ಶನಿವಾರ, ಜೂನ್ 19, 2021
28 °C

ಅನ್ನಭಾಗ್ಯದ ಸುಖ: ವಿದೇಶಿ ನೀತಿಯ ಸಂಕಟ

ಪ್ರಜಾವಾಣಿ ವಾರ್ತೆ/ ಸಿ.ಕೆ.ಮಹೇಂದ್ರ Updated:

ಅಕ್ಷರ ಗಾತ್ರ : | |

ತಿಪಟೂರು: ‘ಅನ್ನಭಾಗ್ಯ ಬಿಟ್ಟರೆ ವೋಟ್‌ ಕೇಳಲು ಬೇರೇನೂ ಇಲ್ಲ. ಅನ್ನಭಾಗ್ಯವನ್ನೇ ಮುಂದಿಟ್ಟುಕೊಂಡು ವೋಟ್‌ ಕೇಳ್ತಾ ಇದ್ದೇವೆ’– ಇದು ಕಾಂಗ್ರೆಸ್‌ ಮುಖಂಡರೊಬ್ಬರ ಮಾತು.ಕೊಬ್ಬರಿ, ತೆಂಗಿಗೆ ವಿಶ್ವಖ್ಯಾತಿ ಪಡೆದಿರುವ ತಿಪಟೂರು ಶಿಕ್ಷಣದಲ್ಲೂ ಮುಂದಿದೆ. ಈ ತಾಲ್ಲೂಕಿನ ನೂರರಲ್ಲಿ 92 ಮಂದಿ ಶಿಕ್ಷಿತರು. ಬಂಜರು ನೆಲದ, ಬರದಿಂದ ಬೆಂದು ಹೋಗುತ್ತಿರುವ ಇಲ್ಲಿ, ತೆಂಗಿನ ಮೇಲಿದ್ದ ಬದುಕಿನ ನಿರೀಕ್ಷೆ ಕುಸಿಯುತ್ತಾ ಸಾಗಿದೆ.ಜನಸಾಮಾನ್ಯರ ನಡುವೆ ಬಿಸಿಲಿನಂತೆಯೇ ಚುನಾವಣೆ ಕಾವು ಜೋರಿದೆ. ಆದರೆ ಎಲ್ಲರ ಬಾಯಲ್ಲೂ ಜಾತಿ ತುದಿ ನಾಲಿಗೆ ಮೇಲಿದೆ.

ಅನ್ನಭಾಗ್ಯವೇ ಇಲ್ಲಿ ಚರ್ಚೆಯ ವಿಷಯ. ಆದರೆ ವಿರೋಧವೂ ಅಷ್ಟೇ ಇದೆ. ಕಾಂಗ್ರೆಸ್‌ ಸೇರಿದಂತೆ ಯಾವ ಪಕ್ಷವೂ ಅಭಿವೃದ್ಧಿಯನ್ನು ಚುನಾವಣೆ ವಿಷಯವನ್ನಾಗಿಸಿಲ್ಲ. ‘ಅಭಿವೃದ್ಧಿ ಮತ್ತು ದೂರದೃಷ್ಟಿ ಎರಡೂ ಇಲ್ಲದ ಕೇವಲ ಜಾತಿಗಷ್ಟೇ ಚುನಾವಣೆ ಸೀಮಿತವಾಗಿದೆ’ ಎಂದವರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಶಿಧರ್.ಅತಿ ಹೆಚ್ಚು ತೆಂಗು ಬೆಳೆಯುವ ಪ್ರದೇಶ ತಿಪಟೂರು. ಇಪ್ಪತ್ತು ವರ್ಷದಿಂದಲೂ ತೆಂಗಿನ ಬೆಲೆ ಮೇಲೇರಿಲ್ಲ. ತೆಂಗಿನ ಎಣ್ಣೆಗೆ ಬೇಡಿಕೆ ಕಡಿಮೆಯಾಗಿ ತೆಂಗು ಬೀದಿಗೆ ಬಂದಿರುವುದರ ಹಿಂದೆ ವಿಶ್ವ ವಾಣಿಜ್ಯ ವ್ಯಾಪಾರ ಒಪ್ಪಂದ ಕಾರಣ. 1995ರಲ್ಲಿ ಭಾರತದಲ್ಲಿ ಮುಕ್ತ ವ್ಯಾಪಾರ ನೀತಿ ಜಾರಿಯಾದ ಕೂಡಲೇ ಅಮೆರಿಕ ಸೋಯಾ ಎಣ್ಣೆಯ ಮೇಲಿನ ಮಾರುಕಟ್ಟೆ ಸಹಾಯ ಧನ ದುಪ್ಪಟ್ಟುಗೊಳಿಸಿತು. ಪರಿಣಾಮ ಸೋಯಾ ಎಣ್ಣೆ ಸೋವಿಯಾಗಿ ತೆಂಗಿನ ಎಣ್ಣೆ ತುಟ್ಟಿಯಾಯಿತು. ನಂತರ ಇಳಿದ ತೆಂಗಿನ ಬೆಲೆ ಮತ್ತೇ ಮೇಲೇರಿಲ್ಲ. ಕೃಷಿ ಒಪ್ಪಂದ ವಿರೋಧಿಸಿ ಕೊರಿಯಾ ದೇಶದ ರೈತ ಲೀ ಚಾಕುವಿನಿಂದ ತನ್ನನ್ನು ತಾನೇ ಇರಿದುಕೊಂಡು ಹುತಾತ್ಮನಾದ. ಆ ಒಪ್ಪಂದವೇ ಜಿಲ್ಲೆಯ ತೆಂಗು ಬೆಳೆಗಾರರನ್ನೂ ಬಲಿ ತೆಗೆದು­ಕೊಳ್ಳುತ್ತಾ ಸಾಗಿದೆ. ಇಷ್ಟಿದ್ದು ಚುನಾವಣೆಯ ವಿಷಯವಾಗಿ ತೆಂಗು ಇಲ್ಲಿ ಸ್ಥಾನ ಪಡೆದಿಲ್ಲ.

