ಭಾನುವಾರ, ಅಕ್ಟೋಬರ್ 20, 2019
22 °C

ಅನ್ಯರ ಪಾಲಾದ ಸರ್ಕಾರಿ ಭೂಮಿ

Published:
Updated:

ಬೆಳಗಾವಿ: ಒಂದೆಡೆ ರೈತರ ವಿರೋಧದ ನಡುವೆಯೂ ಕೈಗಾರಿಕೆಗಳಿಗಾಗಿ ಭೂಮಿ ವಶಪಡಿಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಆದರೆ ಇನ್ನೊಂದೆಡೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸರ್ಕಾರದ 9 ಸಾವಿರ ಎಕರೆ ಭೂಮಿಯೇ ಅನ್ಯರ ಅತಿಕ್ರಮಣಕ್ಕೆ ತುತ್ತಾಗಿದೆ.ಜಿಲ್ಲೆಯಲ್ಲಿ ಸ್ಥಾಪನೆಯಾಗಲಿರುವ ಕೈಗಾರಿಕೆಗಳಿಗೆ ಭೂಮಿ ಒದಗಿಸುವುದಕ್ಕಾಗಿ ಈಗಾಗಲೇ ಜಿಲ್ಲೆಯಲ್ಲಿ 10 ಸಾವಿರ ಎಕರೆಯಷ್ಟು ಭೂಮಿ ವಶಪಡಿಸಿಕೊಳ್ಳಲು ನೋಟಿಸ್ ಹೊರಡಿಸಲಾಗಿದೆ. ಅದರ ಬೆನ್ನಲ್ಲೇ ಫಲವತ್ತಾದ ಭೂಮಿ ಉಳಿಸಿಕೊಳ್ಳಲು ರೈತರೂ ಹೋರಾಟ ಆರಂಭಿಸಿದ್ದಾರೆ. ಆದರೆ ಅತಿಕ್ರಮಣಕ್ಕೆ ಒಳಗಾಗಿರುವ ಸರ್ಕಾರಿ ಭೂಮಿಯನ್ನು ಮಾತ್ರ ತನ್ನ ವಶಕ್ಕೆ ತೆಗೆದುಕೊಳ್ಳಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ.ಜಿಲ್ಲೆಯಲ್ಲಿ ಗೋಮಾಳ, ಹುಲ್ಲುಬನಿ, ಕೆರೆ ಪ್ರದೇಶ ಸೇರಿದಂತೆ ವಿವಿಧ ಬಗೆಯ 98,958 ಎಕರೆ ಭೂಮಿ ಸರ್ಕಾರಕ್ಕೆ ಸೇರಿದೆ. ಅದರಲ್ಲಿ 10,812 ಎಕರೆ ಭೂಮಿ ಅತಿಕ್ರಮಣವಾಗಿದೆ. ಅದರಲ್ಲಿ 1,447 ಎಕರೆ ಅತಿಕ್ರಮಣ ಮುಕ್ತವಾಗಿಸಿ, ಜಿಲ್ಲಾಡಳಿತ ತನ್ನ ವಶಕ್ಕೆ ತೆಗೆದುಕೊಂಡಿದೆ. ಬೆಳಗಾವಿ ತಾಲ್ಲೂಕಿನಲ್ಲಿ 3,237 ಎಕರೆ, ಖಾನಾಪುರದಲ್ಲಿ 445 ಎಕರೆ, ಹುಕ್ಕೇರಿಯಲ್ಲಿ 191 ಎಕರೆ, ಚಿಕ್ಕೋಡಿಯಲ್ಲಿ 1,418 ಎಕರೆ ಭೂಮಿ ಅತಿಕ್ರಮಣವಾಗಿದೆ.ರಾಯಬಾಗದಲ್ಲಿ 304 ಎಕರೆ, ಅಥಣಿಯಲ್ಲಿ 705, ಬೈಲಹೊಂಗಲದಲ್ಲಿ 1,502, ಗೋಕಾಕದಲ್ಲಿ 1,048 ಎಕರೆ, ಸವದತ್ತಿಯಲ್ಲಿ 447 ಎಕರೆ, ರಾಮದುರ್ಗದಲ್ಲಿ 37 ಎಕರೆ ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಲಾಗಿದೆ.

