ಅನ್ನಕ್ಕೂ ಅಂಟಿದ `ಹೊಲೆಮಾದ್ಗರ' ಜಾತಿ

7

ಅನ್ನಕ್ಕೂ ಅಂಟಿದ `ಹೊಲೆಮಾದ್ಗರ' ಜಾತಿ

Published:
Updated:

ಯಾವ್ಯಾವುದೋ ಕಾರಣಕ್ಕೆ ಮಗ್ಗುಲು ಬದಲಿಸುವ ಜಾತಿ ವ್ಯವಸ್ಥೆಗೆ ಮನುಷ್ಯತ್ವದ ಗಾಳಿಯೂ ಸೋಕದು. ಕೆಲವು ಕಡೆ ಮಲಗಿರುವ ಜಾತಿ ಎಂಬ ಸೀಳು ನಾಯಿ ಸ್ವಲ್ವ ಅತ್ತಿತ್ತ ಆದರೂ ತನ್ನ ಕೋರೆಗಳನ್ನು ತೋರಿಸಿಕೊಂಡು ಜೊಲ್ಲು ಸುರಿಸಿಕೊಂಡು ಬೊಗಳುತ್ತಾ ಮಾಂಸಖಂಡ ಕೀಳುತ್ತದೆ.....

ಎಲ್ಲ ಊರುಗಳಂತೆ ಆ ಊರಲ್ಲೂ `ಹೊಲೆಮಾದ್ಗರ' ಕೇರಿ ಇತ್ತು. `ಉತ್ತುಮ್ರ' ಕುಲದವರು ಈ ಕೆಳಗಲ ಜನಕ್ಕೆ ಜೀತ, ಕೂಲಿ ಕೊಟ್ಟು ಇವರನ್ನ `ಸಲಹು'ತ್ತಾ ಇದ್ದರು. ಕೂಲಿ ನಾಲಿ ಮಾಡಿ ಈ ಕೆಳಗಲ ಜನ ಹೇಗೋ ಜೀವನ ನಡೆಸುತ್ತಾ ಇದ್ದರು.ಆದರೆ, ಅದೊಂದು ದಿನ `ನಡೆಯಬಾರದ್ದು' ನಡೆದು ಹೋಯಿತು. ಆ ಊರಿನ ಅಂಗನವಾಡಿಗೆ ಈ ಕೇರಿಯ ಹೆಂಗಸೊಂದು ಅಡುಗೆ ಕೆಲಸಕ್ಕೆ ನಿಯೋಜನೆಗೊಂಡಿತು. ಉತ್ತುಮ್ರ ಕುಲದವರು ಇದರಿಂದ ಕೆರಳಿ ಕೆಂಡವಾದರು. `ಅಲಲೆ, ಈ ಹೊಲೆಮಾದ್ಗರ ಹೆಂಗ್ಸು ಬೇಸಿದ ಕೂಳ ನಮ್ಮೈಕ್ಳು ಉಣ್ಬೇಕಾ' ಅಂದ ಉತ್ತುಮ್ರು ಆ ಹೆಂಗಸ್ನ ಕರೆಸಿ, `ನೋಡಮ್ಮ, ಇಂಗಿಂಗೆ, ನಿಮ್ಮ ಜಾತಿಯೋರು ಮುಟ್ಟಿದ್ದ ನಮ್ಮೊರು ಮುಟ್ಟಲ್ಲ. ಅಂತಾದ್ರಲ್ಲಿ ನೀನು ಬೇಸಿದ ಕೂಳ ನಮ್ಮೈಕ್ಳು ತಿನ್ನಾದುಂಟ. ನೀನು ಆ ಕೆಲ್ಸ ಬ್ಯಾಡ ಅಂತ ಬರ‌್ಕೊಡು. ನಾವು ನಿನ್ಗೆ ಬ್ಯಾರೆ ಕೆಲ್ಸ ಕೊಡುಸ್ತೀವಿ' ಎಂದರು.ಆ ಹೆಂಗಸು ಒಪ್ಪಲಿಲ್ಲ. ಸರಿ, ಉತ್ತುಮ್ರು ತಮ್ಮ ಮಕ್ಕಳ ಅಂಗನವಾಡಿಗೆ ಕಳಿಸುವುದನ್ನೇ ನಿಲ್ಲಿಸಿದರು. ಈ ಹೆಂಗಸೂ ಜಗ್ಗಲಿಲ್ಲ. ದಿನಾ ಹೋಗಿ ಅಂಗನವಾಡಿಯಲ್ಲಿ ಅಡುಗೆ ಕೆಲಸ ಮಾಡಿ ಬರುತ್ತಿತ್ತು. `ಓಹೋ ಇದಿಷ್ಟಕ್ಕೇ ಜಗ್ಗಲ್ಲ' ಎಂದ ಉತ್ತುಮ್ರು, ಆ ಹೆಂಗಸಿಂದ ಬಲವಂತವಾಗಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿಸಿಕೊಳ್ಳುವ ಪ್ರಯತ್ನ ಮಾಡಿದರು. ಆಕೆ ಒಪ್ಪದಿದ್ದಾಗ ಅವಳ ಕುಟುಂಬಕ್ಕೆ `ಬೆಂಕಿ ಬಿಸ್ನೀರು' ಕೊಡಬಾರದೆಂದು ಅಪ್ಪಣೆಯಾಯಿತು. `ಇದ್ಯಾಕೆ ಹಿಂಗೆ?' ಎಂದು ಕೇಳಿದ ಹೊಲೆಮಾದ್ಗರ ಕೇರಿಗೇ `ಸಾಮಾಜಿಕ ಬಹಿಷ್ಕಾರ' ಹಾಕಲಾಯಿತು.ಅಂದಿನಿಂದ ಆ ಊರಲ್ಲಿ ಬರೀ ಹೊಲೆಮಾದ್ಗರಿಗೆ ಮಾತ್ರವಲ್ಲ ಆ ಕೇರಿಯ ಎಮ್ಮೆ- ಹಸ, ಕೋಳಿ - ಕುರಿ, ಹಾಲು- ಮಜ್ಜಿಗೆ, ನೀರು-ನೆರಳು, ಗಾಳಿ- ಬಿಸಿಲು ಎಲ್ಲಕ್ಕೂ ಜಾತಿ ಅಂಟಿದೆ. ಕೇರಿಯ ಮೇಲಿಂದ ಬೀಸಿ ಬರುವ ಗಾಳಿಯನ್ನು ಉಸಿರಾಡಲು ಒಲ್ಲೆ ಎನ್ನುತ್ತಿದೆ ಉತ್ತುಮ್ರ ಮೂಗು. ಕೇರಿಯ ನೆರಳು ಸೋಕಿದರೆ ಉರಿಯುತ್ತದೆ ಉತ್ತುಮ್ರ ಮೈ. ಕೇರಿಯ ಕಡೆಯಿಂದ ಬಂದ ಮಳೆಯ ನೀರನ್ನು ಹೀರದಂತೆ ಉತ್ತುಮ್ರು ತಮ್ಮ ಹೊಲಗಳ ಮಣ್ಣಿಗೆ ಅಪ್ಪಣೆ ಮಾಡಿದ್ದಾರೆ.`ಆ' ಊರಿನ ಹೆಸರು ಶಿವನಗರ. `ಆ' ಹೆಂಗಸಿನ ಹೆಸರು ಲಕ್ಷ್ಮಮ್ಮ.* * *

ಇದ್ಯಾವುದೋ ಓಬೀರಾಯನ ಕಾಲದ ಕಥೆಯಲ್ಲ. ಆರು ತಿಂಗಳ ಹಿಂದೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಶಿವನಗರದಲ್ಲಿ ಸಾಮಾಜಿಕ ಬಹಿಷ್ಕಾರದ ಈ ಘಟನೆ ನಡೆದಿದೆ. ಇದನ್ನು ವಿರೋಧಿಸಿ ಆ ಊರಿನ 37 ದಲಿತ ಕುಟುಂಬಗಳು, ಕೇರಿಯ ಮನೆ ಮಕ್ಕಳನ್ನೆಲ್ಲಾ ಕಟ್ಟಿಕೊಂಡು ಇತ್ತೀಚೆಗೆ ರಾಜಧಾನಿಯ ಸ್ವಾತಂತ್ರ್ಯ ಉದ್ಯಾನದಲ್ಲಿ ಬಿಡಾರ ಹೂಡಿ ಸತ್ಯಾಗ್ರಹವನ್ನೂ ನಡೆಸಿದರು.

ಐದಾರು ದಿನಗಳ ನಂತರ ಅಲ್ಲಿಗೆ ಬಂದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, `ನಿಮ್ಮೂರಿನಲ್ಲಿ ನಿಮಗೆ ಭೂಮಿ ಕೊಡುತ್ತೇವೆ.12 ಸಾವಿರ ರೂಪಾಯಿ ದುಡ್ಡು ಕೊಡುತ್ತೇವೆ. ಹಿಟ್ಟು ಬೀಸಲು ರಾಗಿ ಮಿಷನ್ ಕೊಡಿಸುತ್ತೇವೆ. `ಉತ್ತುಮ್ರ' ಹೊಲಕ್ಕೆ ಕೂಲಿಗೆ ಹೋಗದಂತೆ ಸ್ವಂತ ಬದುಕು ಕಟ್ಟಿಕೊಳ್ಳಲು ಸಹಕರಿಸುತ್ತೇವೆ' ಎಂಬ ಭರವಸೆಗಳನ್ನು ಕೊಟ್ಟಿದ್ದಾರೆ. ಆದರೆ, ಸಾಮಾಜಿಕ ಬಹಿಷ್ಕಾರ ಹಾಗೂ ಲಕ್ಷ್ಮಮ್ಮ ಅವರ ಕೆಲಸದ ಬಗ್ಗೆ ಅಧಿಕಾರಿಗಳು ಸೊಲ್ಲೆತ್ತಿಲ್ಲ. ಸಿಕ್ಕಿದ್ದಕ್ಕೆ ತೃಪ್ತಿಪಟ್ಟು ಈ ಭರವಸೆ ಪತ್ರ ಹಿಡಿದು 37 ಕುಟುಂಬಗಳು ಅದೇ ಆ ಶಿವನಗರಕ್ಕೆ ವಾಪಸಾಗಿವೆ.ಯಾವ್ಯಾವುದೋ ಕಾರಣಕ್ಕೆ ಮಗ್ಗುಲು ಬದಲಿಸುವ ಜಾತಿ ವ್ಯವಸ್ಥೆಗೆ ಮನುಷ್ಯತ್ವದ ಗಾಳಿಯೂ ಸೋಕದು. ಕೆಲವು ಕಡೆ ಸುಮ್ಮನೇ ಮಲಗಿರುವ ಜಾತಿ ಎಂಬ ಸೀಳು ನಾಯಿ ಸ್ವಲ್ವ ಅತ್ತಿತ್ತ ಆದರೂ ತನ್ನ ಕೋರೆಗಳನ್ನು ತೋರಿಸಿಕೊಂಡು ಜೊಲ್ಲು ಸುರಿಸಿಕೊಂಡು ಬೊಗಳುತ್ತಾ ಮಾಂಸಖಂಡ ಕೀಳುತ್ತದೆ. ಕೆಲವೊಮ್ಮೆ ಈ ನಾಯಿ ಬೊಗಳದೆಯೇ ಇಡೀ ವ್ಯಕ್ತಿಯನ್ನು ತಿಂದು ಹಾಕುವುದೂ ಇದೆ. ಜಾತಿ ಹೀಗೆ ತಮ್ಮನ್ನು ತಿಂದು ಹಾಕುತ್ತಿರುವಾಗ ದನಿ ಕಳೆದುಕೊಂಡವರಿಗೆ ಕೆಲವೊಮ್ಮೆ ಚೀರುವುದಕ್ಕೂ ಬರುವುದಿಲ್ಲ. ಶಿವನಗರದ ಈ ದಲಿತರೊಂದಿಗೆ ಆಗುತ್ತಿರುವುದೂ ಅದೇ.