ಶನಿವಾರ, ಮೇ 21, 2022
20 °C
`ಅನ್ನಭಾಗ್ಯ' ಯೋಜನೆ ಉದ್ಘಾಟನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆಂಜನೇಯ

`ಅನುಷ್ಠಾನದಲ್ಲಿ ವ್ಯತ್ಯಾಸವಾದರೆ ಕಠಿಣ ಕ್ರಮ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ `ಅನ್ನಭಾಗ್ಯ'ದ ಮೂಲಕ ಜಿಲ್ಲೆಯ 13.75 ಲಕ್ಷ ಕಡುಬಡವರ ಹಸಿವು ನೀಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ತಿಳಿಸಿದರು.ನಗರದ ಐಯುಡಿಪಿ ಬಡಾವಣೆಯಲ್ಲಿರುವ ಗಾಂಧಿನಗರದ ಬಾಬು ಜಗಜೀವನರಾಂ ಸಮುದಾಯ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಅನ್ನಭಾಗ್ಯ' ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

`ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿ. ಜನಪ್ರತಿನಿಧಿಗಳಾದ ನಾವು ಯೋಜನೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತೇವೆ. ಯೋಜನೆ ಅನುಷ್ಠಾನದಲ್ಲಿ ವ್ಯತ್ಯಾಸ ವಾದರೆ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಬಿಪಿಎಲ್ ಕಾರ್ಡ್ ನೀಡಲು ಸತಾಯಿಸಬೇಡಿ. ಅರ್ಹರೆನಿಸಿದವರಿಗೆ ತಕ್ಷಣ ಕಾರ್ಡ್ ವಿತರಿಸಿ, `ಅನ್ನಭಾಗ್ಯ' ಯೋಜನೆಯ ಸೌಲಭ್ಯ ತಲುಪುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿ ಗಳಿಗೆ ತಾಕೀತು ಮಾಡಿದರು.

`ಯಾರದೋ ಶಿಫಾರಸಿಗೆ ಮಣಿದು ಉಳ್ಳವರಿಗೆ ಕಾರ್ಡ್ ನೀಡಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಸರ್ಕಾರದ ಮಾರ್ಗಸೂಚಿ ಪ್ರಕಾರವೇ ಬಿಪಿಎಲ್ ಕಾರ್ಡ್ ವಿತರಣೆಯಾಗಬೇಕು' ಎಂದು ಕಟ್ಟು ನಿಟ್ಟಾಗಿ ಆದೇಶಿಸಿದರು.`ಯೋಜನೆ ಐದು ವರ್ಷ ನಿರಂತರವಾಗಿ ನಡೆಯುತ್ತದೆ. ಈ ಬಗ್ಗೆ ಅನುಮಾನ ಬೇಡ. ಅಕ್ಕಿ ಕೊರತೆ ಬಗ್ಗೆ ಗ್ರಾಹಕರು ಆತಂಕ ಪಡಬೇಕಿಲ್ಲ. ಹೊರ ರಾಜ್ಯಗಳಿಂದ ಲಾದರೂ ಅಕ್ಕಿ ಖರೀದಿಸಿ ತರುತ್ತೇವೆ. ಲಭ್ಯವಾಗದಿದ್ದರೆ ಮುಕ್ತ ಮಾರುಕಟ್ಟೆ ಯಿಂದ ಖರೀದಿಸುತ್ತೇವೆ. ಇದಕ್ಕೆ ಬೇಕಾದ ವರಮಾನವನ್ನು ಉಳಿದ  ಇಲಾಖೆಗಳಿಂದ ಸಂಗ್ರಹಿಸುತ್ತೇವೆ' ಎಂದು ಭರವಸೆ ನೀಡಿದರು.ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಈ ಯೋಜನೆಯಿಂದ ಬಡವರು ಸೋಮಾರಿಗಳಾಗುತ್ತಾರೆ ಎಂಬ ಆರೋಪವಿದೆ. ಆದರೆ, ಸೌಲಭ್ಯ ಪಡೆದುಕೊಂಡವರು ಹಸಿವನ್ನು ನೀಗಿಸಿಕೊಂಡು, ದುಡಿಮೆ ಹೆಚ್ಚಿಸಿ ಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಹಿರಿಯ ಉಪ ನಿರ್ದೇಶಕ ಪಿ.ಶಿವಣ್ಣ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಇಂದಿರಾ ಕಿರಣ್, ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಎಂ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಆಶಾ ಶಾಂತಕುಮಾರ್, ಉಪಾಧ್ಯಕ್ಷೆ ಭಾಗ್ಯಮ್ಮ ರಾಮಪ್ಪ, ಜಿ.ಪಂ.ಉಪಾಧ್ಯಕ್ಷ ದ್ಯಾಮಣ್ಣ, ನಗರಸಭಾ ಸದಸ್ಯೆ ಆರ್.ಮಂಜುಳಾ ಹಾಜರಿದ್ದರು.`ಪ್ರಾಮಾಣಿಕರಿಗೆ ವರ್ಗಾವಣೆ ಭಯ ಬೇಡ'

`ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವ ಅಧಿಕಾರಿಗಳಿಗೆ ವರ್ಗಾವಣೆ ಭಯ ಬೇಡ. ವರ್ಗಾವಣೆಗಾಗಿ ಬೆಂಗಳೂರು ಮತ್ತಿತರ ಕಡೆ ಅಲೆದಾಡಬೇಡಿ. ಅಭಿವೃದ್ಧಿ ಕೆಲಸಗಳಲ್ಲಿ ಪ್ರಮಾಣಿಕವಾಗಿ ಪ್ರಯತ್ನ ಮಾಡಿ' ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅಧಿಕಾರಿಗಳಿಗೆ ಸಲಹೆ ನೀಡಿದರು.`ಉತ್ತಮ ರೀತಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳನ್ನು ರಕ್ಷಣೆ ಮಾಡಲಾಗುತ್ತದೆ. ಅಲ್ಲದೆ ವರ್ಗಾವಣೆ ಗೊಂದಲಕ್ಕೆ ಅವಕಾಶ ನೀಡದೇ ಅಂತಹ ಅಧಿಕಾರಿಗಳಿಗೆ ಇಲ್ಲೇ ಉಳಿಸಿಕೊಳ್ಳ ಲಾಗುತ್ತದೆ' ಎಂದರು.ಜಿಲ್ಲೆಯಲ್ಲಿ ನಕಲಿ ಬಿಪಿಎಲ್ ಕಾರ್ಡ್ ಹಾವಳಿ ಬಗ್ಗೆ ಮಾಹಿತಿ ಇದೆ. ಅದರ ಬಗ್ಗೆ ಅಧ್ಯಯನ ನಡೆಯಬೇಕು. ಸೂಕ್ತ ತನಿಖೆಯಾಗಬೇಕು ಎಂದು ತಿಳಿಸಿದರು.`ಸಮಸ್ಯೆರಹಿತ ಮಾದರಿ ತಾಲ್ಲೂಕು'

ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ಒಂದು ತಾಲ್ಲೂಕನ್ನು `ಸಮಸ್ಯೆ ರಹಿತ ತಾಲ್ಲೂಕು' ಆಗಿ ರೂಪಿಸುವಂತಹ ಯೋಜನೆ ರೂಪಿಸಿದ್ದಾರೆ. ಆ ಯೋಜನೆಗೆ ಚಿತ್ರದುರ್ಗ ತಾಲ್ಲೂಕನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಈ ತಾಲ್ಲೂಕಿನಲ್ಲಿ ಯಾವುದೇ ಸಮಸ್ಯೆಗಳಿಲ್ಲದಂತೆ ಮಾಡಿ, ರಾಜ್ಯಕ್ಕೆ ಮಾದರಿ ತಾಲ್ಲೂಕನ್ನಾಗಿ ಮಾಡಲಾಗುತ್ತದೆಈ ಸಂಬಂಧ ತಾಲ್ಲೂಕಿನಲ್ಲಿ ಗ್ರಾಮವಾಸ್ತವ್ಯ, ಹೋಬಳಿ ಮಟ್ಟದಲ್ಲಿ ಜನಸ್ಪಂದನ ಸಭೆಯಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

- ಎಚ್.ಆಂಜನೇಯ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.