ಸರ್ಕಾರಕ್ಕೆ ಸೇರಿದ ಭೂಮಿ ಸದ್ದಿಲ್ಲದೇ ರೈತರ, ಗ್ರಾಮಗಳ ಮುಖಂಡರ, ರಾಜಕೀಯ ನಾಯಕರ ಪಾಲಾಗಿದೆ. ಹತ್ತಾರು ವರ್ಷಗಳಿಂದ ಸರ್ಕಾರಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಭೂಮಿಯು ಉಳ್ಳವರ ಪಾಲಾಗಿದೆ.ಅದರಲ್ಲೂ ಜಿಲ್ಲೆಯಲ್ಲಿರುವ ಬಹುತೇಕ ಕೆರೆಗಳು ಅತಿಕ್ರಮಣಕ್ಕೆ ಒಳಗಾಗಿವೆ. ಭೂಮಿಯನ್ನು ಇಂಚಿಂಚಾಗಿ ಕಬಳಿಸುವ ಕೆಲಸ ನಡೆದುಕೊಂಡೇ ಬಂದಿದೆ. ಆದರೆ ಅದನ್ನು ಸಂರಕ್ಷಿಸುವ ಕೆಲಸದಲ್ಲಿ ಅಧಿಕಾರಿಗಳು ಹಿಂದೆ ಬಿದ್ದಿದ್ದಾರೆ.ಸರ್ಕಾರಕ್ಕೆ ಸೇರಿದ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡವರ ವಿರುದ್ಧ ಗ್ರಾಮ ಲೆಕ್ಕಾಧಿಕಾರಿಗಳು ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಗ್ರಾಮಲೆಕ್ಕಾಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಅವರ ವಿರುದ್ಧ ತಹಸೀಲ್ದಾರರು ಪ್ರಕರಣ ದಾಖಲಸಿಕೊಳ್ಳಬೇಕು ಎಂದಿದೆ. ಆದರೆ ಜಿಲ್ಲೆಯಲ್ಲಿರುವ ಆರು ಸಾವಿರಕ್ಕೂ ಹೆಚ್ಚು ಪ್ರಕರಣಗಳಿವೆ. ದೂರು ದಾಖಲಾಗಿರುವುದು ಬೆರಳಿಕೆಯ ಪ್ರಕರಣಗಳಲ್ಲಿ ಮಾತ್ರ.ಕಟ್ಟುನಿಟ್ಟಿನ ಕ್ರಮದ ಭಯವಿಲ್ಲದ ಪರಿಣಾಮ ಭೂಮಿ ಅತಿಕ್ರಮಣ ನಡೆದೇ ಇದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಉಳಿದಿರುವ ಭೂಮಿಯು ಅನ್ಯರ ಪಾಲಾಗಲಿದೆ.ಕೆರೆಗಳ ಒತ್ತುವರಿ: `ಬಹಳಷ್ಟು ಕಡೆಗಳಲ್ಲಿ ಗೋಮಾಳ, ಕೆರೆಗಳು ಅತಿಕ್ರಮಣಕ್ಕೆ ಒಳಗಾಗಿವೆ. ಹೀಗಾಗಿ ಜಾನುವಾರುಗಳಿಗೆ ಮೇಯಿಸಲು ಜಾಗವಿಲ್ಲದಂತಾಗಿದೆ. ರೈತರ ಭೂಮಿಗೆ ಕೈ ಹಾಕುವ ಸರ್ಕಾರ, ಮೊದಲು ತನ್ನ ಭೂಮಿಯನ್ನು ರಕ್ಷಿಸಿಕೊಳ್ಳಬೇಕು. ಇದರಿಂದ ರೈತರಿಗೆ ಬಹಳ ಅನುಕೂಲವಾಗುತ್ತದೆ~ ಎನ್ನುತ್ತಾರೆ ರೈತ ಸಂಘದ ಅಧ್ಯಕ್ಷ ಅಪ್ಪಸಾಹೇಬ ದೇಸಾಯಿ.ಭೂಮಿ ಅತಿಕ್ರಮಣ ತೆರವುಗೊಳಿಸಲು ಮುಂದಾಗುತ್ತಿದ್ದಂತೆಯೇ, ಇತ್ತ ರಾಜಕೀಯ ಒತ್ತಡ ಆರಂಭವಾಗುತ್ತದೆ. ಹೀಗಾಗಿ ಭೂಮಿ ಅತಿಕ್ರಮಣ ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಹತಾಶೆಯನ್ನು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ವ್ಯಕ್ತಪಡಿಸಿದರು.ಅಧಿಕಾರಿಗಳು ರೈತರ ಭೂಮಿ ವಶಪಡಿಸುಕೊಳ್ಳುವಲ್ಲಿ ತೋರಿಸುವಷ್ಟು ಆಸಕ್ತಿಯನ್ನು, ಸರ್ಕಾರದ ಭೂಮಿ ಅತಿಕ್ರಮಣ ತೆರವುಗೊಳಿಸುವಲ್ಲಿ ಏಕೆ ತೋರಿಸುತ್ತಿಲ್ಲ. ಜನಪ್ರತಿನಿಧಿಗಳು ಈ ಬಗೆಗೆ ಏಕೆ ಮೌನವಾಗಿದ್ದಾರೆ ಎಂಬುದು ಜಿಲ್ಲೆಯ ಜನತೆಯನ್ನು ಕಾಡುತ್ತಿದೆ.

Post Comments (+)