`ನಾನು ಬೇಯ್ಸಿದ್ದ ಅನ್ನ ಮಕ್ಳು ತಿನ್ನಬಾರ್ದು ಅಂತ ದೊಡ್ ಜನ ನನ್ನ ಕೆಲ್ಸ ಬುಡು ಅಂದ್ರು. ಆಗಲ್ಲಾ ಅಂದಿದ್ಕೆ ಊರಿಂದ ಹೊರಗಾಕವ್ರೆ' ಎನ್ನುತ್ತಾರೆ ಲಕ್ಷ್ಮಮ್ಮ. `ನಾವು ಊರೊಳಗೆ ಕಾಣುಸ್ಕಳಂಗಿಲ್ಲ, ಊರೋರೊಂದ್ಗೆ ಮಾತಾಡಂಗಿಲ್ಲ. ಅಂಗ್ಡೀಲಿ ಸಾಮಾನ್ ಕೊಡ್ತಿಲ್ಲ. ರಾಗಿ ಮಿಶಿನ್‌ಗೆ ಓಗಂಗಿಲ್ಲ. ನಮ್ಮುನ್ನ ಕೂಲಿಗೂ ಕರೀತಿಲ್ಲ. ಹಿಂಗಾದ್ರೆ ನಾವು ಜೀವ್ನ ಮಾಡದೆಂಗೆ' ಎನ್ನುವ ಆಕೆಗೆ ಇದರಾಚೆಗಿನ ಯಾವುದೇ ತಿಳಿವಳಿಕೆ ಇಲ್ಲ.ಕೂಲಿಗೆ ಕರೆದರೆ, ಮಿಶಿನ್‌ಗೆ ಜೋಳ ಹಾಕಿಸಿಕೊಂಡರೆ, ಅಂಗಡಿಯಲ್ಲಿ ಸಾಮಾನು ನೀಡಿದರೆ ಈ ಸಾಮಾಜಿಕ ವ್ಯವಸ್ಥೆಯಲ್ಲಿ ನಾವೂ ಇದ್ದೇವೆ ಎಂದುಕೊಳ್ಳುವ ಲಕ್ಷ್ಮಮ್ಮನಂಥ ಮುಗ್ಧೆಗೆ `ಸಾಮಾಜಿಕ ಬಹಿಷ್ಕಾರ'ದ ಸರಿಯಾದ ಉಚ್ಚಾರಣೆಯೂ ಬರುವುದಿಲ್ಲ. ಇಂತಹ ಜನರನ್ನು ಸಾಮಾಜಿಕ ಬಹಿಷ್ಕಾರದ ಭೀತಿಗೆ ತಳ್ಳಿರುವ ಶಿವನಗರದ ಉತ್ತಮ ಕುಲದವರ ಮನಸ್ಥಿತಿಯ ಬಗ್ಗೆ ಸಿಟ್ಟು, ಒಟ್ಟೊಟ್ಟಿಗೆ ಅನುಕಂಪ ಮೂಡುತ್ತದೆ.ಸಾಮಾಜಿಕ ಬಹಿಷ್ಕಾರ ಹಾಕಿದ್ದಕ್ಕಾಗಿ ಇವರ ಮೇಲೆ ಸಿಟ್ಟು ಬಂದರೆ, ಅನುಕಂಪ ಮೂಡುವುದು ಈ ಆಧುನಿಕ ಎನಿಸಿಕೊಂಡ ಯುಗದಲ್ಲೂ, ಬಸವಣ್ಣನ ವಚನಗಳನ್ನು ಮಂತ್ರಗಳಾಗಿ ಇಷ್ಟಲಿಂಗ ಪೂಜೆಗಷ್ಟೇ ಮೀಸಲು ಮಾಡಿಕೊಂಡಿರುವ ಇವರ ಅಲ್ಪಮತಿಯ ಬಗ್ಗೆ.

ಊರಿನಲ್ಲಿ ಬಹುಸಂಖ್ಯಾತರು ಲಿಂಗಾಯತರು, ಒಂದಷ್ಟು ಮನೆಗಳ ಒಕ್ಕಲಿಗರು. ಬಹುಸಂಖ್ಯಾತ ಲಿಂಗಾಯತರು `ಬಹಿಷ್ಕಾರ' ಎಂದು ಘೋಷಿಸಿದಾಗ ಅದನ್ನು ಅನುಮೋದಿಸುವ ಕಾರ್ಯ ಒಕ್ಕಲಿಗರಿಗೆ ಅನಿವಾರ್ಯ. ಗ್ರಾಮೀಣ ಸಾಮಾಜಿಕ ವ್ಯವಸ್ಥೆಯಲ್ಲಿ ಮೇಲು ಜಾತಿಗಳ ನಿರ್ಣಯವನ್ನು ಅನುಮೋದಿಸುವ ಈ ಅನಿವಾರ್ಯ ಎಲ್ಲ ಕಾಲದ ಅಸಹಾಯಕತೆ.* * *

ಶಿವನಗರದಲ್ಲಿ ಇಷ್ಟೆಲ್ಲಾ ನಡೆದರೂ ಇಲ್ಲಿನ ದಲಿತರು ಸವರ್ಣೀಯರಿಗೆ ಹೆದರಿ ಈವರೆಗೂ ಪೊಲೀಸರಿಗೆ ದೂರು ನೀಡಿಲ್ಲ. ಹಿರಿಯೂರು ಠಾಣೆಯ ಪೊಲೀಸರೂ ಸಾಮಾಜಿಕ ಬಹಿಷ್ಕಾರದ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವ ಧೈರ್ಯ ಮಾಡಿಲ್ಲ. ಇಂತಹ ಘಟನೆಗಳು ನಡೆದಾಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬಹುದು ಎಂಬುದು ಪೊಲೀಸರಿಗೆ ಗೊತ್ತಿಲ್ಲದ ವಿಚಾರವೂ ಏನಲ್ಲ. ಸಾಮಾಜಿಕ ಬಹಿಷ್ಕಾರ ಸಂವಿಧಾನ ವಿರೋಧಿ ಕೃತ್ಯ ಎಂಬ ಅರಿವೂ ಅಲ್ಲಿನ ಸ್ಥಳೀಯ ಪೊಲೀಸರಿಗೆ ಇಲ್ಲ ಎಂದರೆ ಅದನ್ನು ನಂಬುವುದಾದರೂ ಹೇಗೆ? ಇಲ್ಲೆಲ್ಲಾ ಜಾಣ ಕುರುಡು, ಜಾಣ ಕಿವುಡು ಹಾಗೂ ಜಾಣ ಮರೆವುಗಳು ಕೆಲಸ ಮಾಡಿವೆ ಎಂಬುದಂತೂ ಸ್ಪಷ್ಟ.ಇದೆಲ್ಲದರ ಮಧ್ಯೆ ಯಾವುದೋ ಜಗಳಕ್ಕೆ `ಅಟ್ರಾಸಿಟಿ ಹಾಕ್ತೀನಿ' ಎನ್ನುವ, ಜಾತಿಯ ಅಂಶವೇ ಇಲ್ಲದ ವಿಚಾರಕ್ಕೂ `ಜಾತಿ ನಿಂದನೆ' ಎನ್ನುವ ದಲಿತರೂ ಇಲ್ಲದೇ ಇಲ್ಲ. ಆದರೆ, ಸಾಮಾಜಿಕ ಸ್ವಾಸ್ಥ್ಯ ಕದಡುವ ಸಾಮಾಜಿಕ ಬಹಿಷ್ಕಾರದಂಥ ಅಪರಾಧಗಳಿಗೆ ಆಗಬೇಕಾದ ಶಿಕ್ಷೆ ಆಗಲೇಬೇಕು. ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸುವ ದಲಿತರ ವಿರುದ್ಧವೂ ತನಿಖೆ ನಡೆದು ಅವರಿಗೂ ಶಿಕ್ಷೆಯಾಗಬೇಕು. ಆದರೆ, ಸಣ್ಣ ಜಗಳಗಳ ಸಂದರ್ಭದಲ್ಲೂ ಜಾತಿ ಹೆಸರಲ್ಲಿ ನಿಂದಿಸುವ ಕೆಟ್ಟ ಪರಿಪಾಠವಿರುವಾಗ ಜಾತಿ ನಿಂದನೆಯನ್ನು ಗುರುತಿಸುವುದು ಕೂಡ ಅತಿ ಕಷ್ಟದ ಕೆಲಸ. ಇದಕ್ಕಾಗಿ ಇರುವ ಕಾನೂನುಗಳ ಸಮರ್ಪಕ ಜಾರಿ ಅಗತ್ಯ ಹಾಗೂ ಅನಿವಾರ್ಯ.* * *