ಬರದಿಂದ ಒಣಗಿದ ತೆಂಗಿನ ಪ್ರತಿ ಮರಕ್ಕೆ ಕೇವಲ ರೂ. 96 ಪರಿಹಾರ ಘೋಷಿಸಿದ ಗೋರಖ್‌ ಸಿಂಗ್ ಸಮಿತಿ  ವಿಷಯವೂ ಇಲ್ಲಿ ಚರ್ಚೆಯಲ್ಲಿಲ್ಲ. ಶಾಶ್ವತ ಕುಡಿಯುವ ನೀರಿನ ವಿಷಯವೂ ಚರ್ಚೆಯ ಕೇಂದ್ರವಾಗಿಲ್ಲ. ಚುನಾವಣೆಯನ್ನು ಜಾತಿ ಕೇಂದ್ರಿತ­ವಾಗಿ ಮೂರೂ ಪಕ್ಷಗಳು ಮಾರ್ಪಡಿಸಿದಂತಿದೆ.ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆಯಿದೆ. ತೆಂಗಿನ ತೋಟಗಳು ಒಣಗುತ್ತಿವೆ. ಗಣಿಗಾರಿಕೆ ಇದ್ದರೂ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಿಲ್ಲ. ಇದು ಕೂಡ ಚುನಾವಣೆ ವಿಷಯ­ವಾಗಿಲ್ಲ.ಕವಿಯೂ ಆಗಿರುವ ಮಾದಿಹಳ್ಳಿಯ ನವೀನ್‌ ಅವರಿಗೆ ಇದೆಲ್ಲದರ ಕುರಿತು ನೋವಿದೆ. ಸಾಮಾಜಿಕ ಮಾಧ್ಯಮಗಳ ಮೇಲೆ ಕಣ್ಣಿಟ್ಟಿದ್ದೇನೆ. ಮೋದಿ ಅಭಿವೃದ್ಧಿ ಬಡವರ ಪರವಾಗಿಲ್ಲ. ಸಾಮಾಜಿಕ ನ್ಯಾಯದ ನಂಬಿಕೆ ಇಲ್ಲದ ವ್ಯಕ್ತಿಯಿಂದ ಸಾಮಾಜಿಕ ಅಭಿವೃದ್ಧಿ ನಿರೀಕ್ಷೆ ಸಾಧ್ಯವೇ. ಅದೇನೇ ಇರಲಿ ಜಿಲ್ಲೆಯ ತೆಂಗು ಬೆಳೆಗಾರರ ಕಷ್ಟ ಚುನಾವಣೆ ವಿಷಯವಾಗಿರಬೇಕಾಗಿತ್ತು ಎಂದರು.ಪದವಿ ಅಧ್ಯಯನ ಮಾಡುತ್ತಿರುವ ಬಳ್ಳೇಕೆರೆಯ ಹರೀಶ್‌ಗೂ ಮೋದಿ ಅಭಿವೃದ್ಧಿ ಕುರಿತು ಸರಿಯಾಗಿ ಗೊತ್ತಿಲ್ಲ.  ಪತ್ರಿಕೆಗಳಲ್ಲಿ ಓದಿದ್ದೇನೆ, ನೋಡಿಲ್ಲ. ಹೀಗಾಗಿ ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎನ್ನುತ್ತಾರೆ.ಎರಡು ವರ್ಷದಿಂದ ಸರ್ಕಾರಿ ಕೆಲಸಗಳ ನೇಮಕವಾಗಿಲ್ಲ. ಬೆಲೆ ಕೂಡ ಹೆಚ್ಚಿದೆ. ಉದ್ಯೋಗಸ್ಥರ ವಯೋಮಿತಿ ಏರಿಕೆ ಮೂಲಕ ನಿರುದ್ಯೋಗಿಗಳಿಗೆ ಅನ್ಯಾಯ ಮಾಡಿದ ಸರ್ಕಾರದ ವಿಚಾರಗಳು ಕೂಡ ನಮ್ಮ ಮುಂದೆ ಚರ್ಚೆಗೆ ಇವೆ. ಕನಿಷ್ಠ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರಬೇಕಾಗಿತ್ತು. ಕಾಲೇಜಿನ ಸ್ನೇಹಿತರು ಇದೆಲ್ಲವನ್ನೂ ಗಮನಿಸುತ್ತಿದ್ದೇವೆ ಎಂದರು.‘ಮೋದಿ ದೇಶಕ್ಕೆ ದೊಡ್ಡ ಅಪಾಯ. ಬಸವಣ್ಣ ಕೂಡ ಯಾವುದೇ ಲಾಂಛನ ಇಟ್ಟುಕೊಂಡು ಧರ್ಮ ಪ್ರಸಾರ ಮಾಡಿದರವಲ್ಲ. ಇವರ ಲಾಂಛನಗಳು ಜನರನ್ನು ಹೆದರಿಸುವಂತಿವೆ’ ಎಂದವರು ಪಲ್ಲಾಗಟ್ಟಿ ಅಡವಪ್ಪ ಕಾಲೇಜಿನ ಗ್ರಂಥಾಲಯ ಅಧಿಕಾರಿ ತಿಪ್ಪೇಸ್ವಾಮಿ.

ಜಾತಿ ರಾಜಕಾರಣದ ಮೇಲೆ ಸಾರ್ವಜನಿಕ ನಂಬಿಕೆ ಕುಸಿದಿದೆ. ನರೇಂದ್ರ ಮೋದಿ ಭೋಗ ಕೇಂದ್ರಿತ ಅಭಿವೃದ್ಧಿ ನಮಗೆ ಬೇಡ ಎಂದು ದಿಟ್ಟವಾಗಿ ಹೇಳಿದವರು ರಂಗಕರ್ಮಿ ಚಿಟ್ಟೆ ಸತೀಶ್‌.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.