`ಅನ್ನಭಾಗ್ಯ' ಯೋಜನೆಗೆ ಅಡ್ಡಿ ಇಲ್ಲ

ಶುಕ್ರವಾರ, ಜೂಲೈ 19, 2019
28 °C
ಬಯೊಮೆಟ್ರಿಕ್ ಸಂಗ್ರಹ ಪ್ರಕ್ರಿಯೆ ಸ್ಥಗಿತ-ಫಲಾನುಭವಿಗಳಲ್ಲಿ ಆತಂಕ

`ಅನ್ನಭಾಗ್ಯ' ಯೋಜನೆಗೆ ಅಡ್ಡಿ ಇಲ್ಲ

Published:
Updated:

ಹುಬ್ಬಳ್ಳಿ: ಡಿಸೆಂಬರ್ 2010ಕ್ಕಿಂತ ಮೊದಲು ಕಾಯಂ ಪಡಿತರ ಚೀಟಿ ಪಡೆದಿದ್ದ ನಾಗರಿಕರಿಂದ ಮತ್ತೊಮ್ಮೆ ಫೋಟೊ  ಮತ್ತು ಬಯೊಮೆಟ್ರಿಕ್ ಮಾಹಿತಿ ಸಂಗ್ರಹಿಸುತ್ತಿರುವ ಪ್ರಕ್ರಿಯೆಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಆದರೂ ಈ ಫಲಾನುಭವಿಗಳಿಗೆ `ಅನ್ನಭಾಗ್ಯ' ಸೌಲಭ್ಯ ನೀಡಲು ಯಾವುದೇ ಅಡ್ಡಿ ಇಲ್ಲ ಎಂದು ಸ್ಪಷ್ಟಪಡಿಸಿದೆ.ಆದರೆ, ಯಾವುದೇ ಮುನ್ಸೂಚನೆ ನೀಡದೆ ಇಲಾಖೆ ಈ ನಿರ್ಧಾರ ತೆಗೆದುಕೊಂಡಿರುವುದು, ಕಾಯಂ ಪಡಿತರ ಚೀಟಿ ಇದ್ದೂ ಬೆರಳಚ್ಚು- ಬಯೋ ಮೆಟ್ರಿಕ್ ಇನ್ನೂ ನೀಡದ ಲಕ್ಷಾಂತರ ಪಡಿತರ ಚೀಟಿದಾರರಲ್ಲಿ ಗೊಂದಲ ಸೃಷ್ಟಿಸಿದೆ. ಅನ್ನಭಾಗ್ಯ ಯೋಜನೆ ಆರಂಭಿಸಿರುವಾಗಲೇ ಇಲಾಖೆ ಈ ನಿರ್ಧಾರ ತೆಗೆದುಕೊಂಡಿರುವುದು ಫಲಾನುಭವಿಗಳಲ್ಲಿ ಸಂಶಯ ಮೂಡಿಸಿದೆ.`ಡಿಸೆಂಬರ್ 2010ರ ಹಿಂದೆ ವಿತರಿಸಲಾದ ಕಾಯಂ ಪಡಿತರ ಚೀಟಿಗಳಲ್ಲಿ ಸಂಗ್ರಹಿಸಿರುವ ಬೆರಳಚ್ಚು- ಬಯೋಮೆಟ್ರಿಕ್ ಮಾಹಿತಿ ತಾಂತ್ರಿಕವಾಗಿ ದೋಷಪೂರಿತವಾಗಿದೆ. ಅಂಥ ಪಡಿತರ ಚೀಟಿದಾರರು ಮತ್ತೊಮ್ಮೆ ಬೆರಳಚ್ಚು- ಬಯೋಮೆಟ್ರಿಕ್ ನೀಡುವಂತೆ ಮಾರ್ಚ್ 11ರಂದು ಸೂಚನೆ ನೀಡಲಾಗಿತ್ತು. ಇದೀಗ ಈ ಪ್ರಕ್ರಿಯೆಯನ್ನು ತಡೆ ಹಿಡಿಯಲಾಗಿದೆ' ಎಂದು ಇಲಾಖೆಯ ಆಯುಕ್ತ ಹರ್ಷ ಗುಪ್ತಾ ತಿಳಿಸಿದ್ದಾರೆ.`ಡಿಸೆಂಬರ್ 2010ರ ಹಿಂದೆ ಪಡಿತರ ಚೀಟಿ ಪಡೆದ ಸಾವಿರಾರು ಮಂದಿ ರಾಜ್ಯದ ಎಲ್ಲ ಗ್ರಾಮ ಪಂಚಾಯ್ತಿ ಕೇಂದ್ರಗಳಲ್ಲಿ ಮತ್ತು ನಗರ ಪ್ರದೇಶದ ಸೇವಾ ಕೇಂದ್ರಗಳಲ್ಲಿ ಬೆರಳಚ್ಚು- ಬಯೋಮೆಟ್ರಿಕ್ ನೀಡಲು ಮುಗಿಬೀಳುತ್ತಿದ್ದಾರೆ. ಇದರಿಂದ ಆನ್‌ಲೈನ್‌ನಲ್ಲಿ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ತೊಂದರೆಯಾಗುತ್ತಿದೆ. ಅಲ್ಲದೇ, ತಾತ್ಕಾಲಿಕ ಪಡಿತರ ಚೀಟಿದಾರರು ಬಯೋಮೆಟ್ರಿಕ್ ನೀಡಿ ಕಾಯಂ ಆಗಿ ಪರಿವರ್ತಿಸಿಕೊಂಡು ತಾಲ್ಲೂಕು ಕೇಂದ್ರಗಳಿಂದ ಮತ್ತು ಗ್ರಾಮ ಪಂಚಾಯ್ತಿಗಳಿಂದ ಪಡಿತರ ಚೀಟಿ ಪಡೆದುಕೊಳ್ಳಲು ತೊಡಕಾಗುತ್ತಿದೆ. ಈ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ' ಎಂದು ಅವರು ತಿಳಿಸಿದ್ದಾರೆ.`ಆದರೂ ಸರ್ಕಾರ ಪಡಿತರ ಹಂಚಿಕೆಯನ್ನು ತಡೆ ಹಿಡಿಯುತ್ತದೆ ಎಂಬ ಉದ್ವೇಗ ಮತ್ತು ಗೊಂದಲದಲ್ಲಿ ಬಯೋಮೆಟ್ರಿಕ್ ನೀಡಲು ಹೆಚ್ಚಿನ ಸಂಖ್ಯೆಯಲ್ಲಿ ಸೇವಾ ಕೇಂದ್ರಗಳಿಗೆ ಬರುತ್ತಿದ್ದಾರೆ. ಆದರೆ ಫಲಾನುಭವಿಗಳು ಆತಂಕಪಡುವ ಅಗತ್ಯವಿಲ್ಲ. ಡಿಸೆಂಬರ್ 2010ರ ಹಿಂದೆ ಕಾಯಂ ಪಡಿತರ ಚೀಟಿ ಪಡೆದವರಿಗೂ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲು ಯಾವುದೇ ಅಡಚಣೆ ಇಲ್ಲ. ಹೀಗಾಗಿ ಈ ಪಡಿತರ ಚೀಟಿದಾರರು ಆಗಸ್ಟ್ 2013ರ ಅಂತ್ಯದವರೆಗೆ ಬಯೋಮೆಟ್ರಿಕ್ ಮಾಹಿತಿ ನೀಡುವ ಅಗತ್ಯ ಇಲ್ಲ. ಈ ಕಾರಣಕ್ಕೆ ಆಗಸ್ಟ್ 31ರವರೆಗೆ ಇಲಾಖೆಯ ದತ್ತಾಂಶದಲ್ಲಿ ಬಯೋಮೆಟ್ರಿಕ್ ಮಾಹಿತಿ ನೀಡುವ ಪ್ರಕ್ರಿಯೆ ತಡೆಹಿಡಿಯಲಾಗಿದೆ. ನ್ಯಾಷನಲ್ ಇನ್ಫೋರ್ಮೆಟಿಕ್ ಸೆಂಟರ್‌ಗೂ (ಎನ್‌ಐಸಿ) ಈ ಕುರಿತು ಮಾಹಿತಿ ನೀಡಲಾಗಿದೆ' ಎಂದು ತಿಳಿಸಿದ್ದಾರೆ. ಎಲ್ಲ ಜಿಲ್ಲಾಧಿಕಾರಿಗಳಿಗೆ ಈ ಮಾಹಿತಿ ನೀಡಲಾಗಿದೆ.ಈ ಮಧ್ಯೆ, ರಾಜ್ಯದ ಐದು ಜಿಲ್ಲೆಗಳಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಇ -ಪಡಿತರ ಯಂತ್ರ ಅಳವಡಿಸಲಾಗಿದ್ದು, ಅವುಗಳ ಮೂಲಕ ಪಡಿತರ ವಿತರಿಸಲಾಗುತ್ತಿದೆ. ಫಲಾನುಭವಿಗಳು ಬಯೋಮೆಟ್ರಿಕ್ ನೀಡಿದರೆ ಮಾತ್ರ ಈ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ಅವಕಾಶ ನೀಡಲಾಗಿದೆ. ಆದರೆ ಇ -ಯಂತ್ರಗಳಲ್ಲಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಫಲಾನುಭವಿಗಳಲ್ಲಿ ಆತಂಕ ಉಂಟಾಗಿದೆ.