ಸಾಮಾಜಿಕ ಬಹಿಷ್ಕಾರದ ವಿಚಾರ ಬಂದಾಗಲೆಲ್ಲಾ ಸಾಮಾನ್ಯವಾಗಿ ಸವರ್ಣೀಯರ ವಿರುದ್ಧದ ಕೋಪ ಹೆಚ್ಚಾಗುತ್ತದೆ. ಕೆಲವೊಮ್ಮೆ ಸವರ್ಣೀಯರಿಗೆ ಇದೆಲ್ಲ ಅತಿರೇಕ ಅನಿಸಲೂಬಹುದು. `ಅಲಲೆ, ಮಾದ್ಗರ ಹೆಂಗ್ಸು ನಮ್ಮೈಕ್ಳಿಗೆ ಅಡಿಗೆ ಮಾಡಿ ಬಡಿಸೋದ್ ಬ್ಯಾಡ ಅಂದುದ್ಕೆ ಇಷ್ಟೆಲ್ಲಾ ರಂಪಾಟವಾ?' ಎಂದು ಶಿವನಗರದ ಸವರ್ಣೀಯರಿಗೆ ಸಹಜವಾಗೇ ಅನಿಸಬಹುದು. ಆದರೆ, ಸಾವಿರಾರು ವರ್ಷಗಳಿಂದ ಸವರ್ಣೀಯರ ತುಳಿತವನ್ನು ತುಳಿತವೆಂದೂ ತಿಳಿಯದೇ ಅನುಭವಿಸಿಕೊಂಡು ಬಂದಿರುವ ದಲಿತರಿಗೆ ಈಗಲಾದರೂ `ಸಿಡಿಯುವುದು' ಬೇಡ ಎಂದರೆ ಹೇಗೆ?ಇಷ್ಟೆಲ್ಲ ಆದ ಮೇಲೂ ಅಧಿಕಾರಿಗಳ ಭರವಸೆಯ ಸಾಲುಗಳು ಇನ್ನೂ ಆಚರಣೆಗೆ ಬಂದಿಲ್ಲ. ಅವರಿವರು, ಸಂಘಟನೆಯವರು ಸೇರಿಸಿಕೊಟ್ಟಿದ್ದ ಒಂದಷ್ಟು ಉಪ್ಪು- ಕಾಳು ಶಿವನಗರದ ಆ 37 ದಲಿತ ಕುಟುಂಬಗಳ ಹೊಟ್ಟೆ ತುಂಬಿಸುತ್ತಿದೆ. ಅದು ತೀರಿದ ಮೇಲೆ ಹೇಗೋ ಏನೋ ಅವರಿಗೂ ಗೊತ್ತಿಲ್ಲ. ಅಧಿಕಾರಿಗಳು ನೀಡಿದ್ದ ಭರವಸೆ ಈಡೇರುತ್ತದೆ ಎಂಬ ಬಗ್ಗೆಯೂ ಅವರಲ್ಲಿ ಭರವಸೆ ಉಳಿದಿಲ್ಲ. ಈ ಊರಲ್ಲಿ ಅಲ್ಲದಿದ್ದರೆ ಪಕ್ಕದ ಊರಲ್ಲಿ ಕೂಲಿ ಎಂದುಕೊಂಡು ಕೇರಿಯ ಜನ ಅಕ್ಕಪಕ್ಕದ ಹಳ್ಳಿಗಳ ಕಡೆಗೆ ಕೂಲಿಗೆ ಹೋಗುತ್ತಿದ್ದಾರೆ.ದಿನ ಕಳೆದು ಮತ್ತೆ ಅದೇ ಆ ಸವರ್ಣೀಯರ ಮುಂದೆ ಈ ದಲಿತರು ನಡುಬಗ್ಗಿಸಿ ಕೂಲಿ ಕೇಳಬಹುದು. `ಆವತ್ತು ಹಾರಾಡಿದ್ದ ಮಕ್ಕಳ್ರಾ ನಡೀರಿ ಹೊಲಕ್ಕೆ, ಪಿಟ್ ಗುಂಡಿ ಕಸಾ ತಗ್ಯಕ್ಕೆ' ಎಂದು ಸವರ್ಣೀಯರು ಮೀಸೆಯಂಚಲ್ಲಿ ಇವರನ್ನು ಅಣಕಿಸಲೂಬಹುದು. ಇದೆಲ್ಲವನ್ನೂ ನೋಡಿದ ಮೇಲೆ ನಮ್ಮ ದೇಶದಲ್ಲಿ `ಸಾಮಾಜಿಕ ನ್ಯಾಯ' ಎಂಬುದಕ್ಕೆ ಯಾವ ಅರ್ಥವಿದೆ ಎಂಬುದು ಗೊತ್ತಾಗುತ್ತಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry