿಗೆ ಹಗ್ಗ ಕಟ್ಟಿಯೋ, ಇಲ್ಲದಿದ್ದರೆ ಅಲ್ಲೇ ಪಾರೆಕಲ್ಲಿನ ಮೇಲೆ ಬಟ್ಟೆ ಒಣಗಿಸಿ ಮನೆಗೆ ಮರಳುವವರೇ ಜಾಸ್ತಿ.

ಸಂಜೆ ವೇಳೆಗೆ ನೋಡ್ಬೇಕಪ್ಪಾ... ನೀರು ಸೇದಲು ನೀರೆಯರ ಕ್ಯೂ... ಜತೆಗೆ ಅಲ್ಲಿ ಒಂದೆರಡು ಗಂಡಸರು ಇದ್ದೇ ಇರುತ್ತಾರೆ.

 

ಅದರಲ್ಲೂ ಮದುವೆಯಾದ ಹೊಸತರಲ್ಲಿ ತನ್ನ ಹೆಂಡತಿಗೆ ನೀರು ತರಲು ಸಹಾಯ ಮಾಡುವ ಗಂಡನ ಗಮ್ಮತ್ತೇ ಬೇರೆಯಿರುತ್ತೆ. ಪಾಪ... ಆ ಹುಡುಗಿಯನ್ನು ಎಷ್ಟು ಚೆನ್ನಾಗಿ ನೋಡಿಕೊಳ್ತಾನಲ್ವಾ? ಎಂದು ಒಂದೆರಡು ಹೆಂಗಸರ ಬಾಯಿಯಿಂದ ಕೇಳುವವರೆಗೆ ಆ `ಗಂಡ~ ನೀರು ಸೇದಿದ್ದೇ ಸೇದಿದ್ದು. ಅವ ನೀರು ತೆಗೆದುಕೊಂಡು ಹೋಗುವ ಸ್ಟೈಲ್ ಬೇರೆ ಇರುತ್ತೆ...”



`ಬ್ಲಾಗಿಲನು ತೆರೆದು~ ಕನ್ನಡ ಬ್ಲಾಗ್‌ಗಳ ಇಣುಕುನೋಟ. ಪ್ರತಿ ಶುಕ್ರವಾರ ಒಂದು ಬ್ಲಾಗ್ ಇಲ್ಲಿ ತೆರೆದುಕೊಳ್ಳಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.