ಅನ್ನ ಸಿಗದೆ ಪರದಾಡಿದ ಮಕ್ಕಳು

7

ಅನ್ನ ಸಿಗದೆ ಪರದಾಡಿದ ಮಕ್ಕಳು

Published:
Updated:

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಭಾನುವಾರ ನಡೆದ ಎರಡನೇ ದಿನದ ದಸರಾ ಕಾರ್ಯಕ್ರಮದ ಮಕ್ಕಳ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಮಕ್ಕಳಿಗೆ ಊಟ ಸಿಗದೆ ಪರದಾಡಿದರು.ದಸರಾ ಓಟದ ಸಂಭ್ರಮ ಹಾಗೂ ಮಕ್ಕಳ ಸಂಭ್ರಮದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಸುಮಾರು 160 ಮಕ್ಕಳು ಪಾಲ್ಗೊಂಡಿದ್ದರು. ಪಾಂಡವಪುರ ತಾಲ್ಲೂಕು ನಾರಾಯಣಪುರದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಅದ್ಬುತ ಡೊಳ್ಳು ಕುಣಿತ ಪ್ರದರ್ಶಿಸಿದರು.ಆದರೆ ಅವರಿಗೆ ಊಟದ ವ್ಯವಸ್ಥೆ ಇರಲಿಲ್ಲ. ಬೆಳಗೊಳದ ಮಾಂಟ್‌ಫೋರ್ಟ್ ಶಾಲೆಯ ಮೂಕ ಮತ್ತು ಕಿವುಡ ಮಕ್ಕಳು ತುತ್ತು ಅನ್ನಕ್ಕಾಗಿ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಅಲೆದಾಡಬೇಕಾಯಿತು. ಸಂಜೆ 5 ಗಂಟೆಯಾದರೂ ಮಕ್ಕಳಿಗೆ ಅನ್ನ ಮಾತ್ರ ಸಿಗಲಿಲ್ಲ. ಪಟ್ಟಣದ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆ, ನ್ಯೂ ಆಕ್ಸ್‌ಫರ್ಡ್ ಶಾಲೆ, ಬಿಜಿಎಸ್ ಬಾಲ ಜಗತ್‌ನ ಮಕ್ಕಳು ಶ್ರೀರಂಗ ವೇದಿಕೆಯಲ್ಲಿ ಉತ್ತಮ ಪ್ರದರ್ಶನ ನೀಡಿದರು. ಆದರೆ ಈ ಮಕ್ಕಳು ಕುಡಿಯುವ ನೀರಿಗೂ ಪರದಾಡಿದರು.  ಮಕ್ಕಳ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಮಕ್ಕಳಿಗೆ ಊಟದ ವ್ಯವಸ್ಥೆ ಇಲ್ಲವೆ? ಎಂದು ಪೋಷಕರು ಹಾಗೂ ಮಕ್ಕಳನ್ನು ಕರೆತಂದಿದ್ದ ಶಿಕ್ಷಕರು ಅಧಿಕಾರಿಗಳನ್ನು ಪ್ರಶ್ನಿಸಿದರು. ಶ್ರೀರಂಗನಾಥ ಕಲ್ಯಾಣ ಮಂಟಪಕ್ಕೆ ಹೋಗಿ ಎಂಬ ಉತ್ತರ ಬಂತು. ಅಲ್ಲಿ ಹೋದರೆ ಮಹಿಳೆಯರು ರಂಗವಲ್ಲಿ ಬಿಡಿಸುತ್ತಿದ್ದರು.

 

ನಂತರ ಭಾನುಪ್ರಕಾಶ್ ಮನೆಗೆ ಹೋಗಿ ಎಂಬ ಸಂದೇಶ ಬಂತು. ಆ ಮನೆಯಲ್ಲಿ ಕೂಡ ಊಟದ ವ್ಯವಸ್ಥೆ ಇರಲಿಲ್ಲ. ಕಾದು ಸುಸ್ತಾದ ಮಕ್ಕಳು ರಸ್ತೆ ಬದಿಯ ಕ್ಯಾಂಟೀನ್‌ಗಳಲ್ಲಿ ಸಿಕ್ಕಿದ್ದನ್ನು ಉಂಡು ಹೋದರು. ಕೆಲವರು ಹಸಿದು ಮನೆಗೆ ತೆರಳಿದರು. ಈ ಅವ್ಯವಸ್ಥೆಗೆ ಮಕ್ಕಳ ಪೋಷಕರು ಅಷ್ಟೇ ಅಲ್ಲದೆ ಸಾರ್ವಜನಿಕರು ಕೂಡ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry