ಬುಧವಾರ, ಮೇ 12, 2021
17 °C
ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಅಸಮಾಧಾನ

ಅನುಷ್ಠಾನಕ್ಕೆ ಬಾರದ ನಿರ್ಣಯಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಆರು ತಿಂಗಳ ಹಿಂದೆ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕೈಗೊಂಡಿದ್ದ ನಿರ್ಣಯಗಳನ್ನೆ ಅಧಿಕಾರಿಗಳು ಅನುಷ್ಠಾನಗೊಳಿಸಿಲ್ಲ. ಹೀಗಾಗಿ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳು ಸಫಲವಾಗುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.ತಾಲ್ಲೂಕಿನ ವೆಂಕಟಬೆನ್ನೂರು ಹಾಗೂ ಲಿಂಗದಳ್ಳಿ ಗ್ರಾಮದಲ್ಲಿ ಅತ್ಯಾಚಾರಕ್ಕೊಳಗಾದ ಬಡ ಯುವತಿಯರ ಕುಟುಂಬಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯರ 1 ತಿಂಗಳ ಗೌರವ ಧನ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸ್ವಯಂ ಪ್ರೇರಣೆಯಿಂದ ಒಪ್ಪಿದ 1 ದಿನದ ಸಂಬಳವನ್ನು ಹಂಚಿಕೆ ಮಾಡಿ ಕೊಡುವಂತೆ ಹಿಂದಿನ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೆ, ಇಲ್ಲಿಯವರೆಗೂ ಅಧಿಕಾರಿಗಳು ಪರಿಹಾರ ತಲುಪಿಸಿಲ್ಲ ಏಕೆ? ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಶೋಭಾ ಬಾಣಿ ಕೇಳಿದರು.`ವಿವಿಧ ಇಲಾಖೆಗಳಿಂದ ಚೆಕ್ ತಲುಪುವುದು ತಡವಾಯಿತು. ಅಲ್ಲದೆ, ಪಾಸ್‌ಬುಕ್ ಮಾಡಿಸಿ, ಪರಿಹಾರವನ್ನು ಮುದ್ದತಿ ಠೇವಣಿ ಇಡುವ ಕೆಲಸ ಮಾಡುತ್ತಿದ್ದೇವೆ' ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ರತ್ನಾ ಕಲಂದಾನಿ ಸ್ಪಷ್ಟನೆ ನೀಡಿದರು.`18 ವರ್ಷಗಳವರೆಗೂ ಬಡ ಕುಟುಂಬಗಳು ಕಾಗದ ನೋಡಿಕೊಂಡು ಜೀವನ ನಡೆಸಲು ಸಾಧ್ಯವಿಲ್ಲ. ಅತ್ಯಾಚಾರಕ್ಕೊಳಗಾದ ಯುವತಿಯರ ಕುಟುಂಬಕ್ಕೆ ಪರಿಹಾರದ ಮೊತ್ತವನ್ನು ಈಗಲೇ ನೀಡಬೇಕು' ಎಂದು ಶೋಭಾ ಬಾಣಿ ಒತ್ತಾಯಿಸಿದರು. ಆದರೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕೆಲವು ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿ, `ಯುವತಿಗೆ 18 ವರ್ಷವಾದ ಮೇಲೆಯೇ ಪರಿಹಾರ ಮೊತ್ತ ನೀಡಬೇಕು. ಸ್ವಾವಲಂಬನೆ ಜೀವನ ನಡೆಸಲು ಅನುಕೂಲವಾಗುತ್ತದೆ' ಎಂದು ವಾದಿಸಿದರು.ದುರಸ್ತಿಯಾಗದ ಮೈಕ್: `ಸದಸ್ಯರು ಮಾತನಾಡಲು ಮೈಕ್‌ಗಾಗಿ ಕಾಯುವ ಪರಿಸ್ಥಿತಿ ಇದೆ. ಅಲ್ಲದೆ ಮೈಕ್‌ಗಳನ್ನು ದುರಸ್ತಿಗೊಳಿಸುವಂತೆ ಹಿಂದಿನ ಸಭೆಯಲ್ಲಿ ಸೂಚಿಸಲಾಗಿತ್ತು. ಆದರೆ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿಲ್ಲ' ಎಂದು ಸದಸ್ಯೆ ಜಯಶ್ರೀ ಸಾವಳೇಶ್ವರ ಮೈಕ್ ನೆಲಕ್ಕೆ ಎಸೆದು ತರಾಟೆಗೆ ತೆಗೆದುಕೊಂಡರು.ಜಯಶ್ರೀ ಅವರನ್ನು ಬೆಂಬಲಿಸಿ ಅನೇಕ ಸದಸ್ಯರು ಮುಖ್ಯ ಯೋಜನಾ ಅಧಿಕಾರಿ (ಸಿಪಿಒ) ವಿರುದ್ಧ ಗುಡುಗಿದರು. `ಒಂದು ತಿಂಗಳ ಸಮಯಾವಕಾಶ ಕೊಡಿ, ಎಲ್ಲವೂ ದುರಸ್ತಿಯಾಗುವುದಿದೆ' ಎಂದು ಸಿಪಿಒ ಶಿವಸರಣಪ್ಪ ಕಿರಣಗಿ ಮನವಿ ಮಾಡಿದರು.ವಿಎಸ್‌ಎಸ್‌ಎನ್ ಮೂಲಕ ಯಂತ್ರಗಳ ಬಾಡಿಗೆ: ಗ್ರಾಮ ಪಂಚಾಯಿತಿ ಮಟ್ಟದಲ್ಲಿರುವ ವಿಎಸ್‌ಎಸ್‌ಎನ್‌ಗಳ ಮೂಲಕ  ಟ್ರ್ಯಾಕ್ಟರ್ ಹಾಗೂ ರಾಶಿ ಮೆಷಿನ್‌ಗಳನ್ನು `ಲಾಭ-ನಷ್ಟ'ವಿಲ್ಲದೆ ನಡೆಸಲು ಸರ್ಕಾರ ನೀಡಿದೆ. ಆದರೆ ಅವುಗಳನ್ನು ಹೊರಗಿನ ಬಾಡಿಗೆ ದರದಲ್ಲೆ ರೈತರಿಗೆ ಒದಗಿಸಲಾಗುತ್ತಿದ್ದು, ಕೂಡಲೇ ಅವುಗಳ ದರ ಇಳಿಕೆ ಮಾಡಬೇಕು ಎಂದು ಹಿಂದಿನ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೆ ಬಾಡಿಗೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಅಧಿಕಾರಿಗಳು ಈ ಬಗ್ಗೆ ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ ಎಂದು ಶೋಭಾ ಭಾಣಿ ಅವರು ವಿಷಯ ಪ್ರಸ್ತಾಪಿಸಿದರು.`ಬಾಡಿಗೆ ಕಡಿಮೆಗೊಳಿಸುವಂತೆ ಕೋರಲಾಗಿತ್ತಾದರೂ ಬಾಡಿಗೆಯಲ್ಲಿ ವ್ಯತ್ಯಾಸ ಸಾಧ್ಯವಿಲ್ಲ' ಎಂದು ಜಿಲ್ಲಾ ರೈತ ಸಮಾಜದ ಮುಖಂಡರು ತಿಳಿಸಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದರು.ಈ ಬಗ್ಗೆ ಸಭೆಗೆ ಮಾಹಿತಿ ನೀಡಿದ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ದಂಗಾಪುರ, `ಡೀಸೆಲ್ ದರ ಏರಿಕೆಯಾಗಿದ್ದು, ಚಾಲಕನ ಸಂಬಳ ಹಾಗೂ ಯಂತ್ರಗಳ ದುರಸ್ತಿಗಾಗಿ ಹಣ ಬೇಕಾಗುವುದರಿಂದ ಮೊದಲಿನ ದರವನ್ನು ಕಡಿಮೆ ಮಾಡಲು ಸಾಧ್ಯವಾಗಿಲ್ಲ. ಇದು ಪ್ರಾಯೋಗಿಕವಾಗಿ ಕಂಡುಕೊಂಡಿರುವ ಸತ್ಯ. ಈ ಯೋಜನೆ `ಲಾಭ-ನಷ್ಟ'ವಿಲ್ಲದೆಯೆ ನಡೆಯುತ್ತಿದೆ. ಖುದ್ದಾಗಿ ಲೆಕ್ಕಪತ್ರ ಪರಿಶೀಲಿಸಿದ್ದೇನೆ' ಎಂದರು.ಹೊರಗಡೆ ಟ್ರ್ಯಾಕ್ಟರ್ ಬಾಡಿಗೆ ಪ್ರತಿ ಗಂಟೆಗೆ ರೂ 650 ಇದೆ. ರೂ 450ಕ್ಕೆ ಆಗದಿದ್ದರೂ ರೂ 500ಕ್ಕೆ ಇಳಿಸುವ ಬಗ್ಗೆ ಪರಿಶೀಲಿಸಬೇಕು ಎಂದು ಶೋಭಾ ಬಾಣಿ ಕೋರಿದರು.ಚೆಕ್ ಡ್ಯಾಂ ಆವಾಂತರ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನಿರ್ಮಿಸುತ್ತಿರುವ ಚೆಕ್‌ಡ್ಯಾಂ ಅವೈಜ್ಞಾನಿಕವಾಗಿದ್ದು, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸದಸ್ಯ ಬಸವರಾಜ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.ಉದ್ಯೊಗ ಖಾತರಿ ಯೋಜನೆಯಲ್ಲಿ ಅವ್ಯವಹಾರ ನಡೆಯುತ್ತಿದ್ದು, ಜನಪ್ರತಿನಿಧಿಗಳನ್ನು ಒಳಗೊಂಡಂತೆ ಎಲ್ಲರ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಹಿಂದಿನ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ ಇಲ್ಲಿಯವರೆಗೂ ಯಾವುದೇ ಅಧಿಕಾರಿ ತನಿಖೆ ನಡೆಸಿಲ್ಲ ಎಂದು ಸಿದ್ದರಾಮ ಪ್ಯಾಟಿ ತರಾಟೆಗೆ ತೆಗೆದುಕೊಂಡರು.`ಕೆಲವು ಕಡೆಗಳಲ್ಲಿ ತನಿಖೆ ನಡೆಸಲಾಗಿದೆ. ತನಿಖೆ ಮುಂದುವರಿದಿದೆ' ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.ಆರು ತಿಂಗಳಾದರೂ ಈ ಬಗ್ಗೆ ಅಧಿಕಾರಿಗಳು ಗಮನ ಹರಿಸದಿದ್ದರೆ ಸಭೆ ನಡೆಸುವುದು ಯಾವ ಪ್ರಯೋಜನಕ್ಕೆ ಎಂದು ಸದಸ್ಯರು ಅಸಮಾಧಾನಗೊಂಡರು.ತೋಟಗಾರಿಕೆ ಯೋಜನೆಯಲ್ಲಿ ಅವ್ಯವಹಾರ:

ಜೇವರ್ಗಿ ತಾಲ್ಲೂಕಿನಲ್ಲಿ ತೋಟಗಾರಿಕೆ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಅಧಿಕಾರಿಗಳೊಂದಿಗೆ ಸಮಕ್ಷಮ ತನಿಖೆ ನಡೆಸಿದಾಗ ಒಂದೇ ಕುಟುಂಬದ 15 ಸದಸ್ಯರಿಗೆ ವಿವಿಧ ಯೋಜನೆಗಳನ್ನು ಮಂಜೂರು ಮಾಡಿ, ಸಹಾಯ ಧನ ನೀಡಲಾಗಿದೆ. ಪಪ್ಪಾಯಿ, ಬಾಳೆಗಿಡ ತೆಗೆದು ಎರಡು ವರ್ಷಗಳಾದರೂ ಇನ್ನೂ ಅವುಗಳಿಗೆ ಸಹಾಯಧನ ಒಗಿಸುತ್ತಿರುವುದು ಪತ್ತೆಯಾಗಿದೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಉತ್ತರಿಸಬೇಕು ಎಂದು ಶೋಭಾ ಬಾಣಿ ಪಟ್ಟು ಹಾಕಿದರು.`ಇದು ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಅವ್ಯವಹಾರ ಆಗಿರುವುದರಿಂದ ಬೇರೆ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತನಿಖಾ ಸಮಿತಿ ರಚಿಸಲಾಗುವುದು. ಆದಷ್ಟು ಶೀಘ್ರದಲ್ಲೆ ತನಿಖೆ ವರದಿಯನ್ನು ಒದಗಿಸಲಾಗುವುದು' ಎಂದು ಸಿಇಒ ಹೇಳಿದರು.ಅಂಗನವಾಡಿ ಕಾರ್ಯಕರ್ತೆಯರ ನೇಮಕಕ್ಕೆ ಸಂಬಂಧಿಸಿದಂತೆ ಚಿತ್ತಾಪುರ ತಾಲ್ಲೂಕಿನಲ್ಲಿ ನಡೆದಿರುವ ಅವ್ಯವಹಾರ ತನಿಖೆಯನ್ನು ಲೋಕಾಯುಕ್ತರಿಗೆ ಒಪ್ಪಿಸಬೇಕು ಎನ್ನುವುದಕ್ಕೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು.ಮಧ್ಯಾಹ್ನದವರೆಗೂ ಅನುಪಾಲನಾ ವರದಿ ಬಗ್ಗೆಯೇ ಸಭೆಯಲ್ಲಿ ಪ್ರಸ್ತಾಪವಾಯಿತು. ಮಾರ್ಚ್‌ನಲ್ಲಿ ತಯಾರಿಸಿದ್ದ ಸಭಾ ನಡಾವಳಿಯನ್ನೆ ಈ ಸಭೆಗೆ ನೀಡಲಾಗಿತ್ತು. ಅಧ್ಯಕ್ಷ ಶರಣಪ್ಪ ಪೊಲೀಸ್ ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪಾರ್ವತಿ ಎಸ್.ಚವ್ಹಾಣ ಇದ್ದರು.

ಆಳಂದ ಶಾಸಕ ಬಿ.ಆರ್. ಪಾಟೀಲ ಹಾಗೂ ಗುಲ್ಬರ್ಗ ಗ್ರಾಮೀಣ ಶಾಸಕ ಜಿ.ರಾಮಕೃಷ್ಣ ಸಭೆಯಲ್ಲಿ ಪಾಲ್ಗೊಂಡಿದ್ದರು.

`ಅಂತರ್ಜಲ ಹೆಚ್ಚಳಕ್ಕೆ ಶಾಶ್ವತ ಯೋಜನೆ ರೂಪಿಸಿ'

ಗುಲ್ಬರ್ಗ: ಅಂತರ್ಜಲ ಹೆಚ್ಚಳಕ್ಕೆ ಜಿಲ್ಲಾ ಪಂಚಾಯಿತಿಯಿಂದ ಶಾಶ್ವತ ಯೋಜನೆ ರೂಪಿಸಬೇಕು ಎಂದು ಶಾಸಕ ಬಿ.ಆರ್. ಪಾಟೀಲ ಸಲಹೆ ನೀಡಿದರು.ಜಿಲ್ಲಾ ಪಂಚಾಯಿತಿ ಹಳೆ ಸಭಾಂಗಣದಲ್ಲಿ ಗುರುವಾರ ನಡೆದ 8ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.ಚೆಕ್‌ಡ್ಯಾಂ ನಿರ್ಮಿಸುವ ಉದ್ದೇಶ ಸರಿಯಾಗಿದೆ. ಆದರೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಿಬ್ಬಂದಿ ಕೊರತೆ ಇದ್ದು, ವ್ಯವಸ್ಥೆ ತುಂಬಾ ಕೆಟ್ಟದಾಗಿದೆ. ಸಿಬ್ಬಂದಿಯಿಲ್ಲದೆ ಯೋಜನೆ ಕಾರ್ಯಗತಗೊಳಿಸುವುದು ಕಷ್ಟ ಎಂದರು.ಸೆಟಲೈಟ್ ಮೂಲಕ ನೀರು ಎಲ್ಲಿ, ಯಾವ ಪ್ರಮಾಣದಲ್ಲಿ ಹರಿದು ಬರುತ್ತದೆ ಎನ್ನುವ ಮಾಹಿತಿ ಪಡೆದು ಚೆಕ್‌ಡ್ಯಾಂ ನಿರ್ಮಿಸಿದರೆ ಒಳ್ಳೆಯದು. ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಶೇ 90ರಷ್ಟು ಮಳೆನೀರು ಹರಿದು ಸಮುದ್ರ ಸೇರುತ್ತದೆ. ಅದನ್ನು ಬಳಸುವ ಅಗತ್ಯವಿದೆ. ಮುಂದಿನ ಪೀಳಿಗೆಗೆ ಅಂತರ್ಜಲ ಕಾಯ್ದುಕೊಳ್ಳಲು ಶಾಶ್ವತ ಯೋಜನೆ ರೂಪಿಸುವುದು ಅನಿವಾರ್ಯ ಎಂದು ಹೇಳಿದರು.ಮನುಷ್ಯನ ದೇಹದಲ್ಲಿ ನೀರಿನ ಮಟ್ಟ ಅಸಮತೋಲನವಾದರೆ ಹೇಗೆ ಅನಾರೋಗ್ಯ ಶುರುವಾಗುತ್ತದೆಯೋ, ಭೂಮಿಯಲ್ಲೂ ಅಂತರ್ಜಲ ಮಟ್ಟ ವ್ಯತ್ಯಾಸವಾದರೆ ಪ್ರಕೃತಿ ವಿಕೋಪಗಳು ಆರಂಭವಾಗುತ್ತವೆ ಎಂದು ಅಭಿಪ್ರಾಯಪಟ್ಟರು.ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನಿರ್ಮಿಸುತ್ತಿರುವ ಚೆಕ್‌ಡ್ಯಾಂ ಅವೈಜ್ಞಾನಿಕವಾಗಿವೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಪಾಟೀಲ ಅವರು ಪ್ರಸ್ತಾಪಿಸಿದ್ದಕ್ಕೆ ಪೂರಕವಾಗಿ ಶಾಸಕ ಬಿ.ಆರ್. ಪಾಟೀಲ ಮಾತನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.