ಶನಿವಾರ, ಮಾರ್ಚ್ 6, 2021
32 °C

ಅನ್ನಭಾಗ್ಯದಿಂದ ಸೋಮಾರಿಗಳಾದ ಜನ: ಖೇಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನ್ನಭಾಗ್ಯದಿಂದ ಸೋಮಾರಿಗಳಾದ ಜನ: ಖೇಣಿ

ಬೆಂಗಳೂರು: ‘ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಮತ್ತು 1 ರೂಪಾಯಿಗೆ ಕೆ.ಜಿ ಅಕ್ಕಿ ನೀಡುವ ಎರಡೂ ಯೋಜನೆಗಳು ಒಳ್ಳೆ­ಯವೇ ಆಗಿವೆ. ಆದರೆ, ಅವುಗಳಿಂದ ಗ್ರಾಮೀಣ ಭಾಗದ ಬಹುತೇಕ ಜನ ಸೋಮಾರಿಗಳಾಗಿದ್ದು, ಕುಡುಕರಾಗಿ ಪರಿವರ್ತನೆ ಆಗಿದ್ದಾರೆ’ ಎಂದು ಶಾಸಕ ಅಶೋಕ ಖೇಣಿ ಹೇಳಿದರು.ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ­ಸಂಸ್ಥೆ ಬುಧವಾರ ನಗರದಲ್ಲಿ ಏರ್ಪಡಿಸಿದ್ದ ಸಂವಾದ­ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಶುದ್ಧವಾದ ಕುಡಿಯುವ ನೀರು ಕೊಡುವುದಕ್ಕಿಂತ ಸಾರಾಯಿ ಪೂರೈಸುವ ವಿಷಯದ ಕಡೆಗೇ ರಾಜ್ಯ ಸರ್ಕಾರ ಹೆಚ್ಚು ಉತ್ಸುಕವಾಗಿದೆ’ ಎಂದು ಲೇವಡಿ ಮಾಡಿದರು.‘ಕುಡಿಯುವ ನೀರು ಮತ್ತು ವಿದ್ಯುತ್‌ ಪೂರೈಕೆ, ಗುಣಮಟ್ಟದ ಶಿಕ್ಷಣದ ವ್ಯವಸ್ಥೆ ಹಾಗೂ ವೈದ್ಯಕೀಯ ಸೇವೆ ಸರ್ಕಾರದ ಮುಖ್ಯ ಆದ್ಯತೆ ಆಗಬೇಕಿತ್ತು. ಮದ್ಯದ ಮೇಲೆ ಸಂಪೂರ್ಣ ನಿಷೇಧ­ವನ್ನೂ ವಿಧಿಸ­ಬೇಕಿತ್ತು. ಆದರೆ, ಸರ್ಕಾರ ಹಿಡಿದಿರುವ ಹಾದಿ ಅದಕ್ಕೆ ತದ್ವಿರುದ್ಧ­ವಾ­ಗಿದೆ’ ಎಂದು  ಅವರು ಕಿಡಿ­ಕಾರಿದರು.‘ನಾನು ಪ್ರತಿನಿಧಿಸುವ ಬೀದರ್‌ ಜಿಲ್ಲೆಯ ಜನ­ಸಂಖ್ಯೆ 17.03 ಲಕ್ಷ ಮಾತ್ರ. ಆದರೆ, ಅಲ್ಲಿ ನಿತ್ಯ 180 ಎಂ.ಎಲ್‌ನ 1.56 ಲಕ್ಷ ಮದ್ಯದ ಬಾಟಲಿಗಳು ಮಾರಾಟ ಆಗುತ್ತಿವೆ. ಇದರಿಂದ ಈ ಭಾಗದ ಜನರ ವಂಶವಾಹಿಯಲ್ಲಿ ಬದಲಾವಣೆ ಆಗಿರುವುದು ವೈದ್ಯ­ಕೀಯ­ ಪರೀಕ್ಷೆಗಳಿಂದ ಬೆಳಕಿಗೆ ಬಂದಿದೆ’ ಎಂದರು.‘ರಾಜ್ಯ ಬಜೆಟ್‌ನಲ್ಲಿ ಶೇ 10ರಷ್ಟು ಅಧಿಕ ಅಬಕಾರಿ ತೆರಿಗೆ ನಿರೀಕ್ಷಿಸಲಾಗಿದೆ. ಈ ಗುರಿ­ಯನ್ನು ತಲುಪಲು ಅಬಕಾರಿ ಇಲಾಖೆ ಅಧಿ­ಕಾರಿ­ಗಳ ಮೇಲೆ ಒತ್ತಡ ಹೇರಲಾಗುತ್ತದೆ. ಗುರಿ ಸಾಧಿಸುವಲ್ಲಿ ವಿಫಲವಾದ ಅಧಿಕಾರಿ­ಗಳಿಗೆ ದಂಡ ವಿಧಿಸಲಾಗುತ್ತದೆ. ಶಿಕ್ಷಣ, ಇಂಧನ ಸೇರಿದಂತೆ ಉಳಿದ ಇಲಾಖೆಗಳಿಗೆ ಇಂತಹ ಮಾನದಂಡವನ್ನು ಏಕೆ ಅನುಸರಿಸು­ವು­ದಿಲ್ಲ’ ಎಂದು ಪ್ರಶ್ನಿಸಿದರು.‘ಲೋಕಸಭೆಯಲ್ಲಿ 28 ಸೀಟುಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡು ಮಂಡಿಸಿದ ಮೂರ್ಖತ­ನದ ಬಜೆಟ್‌ ಈ ಸಲದ್ದು. ಅದರ ಬದಲು ಸಾರಾ­ಯಿ­ಯನ್ನು ಎಲ್ಲರಿಗೂ ಹಂಚಿ ಎಲ್ಲ ಸೀಟು­ಗಳನ್ನು ಗೆಲ್ಲಬಹುದಿತ್ತು. ನನ್ನ ಪತ್ನಿ ಇದಕ್ಕಿಂತ ಒಳ್ಳೆಯ ಬಜೆಟ್‌ ಮಂಡನೆ ಮಾಡು­ತ್ತಿದ್ದಳು’ ಎಂದು ಖೇಣಿ ವ್ಯಂಗ್ಯವಾಡಿದರು.‘ನೈಸ್‌ ಯೋಜನೆ ಆರಂಭವಾಗಿ 19 ವರ್ಷ­ಗಳಾಗಿದ್ದರೂ ಅಡೆತಡೆಗಳು ನಿವಾರಣೆ­ಯಾಗಿಲ್ಲ. ಮುಖ್ಯಮಂತ್ರಿಗಳ ಸುತ್ತ ನೆರೆ­ಯುವ ಕೆಲವು ಧನದಾಹಿಗಳು ಯಾವ ಕೆಲಸ ಆಗುವುದಕ್ಕೂ ಬಿಡುವುದಿಲ್ಲ. ಕಳೆದ ಎರಡು ದಶಕಗಳಲ್ಲಿ ಅಧಿಕಾರ ನಡೆಸಿದ ಎಲ್ಲ ಮುಖ್ಯ­ಮಂತ್ರಿಗಳ ಕಾಲದಲ್ಲೂ ಈ ಅನುಭವ ಆಗಿದೆ’ ಎಂದು ತಿಳಿಸಿದರು.‘ಅಧಿಕಾರಸ್ಥರಿಗೆ ಯೋಜನೆಯಿಂದ ಜನ­ರಿಗೆ ಆಗುವ ಲಾಭಕ್ಕಿಂತ ತಮಗೇನು ಸಿಗು­ತ್ತದೆ ಎನ್ನುವುದೇ ಮುಖ್ಯ. ಭ್ರಷ್ಟ ವ್ಯವಸ್ಥೆ ಎಲ್ಲವನ್ನೂ ನುಂಗಿ ಹಾಕುತ್ತಿದೆ. ಅದಕ್ಕೆ ವಿರೋಧ ವ್ಯಕ್ತಪಡಿಸಿದವರಿಗೆ ಸಹಿಸಲು ಆಗದಂತೆ ಕಿರುಕುಳ ನೀಡುತ್ತದೆ’ ಎಂದರು. ಎಫ್‌ಕೆಸಿಸಿಐ ಅಧ್ಯಕ್ಷ ಆರ್‌. ಶಿವಕುಮಾರ್‌ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.