ಶನಿವಾರ, ಡಿಸೆಂಬರ್ 7, 2019
24 °C

ಅನ್ನ ಬೆಳೆಯುವ ಊರಿಗೆ ಚಿನ್ನ ಬೇಡ !

ಶರತ್ ಹೆಗ್ಡೆ Updated:

ಅಕ್ಷರ ಗಾತ್ರ : | |

ಅನ್ನ ಬೆಳೆಯುವ ಊರಿಗೆ ಚಿನ್ನ ಬೇಡ !

ಈ ಊರಿನಲ್ಲಿ ಚಿನ್ನ ಇರುವ ಸುಳಿವಿದೆ. ಆದರೆ, ಅನ್ನ ಬೆಳೆಯುವ ಊರಿಗೆ ಚಿನ್ನದ `ಬೆಳೆ~ ಬೇಡ ಅನ್ನುತ್ತಾರೆ ಇಲ್ಲಿನ ಮಂದಿ. ಸುತ್ತ ಬೆಟ್ಟಗಳ ಕೋಟೆ. ಆ ಬೆಟ್ಟಗಳ ಮೇಲೆ ರೊಯ್ಯನೆ ಸದ್ದು ಮಾಡುತ್ತಾ ಸುತ್ತುವ ವಿದ್ಯುತ್ ಯಂತ್ರಗಳು, ಬೆಟ್ಟದ ತಪ್ಪಲಿನಲ್ಲಿ ಗುಂಪಾಗಿ ಕಾಣಿಸುವ ಸುಮಾರು 100 ಮನೆಗಳ ಪ್ರದೇಶ.

 

ಎಲ್ಲ ಮನೆಗಳ ಮೇಲೆ ಕಾಣುವ ಡಿಟಿಎಚ್ ಆಂಟೆನಾಗಳು. ತನ್ಮೂಲಕ ವಿಶ್ವದ ವಿದ್ಯಮಾನಗಳು ಇಲ್ಲಿನ ಮಂದಿಗೆ ತಿಳಿಯುತ್ತವೆ. ಆದರೆ, ಪಕ್ಕದ ಊರಿಗೆ ಹೋಗಬೇಕಾದರೆ ಪರದಾಡಬೇಕು. ಸ್ಥಳೀಯ ವರ್ತಮಾನ ತಿಳಿಯಲು ಪತ್ರಿಕೆಗಳೇ ಬರುತ್ತಿಲ್ಲ. ಬಸ್ ಇಲ್ಲ. ರಸ್ತೆ ಮೊದಲೇ ಸರಿಯಿಲ್ಲ. ಅಂತೂ ರಾಜ್ಯ ಹೆದ್ದಾರಿಗೆ ಅತ್ಯಂತ ಸಮೀಪದಲ್ಲಿದ್ದರೂ ಇದ್ದೂ ಇಲ್ಲದಂತಿರುವ ಪುಟ್ಟ ಊರು.-ಇದು ಕುದುರೆಕೊಂಡ. ಹೊನ್ನಾಳಿ ತಾಲ್ಲೂಕಿನ ಗಡಿ ಪ್ರದೇಶದಲ್ಲಿರುವ, ಹೊನ್ನಾಳಿ - ಶಿವಮೊಗ್ಗ ಮಾರ್ಗದಲ್ಲಿ ಸಿಗುವ ಸುರಹೊನ್ನೆ ಸಮೀಪದ ಊರು. ಪುಟ್ಟ ಊರಾದರೂ ಒಗ್ಗಟ್ಟಿಗೆ ಹೆಸರಾಗಿದೆ. ಕುರುಬರು ಮತ್ತು ವಾಲ್ಮೀಕಿ ಜನಾಂಗದವರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಸುಮಾರು 850 ಜನಸಂಖ್ಯೆಯಿದೆ. ಹೊನ್ನಾಳಿ ತಾಲ್ಲೂಕಿನ ಯರಗನಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಈ ಹಳ್ಳಿ ಸೇರುತ್ತದೆ. ಮೆಕ್ಕೆಜೋಳ, ಟೊಮೆಟೊ ಹಾಗೂ ಇತರ ತರಕಾರಿ ಈ ಹಳ್ಳಿಗರ ಪ್ರಮುಖ ಬೆಳೆಗಳು. ಆಂಜನೇಯ ಗ್ರಾಮದೇವತೆ.ಹಿಂದೆ ಹೀಗಿತ್ತು...

ಹಿಂದೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಾಲರಾ ಬಾಧಿಸಿದಾಗ ಆಂಜನೇಯ ಇದ್ದ ಊರಿಗೆ ಹೋದರೆ  ಈ ರೋಗ ಬಾಧಿಸದು ಎಂಬ ನಂಬಿಕೆಯಿಂದ ಜನ ವಲಸೆ ಬಂದರು. ಹಾಗೆಯೇ ಕ್ರಮೇಣ ಊರು ನಿರ್ಮಾಣವಾಯಿತು ಎಂಬ ಮಾತೂ ಇದೆ  ಎನ್ನುತ್ತಾರೆ ಯರಗನಾಳು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಬಿ. ರುದ್ರಪ್ಪ.ಊರಿನ ಪಟೇಲರಾಗಿದ್ದ ಯಲ್ಲಪ್ಪ ಅವರು ಹೇಳುವುದು ಸ್ವಲ್ಪ ಇತ್ತೀಚಿನ ಕಥೆ. ಹಿಂದೆ ಈ ಪ್ರದೇಶ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತ್ತು. ಅವರು ದೇಶ ಬಿಟ್ಟು ಹೋಗುವಾಗ ಈ ಪ್ರದೇಶವನ್ನು ಅವರ ಆಳ್ವಿಕೆಯಲ್ಲಿ ಗುಮಾಸ್ತರಾಗಿದ್ದ ಇಬ್ರಾಹಿಂ ಅಮೀರ್ ಅಹಮದ್ ಅವರಿಗೆ ವಹಿಸಿದ್ದರಂತೆ.

 

ಸ್ವಾತಂತ್ರ್ಯಾನಂತರ ಇಲ್ಲಿನ ಸುಮಾರು 85 ಎಕರೆ ಜಮೀನು ಅಮೀರ್ ಅಹಮದ್ ಅವರ ವಶಕ್ಕೆ ಬಂದಿತು. ಅದು ಚಿನ್ನದ ನಿಕ್ಷೇಪವಿದ್ದ ಪ್ರದೇಶ. ಬ್ರಿಟಿಷರ ಕಾಲದಲ್ಲಿ ಸ್ವಲ್ಪಮಟ್ಟಿಗೆ ಚಿನ್ನದ ಗಣಿಗಾರಿಕೆ ಇಲ್ಲಿ ನಡೆಯುತ್ತಿತ್ತು. ಸುಮಾರು 16ರಷ್ಟು ಚಿನ್ನದ ನಿಕ್ಷೇಪವಿದ್ದ ಬಾವಿಗಳಿವೆ.ಕೊನೆಗೆ ಯಾಕೆ ನಿಂತುಹೋಯಿತೋ ಎಂಬುದು ಗೊತ್ತಿಲ್ಲ. ಈಗ ಜಮೀನು ಅಹಮದ್ ಅವರ  ಮೊಮ್ಮಗ ಮುಸ್ತುಫ್ ಖಾನ್ ಅವರ ಹೆಸರಿನಲ್ಲಿದೆ. ಆ ಕುಟುಂಬ ಈಗ ಶಿವಮೊಗ್ಗದಲ್ಲಿ ನೆಲೆಸಿದೆ. ಪಟೇಲಿಕೆಯ ಅವಧಿ (1950-1962)ಯಲ್ಲಿ ಆ ಜಮೀನನ್ನು ಗೇಣಿಗೆ ಪಡೆದು ನಾವು ಬೇಸಾಯ ಮಾಡುತ್ತಿದ್ದೆವು ಎಂದು ಸ್ಮರಿಸುತ್ತಾರೆ ಅವರು.ಅಂದಿಗೆ ಹೋಲಿಸಿದರೆ ಈಗ ಊರು ಸಾಕಷ್ಟು ಸುಧಾರಣೆ ಕಂಡಿದೆ. ಆದರೂ, ಏನೇನೂ ಸಾಲದು. ರಸ್ತೆ, ಬಸ್ ಸಂಪರ್ಕ, ಶಾಲೆಯ ವಿಸ್ತರಣೆ (ಕಿರಿಯ ಪ್ರಾಥಮಿಕ ಶಾಲೆಯಿಂದ ಹಿರಿಯ ಪ್ರಾಥಮಿಕ ಶಾಲೆಗೆ), ಆಟದ ಮೈದಾನ, ಗ್ರಂಥಾಲಯ, ಆರೋಗ್ಯ ಕೇಂದ್ರ ಇತ್ಯಾದಿಗಾಗಿ ಸಾಕಷ್ಟು ಬಾರಿ ಬೇಡಿಕೆ ಇಟ್ಟಿದ್ದೆವು. ಊರಿನ ಆಂಜನೇಯ ದೇವಸ್ಥಾನದಲ್ಲಿಯೇ ಕೊಟ್ಟ ಭರವಸೆಯನ್ನು  ಹೊನ್ನಾಳಿ ಶಾಸಕ, ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಮರೆತುಬಿಟ್ಟಿದ್ದಾರೆ ಎನ್ನುತ್ತಾರೆ ಬೀರಪ್ಪ, ನಾಗರಾಜ್.ನೋಡಿ ಸಾರ್, ಇಲ್ಲಿ ಕೊಳವೆಬಾವಿ ನೀರು ಇದೆ. ಊರಿನಲ್ಲಿ ನೀರಿಗೆ ಬರ ಇಲ್ಲ. ಆದರೆ, ಏನಾದರೂ ಅಗತ್ಯ ಬಿದ್ದರೆ ಸುರಹೊನ್ನೆ ಅಥವಾ ನ್ಯಾಮತಿಗೇ ಹೋಗಬೇಕು. ಒಟ್ಟಿನಲ್ಲಿ ನಮ್ಮ ಆಡಳಿತ ವ್ಯವಸ್ಥೆ ಇತ್ತ ಕಣ್ಣು ಹಾಯಿಸಬೇಕು ಎನ್ನುವುದು ದೊಡ್ಡ ತಿಮ್ಮಪ್ಪರ ಮನೆಯ ರಾಜು, ಅವರ ಅಭಿಮತ.ಚಿನ್ನದ ಕಥೆ: ಬ್ರಿಟಿಷರ ಕಾಲದಲ್ಲಿ ಇಲ್ಲಿ ಚಿನ್ನ ತೆಗೆಯುತ್ತಿದ್ದರಂತೆ. ಮಳೆಗಾಲದಲ್ಲಿ ಬೆಟ್ಟದಿಂದ ಹರಿಯುವ ನೀರನ್ನು ತಡೆ ಹಿಡಿದು ಅದರಲ್ಲಿ ಹರಿದು ಬರುವ ಮರಳು, ಮಣ್ಣನ್ನು ಸೋಸಿ ಅದರಿಂದ ಹೊಳೆಯುವ ಚಿನ್ನ ತೆಗೆಯುತ್ತಿದ್ದ ಜಾಲಗಾರರೂ ಇಲ್ಲಿ ಇದ್ದರು ಎಂದು ನೆನಪಿಸಿದರು ಪಟೇಲರು.ಚಿನ್ನದ ನಿಕ್ಷೇಪಗಳು ಎನ್ನಲಾಗುತ್ತಿರುವ ಬಾವಿಗಳು ಈಗ ಪಾಳು ಬಿದ್ದಿವೆ. ಪ್ರತಿ ಬಾವಿಗಳ ಮೇಲ್ಭಾಗದಲ್ಲಿ ಬೇವಿನ ಮರಗಳು ಬೆಳೆದಿವೆ. ಸುಟ್ಟ ಇಟ್ಟಿಗೆಯಿಂದ ನಿರ್ಮಿತವಾದ  ಹೊಗೆ ಕೊಳವೆ (ಚಿಮಿಣಿ) ಮಾದರಿಯ ಎತ್ತರದ ರಚನೆಯೊಂದು ಇಲ್ಲಿ ಸ್ಮಾರಕದಂತೆ ನಿಂತಿದೆ. ಇಲ್ಲಿ ಬ್ರಿಟಿಷರಿಗೆ ಸೇರಿದ ಎರಡು ಬಂಗಲೆಗಳು ಇದ್ದವಂತೆ. ಕಾಲಾಂತರದಲ್ಲಿ ಅವು ಹಾಳು ಬೀಳುತ್ತಿರುವಾಗ ಹರಾಜು ಹಾಕಲಾಯಿತು. ಒಟ್ಟಾರೆ ಪ್ರದೇಶ ಕುರುಚಲು ಗಿಡಗಳಿಂದ ಕೂಡಿದೆ.ಚಿನ್ನ ಬೇಡ ಅನ್ನ ಬೇಕು

