ಶುಕ್ರವಾರ, ಮೇ 14, 2021
21 °C
ಹೊಸ ತಾಲ್ಲೂಕು ರಚನೆ

ಅನುಷ್ಠಾನಕ್ಕೆ ಧರ್ಮಸಿಂಗ್ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹೊಸ ತಾಲ್ಲೂಕುಗಳ ರಚನೆ ಕುರಿತು ಬಿಜೆಪಿ ಸರ್ಕಾರ ತೆಗೆದುಕೊಂಡಿದ್ದ ನಿರ್ಧಾರವನ್ನು ಶೀಘ್ರ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಎನ್.ಧರ್ಮಸಿಂಗ್ ಒತ್ತಾಯಿಸಿದರು.ನಗರದ ತಮ್ಮ ನಿವಾಸದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ತಾಲ್ಲೂಕುಗಳ ರಚನೆಯಲ್ಲಿ ಅಗತ್ಯವಿದ್ದರೆ ಕೆಲವು ಮಾರ್ಪಾಡುಗಳನ್ನು ಮಾಡಬಹುದು. ಆದರೆ, ಹೊಸ ತಾಲ್ಲೂಕುಗಳ ರಚನೆಯ ನಿರ್ಧಾರವನ್ನೇ ಕೈ ಬಿಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.   `ಬಿಜೆಪಿ ಸರ್ಕಾರ ಕೈಗೊಂಡ ನಿರ್ಧಾರ ಎಂಬ ಕಾರಣಕ್ಕಾಗಿಯೇ ಸರ್ಕಾರ ಹೊಸ ತಾಲ್ಲೂಕುಗಳ ರಚನೆಯನ್ನು ತಡೆ ಹಿಡಿಯುವುದಾಗಲೀ, ಮುಂದೂಡುವುದಾಗಲೀ ಮಾಡಬಾರದು. ಅಂದಿನ ಮುಖ್ಯಂಮತ್ರಿ ಜಗದೀಶ ಶೆಟ್ಟರ್ ರಾಜಕೀಯ ಕಾರಣಗಳಿಗಾಗಿ ಈ ನಿರ್ಧಾರ ತಳೆದಿರಬಹುದು. ಆದರೆ, ಪ್ರಸ್ತುತ ಸರ್ಕಾರ ಜನರ ಬಹುವರ್ಷಗಳ ಬೇಡಿಕೆ ಹಾಗೂ ಆಡಳಿತಾತ್ಮಕ ಅನುಕೂಲದ ದೃಷ್ಟಿಯಿಂದ ಎಚ್ಚರಿಕೆಯ ನಿರ್ಧಾರ ಕೈಗೊಳ್ಳಬೇಕು' ಎಂದ ಧರ್ಮಸಿಂಗ್, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ ಅವರೊಂದಿಗೆ ಚರ್ಚಿಸುವುದಾಗಿ ಹೇಳಿದರು. ಹಳೆ ಮೈಸೂರು ಪ್ರದೇಶಕ್ಕಿಂತ ಉತ್ತರ ಕರ್ನಾಟಕದಲ್ಲಿ, ವಿಶೇಷವಾಗಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ತಾಲ್ಲೂಕುಗಳ ಮರು ವಿಂಗಡಣೆ ಅತ್ಯಗತ್ಯವಾಗಿದೆ. ಹಳೆ ಮೈಸೂರು ಪ್ರದೇಶ ಚಿಕ್ಕ ತಾಲ್ಲೂಕುಗಳನ್ನು ಹೊಂದಿದ್ದು, ಉತ್ತರ ಕರ್ನಾಟಕದ ತಾಲ್ಲೂಕುಗಳು ತುಂಬ ದೊಡ್ಡದಾಗಿವೆ. ಸುಲಭ ನಿರ್ವಹಣೆ ಹಾಗೂ ಉತ್ತಮ ಆಡಳಿತಕ್ಕಾಗಿ ಅವುಗಳನ್ನು ಮರು ವಿಂಗಡಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.ನೂತನ ತಾಲ್ಲೂಕಗಳ ರಚನೆಗೆ ಸಂಬಂಧಿಸಿದ ಪ್ರಸ್ತಾವದಲ್ಲಿ ಸರ್ಕಾರ ಬೇಕಿದ್ದರೆ ಅಗತ್ಯ ಬದಲಾವಣೆಗಳನ್ನು ಮಾಡಲಿ. ಪ್ರಸ್ತಾವಗಳ ಪರಿಶೀಲನೆಗೆ ಸಮಿತಿಯನ್ನೂ ರಚಿಸಬಹುದು. ಆದರೆ, ಹೊಸ ತಾಲ್ಲೂಕುಗಳನ್ನು ರಚಿಸಿಯೇ ತೀರಬೇಕು ಎಂದರು.ಗುಲ್ಬರ್ಗ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಜನರು ಹೊಸ ತಾಲ್ಲೂಕುಗಳ ರಚನೆಯ ಕುರಿತು ನನ್ನನ್ನು ವಿಚಾರಿಸ್ತುತಿದ್ದಾರೆ. ಹಲವು ಹೊಸ ತಾಲ್ಲೂಕುಗಳನ್ನು ರಚಿಸಲು ಸರ್ಕಾರಕ್ಕೆ ತನ್ನದೇ ಆದ ಹಣಕಾಸು ಇತಿಮಿತಿಗಳು ಇರಬಹುದು. ಆದರೆ, ಬಹುದಿನಗಳ ತಮ್ಮ ಕನಸು ನನಸಾಗುವುದನ್ನು ಕಾಣಲು ಜನತೆ ಕಾತರಿಸುತ್ತಿದ್ದಾರೆ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.