`ಅನ್ನಭಾಗ್ಯ' ಯೋಜನೆಗೆ ಇಂದು ಚಾಲನೆ

ಬುಧವಾರ, ಜೂಲೈ 17, 2019
27 °C

`ಅನ್ನಭಾಗ್ಯ' ಯೋಜನೆಗೆ ಇಂದು ಚಾಲನೆ

Published:
Updated:

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ `ಅನ್ನಭಾಗ್ಯ'ಕ್ಕೆ  ಬುಧವಾರ ರಾಜ್ಯದಾದ್ಯಂತ ಚಾಲನೆ ದೊರೆಯಲಿದೆ.

ಬಿಪಿಎಲ್ ಕುಟುಂಬಗಳಿಗೆ ಒಂದು ರೂಪಾಯಿಗೆ ಒಂದು ಕೆ ಜಿಯಂತೆ ತಿಂಗಳಿಗೆ ಗರಿಷ್ಠ 30 ಕೆ ಜಿ ಅಕ್ಕಿ ವಿತರಿಸುವ `ಅನ್ನಭಾಗ್ಯ' ಯೋಜನೆಗೆ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೆಳಿಗ್ಗೆ 11ಕ್ಕೆ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು. ಇದೇ ಸಮಯದಲ್ಲಿ ಎಲ್ಲ ಜಿಲ್ಲೆಗಳಲ್ಲೂ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.ಮಂಗಳವಾರ ಯೋಜನೆ ಆರಂಭಿಸುವ ಕುರಿತು ಸುದ್ದಿಗಾರರಿಗೆ ವಿವರ ನೀಡಿದ ಆಹಾರ ಸಚಿವ ದಿನೇಶ್ ಗುಂಡೂರಾವ್, `ಅನ್ನಭಾಗ್ಯ' ಯೋಜನೆ ಬಗ್ಗೆ ಯಾವುದೇ ಗೊಂದಲಗಳು ಇಲ್ಲ. 98 ಲಕ್ಷ ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. 86.89 ಲಕ್ಷ ಬಿಪಿಎಲ್ ಮತ್ತು  11.11 ಲಕ್ಷ ಅಂತ್ಯೋದಯ ಅನ್ನ ಯೋಜನೆ ಕಾರ್ಡ್‌ದಾರರು ಈ ಯೋಜನೆ ವ್ಯಾಪ್ತಿಗೆ ಸೇರಲಿದ್ದಾರೆ. ಅನ್ನಭಾಗ್ಯ ಯೋಜನೆ ಅಡಿ ಪ್ರತಿ ವ್ಯಕ್ತಿಗೆ 10 ಕೆ ಜಿಯಂತೆ ಗರಿಷ್ಠ 30 ಕೆ ಜಿ ಅಕ್ಕಿ ನೀಡಲಾಗುವುದು ಎಂದು ತಿಳಿಸಿದರು.ಈಗಾಗಲೇ  2.78 ಲಕ್ಷ ಟನ್ ಅಕ್ಕಿ ಸಂಗ್ರಹಿಸಲಾಗಿದೆ. ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 20 ಸಾವಿರ ಟನ್ ಅಕ್ಕಿ ನೀಡುತ್ತಿದೆ. ಛತ್ತೀಸಗಡದಿಂದ ಪ್ರತಿ ಕೆ.ಜಿಗೆ 27 ರೂಪಾಯಿಯಂತೆ 25 ಸಾವಿರ ಟನ್ ಅಕ್ಕಿ ಖರೀದಿಸಲಾಗಿದೆ. ಈ ವರ್ಷ ಅಕ್ಕಿ ಗಿರಣಿದಾರರಿಂದ ಲೆವಿ ಸಂಗ್ರಹಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ವಿವರಿಸಿದರು.ಇದುವರೆಗೆ ಪ್ರತಿ ತಿಂಗಳು 1.78 ಲಕ್ಷ ಟನ್ ಅಕ್ಕಿ ಅಗತ್ಯವಿತ್ತು. ಈ ಹೊಸ ಯೋಜನೆಯಿಂದಾಗಿ ಹೆಚ್ಚುವರಿಯಾಗಿ 1 ಲಕ್ಷ ಟನ್ ಬೇಕಾಗುತ್ತದೆ. ವರ್ಷಕ್ಕೆ ಅಂದಾಜು 4,200 ಕೋಟಿ ರೂಪಾಯಿ ವೆಚ್ಚವಾಗಬಹುದು. ಇನ್ನೂ ಮುಂದೆ ಟೆಂಡರ್ ಮೂಲಕ ಅಕ್ಕಿ ಖರೀದಿಸಲಾಗುವುದು. ಇಡೀ ರಾಜ್ಯವನ್ನು 64 ಘಟಕಗಳನ್ನಾಗಿ ಮಾಡಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು. ಇದರಿಂದ ಸ್ಥಳೀಯರಿಗೂ ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ದೊರೆಯುತ್ತದೆ ಎಂದರು.ಹೊಸ ಪಡಿತರ ಚೀಟಿಗಾಗಿ 12 ಲಕ್ಷ ಅರ್ಜಿಗಳು ಬಂದಿವೆ. ನ್ಯಾಯ ಬೆಲೆ ಅಂಗಡಿಗಳು ಅನ್ಯಾಯದ ಅಂಗಡಿಗಳಾಗಿವೆ ಎನ್ನುವ ದೂರುಗಳು ಸಾಮಾನ್ಯ. ಆಹಾರ ಧಾನ್ಯಗಳ ವಿತರಣೆ ಉಸ್ತುವಾರಿ ಬಲಪಡಿಸಲಾಗುವುದು ಹಾಗೂ ಅಂಗಡಿಗಳ ಮಾಲೀಕರಿಗೂ ಕಮಿಷನ್ ಹೆಚ್ಚಿಸುವ ಮೂಲಕ ಅಕ್ರಮಗಳಿಗೆ ಕಡಿವಾಣ ಹಾಕಲಾಗುವುದು ಎಂದು ವಿವರಿಸಿದರು.ಪಡಿತರ ಚೀಟಿದಾರರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು `ಆಹಾರ ವಾಣಿ' ಹೆಸರಿನಲ್ಲಿ ಸಹಾಯವಾಣಿ ಆರಂಭಿಸಲಾಗುವುದು ಎಂದು ತಿಳಿಸಿದರು.ಪಾಟೀಲ್ ಅಪಸ್ವರ

ಬೆಂಗಳೂರು: `ಅನ್ನಭಾಗ್ಯ' ಯೋಜನೆಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸರ್ವೋದಯ ಇಂಟರ್‌ನ್ಯಾಷನಲ್ ಟ್ರಸ್ಟ್ ರಾಜಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಸ್ಕಲ್ ಅಲೆನ್ ನಜರತ್ ಅವರ `ಗಾಂಧೀಸ್ ಔಟ್‌ಸ್ಟ್ಯಾಂಡಿಂಗ್ ಲೀಡರ್‌ಶಿಪ್' ಪುಸ್ತಕದ ಕನ್ನಡ ಅನುವಾದ `ಅಮೋಘ ನಾಯಕ ಗಾಂಧಿ' ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.`ಒಂದು ರೂಪಾಯಿಗೆ ಕೆ ಜಿ ಅಕ್ಕಿ ಕೊಡುವುದು ಹಾಗೂ ಬಡವರಿಗೆ ಉಚಿತ ಮನೆಗಳನ್ನು ನಿರ್ಮಿಸುವುದು ಮಾತ್ರ ಗ್ರಾಮೀಣಾಭಿವೃದ್ಧಿಯಲ್ಲ. ಗ್ರಾಮೀಣ ಜನರು ಸ್ವಾವಲಂಬಿಗಳಾಗಿ, ಗೌರವಯುತವಾಗಿ ಬದುಕುವಂತಾದಾಗ ಮಾತ್ರ ನಿಜವಾದ ಗ್ರಾಮ ಸ್ವರಾಜ್ಯ ಸಾಧ್ಯ. ಸರ್ಕಾರಿ ಯೋಜನೆಗಳ ಮೂಲಕ ಗ್ರಾಮೀಣ ಜನರನ್ನು ಪರಾವಲಂಬಿಗಳನ್ನಾಗಿ ಮಾಡುವುದು ಸರಿಯಲ್ಲ' ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry