ಮಂಗಳವಾರ, ನವೆಂಬರ್ 19, 2019
29 °C
ಮಂಗಳೂರಿನಲ್ಲಿ ಮೇಳೈಸಿತು ಅಪರೂಪದ ಬ್ರಾಹ್ಮಣ ಜಾಗೃತಿ ಸಮ್ಮೇಳನ

`ಅನ್ಯರ ಜತೆಗೆ ಸ್ವಂತಕ್ಕೂ ಇರಲಿ ಜ್ಞಾನ ಸಂಪತ್ತು'

Published:
Updated:

ಮಂಗಳೂರು: ಬ್ರಾಹ್ಮಣರ ಜ್ಞಾನ ಸಂಪತ್ತು ಇದುವರೆಗೆ ವಿನಿಯೋಗವಾದುದು ಸಮಾಜಕ್ಕೆ, ದೇಶಕ್ಕೆ, ಜಗತ್ತಿಗೆ ಮಾತ್ರ. ಅದು ಬ್ರಾಹ್ಮಣರ ಸಂಸ್ಕೃತಿಯೂ ಆಗಿದೆ. ಆದರೆ ಇತರ ಜಾತಿ, ಧರ್ಮ, ಸರ್ಕಾರಗಳ ದಬ್ಬಾಳಿಕೆ ಬ್ರಾಹ್ಮಣ ಸಮುದಾಯದ ಮೇಲೆ ಹೆಚ್ಚುತ್ತಿರುವುದರಿಂದ ಈ ಸಮುದಾಯಕ್ಕೆ ಅನ್ಯಾಯ ಆಗುತ್ತಿದೆ. ಬ್ರಾಹ್ಮಣರು ಇನ್ನು ಮುಂದೆ ತಮ್ಮ ಜ್ಞಾನ ಸಂಪತ್ತನ್ನು ಸ್ವಂತಕ್ಕೂ ಬಳಸಿಕೊಳ್ಳಬೇಕು ಎಂಬ ಒಕ್ಕೊರಲ ಧ್ವನಿ ಹೊರಟಿದೆ.ನಗರದ ಸಂಘನಿಕೇತನದಲ್ಲಿ ಭಾನುವಾರ ಬ್ರಾಹ್ಮಣ ಒಕ್ಕೂಟ ವತಿಯಿಂದ ನಡೆದ ಬ್ರಾಹ್ಮಣ ಜಾಗೃತಿ ಸಮ್ಮೇಳನದಲ್ಲಿ ವಿವಿಧ ಯತಿಗಳು, ವಿದ್ವಾಂಸರು ವ್ಯಕ್ತಪಡಿಸಿದ ಅಭಿಪ್ರಾಯ ಇದು. ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರಿಂದ ಆರಂಭಗೊಂಡು, ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ವರೆಗೆ ಹಲವು ಯತಿಗಳು ಬ್ರಾಹ್ಮಣರಿಗೆ ಇದೀಗ ಒದಗಿರುವ ಆತಂಕದ ಸ್ಥಿತಿಯನ್ನು ಎತ್ತಿ ತೋರಿಸಿದರು.

ಇದರ ನಿವಾರಣೆಗೆ ಬ್ರಾಹ್ಮಣರು ಇತರರಿಂದ ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳುವುದು ಬೇಡ, ತಮ್ಮಲ್ಲಿರುವ ಶಕ್ತಿಯನ್ನು ಬ್ರಾಹ್ಮಣ ಸಮುದಾಯಕ್ಕಾಗಿಯೂ ಬಳಸಿಕೊಳ್ಳುವ ಪರಿಪಾಠ ಆರಂಭವಾದರೆ ಸಾಕು ಎಂಬ ಸಲಹೆ ಕೇಳಿಬಂತು.ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, `ನಾವೆಲ್ಲ ಗಾಯತ್ರಿಯ ಮಕ್ಕಳು, ಸಹೋದರರು, ನಮ್ಮಲ್ಲಿ ಭೇದಭಾವ ಸಲ್ಲ, ವಿವಿಧ ಪಂಗಡದ ಬ್ರಾಹ್ಮಣರೆಲ್ಲ `ಮುಷ್ಠಿ'ಯಂತೆ ಒಗ್ಗಟ್ಟು ಪ್ರದರ್ಶಿಸಬೇಕು. ಈ ಬಿಗಿ ಮುಷ್ಠಿಯೊಳಗೆ ಬ್ರಾಹ್ಮಣತ್ವದ ಸಂಸ್ಕೃತಿ, ಸಂಸ್ಕಾರದ ರಕ್ಷಣೆಯಾಗಬೇಕು. ದೇಶದಲ್ಲಿನ ಅನಿಷ್ಟಗಳಿಗೆಲ್ಲ ಬ್ರಾಹ್ಮಣರೇ ಕಾರಣ ಎಂಬ ಆರೋಪಗಳನ್ನು ಹೊರಿಸುವುದು ತಪ್ಪು' ಎಂದರು.ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ಸಹ ಬ್ರಾಹ್ಮಣರಲ್ಲಿನ ಒಗ್ಗಟ್ಟಿನ ಅಗತ್ಯವನ್ನು ಒತ್ತಿ ಹೇಳಿದರು. `ಬ್ರಾಹ್ಮಣರು ಇದುವರೆಗೆ ತಮ್ಮ ಜ್ಞಾನವನ್ನು, ಶಕ್ತಿಯನ್ನು ಸ್ವಂತಕ್ಕೆ ಬಳಸಿಕೊಂಡಿದ್ದೇ ಇಲ್ಲ.

ನಮ್ಮ ನೆರವನ್ನು ಪಡೆದುಕೊಂಡ ಮೇಲೆ ನಮಗೇ ಅನ್ಯಾಯ ಎಸಗುವ ಸ್ಥಿತಿ ಇಂದು ನೆಲೆಸಿದೆ. ಇದನ್ನು ಪ್ರತಿಭಟಿಸಿ ನಿಲ್ಲಬೇಕಿದ್ದರೆ ನಮ್ಮತನವನ್ನು ಉಳಿಸಿಕೊಳ್ಳುವ ಜತೆಗೆ ನಮ್ಮ ಶಕ್ತಿ, ಸಂಪತ್ತನ್ನು ಬ್ರಾಹ್ಮಣ ಸಮುದಾಯದ ಕಲ್ಯಾಣಕ್ಕಾಗಿಯೂ ಬಳಸಿಕೊಳ್ಳಬೇಕು, ಪರಶುರಾಮ ನಮಗೆ ಆದರ್ಶವಾಗಬೇಕು' ಎಂದರು.ಬ್ರಾಹ್ಮಣರ ಪ್ರಾಮಾಣಿಕತೆಯನ್ನು ಬೆಟ್ಟುಮಾಡಿದ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಲೋಕದ ಹಿತಕ್ಕಾಗಿ ಬ್ರಾಹ್ಮಣರ ಸಂಘಟನೆ ಅಗತ್ಯ ಎಂದರು.ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದ, ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಇತರರು ಸಹ ಸಂಘಟನೆಯ ಮಹತ್ವ ತಿಳಿಸಿದರು.ಬ್ರಾಹ್ಮಣರ ಆಚಾರ, ಸಂಸ್ಕೃತಿ ಸಂರಕ್ಷಣೆ, ಆಧುನಿಕತೆಯ ನಡುವೆ ಸಿಲಿಕಿರುವ ಬ್ರಾಹ್ಮಣ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು, ಸವಾಲುಗಳ ಮೇಲೆ ಬೆಳಕು ಚೆಲ್ಲುವ ಗೋಷ್ಠಿಗಳು ನಡೆದವು.ಸಮಾರೋಪ ಸಮಾರಂಭಕ್ಕೆ ಮೊದಲು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಶ್ರೀನಾಥ ಹೆಬ್ಬಾರ್, ಕೆ.ಪಿ.ರಾವ್, ರಂಜನ್ ಕಲ್ಕೂರ, ದಾಮೋದರ ಐತಾಳ್, ಡಾ.ಐ.ಜಿ.ಭಟ್, ಎಂ.ಆರ್.ವಾಸುದೇವ ರಾವ್, ವಿಷ್ಣು ಅಸ್ರ ಸಹಿತ ಹಲವರನ್ನು ಸನ್ಮಾನಿಸಲಾಯಿತು.ಸಮ್ಮೇಳನದ ಸರ್ವಾಧ್ಯಕ್ಷ ಪಿ.ಸದಾನಂದ ಮಯ್ಯ, ಬ್ರಾಹ್ಮಣ ಜಾಗೃತಿ ಸಮ್ಮೇಳನ  ಸಮಿತಿಯ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ಖಜಾಂಚಿ ಶರವು ರಾಘವೇಂದ್ರ ಶಾಸ್ತ್ರಿ ಇತರರು ಇದ್ದರು. ವಿವಿಧ ಬ್ರಾಹ್ಮಣ ಪಂಗಡಗಳ ಪ್ರತಿನಿಧಿಗಳಾಗಿ ವಿಜಯರಾಘವ ಪಡ್ವೆಟ್ನಾಯ (ಶಿವಳ್ಳಿ), ಎ.ವಿ.ಮುಳಿಯ (ಹವ್ಯಕ), ಪೊಯ್ಯಗದ್ದೆ ವೆಂಕಟ್ ರಾವ್ (ಕೋಟ), ನೇರಂಬಳ್ಳಿ ನಾರಾಯಣ ರಾವ್ (ಕೋಟೇಶ್ವರ), ಸಿ.ಎಸ್.ರಾವ್ (ಸ್ಥಾನಿಕ), ಎಂ.ಪ್ರಭಾಕರ ಜೋಷಿ (ಚಿತ್ಪಾವನ), ನಾರಾಯಣ ಭಟ್ಟ (ಕರ‌್ಹಾಡ) ಎಚ್.ಎಸ್.ಸುರೇಂದ್ರ (ಶಿವಳ್ಳಿ ಸ್ಮಾರ್ತ), ಪಿ.ಎನ್.ರಾಜಾರಾಂ (ದೇಶಸ್ಥ) ಸಹಿತ ಹಲವರು ಇದ್ದರು.ಸಮ್ಮೇಳನದ ಊಟ, ಉಪಚಾರಗಳಲ್ಲಿ ಬ್ರಾಹ್ಮಣರ ಆಚಾರ, ವಿಚಾರಗಳು ಗಮನ ಸೆಳೆದವು. ಆರಂಭದಲ್ಲಿ ಆಕರ್ಷಕ ಪೂರ್ಣಕುಂಭ ಸ್ವಾಗತ ಮೆರವಣಿಗೆ ನಡೆಯಿತು.

ಪ್ರತಿಕ್ರಿಯಿಸಿ (+)