ಭಾನುವಾರ, ಮೇ 22, 2022
24 °C
ರಾಜ್ಯಕ್ಕೆ ವರವಾದ ಆಹಾರ ಭದ್ರತಾ ಕಾಯ್ದೆ

`ಅನ್ನಭಾಗ್ಯ' ಯೋಜನೆಗೆ ಕೇಂದ್ರ ನೆರವು

ಪಿ.ಎಂ.ರಘುನಂದನ್ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಅಗ್ಗದ ದರದಲ್ಲಿ ಅಕ್ಕಿ ವಿತರಿಸಲು ಮುಂದಾಗಿರುವ ರಾಜ್ಯ ಸರ್ಕಾರಕ್ಕೆ, ಕೇಂದ್ರದ ಯುಪಿಎ ಸರ್ಕಾರ ಹೊರಡಿಸಿರುವ ಆಹಾರ ಭದ್ರತಾ ಕಾಯ್ದೆ ಸುಗ್ರೀವಾಜ್ಞೆ ವರವಾಗಿ ಪರಿಣಮಿಸಿದೆ.

ಸುಗ್ರೀವಾಜ್ಞೆಯ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಗೆ ವಿತರಿಸುವ ಆಹಾರ ಧಾನ್ಯ ಹೊರೆಯನ್ನು ಕೇಂದ್ರ ಸರ್ಕಾರವೇ ಭರಿಸುತ್ತದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಜಾರಿಗೆ ತರಲು ಮುಂದಾಗಿರುವ `ಅನ್ನಭಾಗ್ಯ' ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ಒಂದು ರೂಪಾಯಿಗೆ ಒಂದು ಕೆ.ಜಿ. ಯಂತೆ ಮಾಸಿಕ ಹತ್ತರಿಂದ 30 ಕೆ.ಜಿ.ವರೆಗೆ ಅಕ್ಕಿ ವಿತರಿಸಲಾಗುತ್ತದೆ.`ಅನ್ನಭಾಗ್ಯ' ಯೋಜನೆ ಅಡಿಯಲ್ಲಿ ರಿಯಾಯಿತಿ ದರದಲ್ಲಿ ಆಹಾರ ಧಾನ್ಯ ಒದಗಿಸಲು ರಾಜ್ಯ ಸರ್ಕಾರ ವಾರ್ಷಿಕ ್ಙ 4,800 ಕೋಟಿ ವೆಚ್ಚ ಮಾಡಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಆಹಾರ ಭದ್ರತಾ ಸುಗ್ರೀವಾಜ್ಞೆಯ ಜಾರಿಗೆ ಬಂದ ಬಳಿಕ ಈ ಹೊರೆ ರೂ 2 ಸಾವಿರ ಕೋಟಿಗೆ ಇಳಿಕೆಯಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.2001ರ ಜನಗಣತಿ ಆಧಾರದಲ್ಲಿ ರಾಜ್ಯದ 31.29 ಲಕ್ಷ ಬಿಪಿಎಲ್ ಕುಟುಂಬಗಳಿಗೆ ಕೇಂದ್ರ ಸರ್ಕಾರ ರಿಯಾಯಿತಿ ದರದಲ್ಲಿ ಆಹಾರ ಧಾನ್ಯ ಒದಗಿಸುತ್ತಿದೆ. ಆದರೆ, ಸುಗ್ರೀವಾಜ್ಞೆ ಜಾರಿಯ ಬಳಿಕ 2011ರ ಜನಗಣತಿ ಆಧಾರದಲ್ಲಿ 93 ಲಕ್ಷ ಕಡು ಬಡ (ಬಿಪಿಎಲ್) ಕುಟುಂಬಗಳಿಗೆ ರಿಯಾಯಿತಿ ದರದಲ್ಲಿ ಆಹಾರ ಧಾನ್ಯ ಒದಗಿಸಲಿದೆ ಎಂಬ ಅಂಶ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಿದ್ಧಪಡಿಸಿರುವ ಅಂದಾಜಿನಲ್ಲಿದೆ.