ಚಿನ್ನ ಇದೆ ಅನ್ನುವ ಬಗ್ಗೆ ಇತ್ತೀಚೆಗೆ ಟಿವಿಯವರು ಬಂದಾಗಲೇ ಗೊತ್ತಾಗಿದ್ದು. ಒಂದು ವೇಳೆ ಚಿನ್ನ ಇದ್ದರೂ ಅದನ್ನು ತೆಗೆಯುವುದಕ್ಕೆ ನಮ್ಮ ವಿರೋಧ ಇದೆ. ಇಲ್ಲಿ ಸುಮಾರು 60 ಎಕರೆ ಅಡಿಕೆ ತೋಟ ಇದೆ. ನಾವೆಲ್ಲ ಸಣ್ಣ ಕೃಷಿಕರು. ಚಿನ್ನ ತೆಗೆಯುವ ಕಂಪೆನಿ ಬಂದರೆ ನಾವು ಎಲ್ಲಿಗೆ ಹೋಗಬೇಕು. ನಾವು ಅನ್ನ ಬೆಳೆಯುತ್ತೇವೆ. ಚಿನ್ನ ತೆಗೆಯುವುದು ಬೇಡವೇ ಬೇಡ ಎನ್ನುವುದು ಸ್ಥಳೀಯರಾದ ಬಿ. ರೇವಪ್ಪ ಹಾಗೂ ಜಯಪ್ಪ ಅವರ ಖಚಿತ ಅಭಿಪ್ರಾಯ. ಬಿ. ರುದ್ರಪ್ಪ ಅವರೂ ಈ ಮಾತಿಗೆ ಸಹಮತ ವ್ಯಕ್ತಪಡಿಸುತ್ತಾರೆ.ಒಟ್ಟಾರೆ, ಚಿನ್ನದ ಹೆಸರಲ್ಲಿ ಅನ್ನ ಕಸಿಯುವ ಹುನ್ನಾರವನ್ನು ವಿರೋಧಿಸಲು ಊರಿನ ಮಂದಿ ಒಗ್ಗಟ್ಟಾಗಿದ್ದಾರೆ. ಓಟು ಕೇಳುವ ನೇತಾರರು ಇತ್ತ ಬಂದು ಊರಿನ ಅಭಿವೃದ್ಧಿ ಮಾಡುವತ್ತ ಗಮನಹರಿಸಲಿ ಎಂದು ಆಸೆಗಣ್ಣಿನಿಂದ ನೋಡುತ್ತಿದ್ದಾರೆ. ಅವರ ಧ್ವನಿ ಗಾಳಿಯಂತ್ರದ ಸದ್ದಿನೊಂದಿಗೆ ಕರಗಿಹೋಗುತ್ತಿದೆ.

ಪ್ರತಿಕ್ರಿಯಿಸಿ (+)