ಗುರುವಾರ , ಜೂನ್ 24, 2021
29 °C

ಅನುಷ್ಠಾನದ ಶಿಸ್ತುಪಾಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳೆದ ಸಾಲಿನಲ್ಲಿ ಅಬ್ಬರದ ಪ್ರಚಾರದ ನಡುವೆ ದೇಶದಲ್ಲಿಯೇ ಮೊದಲನೆಯದೆಂದು ಪ್ರತ್ಯೇಕ ಕೃಷಿ ಬಜೆಟ್‌ಅನ್ನು ಮಂಡಿಸಿದ್ದ ರಾಜ್ಯ ಸರ್ಕಾರ, ಒಂದು ವರ್ಷದ ಬಳಿಕ ಕೃಷಿ ಮತ್ತು ಕೈಗಾರಿಕೆ ಕ್ಷೇತ್ರಗಳಲ್ಲಿ ಹಿನ್ನಡೆಯಾಗಿರುವುದನ್ನು ಕಾಣಬೇಕಾಯಿತು.ಸರ್ಕಾರ ಬಿಡುಗಡೆ ಮಾಡಿದ ಆರ್ಥಿಕ ಸಮೀಕ್ಷೆಯ ವರದಿ ಕೃಷಿ ಕ್ಷೇತ್ರದ ಬೆಳವಣಿಗೆಯ ದರ ಹಿಂದಿನ ವರ್ಷದಲ್ಲಿ ಶೇ 16.9ರಷ್ಟು ಇದ್ದಿದ್ದು, ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ನಂತರದ ಸಾಲಿನಲ್ಲಿ ಶೇ 15.9ಕ್ಕೆ ಕುಸಿದಿರುವುದನ್ನು ದಾಖಲಿಸಿದೆ. ಬಜೆಟ್ ಪ್ರಸ್ತಾವನೆಗಳು ಪ್ರಾಮಾಣಿಕವಾಗಿ ಅನುಷ್ಠಾನಗೊಂಡಿಲ್ಲ ಎಂಬುದೇ ಈ ಹಿನ್ನಡೆಗೆ ಕಾರಣ.ಕಳೆದ ಸಾಲಿನ ಮಾದರಿಯನ್ನೇ ಅನುಸರಿಸಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಈ ಸಲವೂ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ್ದಾರೆ. ಕೃಷಿ, ತೋಟಗಾರಿಕೆ ಮತ್ತು ನೀರಾವರಿ ಕ್ಷೇತ್ರಗಳಿಗೆ ಒಟ್ಟು ರೂ 19,660 ಕೋಟಿ  ಒದಗಿಸಿದ್ದಾರೆ. ಇದು ಕಳೆದ ಸಲಕ್ಕಿಂತ 1,803 ಕೋಟಿ ಹೆಚ್ಚು ಅಷ್ಟೆ.ಇದರಲ್ಲಿ ಒಂದು ಲಕ್ಷ ರೂಪಾಯಿವರೆಗಿನ ಅಲ್ಪಾವಧಿ ಬೆಳೆಸಾಲಕ್ಕೆ ಬಡ್ಡಿಯನ್ನೇ ವಿಧಿಸದಿರುವ ಪ್ರಸ್ತಾಪ ರೈತರಿಗೆ ಪ್ರಯೋಜನಕಾರಿ. ವಾಣಿಜ್ಯ ಬ್ಯಾಂಕುಗಳಿಂದ ರೈತರು ಪಡೆಯುವ 3 ಲಕ್ಷದ ವರೆಗಿನ ಬೆಳೆಸಾಲಕ್ಕೆ ಶೇ 3ರ ಬಡ್ಡಿ ದರವೂ ಆಕರ್ಷಕ.ಆದರೆ, ಆಹಾರ ಧಾನ್ಯ ಬೆಳೆದವರು, ತರಕಾರಿ ಕೃಷಿಕರು, ವಾಣಿಜ್ಯ ಬೆಳೆಗಳನ್ನು ಅವಲಂಬಿಸಿದವರು ತಮ್ಮ ಉತ್ಪನ್ನಗಳಿಗೆ, ವೆಚ್ಚ ಮಾಡಿದಷ್ಟೂ ಧಾರಣೆ ಹುಟ್ಟುತ್ತಿಲ್ಲ ಎಂದು ಈಗಲೂ ಪರಿತಪಿಸುತ್ತಿದ್ದಾರೆ.ಕೃಷಿಕರು ಸ್ವಂತ ಶ್ರಮವನ್ನು ಲೆಕ್ಕಕ್ಕೆ ಬಿಟ್ಟರೂ, ಹಾಕಿದ ಹಣ ಮತ್ತು ಕೂಲಿಯ ವೆಚ್ಚವಾದರೂ ತಮ್ಮ ಕೃಷಿ ಹುಟ್ಟುವಳಿಯಿಂದ ಸಿಗದ ಕಾರಣ ಹತಾಶರಾಗಿದ್ದಾರೆ. ಅವರು ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆಯ ಹಾದಿ ಹಿಡಿಯುವಂಥ ಪರಿಸ್ಥಿತಿ ಬದಲಾಗದಿದ್ದರೆ ಪ್ರತ್ಯೇಕ ಬಜೆಟ್‌ನ ಪ್ರಚಾರದಿಂದ ಪ್ರಯೋಜನವಿಲ್ಲ.ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ನಗರಾಭಿವೃದ್ಧಿ ಹಾಗೂ ಇಂಧನ ಇಲಾಖೆಗಳಿಗೆ ಹೆಚ್ಚಿನ ಹಣ ಒದಗಿಸಲಾಗಿದೆ. ಇದು ಅಗತ್ಯವಾಗಿದ್ದ ಕ್ರಮ.ಬಿಜೆಪಿ ಅಧಿಕಾರಕ್ಕೆ ಬಂದ ಮೊದಲ ಎರಡು ವರ್ಷಗಳಲ್ಲಿ ಆಯ್ದ ಮಠಗಳು ಮತ್ತು ದೇವಾಲಯಗಳಿಗೆ ಉದಾರವಾಗಿ ನೀಡಲಾಗಿದ್ದ ಅನುದಾನ ಸಾರ್ವಜನಿಕ ಆಕ್ಷೇಪದ ಹಿನ್ನೆಲೆಯಲ್ಲಿ ಕಳೆದ ವರ್ಷ ಕಡಿಮೆಯಾಗಿತ್ತು. ಈ ಸಲ ನಿರ್ಲಕ್ಷಿತ ಸಮುದಾಯಗಳನ್ನು ವಿಶೇಷ ಅನುದಾನಕ್ಕೆ ಪರಿಗಣಿಸಿ ಸಾಮಾಜಿಕ ನ್ಯಾಯಕ್ಕೆ ಕಸರತ್ತು ನಡೆಸಲಾಗಿದೆ.ವಿವಿಧ ಹಿಂದುಳಿದ ವರ್ಗ ಸಮುದಾಯಗಳ ಕ್ಷೇತ್ರ, ಪೀಠ, ಟ್ರಸ್ಟುಗಳಿಗೆ ಒಂದರಿಂದ ಆರು ಕೋಟಿಯವರೆಗೆ ಉದಾರ ಕೊಡುಗೆಯನ್ನು ಪ್ರಕಟಿಸಲಾಗಿದೆ. ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಮ್ಮತಿಸಿರುವುದರಿಂದ ಆ ವರ್ಗವೂ ಸಂತುಷ್ಟವಾಗಿದೆ.ಒಂದು ಲಕ್ಷ ಕೋಟಿ ಮೀರಿದ ಬಜೆಟ್ ರಾಜ್ಯದ ಆರ್ಥಿಕ ಸ್ಥಿತಿ ಕೆಟ್ಟಿಲ್ಲವೆಂಬುದನ್ನು ತೋರಿಸುತ್ತದೆ. ಪ್ರಸ್ತಾವನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುವಂಥ ಶಿಸ್ತನ್ನು ಪಾಲಿಸಿದರೆ ಮಾತ್ರ ರಾಜ್ಯವನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯಲು ಸಾಧ್ಯವಾಗಬಹುದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.