`ಅನ್ನಭಾಗ್ಯ': ಕೇಂದ್ರ ನೆರವು

ರಾಜ್ಯದ 32 ಲಕ್ಷ ಬಿಪಿಎಲ್ ಕುಟುಂಬಗಳಿಗೆ 57,616 ಟನ್ ಮತ್ತು ಬಡತನ ರೇಖೆಗಿಂತ ಮೇಲಿರುವ (ಎಪಿಎಲ್) 34 ಲಕ್ಷ ಕುಟುಂಬಗಳಿಗಾಗಿ 86,495 ಟನ್ ಅಕ್ಕಿಯನ್ನು ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಆಹಾರ ನಿಗಮ ಈಗ ಪೂರೈಸುತ್ತಿದೆ. ಅಂತ್ಯೋದಯ ಅನ್ನ ಯೋಜನೆಯೂ ಸೇರಿದಂತೆ ಮಾಸಿಕ ಒಟ್ಟು 1.77 ಲಕ್ಷ ಟನ್ ಆಹಾರ ಧಾನ್ಯ ನಿಗಮದ ಮೂಲಕ ದೊರೆಯುತ್ತಿದೆ.ರಾಜ್ಯದಲ್ಲಿ ಒಟ್ಟು 1.33 ಕೋಟಿ ಪಡಿತರ ಚೀಟಿಗಳಿವೆ. ಈ ಪೈಕಿ 86.89 ಲಕ್ಷ ಬಿಪಿಎಲ್ ಮತ್ತು 35.36 ಲಕ್ಷ ಎಪಿಎಲ್ ಪಡಿತರ ಚೀಟಿಗಳಿವೆ. ಕಡು ಬಡವರಾಗಿರುವ 11.16 ಲಕ್ಷ ಕುಟುಂಬಗಳಿಗೆ ಅಂತ್ಯೋದಯ ಅನ್ನ ಯೊಜನೆಯ ಪಡಿತರ ಚೀಟಿ ನೀಡಲಾಗಿದೆ.ರಾಜ್ಯದಲ್ಲಿರುವ ಬಿಪಿಎಲ್ ಪಡಿತರ ಚೀಟಿಗಳ ಸಂಖ್ಯೆ ಮತ್ತು ಬಿಪಿಎಲ್ ಕುಟುಂಬಗಳಿಗಾಗಿ ಕೇಂದ್ರ ಸರ್ಕಾರ ಒದಗಿಸುತ್ತಿರುವ ಆಹಾರ ಧಾನ್ಯದ ಪ್ರಮಾಣದ ನಡುವೆ ಭಾರಿ ವ್ಯತ್ಯಾಸ ಇದೆ. ಜುಲೈ 10ರಿಂದ ಅನ್ನಭಾಗ್ಯ ಯೋಜನೆ ಜಾರಿಗೆ ಹೊರಟಿರುವ ರಾಜ್ಯಸರ್ಕಾರ ಈ ವ್ಯತ್ಯಾಸವನ್ನು ಹೊಂದಿಸಲು ಮಾರುಕಟ್ಟೆಯಲ್ಲಿ ದುಬಾರಿ ದರ ತೆತ್ತು ಅಕ್ಕಿ ಖರೀದಿಸಲೇಬೇಕಿದೆ.ಅನ್ನಭಾಗ್ಯ ಯೋಜನೆ ಜಾರಿಗಾಗಿ ಮಾಸಿಕ 2.84 ಲಕ್ಷ ಟನ್ ಅಕ್ಕಿ ಅಗತ್ಯ. ಈಗ ಕೇಂದ್ರ ಸರ್ಕಾರದಿಂದ 1.77 ಲಕ್ಷ ಟನ್ ಅಕ್ಕಿ ಲಭ್ಯವಾಗುತ್ತಿದೆ. ಕೊರತೆ ಇರುವ ಅಕ್ಕಿಯನ್ನು ಛತ್ತೀಸ್‌ಗಡ ಸರ್ಕಾರದಿಂದ ಪ್ರತಿ ಕೆ.ಜಿ.ಗೆ ್ಙ 27  ದರದಲ್ಲಿ ರಾಜ್ಯ ಸರ್ಕಾರ ಖರೀದಿಸುತ್ತಿದೆ. ರಾಷ್ಟ್ರೀಯ ಸರಕು ಮತ್ತು ಪದಾರ್ಥಗಳ ವಿನಿಮಯ ಕೇಂದ್ರದ (ಎನ್‌ಸಿಡಿಎಕ್ಸ್) ರಾಷ್ಟ್ರೀಯ ಸರಕು ಮತ್ತು ಪದಾರ್ಥಗಳ ವಿನಿಮಯ ಕೇಂದ್ರದ (ಎನ್‌ಸಿಡಿಎಕ್ಸ್) ಮೂಲಕ ಆನ್‌ಲೈನ್ ಮಾರಾಟ ಪ್ರಕ್ರಿಯೆಯಲ್ಲೂ ಅಕ್ಕಿ ಖರೀದಿಸುವುದಕ್ಕೂ ನಿರ್ಧರಿಸಿದೆ.ವ್ಯಕ್ತಿಯೊಬ್ಬನಿಗೆ ಮಾಸಿಕ ಐದು ಕೆ.ಜಿ ಮತ್ತು ಕುಟುಂಬವೊಂದಕ್ಕೆ ಗರಿಷ್ಠ 25 ಕೆ.ಜಿ. ಆಹಾರ ಧಾನ್ಯ ಒದಗಿಸಲಾಗುವುದು ಎಂದು ಆಹಾರ ಭದ್ರತಾ ಸುಗ್ರೀವಾಜ್ಞೆ ಹೇಳುತ್ತದೆ. ಆದರೆ, ರಾಜ್ಯಕ್ಕೆ ಮಾಸಿಕ ಎಷ್ಟು ಪ್ರಮಾಣದ ಆಹಾರ ಧಾನ್ಯ ಲಭ್ಯವಾಗುತ್ತದೆ ಎಂಬ ನಿಖರ ಅಂದಾಜು ಇನ್ನೂ ಲಭ್ಯವಾಗಿಲ್ಲ.ಸುಗ್ರೀವಾಜ್ಞೆಯ ಜಾರಿ ವೇಳೆ ಆಯಾ ಕುಟುಂಬದ ಸದಸ್ಯರ ಸಂಖ್ಯೆ ಆಧರಿಸಿ `ಬಿಪಿಎಲ್' ಕುಟುಂಬಗಳನ್ನು ವರ್ಗೀಕರಿಸಲಾಗುತ್ತದೆ. ಅಂತ್ಯೋದಯ ಅನ್ನ ಯೋಜನೆಯ ವರ್ಗವನ್ನು ಹೊರತುಪಡಿಸಿ ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡ 73ರಷ್ಟು ಜನರು ಸುಗ್ರೀವಾಜ್ಞೆ ವ್ಯಾಪ್ತಿಗೆ ಬರುತ್ತಾರೆ. ಆಗ, ಮಾಸಿಕ ಎರಡು ಲಕ್ಷ ಟನ್ ಆಹಾರ ಧಾನ್ಯ ಕೇಂದ್ರದಿಂದ ದೊರೆಯಬಹುದು ಎಂದು ಅಂದಾಜಿಸಲಾಗಿದೆ.ತವಕದಿಂದ ಕಾಯುತ್ತಿರುವ ರಾಜ್ಯ: ಆಹಾರ ಭದ್ರತಾ ಸುಗ್ರೀವಾಜ್ಞೆ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಸಂದೇಶವನ್ನು ರಾಜ್ಯ ಸರ್ಕಾರ ತವಕದಿಂದ ಕಾಯುತ್ತಿದೆ. `93 ಲಕ್ಷ ಬಿಪಿಎಲ್ ಕುಟುಂಬಗಳು ಸುಗ್ರೀವಾಜ್ಞೆ ವ್ಯಾಪ್ತಿಗೆ ಬರಬಹುದು ಎಂದು ನಾವು ಅಂದಾಜಿಸಿದ್ದೇವೆ. ಇದರಿಂದ ರಾಜ್ಯ ಸರ್ಕಾರವು ರಿಯಾಯಿತಿ ದರದಲ್ಲಿ ಆಹಾರ ಧಾನ್ಯ ಒದಗಿಸಲು ಮಾಡುವ ವೆಚ್ಚದಲ್ಲಿ ಗಣನೀಯ ಇಳಿಕೆ ಆಗಲಿದೆ.ಆದರೆ, ಈ ಬಗ್ಗೆ ನಮಗೆ ಇನ್ನೂ ಕೇಂದ್ರ ಸರ್ಕಾರದಿಂದ ಮಾಹಿತಿ ಬಂದಿಲ್ಲ. ಮಾಹಿತಿ ದೊರತರೆ ಸುಗ್ರೀವಾಜ್ಞೆಯ ಲಾಭ ಪಡೆಯುವ ಕುಟುಂಬಗಳ ನಿಖರ ಸಂಖ್ಯೆ ತಿಳಿಯುತ್ತದೆ' ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಾರ್ಯದರ್ಶಿ ಅಶ್ವತ್ಥನಾರಾಯಣ ಗೌಡ ತಿಳಿಸಿದರು.

ಕೊರತೆ ಎದುರಾದರೆ ಸಂಕಷ್ಟ

ಲಭ್ಯತೆ ಆಧರಿಸಿ ಆಹಾರ ಧಾನ್ಯಗಳನ್ನು ಪೂರೈಸಲಾಗುತ್ತದೆ ಎಂದು ಆಹಾರ ಭದ್ರತಾ ಸುಗ್ರೀವಾಜ್ಞೆ ಹೇಳುತ್ತದೆ. ದೇಶದಲ್ಲಿ ಆಹಾರ ಧಾನ್ಯಗಳ ಕೊರತೆ ಕಂಡುಬಂದಲ್ಲಿ ಕೇಂದ್ರ ಸರ್ಕಾರ ನೇರವಾಗಿ ಫಲಾನುಭವಿಯ ಖಾತೆಗೆ ನಿಗದಿತ ಮೊತ್ತವನ್ನು ಸಂದಾಯ ಮಾಡುತ್ತದೆ.ಆಹಾರ ಧಾನ್ಯಗಳ ಕೊರತೆ ಉದ್ಭವವಾದರೆ ಸರ್ಕಾರ ಇಕ್ಕಟ್ಟಿಗೆ ಬೀಳುತ್ತದೆ. ಮಾರುಕಟ್ಟೆಯಿಂದ ಅಕ್ಕಿ ಖರೀದಿಸಿ ಬಿಪಿಎಲ್ ಕುಟುಂಬಗಳಿಗೆ ವಿತರಿಸುವ ಅನಿವಾರ್ಯ ಎದುರಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.