`ಇ- ಯಂತ್ರದಲ್ಲಿ'

`ರಾಜ್ಯದ ಸುಮಾರು 71 ಲಕ್ಷ ಕುಟುಂಬಗಳು      ಇನ್ನೂ ಬೆರಳಚ್ಚು- ಬಯೋಮೆಟ್ರಿಕ್ ನೀಡಿಲ್ಲ.     ಹಾಗೆಂದು ಬಿಪಿಎಲ್ ಪಡಿತರ ಚೀಟಿದಾರರಿಗೆ  ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಿಸಲು ಯಾವುದೇ ಸಮಸ್ಯೆ ಇಲ್ಲ.  ಧಾರವಾಡ, ಬೆಳಗಾವಿ, ಗುಲ್ಬರ್ಗ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಇ- ಯಂತ್ರದಡಿ ಆಹಾರಧಾನ್ಯ ವಿತರಿಸಲಾಗುತ್ತಿದೆ. ಈ ಜಿಲ್ಲೆಗಳಲ್ಲಿ ಡಿಸೆಂಬರ್       2010ರ ಹಿಂದೆ ಕಾಯಂ ಪಡಿತರ ಚೀಟಿದಾರ ಪಡೆದಿದ್ದರೂ, ಬಯೋಮೆಟ್ರಿಕ್ ನೀಡದವರು ಇ-ಯಂತ್ರದಲ್ಲಿ ಬಯೋಮೆಟ್ರಿಕ್ ನೀಡಿ ಪಡಿತರ ಪಡೆದುಕೊಳ್ಳಬಹುದು.ಬಿಪಿಎಲ್ ಪಡಿತರ ಚೀಟಿದಾರರು, ಬಯೋಮೆಟ್ರಿಕ್ ನೀಡದ ಕಾರಣಕ್ಕೆ ಅನ್ನಭಾಗ್ಯ ಯೋಜನೆಯಿಂದ ದೂರ ಉಳಿಯುತ್ತೇವೆ ಎಂದು ಆತಂಕ ಪಡುವ ಅಗತ್ಯ ಇಲ್ಲ' ಎಂದು ಇಲಾಖೆಯ ಉಪ ನಿರ್ದೇಶಕ (ಬೆಂಗಳೂರು) ಗಂಗಾಧರ `ಪ್ರಜಾವಾಣಿ'ಗೆ ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry